Friday, April 19, 2024

ಬಿಎಫ್‌ಸಿಗೆ ಫೈನಲ್ ಶಾಕ್, ಚೆನ್ನೈಯಿನ್ ರಾಕ್

ಬೆಂಗಳೂರು, ಮಾರ್ಚ್ 17: ಮೊದಲ ಪ್ರಯತ್ನದಲ್ಲೇ ಪ್ರಶಸ್ತಿ ಗೆಲ್ಲುವ ಆತಿಥೇಯ ಬೆಂಗಳೂರು ಎಫ್‌ಸಿ ತಂಡದ ಕನಸು ಮನೆಯಂಗಳದಲ್ಲೇ ನುಚ್ಚು ನೂರಾಯಿತು. ಬಲಾಢ್ಯ ಬೆಂಗಳೂರು ಎಫ್‌ಸಿ ತಂಡವನ್ನು ಅವರದ್ದೇ ನೆಲದಲ್ಲಿ ಬಗ್ಗು ಬಡಿದ ಪ್ರವಾಸಿ ಚೆನ್ನೈಯಿನ್ ಎಫ್‌ಸಿ ತಂಡ, ಹೀರೊ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) 4ನೇ ಆವೃತ್ತಿಯ ಚಾಂಪಿಯನ್ ಆಗಿ ಹೊರ ಹೊಮ್ಮಿತು.
ಇಲ್ಲಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಚೆನ್ನೈಯಿನ್ ತಂಡ 3-2 ಗೋಲುಗಳ ಅಂತರದಲ್ಲಿ ಸುನಿಲ್ ಚೆಟ್ರಿ ನಾಯಕತ್ವದ ಬೆಂಗಳೂರು ಪಡೆಯನ್ನು ಮಣಿಸಿ ಐಎಸ್‌ಎಲ್‌ನಲ್ಲಿ 2ನೇ ಬಾರಿ ಪ್ರಶಸ್ತಿಗೆ ಮುತ್ತಿಟ್ಟಿತು. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸಹ ಮಾಲೀಕತ್ವದ ಚೆನ್ನೈಯಿನ್ ಬಳಗ 2015ರಲ್ಲಿ ಗೋವಾ ತಂಡವನ್ನು ಮಣಿಸಿ ಮೊದಲ ಬಾರಿ ಪ್ರಶಸ್ತಿ ಗೆದ್ದಿತ್ತು.
PC: ISL
ಚೆನ್ನೈಯಿನ್ ಪರ  ಬ್ರೆಜಿಲ್ ಆಟಗಾರ ಮೈಲ್ಸನ್ ಅಲ್ವೇಸ್ (17ನೇ ನಿಮಿಷ ಮತ್ತು 45ನೇ ನಿಮಿಷ) ಎರಡು ಗೋಲು ಬಾರಿಸಿ ಗೆಲುವಿನ ರೂವಾರಿಯಾಗಿ ಮೂಡಿ ಬಂದರೆ, ಬ್ರೆಜಿಲ್‌ನ ಮತ್ತೊಬ್ಬ ತಾರೆ ರಾಯಲ್ ಆಗಸ್ಟೊ 67ನೇ ನಿಮಿಷದಲ್ಲಿ ತಂಡಕ್ಕೆ 3ನೇ ಗೋಲು ತಂದು ಜಯದ ಅಂತರ ಹೆಚ್ಚಿಸಿದರು. ಬೆಂಗಳೂರು ಪರ ನಾಯಕ ಸುನಿಲ್ ಛೆಟ್ರಿ (9ನೇ ನಿಮಿಷ) ಮತ್ತು ಮಿಕು (90ನೇ ನಿಮಿಷ) ತಲಾ ಒಂದು ಗೋಲು ಗಳಿಸಿದರಾದರೂ ತಂಡಕ್ಕೆ ಚೊಚ್ಚಲ ಪ್ರಶಸ್ತಿ ಗೆದ್ದು ಕೊಡಲಾಗಲಿಲ್ಲ.
PC: ISL
ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಬೆಂಗಳೂರು ತಂಡ ತವರು ನೆಲದಲ್ಲೇ ಪ್ರಶಸ್ತಿ ಗೆಲ್ಲಲಾಗದ ನೋವಿನಲ್ಲಿ ಮುಳುಗಿತು.
PC: ISL
ಪಂದ್ಯ ಮುಕ್ತಾಯಗೊಂಡು ಚೆನ್ನೈ ಜಯಭೇರಿ ಬಾರಿಸುತ್ತಿದ್ದಂತೆ ಬೆಂಗಳೂರು ತಂಡದ ನಾಯಕ ಸುನಿಲ್ ಛೆಟ್ರಿ ಏಕಾಂಗಿಯಾಗಿ ಮೈದಾನದಲ್ಲಿ ಕುಳಿತು ಬಿಟ್ಟರು. ಕ್ರೀಡಾಂಗಣದಲ್ಲಿ ತುಂಬಿದ್ದ ಬೆಂಗಳೂರು ಬಳಗದ ಅಭಿಮಾನಿಗಳು ತಮ್ಮ ತಂಡದ ಸೋಲಿಗೆ ಕಣ್ಣೀರು ಹಾಕಿದರು.

Related Articles