ಇಫೋ (ಮಲೇಷ್ಯಾ): ಇಲ್ಲಿ ನಡೆಯುತ್ತಿರುವ 27ನೇ ಆವೃತ್ತಿಯ ಸುಲ್ತಾನ್ ಅಜ್ಲಾನ್ ಶಾ ಹಾಕಿ ಟೂರ್ನಿಯಲ್ಲಿ ಭಾರತ ತಂಡ, ವಿಶ್ವದ ನಂ.1 ತಂಡ ಆಸ್ಟ್ರೇಲಿಯಾ ವಿರುದ್ಧ 2-4ರ ಅಂತರದಲ್ಲಿ ಸೋಲು ಅನುಭವಿಸಿದೆ.
ಮಂಗಳವಾರ ನಡೆದ ರೌಂಡ್ ರಾಬಿನ್ ಪುಂದ್ಯದಲ್ಲಿ ಭಾರತ ಪರ ರಮಣ್‌ದೀಪ್ ಸಿಂಗ್ ಎರಡು ಗೋಲು (52, 53ನೇ ನಿಮಿಷ) ಬಾರಿಸಿದರಾದರೂ ತಂಡಕ್ಕೆ ಜಯ ತಂದುಕೊಡಲು ಸಾಧ್ಯವಾಗಲಿಲ್ಲ.
ಆಸ್ಟ್ರೇಲಿಯಾ ಪರ ಮಾರ್ಕ್ ನೋಲ್ಸ್(28ನೇ ನಿಮಿಷ), ಅರಾನ್ ಜಾಲೆಸ್ಕಿ(35ನೇ ನಿಮಿಷ), ಡೇನಿಯೆಲ್ ಬೀಲ್(38ನೇ ನಿಮಿಷ) ಮತ್ತು ಬ್ಲೇಕ್ ಗೋವರ್ಸ್(40ನೇ ನಿಮಿಷ) ತಲಾ ಒಂದು ಗೋಲು ಬಾರಿಸಿ ಟೂರ್ನಿಯಲ್ಲಿ ತಂಡದ ಅಜೇಯ ದಾಖಲೆಗೆ ಕಾರಣರಾದರು.
ತನ್ನ ಮೊದಲ ಪಂದ್ಯದಲ್ಲಿ ಭಾನುವಾರ ಅರ್ಜೆಂಟೀನಾ ವಿರುದ್ಧ 2-3ರ ಅಂತರದಲ್ಲಿ ಸೋತಿದ್ದ ಭಾರತ, ಸೋಮವಾರ ನಡೆದ 2ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 1-1ರ ಅಂತರದಲ್ಲಿ ಡ್ರಾ ಸಾಧಿಸಿತ್ತು. ಇದೀಗ 2ನೇ ಸೋಲಿನೊಂದಿಗೆ ಆಡಿರುವ 3 ಪಂದ್ಯಗಳಿಂದ ಕೇವಲ ಒಂದು ಅಂಕ ಗಳಿಸಿರುವ ಭಾರತ ಗುಂಪಿನಲ್ಲಿ 5ನೇ ಸ್ಥಾನದಲ್ಲಿದೆ. ಆಡಿರುವ ಮೂರೂ ಪಂದ್ಯಗಳನ್ನು ಗೆದ್ದಿರುವ ಆಸ್ಟ್ರೇಲಿಯಾ 9 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಅರ್ಜೆಂಟೀನಾ(6 ಅಂಕ), ಇಂಗ್ಲೆಂಡ್ (4 ಅಂಕ) ಮತ್ತು ಮಲೇಷ್ಯಾ(3 ಅಂಕ) ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.