ಭಾರತ ವಿರುದ್ಧದ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸ್ಪಿನ್ನರ್ ಇಮ್ರಾನ್ ತಾಹಿರ್‌ಗೆ ಜನಾಂಗೀಯ ನಿಂದನೆ
ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾ ತಂಡದ ಅನುಭವಿ ಲೆಗ್‌ಸ್ಪಿನ್ನರ್ ಇಮ್ರಾನ್ ತಾಹಿರ್, ನ್ಯೂ ವಾಂಡರರ್ಸ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಭಾರತ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ಜನಾಂಗೀಯ ನಿಂದನೆಗೆ ಗುರಿಯಾಗಿದ್ದಾರೆ ಎಂದು ಕ್ರಿಕೆಟ್ ಸೌತ್ ಆಫ್ರಿಕಾ(ಸಿಎಸ್‌ಎ) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಪಂದ್ಯದ ವೇಳೆ ಪ್ರೇಕ್ಷಕನೊಬ್ಬ ಇಮ್ರಾನ್ ತಾಹಿರ್ ಅವರನ್ನು ಜನಾಂಗೀಯವಾಗಿ ನಿಂದಿಸಿದ್ದಾನೆ ಎಂದು ಸಿಎಸ್‌ಎ ಸ್ಪಷ್ಟಪಡಿಸಿದೆ.
ಕೂಡಲೇ ಇಮ್ರಾನ್ ತಾಹಿರ್ ಈ ಘಟನೆಯನ್ನು ಕ್ರೀಡಾಂಗಣದ ಭದ್ರತಾ ಸಿಬ್ಬಂದಿಯ ಗಮನಕ್ಕೆ ತಂದಿದ್ದಾರೆ. ಎಚ್ಚೆತ್ತ ಭದ್ರತಾ ಸಿಬ್ಬಂದಿ ತಾಹಿರ್ ಅವರ ನೆರವಿನೊಂದಿಗೆ ಆ ಪ್ರೇಕ್ಷಕನನ್ನು ಗುರುತಿಸಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆಯ ಬಗ್ಗೆ ಟ್ವೀಟ್ ಮಾಡಿರುವ ತಾಹಿರ್ ‘‘ಪ್ರೋತ್ಸಾಹ ಮತ್ತು ಪ್ರೀತಿಗಾಗಿ ಎಲ್ಲರಿಗೂ ಥ್ಯಾಂಕ್ಸ್. ದೇಶ, ಧರ್ಮ ಮತ್ತು ಬಣ್ಣದ ಎಲ್ಲೆಯನ್ನು ಮೀರಿ ಎಲ್ಲರಿಗೂ ಪ್ರೀತಿ ಹಂಚುವ ಸರಳ ಮನುಷ್ಯನಾನು. ನಾನು ಜಗತ್ತಿನ ಎಲ್ಲೆಡೆ ಕ್ರಿಕೆಟ್ ಆಡಿದ್ದು, ಸ್ನೇಹವನಷ್ಟೇ ಸಂಪಾದಿಸಿದ್ದೇನೆ,’’ಎಂದಿದ್ದಾರೆ.