Thursday, December 12, 2024

ಯಶ್ವಂತ್ ಎಂಬ ಕನ್ನಡಿಗರ ಯೋಗ

ಸೋಮಶೇಖರ್ ಪಡುಕರೆ ಬೆಂಗಳೂರು

ಯಶ್ವಂತ್ ರೆಡ್ಡಿ, ಇನ್ನೂ ೧೨ರ ಹರೆಯ. ಆದರೆ ಈಗಲೇ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಯೋಗದಲ್ಲಿ ಮಿಂಚಿ ಚಾಂಪಿಯನ್ ಆಫ್  ಚಾಂಪಿಯನ್ಸ್ ಎಂಬ  ಗೌರವಕ್ಕೆ ಪಾತ್ರರಾದ ಯುವ ಪ್ರತಿಭೆ.

ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಟ್ರೆಮಿಸ್ ವಿಶ್ವ ಶಾಲೆಯಲ್ಲಿ ಓದುತ್ತಿರುವ ಈ ಯುವ ಯೋಗ ಪಟು ಅತ್ಯಂತ ಸಾಮಾಜಿಕ ಕಾಳಜಿ ಹೊಂದಿರುವ ಕ್ರೀಡಾಪಟು. ಮಂಗಳೂರಿನ ಪುರುಷೋತ್ತಮ ದೆರಾಜೆ ಅವರ ಸರಸ್ವತಿ ಯೋಗ ಶಾಲೆಯಲ್ಲಿ ಕಲಿಯುತ್ತಿರುವ ಈ ಚಾಂಪಿಯನ್ ಬಿಡುವಿನ ವೇಳೆಯಲ್ಲಿ ಗ್ರಾಮೀಣ ಮಕ್ಕಳಿಗೆ ಯೋಗ ತರಬೇತಿ ನೀಡುತ್ತಾರೆ. ಶಾಲಾ ರಜಾ ದಿನಗಳಲ್ಲಿ ಕಾರ್ಪೋರೇಟ್ ವಲಯ, ಕೈದಿಗಳ ಮನಪರಿವರ್ತನೆ, ಕುಡುಕರ ಮನಸ್ಸನ್ನು ಬದಲಾಯಿಸುವುದು, ಕ್ಯಾನ್ಸರ್ ಪೀಡಿತರಿಗೆ ಯೋಗದ ಅರಿವು ಮೂಡಿಸುವುದು, ಮಾನಸಿಕ ಅಸ್ವಸ್ಥರ ಮನಸ್ಸನ್ನು ನಿರ್ಮಲಗೊಳಿಸುವುದು, ಬದುಕಿನ ಬಗ್ಗೆ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ.

ಸ್ಫೂರ್ತಿಯಾದ ಡಾ. ರಾಜ್‌ಕುಮಾರ್ ಅವರ ಕಾಮನಬಿಲ್ಲು

ಡಾ. ರಾಜ್ ಕುಮಾರ್ ಅಭಿನಯದ ಕಾಮನಬಿಲ್ಲು ಸಿನಿಮಾ ನೋಡಿ ಅದರಲ್ಲಿ ಡಾ. ರಾಜ್ ಯೋಗಾಭ್ಯಾಸ ಮಾಡುವುದನ್ನು ಕಂಡು ಸ್ಫೂರ್ತಿ ಪಡೆದಾಗ ಯಶ್ವಂತ್‌ಗೆ ಇನ್ನೂ ಐದು ವರ್ಷ. ಡಾ. ರಾಜ್ ಅವರ ಸಿನಿಮಾಗಳು ಸಾಮಾಜಿಕ ಬದುಕು ಹಾಗೂ ಯುವಕರು ಮತ್ತು ಮಕ್ಕಳಲ್ಲಿ ಯಾವ ರೀತಿಯ ಪ್ರೇರಣೆ ಮೂಡಿಸುತ್ತದೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ.
ಟೀವಿಯಲ್ಲಿ ಬರುತ್ತಿದ್ದ ಕಾಮನಬಿಲ್ಲು ಚಿತ್ರವನ್ನು ಖುಷಿಯಿಂದ ನೋಡುತ್ತಿದ್ದೆ. ಅಲ್ಲಿ ಡಾ. ರಾಜ್ ಅವರ ಆಸನಗಳು ನನ್ನ ಮನ ಗೆದ್ದಿತ್ತು, ಅವತ್ತೆ ಅಮ್ಮನಲ್ಲಿ ಯೋಗ ತರಗತಿಗೆ ಸೇರಿಸುವಂತೆ ವಿನಂತಿಸಿಕೊಂಡೆ. ಗುರುಗಳಾದ ಪುರುಷೋತ್ತಮ ದೆರಾಜೆ ನನ್ನನ್ನು ಇಷ್ಟು ಉತ್ತಮ ರೀತಿಯಲ್ಲಿ ಬೆಳೆಸಿದ್ದಾರೆ. ಯೋಗ ಎಲ್ಲರ ಬದುಕಿನ ನಿತ್ಯದ ಆಚರಣೆಯಾಗಬೇಕು ಎಂಬುದು ನನ್ನ ಗುರಿ,‘ ಎನ್ನುತ್ತಾರೆ ಯಶ್ವಂತ್.
ಭಾರತದ ಅತ್ಯಂತ ಕಿರಿಯ ಯೋಗ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಯಶ್ವಂತ್, ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಳಿಸಿದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ಅವರ ಸಾಧನೆಯನ್ನು ಗಮನಿಸಿ ಈ ವರ್ಷ ಪ್ರತಿಷ್ಠಿತ ಕಂಪೇಗೌಡ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ಚಾಂಪಿಯನ್ ಆಫ್  ಚಾಂಪಿಯನ್ಸ್

೨೦೧೭ರ ಜೂನ್‌ನಲ್ಲಿ ಪಾಂಡಿಚೇರಿಯಲ್ಲಿ ನಡೆದ ೨೨ನೇ ಅಂತಾರಾಷ್ಟ್ರೀಯ ಯೋಗ ಚಾಂಪಿಯನ್‌ಷಿಪ್‌ನಲ್ಲಿ ಯಶ್ವಂತ್ ಚಿನ್ನದ ಪದಕ ಗೆದ್ದರು, ಅಷ್ಟೇ ಅವರ ಯೋಗದ ನೈಪುಣ್ಯತೆಯನ್ನು ಕಂಡು ಚಾಂಪಿಯನ್ ಆಫ್  ಚಾಂಪಿಯನ್ಸ್ ಎಂಬ ವಿಶೇಷ ಗೌರವವನ್ನೂ ನೀಡಲಾಯಿತು. ೨೦೧೭ರಲ್ಲಿ ಚೀನಾದ ಶೆನ್‌ಜೆನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಯಶ್ವಂತ್ ಸಾಮಾನ್ಯ ಯೋಗಾಸನದಲ್ಲಿ ಮೂರನೇ ಸ್ಥಾನ ಹಾಗೂ ರಿದಮಿಕ್ ಯೋಗದಲ್ಲಿ ೪ನೇ ಸ್ಥಾನ ಗಳಿಸಿದರು.
ಅಷ್ಟೇ ಅಲ್ಲದೆ ಖಾಸಗಿ ಚಾನೆಲ್‌ಗಳಾದ ಉದಯ, ಸನ್, ಸ್ಟಾರ್ ವಿಜಯ್, ಜೀ ತೆಲುಗು ಮತ್ತು ಕಲರ್ಸ್ ಕನ್ನಡ ಚಾನೆಲ್‌ಗಳ ರಿಯಾಲಿಟಿ ಶೋಗಳಲ್ಲೂ ಪಾಲ್ಗೊಂಡಿದ್ದಾರೆ. ಇಂಡಿಯಾ ಗಾಟ್ ಟ್ಯಾಲೆಂಟ್‌ನಲ್ಲೂ ಕರ್ನಾಟಕದಿಂದ ಆಯ್ಕೆಯಾಗಿದ್ದಾರೆ.
೭೬ ಪದಕಗಳು, ೧೦೬ ಪ್ರಶಸ್ತಿ ಪತ್ರಗಳು ಹಾಗೂ ೫೬ ಪ್ರಶಸ್ತಿ ಫಲಕಗಳನ್ನು ಗೆದ್ದಿರುವ ಯಶ್ವಂತ್ ಅವರನ್ನು ೨೦೧೭ರಲ್ಲಿ ಭಾರತ ರತ್ನ ಅಟಲ್‌ಬಿಹಾರಿ ಸೇವಾರ್ಥ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಆಲ್ರೌಂಡರ್

ಬರೇ ಯೋಗದಲ್ಲಿ ಮಾತ್ರ ನಂ.೧ ಅಲ್ಲ, ಕ್ರಿಕೆಟ್, ಫುಟ್ಬಾಲ್, ವಾಲಿಬಾಲ್, ಅಥ್ಲೆಟಿಕ್ಸ್, ಡಾನ್ಸ್ ಮೊದಲಾದ ಪಠ್ಯೇತರ ಚಟುವಟಿಕೆಗಳಲ್ಲೂ ಯಶ್ವಂತ್ ನಂ. ೧ ಕೂಡ. ಕಳೆದ ವರ್ಷ ತಾವು ಕಲಿಯುತ್ತಿರುವ ಟ್ರಿಮಿಸ್ ವರ್ಲ್ಡ್ ಸ್ಕೂಲ್‌ನಲ್ಲಿ ಸ್ಟಾರ್ ಸ್ಟೂಡೆಂಟ್ ಎಂಬ ಗೌರವಕ್ಕೂ ಪಾತ್ರರಾದರು.
ಈ ವರ್ಷ ಜನವರಿಯಲ್ಲಿ ಮಲೇಷ್ಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಯಶ್ವಂತ್ ಐದನೇ ಸ್ಥಾನ ಗಳಿಸಿದರು. ಥಾಯ್ಲೆಂಡ್‌ನಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದರು. ಥಾಯ್ಲೆಂಡ್‌ನಲ್ಲಿ ತೋರಿದ ಸಾಧನೆಗಾಗಿ ತಮಿಳುನಾಡು ಮುಖ್ಯಮಂತ್ರಿ ಈ ಯುವ ಯೋಗಪಟುವನ್ನು ಆಹ್ವಾನಿಸಿ ಗೌರವಿಸಿರುತ್ತಾರೆ.
ಉದ್ಯಮಿ ಆಂಜನೇಯ ರೆಡ್ಡಿ ಹಾಗೂ ಚೈತ್ರಾ ಅವರ ಮುದ್ದಿನ ಮಕ್ಕಳಾಗಿರುವ  ಯಶ್ವಂತ್  ಹಾಗೂ ಕಿರಿಯ ಮಗ ಮಾಸ್ಟರ್ ಡ್ಯಾನ್ಸರ್ ಶಾಶ್ವತ್ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲೆಂಬುದು ಕನ್ನಡಿಗರ ಹಾರೈಕೆ.

Related Articles