Thursday, October 10, 2024

ಬೆಂಗಳೂರು ಕಂಬಳದಿಂದ ರಾಜ್ಯಕ್ಕೆ ಲಾಭವೇನು?

ಬೆಂಗಳೂರಿನಲ್ಲಿ ಕಂಬಳ ನಡೆಸಿ ಏನು ಪ್ರಯೋಜನ? ಇದು ಬೆಂಗಳೂರಿನಲ್ಲಿ ನಡೆಯುತ್ತಿರುವ ಕಂಬಳದ ಬಗ್ಗೆ ಅನೇಕರು ಕೇಳುವ ಪ್ರಶ್ನೆ. ಯಕ್ಷಗಾನ ಕೂಡ ಬೆಂಗಳೂರಿಗೆ ಹೆಜ್ಜೆ ಇಟ್ಟಾಗಲೂ ಇದೇ ಪ್ರಶ್ನೆ ಕೇಳಿದವರಿದ್ದಾರೆ. ಸಾಂಪ್ರದಾಯಿಕ ಕಲೆಯೊಂದು ಹೊಸ ರೂಪವನ್ನು ಪಡೆದುಕೊಳ್ಳಬೇಕಾದರೆ ಕೆಲವು ಬದಲಾವಣೆಗಳಿಗೆ ಒಗ್ಗಿಕೊಳ್ಳುವುದು ಅನಿವಾರ್ಯವಾಗುತ್ತದೆ. ಹಾಗಾದರೆ ಕಂಬಳ ಬೆಂಗಳೂರಿನಲ್ಲಿ ನಡೆಯುವುದರಿಂದ ಪ್ರಯೋಜನವೇನು? ಇಂಥ ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ. What is the benefit by organizing Kambala in Bangalore?

ಕನ್ನಡದ ಸಿನಿಮಾಗಳಲ್ಲಿ ಕರ್ನಾಟಕದ ಕಲಾ ಪ್ರಕಾರಗಳನ್ನು ಆಗಾಗ ಬಳಸಿಕೊಳ್ಳಲಾಗುತ್ತದೆ. ಮತ್ತು ಟೀಕೆಗಳೂ ಬರುತ್ತಿರುತ್ತವೆ. ಕಂಬಳವನ್ನು ಈ ಹಿಂದೆಯೂ ಬಳಸಲಾಗಿದೆ. ಆದರೆ ಕರಾವಳಿ ಸಾಂಪ್ರದಾಯಿಕ ಕ್ರೀಡೆ ಕಂಬಳವನ್ನು ನಟ ರಿಷಬ್‌ ಶೆಟ್ಟಿ ಅವರು ತಮ್ಮ ಕಾಂತಾರ ಸಿನಿಮಾದಲ್ಲಿ ಬಳಸಿಕೊಂಡಿದ್ದು ಹೆಚ್ಚು ಪರಿಣಾಮಕಾರಿಯಾಗಿದೆ. ಕಾಂತಾರ ಸಿನಿಮಾ ಯಾವ ರೀತಿಯಲ್ಲಿ ಪ್ರಸಿದ್ಧಿ ಪಡೆಯಿತೋ ಅದೇ ರೀತಿ ಕಂಬಳ ಮತ್ತು ಭೂತದ ಕೋಲ ಜಗತ್ತಿನ ಗಮನ ಸೆಳೆಯಿತು.

ಈ ಬಾರಿಯ ಬೆಂಗಳೂರು ಕಂಬಳದ ಯೋಜನೆ ಹುಟ್ಟಿಕೊಂಡಿದ್ದು ಕೂಡ ಕಾಂತಾರ ಸಿನಿಮಾದ ಪ್ರೇರಣೆಯಿಂದಲೇ ಎಂದರೆ ತಪ್ಪಾಗಲಾರದು. ಸಾಂಪ್ರದಾಯಿಕ ಕ್ರೀಡೆಯೊಂದು ಆಧುನಿಕತೆಯ ರೂಪು ತಳೆದು ನಗರವನ್ನು ಪ್ರವೇಶಿಸಿದಾಗ ಅಲ್ಲಿ ಪರ ಮತ್ತು ವಿರೋಧಗಳು ಇದ್ದೇ ಇರುತ್ತದೆ. ಆದರೆ ಅದರಿಂದಾಗುವ ಸಾಮಾಜಿಕ ಬದಲಾವಣೆಯನ್ನು ನಾವು ಗಮನದಲ್ಲಿರಿಸಿಕೊಳ್ಳಬೇಕು. ಕರಾವಳಿಯಲ್ಲಿ ಜನಪ್ರಿಯವಾಗಿರುವ ಈ ಕಂಬಳ ನಡೆಯುವುದು ಬತ್ತದ ಕೊಯ್ಲಿನ ವೇಳೆ. ಸಾಮಾನ್ಯವಾಗಿ ಕೊಯ್ಲು ಮುಗಿದ ನಂತರ ನಡೆಯುತ್ತದೆ. ಇಲ್ಲಿ ಶೋಷಣೆ, ಪ್ರಾಣಿ ಹಿಂಸೆ ನಡೆಯುತ್ತದೆ ಎಂದು ಹೇಳುವವರೂ ಇದ್ದಾರೆ. ಆದರೆ ಕಲಾ ಪ್ರಕಾರವೊಂದು ತನ್ನ ಹಿಂದಿನ ಕಟ್ಟುಪಾಡಿನಲ್ಲೇ ನಡೆಯಬೇಕೆಂಬುದಿಲ್ಲ. ಕೊರಗರನ್ನು ನೋಡಿಕೊಳ್ಳುವ ರೀತಿ ಸರಿ ಇಲ್ಲ ಎನ್ನುವುದು ಸಹಜ. ಆದರೆ ಕೊರಗರು ಈಗ ಶಿಕ್ಷಣ ಪಡೆದು ಕಂಬಳದಿಂದ ದೂರವಾಗುತ್ತಿರುವುದನ್ನೂ ಗಮನಿಸಬಹುದು. ಡೊಳ್ಳುಗಳು ಮಾಯವಾಗುತ್ತಿದೆ. ಹೀಗೆ ಕಂಬಳವು ಕೂಡ ತನ್ನ ಹೊಸ ರೂಪವನ್ನು ಕಂಡುಕೊಳ್ಳುವುದು ಸಹಜ.

ಪ್ರವಾಸೋದ್ಯಮಕ್ಕೆ ಅವಕಾಶ:

ಬೆಂಗಳೂರಿನಲ್ಲಿ ಕಂಬಳ ಆಯೋಜಿಸಿರುವುದಕ್ಕೆ ವಿರೋಧ ಬಂದದ್ದು ಅದಕ್ಕೆ ರಾಜಕೀಯದ ಲೇಪ ಸಿಕ್ಕಿದಾಗ. ಲೈಂಗಿಕ ಕಿರುಕುಳದ ಆರೋಪ ಎದುರಿಸಿರುವ ಉತ್ತರಪ್ರದೇಶದ ಸಂಸದ ಬ್ರಿಜ್‌ ಭೂಷಣ್‌ ಸಿಂಗ್‌ ಮುಖ್ಯ ಅತಿಥಿಯಾಗಿ ಬರುವುದಕ್ಕೆ ಅನೇಕರ ವಿರೋಧವಿದ್ದಿತ್ತು. ಇದರರ್ಥ ಕಂಬಳಕ್ಕೆ ವಿರೋಧ ಎಂದಲ್ಲ. ಕರಾವಳಿ ಕಲೆ, ಕ್ರೀಡೆಯೊಂದಕ್ಕೆ ರಾಜಧಾನಿಯಲ್ಲಿ ಅವಕಾಶ ಸಿಕ್ಕಿರುವುದು ಹೆಮ್ಮೆಯ ಸಂಗತಿ. ಇದರಿಂದ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಕ್ಕಂತಾಗುತ್ತದೆ. ಇಂದು ಬೆಂಗಳೂರಿನಲ್ಲಿ ಕಂಬಳ ನೋಡಿ ಖುಷಿ ಪಟ್ಟವರು ನಾಳೆ ವಂಡಾರು ಅಥವಾ ಮೂಡಬಿದಿರೆ ಕಂಬಳಕ್ಕೂ ಬರಬಹುದು.

ಸ್ಪೇನ್‌, ಇಂಡೋನೇಷ್ಯಾದಲ್ಲೂ ಕಂಬಳ:

ಕಂಬಳ ಎನ್ನುವುದು ಜಗತ್ತಿನ ಬೇರೆ ಬೇರೆ ರಾಷ್ಟ್ರಗಳಲ್ಲಿ ನಡೆಯುತ್ತದೆ. ಹೆಸರು ಬೇರೆಯಾದರೂ ಅಲ್ಲಿ ಓಡುವುದು ಕೋಣವೇ. ಇಂಡೋನೇಷ್ಯಾ, ಸ್ಪೇನ್‌, ಪೋರ್ಚುಗಲ್‌ ಮತ್ತು  ಪಾಕಿಸ್ತಾನ ಸೇರಿದಂತೆ ಇನ್ನಿತರ ದೇಶಗಳಲ್ಲಿ ವಿಭಿನ್ನ ರೀತಿಯಲ್ಲಿ ನಡೆಯುತ್ತದೆ. ಸ್ಪೇನ್‌ನಲ್ಲಿ 14ನೇ ಶತಮಾನದಿಂದಲೂ ಈ ಕೋಣ ಅಥವಾ ಎತ್ತುಗಳ ಓಟ ನಡೆಯುತ್ತಿದೆ. ಅವುಗಳಲ್ಲಿ ಮುಖ್ಯವಾದುದು ನವಾರ್ರೆದಾ ರಾಜಧಾನಿ ಪಂಪೆಲುನಾದಲ್ಲಿ ನಡೆಯುವ “ಎನ್ಸಿಯೆರೋ” 9 ದಿನಗಳ ಕಾಲ ನಡೆಯುವ ಎತ್ತುಗಳ ಓಟದ ಜಾತ್ರೆ. ಇದರ ವೀಕ್ಷಣೆಗೆ ಜಗತ್ತಿನ ವಿವಿಧ ಭಾಗಗಳಿಂದ ಹೆಚ್ಚಾಗಿ ಯೂರೋಪ್‌ ದೇಶಗಳಿಂದ ಜನ ಆಗಮಿಸುತ್ತಾರೆ.

30 ವರ್ಷಗಳಿಂದ ನೇರ ಪ್ರಸಾರ:

ಸ್ಪೇನ್‌ನಲ್ಲಿ ನಡೆಯುವ ಎನ್ಸಿಯೆರೋ ಕೋಣಗಳ ಜಾತ್ರೆ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಪ್ರತಿ ವರ್ಷ ಜುಲೈ 6-14 ರವರೆಗೆ ನಡೆಯುತ್ತದೆ. ಇಲ್ಲಿ ಕೃಷಿಕ ಕುಟುಂಬಳೇ ಹೆಚ್ಚು ಇರುವುದರಿಂದ ಈ ಓಟ ಇನ್ನೂ ಜೀವಂತವಾಗಿಯೇ ಉಳಿದಿರುವುದ ಮಾತ್ರವಲ್ಲ. ಸ್ಪೇನ್‌ನ ಎಲ್ಲ ಕಡೆಯೂ ಹಬ್ಬಿದೆ. ಆರಂಬದಲ್ಲಿ ಗದೆಗಳಲ್ಲಿ ಓಡುತ್ತಿದ್ದ ಕೋಣಗಳು ಈಗ ಬೀದಿಗಳಲ್ಲಿ ಓಡುತ್ತವೆ, ಬೀದಿ ಇಕ್ಕೆಲಗಳನ್ನು ಮರದ ಹಲಗೆಯಿಂದ ಕಟ್ಟಿರುತ್ತಾರೆ. ಕೋಣ ಅಥವಾ ಎತ್ತಿನ ಹಿಂದೆ ಓಡುವವರಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಮತ್ತು ಆ ದಿನಗಳಲ್ಲಿ ಆತ ಮದ್ಯಪಾನ ಮಾಡಿರಬಾರದು.

ಕಳೆದ 30 ವರ್ಷಗಳಿಂದ ಸ್ಪೇನ್‌ನ ಪ್ರಮುಖ ರಾಷ್ಟ್ರೀಯ ಚಾಲೆನ್‌ RTVE ಈ ಓಟದ ನೇರ ಪ್ರಸಾರ ಮಾಡುತ್ತಿದೆ. ಇದರಿಂದ ಪಂಪೆಲುನಾಕ್ಕೆ ಪ್ರವಾಸಿಗರು ಹರಿದುಬರುತ್ತಾರೆ, ಅಲ್ಲಿಯ ಆದಾಯವೂ ಹೆಚ್ಚಿದೆ. ಹೀಗೆ ಒಂದು ಸಾಂಪ್ರದಾಯಿಕ ಕ್ರೀಡೆಗೆ ವೃತ್ತಿಪರತೆಯನ್ನು ನೀಡಿದಾಗ ಅದು ಪ್ರವಾಸೋದ್ಯಮಕ್ಕೂ ನೆರವಾಗುತ್ತದೆ ಎಂಬುದಕ್ಕೆ ಸ್ಪೇನ್‌ನ ಕೋಣಗಳ ಓಟ ಉತ್ತಮ ಉದಾಹರಣೆ. ಕರಾವಳಿಯಲ್ಲಿ ಕೋಣಗಳಿಗೆ ಯಾವ ರೀತಿಯಲ್ಲಿ ಶೃಂಗಾರ ಮಾಡುತ್ತಾರೋ ಅದೇ ರೀತಿಯಲ್ಲಿ ಅಲ್ಲಿ ಓಡುವವರಿಗೆ ಸಮವಸ್ತ್ರವಿರುತ್ತದೆ. ಕರಾವಳಿಯ ಕಂಬಳ ಈಗ ರಾಜ್ಯದ ರಾಜಧಾನಿಗೆ ಪರಿಚಯವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಜಾತೆಗಳ ಸಾಲು ಸಾಲು. ಜೊತೆಯಲ್ಲಿ ಅಲ್ಲಲ್ಲಿ ಕಂಬಳವಿರುತ್ತದೆ. ರಾಜ್ಯ ಪ್ರವಾಸೋದ್ಯಮ ಇಲಾಖೆ ಈ ನಿಟ್ಟಿನಲ್ಲಿ ಯೋಚಿಸಿ, ಯೋಜನೆ ರೂಪಿಸಿದರೆ ಕಂಬಳದ ಮೂಲಕ ರಾಜ್ಯದ ಬೊಕ್ಕಸಕ್ಕೂ ಹಣ ಹರಿದುಬರುವಂತೆ ಮಾಡಬಹುದು.

ಉಳಿಗಮಾನ್ಯ ಪದ್ಧತಿಯಿಂದ ಬಂದದ್ದು, ಶೋಷಣೆ ನಡೆಯುತ್ತದೆ, ಪ್ರಾಣಿಗಳ ಹಿಂಸೆ ನಡೆಯುತ್ತದೆ ಎಂಬೆಲ್ಲ ಮಾತುಗಳು ಕೇಳಿ ಬಂದಿವೆ. ಆಗ ನಡೆದಿರುವ ಸಂಗತಿಗಳು ಈಗ ನಡೆಯಬೇಕೆಂದಿಲ್ಲ. ಜನರು ಸುಶಿಕ್ಷಿತರಾಗಿದ್ದಾರೆ. ಆಗ ಬದುಕು ಅನಿವಾರ್ಯವಾಗಿತ್ತು. ಈಗ ಮನುಷ್ಯ ಬದುಕಲು ಪರ್ಯಾಯ ಮಾರ್ಗಗಳನ್ನು ಕಂಡುಕೊಂಡಿದ್ದಾನೆ. ಒಬ್ಬ ಖ್ಯಾತ ಹಾಡುಗಾರ ರಾಜಕಾರಣಿಯ ಮನೆಗೆ ಹೋಗಿ ಆತನ ಸಮ್ಮುಖದಲ್ಲಿ ಹಾಡುವುದು ಕೂಡ ಶೋಷಣೆಯೇ. ಆಸ್ಥಾನದಲ್ಲಿ ಕವಿಗಳನ್ನಿರಿಸಿಕೊಂಡು ನನ್ನ ಬಗ್ಗೆ ಬರೆಯಿರಿ ಎಂದು ಹೇಳುವುದು ಕೂಡ ಶೋಷಣೆಯೇ, ಆದರ್ಶಗಳನ್ನು ಪಾಲಿಸಿ ತೋರಿಸಿದರೆ ಮಾತ್ರ ಜನ ಅನುಸರಿಸುತ್ತಾರೆ. ಇಲ್ಲವಾದಲ್ಲಿ ನೀತಿ ಪಾಠ ಎಂದು ಸುಮ್ಮನಿರುತ್ತಾರೆ. ಗದ್ದೆಯಲ್ಲಿ ಕೆಲಸ ಮಾಡುವುದನ್ನು “ದುಡಿಸಿಕೊಳ್ಳುತ್ತಿದ್ದರು,” ಎಂದು ಬರೆವರು ನಾವೇ. ಈಗ ಗದ್ದೆಗಳಲ್ಲಿ ಮೆಷಿನ್‌ ಮೂಲಕ ಬತ್ತ ಕೊಯ್ಯಲಾಗುತ್ತಿದೆ ಎಂದು ಬರೆಯುತ್ತಿರುವವರೂ ನಾವೇ.

Related Articles