Saturday, October 12, 2024

ಕ್ರಿಕೆಟ್‌ ವ್ಯಾಪಾರದಲ್ಲಿ ನೈತಿಕವಾಗಿ ಸೋತ ಮುಂಬೈ ಇಂಡಿಯನ್ಸ್‌!

ಮುಂಬಯಿ: ಮುಂಬಯಿ ಇಂಡಿಯನ್ಸ್‌ಗೆ ಐದು ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟ್ರೋಫಿ ಹಾಗೂ ಒಂದು ಚಾಂಪಿಯನ್ಸ್‌‌ ಲೀಗ್‌ ಟ್ರೋಫಿಯನ್ನು ತಂದು ಕೊಟ್ಟ ನಾಯಕ ರೋಹಿತ್‌ ಶರ್ಮಾ (Rohit Sharma) ಅವರನ್ನು ಇದಕ್ಕಿದ್ದಂತೆ ನಾಯಕತ್ವ ಸ್ಥಾನದಿಂದ ಕೆಳಗಿಳಿಸಿ ಅವರ ಬದಲಿಗೆ ಹಾರ್ದಿಕ್‌‌ ಪಾಂಡ್ಯಗೆ ನಾಯಕನ ಜವಾಬ್ದಾರಿಯನ್ನು ನೀಡಲಾಗಿದೆ. ಈಗ ರೋಹಿತ್‌ ಶರ್ಮಾ ಒಂದು ಋತುವನ್ನು ಮುಂಬೈ ಇಂಡಿಯನ್ಸ್‌ನಲ್ಲೇ ಮುಂದುವರಿದು, ಬಳಿಕ ಬೇರೆ ಫ್ರಾಂಚೈಸಿಯ ಪಾಲಾಗಬಹುದೇ ಎಂದು ಕ್ರಿಕೆಟ್‌ ಜಗತ್ತು ಲೆಕ್ಕಾಚಾರ ಹಾಕುತ್ತಿದೆ. This is last season for Rohit Sharma in Mumbai Indians Team.

ಇದರೊಂದಿಗೆ ಮುಂಬೈ ಇಂಡಿಯನ್ಸ್‌ ಕ್ರಿಕೆಟ್‌ ವ್ಯಾಪಾರದಲ್ಲಿ ನೈತಿಕವಾಗಿ ಸೋತಿದೆ. ಐದು ಪ್ರಶಸ್ತಿಯನ್ನು ತಂದುಕೊಟ್ಟ ಒಬ್ಬ ನಾಯಕನನ್ನು ನೋಡಿಕೊಳ್ಳುವ ರೀತಿ ಇದಲ್ಲ. ಐಪಿಎಲ್‌ನಲ್ಲಿ ಪ್ರಶಸ್ತಿ ಗೆದ್ದು ಅಂಬಾನಿ ಕುಟುಂಬಕ್ಕೆ ಹಣ ಮಾಡುವ ಅಗತ್ಯ ಇರಲಿಲ್ಲ ನಿಜ, ಆದರೆ ಪ್ರತಿಷ್ಠೆಗಾಗಿ ನೈತಿಕತೆಯನ್ನು ಕಳೆದುಕೊಳ್ಳುವುದು ಸೂಕ್ತವಲ್ಲ. ಅನೇಕ ರೋಹಿತ್‌ ಅಭಿಮಾನಿಗಳು ಮುಂಬೈ ಇಂಡಿಯನ್ಸ್‌ ತಂಡದ ವಿರುದ್ಧ ಕಿಡಿ ಕಾರಿದ್ದಾರೆ. ಕ್ರಿಕೆಟ್‌ ಅಭಿಮಾನಿಗಳಿಗೆ ಇದೊಂದು ಅಚ್ಚರಿಯ ಸಂಗತಿಯಾಗಿದ್ದರೂ ಶ್ರೀಮಂತ ಅಂಬಾನಿ ಕುಟುಂಬಕ್ಕೆ ಇದೊಂದು ಚಿಟಿಕೆ ಕೆಲಸ. ವಿಶ್ವಕಪ್‌ ಸೋತಿದ್ದರಿಂದ ರೋಹಿತ್‌ ಶರ್ಮಾ ಅವರ ಪ್ರತಿಷ್ಠೆ ಕುಂದಿದೆ, ಅವರ ಮಾರ್ಕೆಟ್‌ ಮೌಲ್ಯ ಕುಸಿದಿದೆ ಎಂಬುದು ಮುಂಬಯಿ ಇಂಡಿಯನ್ಸ್‌ ಆಡಳಿತ ಮಂಡಳಿಯ ನಿಲುವು.

ಟಿ20ಯಲ್ಲಿ ರೋಹಿತ್‌ ಶರ್ಮಾ ಅವರ ಬ್ಯಾಟಿಂಗ್‌ ಬಲ ಕುಸಿದಿದೆ ಎಂಬುದು ಮತ್ತೊಂದು ಕಾರಣ. ರೋಹಿತ್‌ಗೆ ಈಗ 36 ವರ್ಷ ಇದು ಕೂಡ ಅವರನ್ನು ನಾಯಕತ್ವದಿಂದ ಹೊರಗಿಡಲು ಕಾರಣವಾಗಿದೆ ಎಂಬುದು ಕ್ರಿಕೆಟ್‌ ತಜ್ಞರ ನಿಲುವು. ಆದರೆ ಹತ್ತು ವರ್ಷಗಳ ಕಾಲ ಒಂದು ತಂಡದಲ್ಲಿದ್ದು, ಐದು ಟ್ರೋಫಿಗಳನ್ನು ಗೆದ್ದುಕೊಟ್ಟ ಒಬ್ಬ ನಾಯಕನನ್ನು ಹರಾಜಿಗೆ ಎರಡು ದಿನ ಇರುವಾಗ ಬದಲಾಯಿಸುವುದು ಕ್ರೀಡಾ ಸ್ಫೂರ್ತಿಯಲ್ಲ. ಹಾರ್ಧಿಕ ಪಾಂಡ್ಯ ಉತ್ತಮ ಆಟಗಾರನಿರಬಹುದು ಆದರೆ ರೋಹಿತ್‌ ಶರ್ಮಾ ಅವರ ಸ್ಥಾನವನ್ನು ತುಂಬುವ ಆಟಗಾರನಲ್ಲ ಎಂಬುದು ಕ್ರಿಕೆಟ್‌ ಜಗತ್ತಿಗೆ ತಿಳಿದ ಸತ್ಯ. ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಮುಂಬೈ ಇಂಡಿಯನ್ಸ್‌ ಅಭಿಮಾನಿಗಳು ಟ್ವಟರ್‌ (X)ನಲ್ಲಿ ಅಂಬಾನಿ ಪಡೆಗೆ ಟೀಕಾ ಪ್ರಹಾರ ಮಾಡುತ್ತಿದ್ದಾರೆ.

ಆಟದಲ್ಲಿ ಸೋಲು, ಗೆಲುವು ಇದ್ದದ್ದೇ. ಬರೀ ಟ್ರೋಫಿ ಹೊಡೆಯುವ ಆಸೆ ಇಂಥ ತೀರ್ಮಾನಗಳನ್ನು ಕೈಗೊಳ್ಳುವಂತೆ ಮಾಡುತ್ತದೆ. ಕ್ರಿಕೆಟ್‌ ಬಗ್ಗೆ ಅರಿವಿಲ್ಲದವರು ಅಧಿಕಾರದಲ್ಲಿದ್ದಾಗಲೂ ಇಂಥ ಬದಲಾವಣೆಗಳು ನಡೆಯುತ್ತವೆ. ರೋಹಿತ್‌ ಶರ್ಮಾ ಈ ಬದಲಾವಣೆಗೆ ಒಗ್ಗಿಕೊಂಡು ಮುಂಬೈ ಇಂಡಿಯನ್ಸ್‌ನಲ್ಲೇ ಮುಂದುವರಿದರೆ ಅದು ಕ್ರೀಡಾ ಸ್ಫೂರ್ತಿ ಎಂದು ಕರೆಯುತ್ತಾರೆ. ಹೊರಟು ಹೋದರೆ ಅವಮಾನ ಸಹಿಸಲಾರದೇ ಹೋದರು ಎನ್ನುತ್ತಾರೆ. ಅಂಬಾನಿ ಕುಟುಂಬಕ್ಕೆ ಬಕೆಟ್‌ ಹಿಡಿಯುವ ಚಾನೆಲ್‌ ಒಂದು ಐದು ಟ್ರೋಫಿಗಳನ್ನು ಗೆದ್ದಿರುವುದು ಕೇವಲ ರೋಹಿತ್‌ ಶರ್ಮಾ ಅಲ್ಲ, ಅದು ತಂಡದ ಸಂಘಟಿತ ಹೋರಾಟ ಎಂದಿದೆ. ನಾಯಕನ ವಿಷಯ ಬಂದಾಗ ಐದು ಟ್ರೋಫಿ ಗೆದ್ದುಕೊಟ್ಟ ನಾಯಕ ಎನ್ನುತ್ತಾರೆ ಎನ್ನುವ ಸಾಮಾನ್ಯ ಜ್ಞಾನ ಇಲ್ಲದೆ ವರದಿ ಮಾಡುತ್ತಾರೆ. ಮಾಲಕ ಮತ್ತು ಮಾಲಕಿ ಖುಷಿಯಾದರೆ ಸಾಕು, ಬಾಕಿ ಹೇಗೆಯೇ ಇರಲಿ.

ರೋಹಿತ್‌ ಶರ್ಮಾ ಅವರ ಕ್ರಿಕೆಟ್‌ ಬದುಕನ್ನು ಗಮನಿಸಿದಾಗ 2024 ರ ಐಪಿಎಲ್‌ ಋತು ಆಟಗಾರನಾಗಿ ಅವರ ಪಾಲಿಗೆ ಕೊನೆಯ ಋತು ಎನ್ನುತ್ತಿವೆ ಕೆಲವು ವರದಿಗಳು. ಆದರೆ ಕ್ರಿಕೆಟ್‌ ಎಂಬುದು ಅವಕಾಶದ ಆಟ. ಮತ್ತೆ ಚೇತರಿಸಿಕೊಂಡು ಇನ್ನೆರಡು ವರ್ಷಗಳ ಕಾಲ ಆಡುವ ಸಾಮರ್ಥ್ಯ ರೋಹಿತ್‌ ಅವರಿಗಿದೆ. ಭಾರತದ ಪರ ಆಡುವಾಗ ಸಿಗುವ ಗೌರವಕ್ಕೂ, ಐಪಿಎಲ್‌ನಲ್ಲಿ ಸಿಗುವ ಗೌರವಕ್ಕೂ ಭಿನ್ನತೆ ಇದೆ ನಿಜ. ಆದರೆ ರೋಹಿತ್‌ ಶರ್ಮಾ ಅವರನ್ನು ನಡೆಸಿಕೊಂಡ ರೀತಿ ಸಮರ್ಥನೀಯವಲ್ಲ. ಹರಾಜಿಗೆ ಕೇವಲ 48 ಗಂಟೆ ಇರುವಾಗ ನೀನು ನಾಯಕನಲ್ಲ ಎಂದು ಹೇಳಿದರೆ ಐದು ಟ್ರೋಫಿ ಗೆದ್ದ ನಾಯಕನಿಗೆ ನೋವಾಗದಿರದು. ಕ್ರೀಡೆ ನಮಗೆ ಬದುಕಿನ ಪಾಠಗಳನ್ನು ಕಲಿಸುತ್ತದೆ. ಹಣ, ಪ್ರತಿಷ್ಠೆ ನಮಗೆ ನೋಯಿಸುವ ಮಾರ್ಗವನ್ನೂ ಹೇಳಿಕೊಡುತ್ತವೆ.

Related Articles