ಥ್ರೋಬಾಲ್ನಲ್ಲಿ ದೇಶಕ್ಕೆ ಕೀರ್ತಿ ತಂದ ಮಲ್ಯಾಡಿಯ ಪೃಥ್ವಿ ಶೆಟ್ಟಿ
ಕುಂದಾಪುರ: ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮಲ್ಯಾಡಿ ಗ್ರಾಮದ ಬಳ್ಳಾಲ್ ಮನೆಯ ಪೃಥ್ವಿ ಶೆಟ್ಟಿ ಥ್ರೋಬಾಲ್ ಕ್ರೀಡೆಯಲ್ಲಿ ದೇಶಕ್ಕೆ ಕೀರ್ತಿ ತಂದಿದ್ದಾರೆ. Pruthvi Shetty, a native of Ballal, Malyady village, Kundapur taluk, Udupi district, who is studying in Mysore, has brought fame to the country in the sport of throwball.
ತೆಕ್ಕಟ್ಟೆ ಸಮೀಪದ ಮಲ್ಯಾಡಿಯ ಬಳ್ಳಾಲ್ ಮನೆಯ ಎಂ. ಪ್ರವೀಣ್ ಶೆಟ್ಟಿ ಹಾಗೂ ಜ್ಯೋತಿ ಶೆಟ್ಟಿ ದಂಪತಿಯ ಮಗಳು ಪೃಥ್ವಿ ಶೆಟ್ಟಿ ಇತ್ತೀಚೆಗೆ ಜಾರ್ಖಂಡ್ನಲ್ಲಿ ನಡೆದ ಎರಡನೇ ದಕ್ಷಿಣ ಏಷ್ಯಾ ಥ್ರೋ ಬಾಲ್ ಚಾಂಪಿಯನ್ಷಿಪ್ನಲ್ಲಿ ಚಾಂಪಿಯನ್ ಪಟ್ಟ ಗೆದ್ದ ಭಾರತ ತಂಡದ ಆಟಗಾರ್ತಿ.

ಪ್ರವೀಣ್ ಶೆಟ್ಟಿ ಮೈಸೂರಿನಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿರುವುದರಿಂದ ಪೃಥ್ವಿಯ ಶಿಕ್ಷಣವೆಲ್ಲ ಮೈಸೂರಿನಲ್ಲೇ ನಡೆಯಿತು. ಮೈಸೂರಿನ ಸೇಂಟ್ ಜೊಸೆಫ್ ಕಾಲೇಜಿನಲ್ಲಿ ಬಿಕಾಂ ಪದವಿ ಮುಗಿಸಿರುವ ಪೃಥ್ವಿ ಚಿಕ್ಕಂದಿನಿಂದಲೂ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಜೊತೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ನಲ್ಲೂ ತೊಡಗಿಸಿಕೊಂಡು ಎರಡು ಬಾರಿ ರಾಜ್ಯಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಅಕ್ಕನಿಂದ ಪ್ರೇರಣೆ ಪಡೆದ ಪೃಥ್ವಿ: ಪ್ರತಿಯೊಬ್ಬ ಕ್ರೀಡಾಪಟುವಿನ ಬದುಕಿನಲ್ಲಿ ಯಾರಾದರೂ ಪ್ರಭಾವ ಬೀರಿರುತ್ತಾರೆ. ಇನ್ನೊಬ್ಬರ ಆಟ ನೋಡಿ ಸ್ಫೂರ್ತಿ ಪಡೆಯವುದು ಸಾಮಾನ್ಯ, ಪೃಥ್ವಿಯ ಬದುಕಿನಲ್ಲಿ ಅವರಿಗೆ ಪ್ರೇರಣೆ ಮತ್ತು ಸ್ಫೂತ್ತಿ ತುಂಬಿದ್ದು ಅವರ ಅಕ್ಕ ಪ್ರಜ್ಞಾ ಶೆಟ್ಟಿ. ಪೃಥ್ವಿಗಿಂತ ಪ್ರಜ್ಞಾ ಮೂರು ವರ್ಷ ದೊಡ್ದವರು. ಅವರು ಕೂಡ ಶಾಲೆಯಲ್ಲಿ ಥ್ರೋ ಬಾಲ್ ಆಡುತ್ತಿದ್ದರು. ಅಕ್ಕ ಆಡುತ್ತಿರುವುದನ್ನು ನೋಡಿ ಕಲಿತ ಪೃಥ್ವಿ ಈಗ ಅಕ್ಕನನ್ನೇ ಅಚ್ಚರಿಗೊಳಿಸಿದ್ದಾರೆ.

“ನಾನು ಅಕ್ಕನಿಗಿಂತ ಮೂರು ವರ್ಷ ಚಿಕ್ಕವಳು, ಅಕ್ಕ ಎಂಟನೇ ತರಗತಿಯಲ್ಲಿರುವಾಗ ನಾನು ಐದರಲ್ಲಿದ್ದೆ. ಆಗ ಅಕ್ಕನೊಂದಿಗೆ ಥ್ರೋ ಬಾಲ್ ಆಡಲು ಹೋಗುತ್ತಿದ್ದೆ. ಅಕ್ಕ ಕಾಲೇಜ್ ಹಂತದ ವರೆಗೆ ಆಡಿದ್ದಳು. ಆನಂತರ ಮುಂದುವರಿಯಲಿಲ್ಲ. ಆದರೆ ನನಗೆ ಕ್ರೀಡೆಯಲ್ಲಿ ಸಾಧನೆ ಮಾಡಬೇಕೆಂಬ ಹಂಬಲ. ಹಾಗಾಗಿ ಯಾವ ಕಾಲೇಜಿನಲ್ಲಿ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಾರೋ ಅದೇ ಕಾಲೇಜು ಸೇರಬೇಕೆಂದು ಬಯಸಿದೆ, ಅದೇ ರೀತಿ ಸೇಂಟ್ ಜೊಸೆಫ್ ಕಾಲೇಜು ಸೇರಿದೆ. ಎಂಡಿಎಟಿ ಕ್ಲಬ್ ಇಲ್ಲಿಂದಲೂ ಪ್ರೋತ್ಸಾಹ ಸಿಕ್ಕಿತು,” ಎಂದು ಪೃಥ್ವಿ SPORTSMAIL ಗೆ ತಿಳಿಸಿದರು.
ಮಂಡ್ಯದಲ್ಲಿ ನಡೆದ ಆಯ್ಕೆ ಟ್ರಯಲ್ಸ್ನಲ್ಲಿ ಪೃಥ್ವಿ ಅವರ ಆಟ ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರವಾಯಿತು. ಕರ್ನಾಟಕ ತಂಡಕ್ಕೆ ಪದಾರ್ಪಣೆ ಮಾಡಿದರು. ನಂತರ ಸೀನಿಯರ್ ತಂಡದ ಆಯ್ಕೆಯಲ್ಲಿಯೂ ಅವಕಾಶ ಸಿಕ್ಕಿತು. ಕರ್ನಾಟಕ ತಂಡದಲ್ಲಿ ಉತ್ತಮ ಆಟ ಪ್ರದರ್ಶಿಸಿದ್ದನ್ನು ಕಂಡ ಭಾರತ ತಂಡದ ಆಯ್ಕೆದಾರರು ಪೃಥ್ವಿ ಶೆಟ್ಟಿ ಭಾರತ ತಂಡಕ್ಕೆ ಸೂಕ್ತ ಆಟಗಾರ್ತಿ ಎಂಬುದನ್ನು ಗಮನದಲ್ಲಿಟ್ಟುಕೊಂಡರು. ಅದಕ್ಕೆ ಪೂರಕವೆಂಬಂತೆ ಈ ಬಾರಿ ಭಾರತಕ್ಕೆ ದಕ್ಷಿಣ ಏಷ್ಯಾ ರಾಷ್ಟ್ರಗಳ ಥ್ರೋಬಾಲ್ ಚಾಂಪಿಯನ್ಷಿಪ್ನ ಆತಿಥ್ಯವಹಿಸುವ ಅವಕಾಶ ಕೂಡಿ ಬಂತು. ಇದರಿಂದಾಗಿ ಪೃಥ್ವಿಗೆ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿತು. ಬಲಿಷ್ಠ ಭಾರತ ದಕ್ಷಿಣ ಏಷ್ಯಾ ರಾಷ್ಟ್ರಗಳ ವಿರುದ್ಧ ಪ್ರಭುತ್ವ ಸಾಧಿಸಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು.

ತೋಳ್ಬಲವಿದ್ದರೆ ಥ್ರೋಬಾಲ್: ಹೆಸರೇ ಹೇಳುವಂತೆ ಥ್ರೋ ಬಾಲ್ಗೆ ಕೈಯಲ್ಲಿ ಶಕ್ತಿ ಇರಬೇಕು, ನಿರಂತರವಾಗಿ ಚೆಂಡನ್ನು ಥ್ರೋ ಮಾಡುವುದರಿಂದ ತೋಳ್ಬಲ ಉತ್ತಮವಾಗಿರಬೇಕು. “ನೋಡಲು ಈ ಆಟ ಬಹಳ ಸುಲಭವೆನಿಸುತ್ತದೆ. ಆದರೆ ನಿತಂತರವಾಗಿ ಎಸೆಯುವಾಗ ಕೈಗಳಿಗೆ ಪೆಟ್ಟಾಗುತ್ತದೆ. ಎರಡು ಬಾರಿ ಕೈಗೆ ಪೆಟ್ಟಾಗಿ ಈ ಕ್ರೀಡೆಯಿಂದಲೇ ದೂರ ಸರಿಯಲು ಯೋಚಿಸಿದ್ದೆ. ಆದರೆ ಯಶಸ್ಸಿನ ಹಾದಿಯಲ್ಲಿ ಇವೆಲ್ಲ ಸಾಮಾನ್ಯ ಎಂದು ಅರಿತು ಮತ್ತೆ ಆಡಲು ಮುಂದಾದೆ,” ಎಂದು ಪೃಥ್ವಿ ಥ್ರೋ ಬಾಲ್ ಕ್ರೀಡೆಯ ಸವಾಲಿನ ಬಗ್ಗೆ ಹೇಳಿದರು.
ಸ್ಕೌಟ್ಸ್ ಮತ್ತು ಗೈಡ್ಸ್ನಲ್ಲೂ ಮಿಂಚಿದ ಪೃಥ್ವಿ: ವಿದ್ಯಾರ್ಥಿಗಳು ತಮ್ಮ ಮುಂದಿನ ಬದುಕನ್ನು ಉತ್ತಮ ರೀತಿಯಲ್ಲಿ ನಿಭಾಯಿಸಲು, ಶಿಸ್ತು ಮತ್ತು ಬದ್ಧತೆಯಿಂದ ಬದುಕನ್ನು ಕಟ್ಟಿಕೊಳ್ಳಲು ಸ್ಕೌಟ್ಸ್ ಮತ್ತು ಗೈಡ್ಸ್ ಉತ್ತಮ ರೀತಿಯಲ್ಲಿ ನೆರವಾಗುತ್ತದೆ. ಪೃಥ್ವಿ ಶೆಟ್ಟಿ ಕೂಡ ಓದು ಮತ್ತು ಕ್ರೀಡೆಯ ಜೊತೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿಕೊಂಡರು. ಕ್ರೀಡೆಯಲ್ಲಿರುವಂತೆ ಸ್ಕೌಟ್ಸ್ ಮತ್ತು ಗೈಡ್ಸ್ನಲ್ಲಿಯೂ ಯಶಸ್ಸಿನ ಹಾದಿ ತುಳಿದರು. ಎರಡು ಬಾರಿ ರಾಜ್ಯ ಪುರಸ್ಕಾರ್ ಗೌರವಕ್ಕೆ ಪಾತ್ರವಾಗಿರುವ ಪೃಥ್ವಿ ರಾಷ್ಟ್ರಪತಿ ಗೌರವ ಗಳಿಸುವ ಗುರಿಯನ್ನು ಹೊಂದಿದ್ದಾರೆ.

ಕ್ರೀಡಾ ಪಟುಗಳಿಗೆ ಪ್ರೋತ್ಸಾಹಿಸಿ: ಈ ಬಾರಿ ದಕ್ಷಿಣ ಏಷ್ಯಾ ವನಿತೆಯರ ಥ್ರೋ ಬಾಲ್ ಚಾಂಪಿಯನ್ಷಿಪ್ ನಡೆದದ್ದು ಜಾರ್ಖಂಡ್ನಲ್ಲಿ. ಕರ್ನಾಟಕದಿಂದ ಮೂವರು ಆಯ್ಕೆಯಾಗಿದ್ದರು, ಅವರಲ್ಲಿ ಪೃಥ್ವಿಯೂ ಒಬ್ಬರು. ಈ ಆಟಗಾರ್ತಿಯರಿಗೆ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಳ್ಳಲು 3-4 ದಿನ ಬಾಕಿ ಇರುವಾಗ ತಿಳಿಸಲಾಗಿದೆ. ಪ್ರಯಾಣದ ವೆಚ್ಚವಿಲ್ಲ. ರೈಲಿನಲ್ಲಿ ಪ್ರಯಾಣಿಸಬೇಕು. ಟಿಕೆಟ್ ಕಾಯ್ದಿರಿಸಲು ಅವಕಾಶವಿಲ್ಲ. ಹೋಗುವಾಗ ಎರಡು ದಿನ ಮತ್ತು ಬರುವಾಗ ಎರಡು ದಿನ ಪ್ರಯಾಣ. ಬರುವಾಗ ಹಲವು ಬಾರಿ ರೈಲು ಬದಲಾಯಿಸಬೇಕು. ತಮಗಾದ ಕಷ್ಟದ ಬಗ್ಗೆ ಪೃಥ್ವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಸಾಕಷ್ಟು ದಿನ ಮುಂಚಿತವಾಗಿಯೇ ತಿಳಿಸಬೇಕು. ಪ್ರಯಾಣದ ವೆಚ್ಚವನ್ನು ಭರಿಸುವುದು ಅಥವಾ ಪ್ರಯಾಣಕ್ಕೆ ನೆರವಾಗುವ ಜವಾಬ್ದಾರಿಯನ್ನು ಕ್ರೀಡಾ ಸಂಸ್ಥೆಗಳು, ಸರಕಾರ ಅಥವಾ ಆತಿಥ್ಯವಹಿಸುವ ರಾಜ್ಯಗಳು ವಹಿಸಬೇಕು. ಹಾಗಿದ್ದಲ್ಲಿ ಕ್ರೀಡಾಪಟುಗಳು ನೆಮ್ಮದಿಯಿಂದ ಸ್ಪರ್ಧೆಗಳಲ್ಲಿ ಖುಷಿಯಿಂದ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ,” ಎಂದಿರುವ ಪೃಥ್ವಿ, ಓದಿನ ಜೊತೆಯಲ್ಲಿ ಯಾವುದಾದರೂ ಒಂದು ಕ್ರೀಡೆಯಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಂಡಲ್ಲಿ ಬದುಕಿಗೆ ನೆರವಾಗುತ್ತದೆ ಎಂದರು.

