ಮೆಸ್ಸಿ ಪ್ರೀತಿಗೆ ಎಣೆ ಇಲ್ಲ, ಭಾರತದ ಫುಟ್ಬಾಲ್‌ಗೆ ಗತಿ ಇಲ್ಲ!
ಉಡುಪಿ: ಫುಟ್ಬಾಲ್ ಜಗತ್ತಿನ ಶ್ರೇಷ್ಠ ತಾರೆಗಳಲ್ಲಿ ಒಬ್ಬರಾದ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಭಾರತದ ಪ್ರವಾಸದಲ್ಲಿದ್ದಾರೆ. ಆದರೆ ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಸಿರುವ ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಸುನಿಲ್ ಛೆಟ್ರಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುಲು ಬಂದ ಆಹ್ವಾನವನ್ನು ನಿರಾಕರಿಸಿದ್ದಾರೆ. ಇದಕ್ಕೆ ಕಾರಣವೂ ಇದೆ. Sunil Chhetri declines an offer to meet Messi as Indian football is facing various issues.
ಮೆಸ್ಸಿಯ ಮೊದಲ ದಿನದ ಭೇಟಿ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಇದಕ್ಕೆ ಸಂಘಟಕರ ವೈಫಲ್ಯವೇ ಕಾರಣ ಎನ್ನಲಾಗಿದೆ. ಮೆಸ್ಸಿ ಜೊತೆಯಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳಲು ತಗಲಿದ ವೆಚ್ಚ 11.74 ಲಕ್ಷ ಎಂದರೆ ನಂಬಲು ಅಸಾಧ್ಯ. ಒಂದೇ ದಿನದಲ್ಲಿ ನೂರಾರು ಕೋಟಿ ರೂ. ಗಳಿಸುವ ಕಾರ್ಯಕ್ರಮ ಇದಾಗಿದೆ.
ಆದರೆ ಈ ಕಾರ್ಯಕ್ರಮದಲ್ಲಿ ಶಾರುಖ್ ಖಾನ್, ರಾಹುಲ್ ಗಾಂಧಿ, ಬಾಲಿವುಡ್ ತಾರೆಯಗಳು, ರಾಜಕಾರಣಿಗಳು ಪಾಲ್ಗೊಂಡಿದ್ದರು. ಆದರೆ ಭಾರತದ ಶ್ರೇಷ್ಠ ಫುಟ್ಬಾಲ್ ತಾರೆ ಸುನಿಲ್ ಛೆಟ್ರಿ ಕಾಣಲಿಲ್ಲ. ಅವರು ಬಂದ ಆಹ್ವಾನವನ್ನೂ ನಿರಾಕರಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ಭಾರತದ ಫುಟ್ಬಾಲ್ ಸ್ಥಿತಿ.
ಇಲ್ಲಿ ಪ್ರದರ್ಶನಕ್ಕೆ ಜನ ಸೇರುತ್ತಾರೆ. ಇಲ್ಲಿ ಸಾಮೂಹಿಕ ಸನ್ನಿಗೆ ಒಗ್ಗೂಡುತ್ತಾರೆ, ಆದರೆ ಜವಾಬ್ದಾರಿಗೆ ಜನ ಸೇರುವುದಿಲ್ಲ. ಭಾರತದಲ್ಲಿ ಫುಟ್ಬಾಲ್ ಸ್ಥಿತಿ ನೆಲಕಚ್ಚಿದೆ. ಇಂಡಿಯನ್ ಸೂಪರ್ ಲೀಗ್ ನಡೆಲು ಫ್ರಾಂಚೈಸಿಗಳು ಹಿಂದೆ ಸರಿಯುತ್ತಿದ್ದಾರೆ. ಫಿಫಾ ರಾಂಕಿಂಗ್‌ನಲ್ಲಿ ಭಾರತ ವರ್ಷದಿಂದ ವರ್ಷಕ್ಕೆ ಹಿಂದೆ ಬೀಳುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಯಾವುದೋ ಹಣ ಮಾಡುವ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ಭಾರತದ ಫುಟ್ಬಾಲ್ ಉದ್ಧಾರವಾಗುತ್ತದೆ ಎಂಬುದು ಭ್ರಮೆ. ಈ ಹಿಂದೆಯೂ ಮೆಸ್ಸಿ ಬಂದಿದ್ದರು. ಆದರೆ ಅವರ ಭೇಟಿ ಭಾರತದ ಫುಟ್ಬಲ್ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಲಿಲ್ಲ.
ಭಾರತದಲ್ಲಿ ಮಹಿಳಾ ಫುಟ್ಬಾಲ್ ಹುಟ್ಟಿ 50 ವರ್ಷ ಕಳೆಯಿತು. ಯಾವುದೇ ಕಾರ್ಯಕ್ರಮ ನಡೆಯುತ್ತಿಲ್ಲ. ಭಾರತೀಯ ಫುಟ್ಬಾಲ್ ಸಂಸ್ಥೆ ಯಾವಾಗಲೂ ಗೊಂದಲಗಳಲ್ಲೇ ಮುಳುಗಿರುತ್ತದೆ. ಆಟಗಾರರಿಗೆ ಉತ್ತಮ ತರಬೇತಿ ನೀಡುವುದಾಗಲಿ, ಅಂತಾರಾಷ್ಟ್ರೀಯ ಟೂರ್ನಿಗಳನ್ನು ಆಯೋಜಿಸುವುದಾಗಲೀ ನಡೆಯುತ್ತಿಲ್ಲ. ಮೆಸ್ಸಿಯನ್ನು ಕರೆಯುವ ಬದಲು ಅರ್ಜೆಂಟೀನಾ ತಂಡವನ್ನು ಕರೆಸಿ ಭಾರತ ತಂಡದೊಂದಿಗೆ ಒಂದು ಪಂದ್ಯ ಆಯೋಜಿಸಿರುತ್ತಿದ್ದರೆ ಇಲ್ಲಿಯ ಫುಟ್ಬಾಲ್‌ನಲ್ಲಾದರೂ ಸುಧಾರನೆ ಆಗಿರುತ್ತಿತ್ತು. ಮೆಸ್ಸಿ ಪ್ರವಾಸದ ಕಾರ್ಯಕ್ರಮವು ನಾಳೆ ರಾಜಕೀಯ ಪಕ್ಷಗಳ ಚರ್ಚೆಯ ವಿಷಯವಾಗುವುದಂತೂ ಖಚಿತ. ಈಗಾಗಲೇ ಬಿಜೆಪಿಯು ಮಮತಾ ಬ್ಯಾಜರ್ಜಿ ವೈಫಲ್ಯ ಎನ್ನುತ್ತಿದೆ. ಭಾರತ ಫುಟ್ಬಾಲ್ ಅಭಿವೃದ್ಧಿಯಾಗದೆ ನಾವು ತಾರೆಗಳನ್ನು ಪೂಜಿಸಿದರೆ ಯಾವುದೇ ಪ್ರಯೋಜನವಿಲ್ಲ. ಮೆಸ್ಸಿಯ ಪ್ರವಾಸಕ್ಕೆ ವ್ಯಯ ಮಾಡುವ ಹಣವನ್ನು ಭಾರತದ ಫುಟ್ಬಾಲ್‌ಗೆ ವ್ಯಯ ಮಾಡಿರುತ್ತಿದ್ದರೆ ಭಾರತ ಫುಟ್ಬಾಲ್ ತಂಡ ಇಷ್ಟರಲ್ಲೇ ಫಿಫಾ ವಿಶ್ವಕಪ್‌ಗೆ ಅರ್ಹತೆ ಪಡೆದಿರುತ್ತಿತ್ತು.

