Sunday, September 8, 2024

ವಿಂಡೀಸ್ ಬೌಲರ್ ಗಳ ಚೆಂಡಾಡಿದ ಕಾಂಚನ್

ಸೋಮಶೇಖರ್ ಪಡುಕರೆ 

ಆತ ಕಳುಹಿಸಿದ ವಿಡಿಯೋ ತುಣುಕನ್ನು ನೋಡುವಾಗ, ವೀಕ್ಷಕ ವಿವರಣೆಯನ್ನು ಕೇಳುವಾಗ ರೋಮಾಂಚನವಾಗುತಿತ್ತು. ವೀಕ್ಷಕ ವಿವರಣೆಗಾರ ಒಮ್ಮೆ ನಿಖಿಲ್ ಕಾಂಚನ್ ಎಂದು, ನಂತರ  ಪ್ರತೀ ಎಸೆತಕ್ಕೂ ಕಾಂಚನ್ … ಕಾಂಚನ್ ಎಂದು ಅಬ್ಬರಿಸುವಾಗ ಎಲ್ಲಿಲ್ಲದ ಸಂಭ್ರಮ. ಏಕೆಂದರೆ ಎದುರುಗಡೆ ಬೌಲಿಂಗ್ ಮಾಡುತ್ತಿಯುವುದು ವೆಸ್ಟಿಂಡೀಸ್ ನ ಆಲ್ರೌಂಡರ್ ಆಂಡ್ರೆ ರಸ್ಸೆಲ್ ಸೇರಿದಂತೆ ಜಗತ್ತಿನ ಪ್ರಮುಖ ಬೌಲರ್ ಗಳು.  ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವೆ ನಡೆದ ಅಂತಾರಾಷ್ಟ್ರೀಯ ಟಿ20  ಪಂದ್ಯದ ನಂತರ ಅಮೇರಿಕಾದಲ್ಲಿ ನಡೆದ ಎರಡನೇ ಪ್ರಮುಖ ಪಂದ್ಯ ಅದಾಗಿತ್ತು.

ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಹಾಗೂ ಇಂಗ್ಲೆಂಡ್ ನ ಪ್ರಮುಖ ಆಟಗಾರಿಂದ ಕೂಡಿದ ಸಮ್ಮರ್ಸೆಟ್ ಕ್ಯಾವಲಿರ್ಸ್ ಹಾಗೂ ಅಮೆರಿಕದ ಪ್ರಸಿದ್ಧ ಮಿಚಿಗನ್ ಕ್ರಿಕೆಟ್ ಅಸೋಸಿಯೇಷನ್ ತಂಡಗಳ ನಡುವಿನ ಪಂದ್ಯ ಅದಾಗಿತ್ತು.
ನಿಖಿಲ್ ಕಾಂಚನ್ ದಿಗ್ಗಜ ಬೌಲರ್ ಗಳ ಬೌಲಿಂಗ್ ದಾಳಿಯನ್ನು ಎದುರಿಸಿ 5 ಸಿಕ್ಸರ್, 6 ಬೌಂಡರಿ ನೆರವಿನಿಂದ ಸ್ಫೋಟಕ 87 ರನ್ ಸಿಡಿಸಿ ಅಂತಾರಾಷ್ಟ್ರೀಯ ಬೌಲರ್ ಗಳ ಬೆವರಿಳಿಸಿದರು. ನಿಖಿಲ್ ನಿರ್ಗಮನದ ನಂತರ ಮಿಚಿಗನ್ ತಂಡ ಹೆಚ್ಚು ರನ್ ಗಳಿಸುವಲ್ಲಿ ವಿಫಲವಾಯಿತು. 19ನೇ ಓವರ್ ವರೆಗೂ ಕ್ರೀಸಿನಲ್ಲಿದ್ದ ನಿಖಿಲ್ ತಾನೊಬ್ಬ ಸಮರ್ಥ ಬ್ಯಾಟ್ಸಮನ್ ಎಂಬುದನ್ನು ಸಾಬೀತುಪಡಿಸಿದರು. ಪಂದ್ಯದಲ್ಲಿ ಮಿಚಿಗನ್ ತಂಡ ಸೋತರೂ ನಿಖಿಲ್ ಕಾಂಚನ್ ಅಮೆರಿಕದ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದರು.
ನಿಖಿಲ್ ಬಗ್ಗೆ ಹೆಮ್ಮೆಯಿಂದ ಮಾತನಾಡಲು ಕಾರಣವೂ ಇದೆ. ಆತ ಬೇರೆಯಾರೂ ಅಲ್ಲ. ಕೋಟ ಪಡುಕರೆಯ ಶಾಂತ ಕಾಂಚನ್ ಹಾಗೂ ಉದ್ಯಮಿ ಕೃಷ್ಣ ಕಾಂಚನ್ ಅವರ ಹಿರಿಯ ಮಗ. ವಾಹಿನಿ ಯುವಕ ಮಂಡಲದ ತಂಡದಲ್ಲಿದ್ದಾಗಲೇ ಮಾವಂದಿರಾದ ಪ್ರಭಾಕರ ಕುಂದರ್, ರಾಜೇಂದ್ರ ಸುವರ್ಣ, ಸತೀಶ್ ಕುಂದರ್ ಹಾಗೂ ರಮೇಶ್ ಕುಂದರ್ ಅವರ ಗರಡಿಯಲ್ಲಿ ಪಳಗಿದವ. ಇಂಡೋರ್ ಕ್ರಿಕೆಟ್ ನಲ್ಲಿ ವಿಶ್ವಕಪ್ ಆಡಿದವ. ಈಗ ಅಮೆರಿಕದ ಪ್ರಸಿದ್ಧ ಫೋರ್ಡ್ ಕಂಪೆನಿಯಲ್ಲಿ ಮೆಕ್ಯಾನಿಕಲ್ ಎಂಜಿನೀಯರ್ ಆಗಿ ದುಡಿಯುತ್ತಿದ್ದಾರೆ.
ನಿಖಿಲ್ ಗೆ ಪ್ರಶಸ್ತಿಗಳ ಸರಮಾಲೆ 
2018ರ ಸಾಲಿನಲ್ಲಿ ಮಿಚಿಗನ್ ಕ್ರಿಕೆಟ್ ಸಂಸ್ಥೆ ನೀಡುವ ಪ್ರತಿಯೊಂದು ವಾರ್ಷಿಕ ಪ್ರಶಸ್ತಿ ನಿಖಿಲ್ ಪಾಲಾಗಿದೆ.
ಮಿಚಿಗನ್ ಎಫ್ 40 ಅತ್ಯಂತ ಮೌಲ್ಯಯುತ ಆಟಗಾರ ಪ್ರಶಸ್ತಿ, ಟಿ20 ಯಲ್ಲೂ ಅತ್ಯಂತ ಮೌಲ್ಯಯುತ ಆಟಗಾರ. ಎಫ್ 40 ಕ್ರಿಕೆಟ್ ನಲ್ಲಿ ಅತ್ಯಂತ ಮೌಲ್ಯಯುತ ಆಟಗಾರ ಪ್ರಶಸ್ತಿ. ಎಫ್ 40ಯಲ್ಲಿ ಉತ್ತಮ ಬ್ಯಾಟ್ಸಮನ್ ಪ್ರಶಸ್ತಿ. ಅಮೆರಿಕದ ಪ್ರತಿಷ್ಠಿತ ಯುಎಸ್ ಕಾರ್ಪೊರೇಟ್ ಕಪ್ ಟಿ20 ಯಲ್ಲೂ ಬೆಸ್ಟ್ ಬ್ಯಾಟ್ಸಮನ್ ಗೌರವ. ಯುಎಸ್ ಕಾರ್ಪೊರೇಟ್ ಟಿ20ಯಲ್ಲಿ ಉತ್ತಮ ಫೀಲ್ಡರ್. ಡೆಟ್ರಾಯಿಟ್ ಟಿ20 ಯಲ್ಲಿ ಬೆಸ್ಟ್ ಬ್ಯಾಟ್ಸಮನ್ ಪ್ರಶಸ್ತಿ. ಹೀಗೆ ಅಮೆರಿಕದ ಕ್ರಿಕೆಟ್ ನಲ್ಲಿ ನಿಖಿಲ್ ಕಾಂಚನ್ ಮನೆಮಾತಾಗಿದ್ದಾರೆ. ಇದರೊಂದಿಗೆ ಭಾರತಕ್ಕೆ ಕೀರ್ತಿ ತರುವ ಜತೆಯಲ್ಲಿ ಮೊಗವೀರ ಸಮುದಾಯದ ಹೆಮ್ಮೆಯ ಸಾಧಕ ಎನಿಸಿದ್ದಾರೆ.

Related Articles