ಪಿಂಕ್ ಪ್ಯಾಂಥರ್ಸ್‌ಗೆ ಸೋಲುಣಿಸಿದ ಗುಜರಾತ್

0
135
ಸ್ಪೋರ್ಟ್ಸ್‌ಮೇಲ್ ವರದಿ

ಕೆ. ಪ್ರಪಂಜನ್ ದ್ವಿತಿಯಾರ್ಧದಲ್ಲಿ ಗಳಿಸಿದ ಎರಡು ಪ್ರಮುಖ ಅಂಕಗಗಳಿಂದ ಪಂದ್ಯದ ಮೇಲೆ ಪ್ರಭುತ್ವ ಸಾಧಿಸಿದ ಗುಜರಾತ್ ಫೋರ್ಚುನ್ ಜಯಂಟ್ಸ್ ತಂಡ ಪಂಚಕುಲದ ತಾವು ದೇವಿಲಾಲ್ ಕ್ರೀಡಾಂಗಣದಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ ಪ್ರಮುಖ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ 33-31 ಅಂಕಗಳ ಅಂತರದಲ್ಲಿ ಜಯ ಗಳಿಸಿತು.

ಪ್ರಪಂಚನ್ 11 ರೈಡಿಂಗ್ ಅಂಕಗಳನ್ನು ಗಳಿಸುವ ಮೂಲಕ ಗುಜರಾತ್ ತಂಡ ಪ್ರೊ ಕಬಡ್ಡಿ ಲೀಗ್‌ನ ಈ ಋತುವಿನಲ್ಲಿ 15ನೇ ಜಯ ದಾಖಲಿಸಿತು. ಸಚಿನ್ 8 ಅಂಕಗಳನ್ನು ಗಳಿಸಿ ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ದ್ವಿತಿಯಾರ್ಧದಲ್ಲಿ ಜೈಪುರ ತಂಡ ಉತ್ತಮ ಹೋರಾಟ ನೀಡಿತು. ಅಜಿಂಕ್ಯ ಪವಾರ್ 9 ಅಂಕ ಹಾಗೂ ಸಂದೀಪ್ ಧುಲಿ 6 ಟ್ಯಾಕಲ್ ಅಂಕಗಳನ್ನು ಗಳಿಸಿ ತಂಡ ಚೇತರಿಸಿಕೊಳ್ಳುವಂತೆ ಮಾಡಿದರೂ ಸೋಲಿನಿಂದ ಪಾರು ಮಾಡಲಾಗಲಿಲ್ಲ. ಈ ಜಯದೊಂದಿಗೆ ಎ ಜೋನ್‌ನಲ್ಲಿ ಗುಜರಾತ್ ತಂಡ ಅಗ್ರ ಸ್ಥಾನಕ್ಕೇರಿತು.
ಉತ್ತಮ ಪೈಪೋಟಿಯಿಂದಲೇ ಪಂದ್ಯ ಆರಂಭಗೊಂಡಿತು. ಇತ್ತಂಡಗಳು ಸಮಾನ ಹೋರಾಟ ನೀಡಿದ ಕಾರಣ ಮೊದಲ ನಾಲ್ಕು ನಿಮಿಷದಲ್ಲಿ ಗುಜರಾತ್ 4-3ರಲ್ಲಿ ಮುನ್ನಡೆ ಕಾಯ್ದುಕೊಂಡಿತು. 7ನೇ ನಿಮಿಷದಲ್ಲಿ ಗುಜರಾತ್ ಅಂಕ ಗಳಿಕೆಯಲ್ಲಿ ಮೇಲುಗೈ ಮುಂದುವರಿಸಿದ ಪರಿಣಾಮ 10-4ರಲ್ಲಿ ಮುನ್ನಡೆಯಿತು. ಪ್ರಥಮಾ‘ರ್ದಲ್ಲಿ ಗುಜರಾತ್ 17-10ರಲ್ಲಿ ಮೇಲುಗೈ ಸಾಧಿಸಿತು.
ದ್ವಿತಿಯಾರ್ಧದಲ್ಲಿ  ಗುಜರಾತ್ ಒಂದು ಹಂತದಲ್ಲಿ 24-12 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು. 32ನೇ ನಿಮಿಷದಲ್ಲಿ ಜೈಪುರ ದಿಟ್ಟ ಹೋರಾಟ ನೀಡಿ ಅಂಕವನ್ನು 30-24ಕ್ಕೆ ಏರಿಸಿಕೊಂಡಿತು. ಅಜಿಂಕ್ಯ ಪವಾರ್ ಹಾಗೂ ಪ್ರಪಂಜನ್ ಕೊನೆಯ ಕ್ಷಣದಲ್ಲಿ ಉತ್ತಮ ರೈಡಿಂಗ್ ಪಾಯಿಂಟ್ ಗಳಿಸುವ ಮೂಲಕ ಗುಜರಾತ್ ಪಂದ್ಯ ಗೆದ್ದುಕೊಂಡಿತು.