Saturday, July 20, 2024

ನಿಮ್ಮ ಪ್ರಚಾರಕ್ಕೆ ಹಣ ಇದೆ, ಕ್ರೀಡಾಪಟುಗಳ ಬಾಕಿ ಸಂದಾಯಕ್ಕೆ ಇಲ್ವ?

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್

ಕಳೆದ ಕೆಲವು ದಿನಗಳಿಂದ ನಾಡಿನ ಪತ್ರಿಕೆಗಳು, ವೆಬ್‌ಸೈಟ್‌ಗಳನ್ನು ಕ್ಲಿಕ್ ಮಾಡಿದಾಗ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರ ಸಾಧನೆಯನ್ನು ಹೊಗಳುವ ಜಾಹೀರಾತು ರಾರಾಜಿಸುತ್ತಿದೆ. ಮಾಧ್ಯಮಗಳು ಕೂಡ ಸರಕಾರದ ವೈಫಲ್ಯಗಳ ಬಗ್ಗೆ ಬರೆಯುವದನ್ನು ಬಿಟ್ಟು, ಬರುವ ಜಾಹೀರಾತಿಗಾಗಿ ಜಾಗ ಮೀಸಲಿಡುತ್ತಿವೆ. ಇದಕ್ಕೆಲ್ಲ ಜನರ ತೆರಿಗೆಯ ಹಣ ಇದೆ, ಆದರೆ 2015ರಿಂದ ರಾಜ್ಯದ ಕ್ರೀಡಾಪಟುಗಳ ಸಾಧನೆಗೆ ಸಂದಾಯವಾಗಬೇಕಾಗಿದ್ದ ಹಣ ನೀಡಲು ಸರಕಾರದಲ್ಲಿ ಹಣ ಇಲ್ಲದಂತಾಗಿದೆ.

ಹರಿಯಾಣ, ತಮಿಳುನಾಡು, ಒಡಿಶಾ, ಮಹಾರಾಷ್ಟ್ರ ಹಾಗೂ ಇತರ ರಾಜ್ಯಗಳು ಕ್ರೀಡಾಪಟುಗಳ ಸಾಧನೆಗಾಗಿ ಹಣವನ್ನು ಮೀಸಲಿಡುತ್ತಿವೆ. ನಾವು ಮಾತ್ರ ನಾಚಿಕೆಗೆಟ್ಟವರಂತೆ ಐದು ವರ್ಷಗಳ ಕಂತಿನಲ್ಲಿ ನೀಡುತ್ತೇವೆ ಎಂದು ಹಿಂದಿನ ಸರಕಾರದ ಕ್ರೀಡಾ ಸಚಿವರು ಹೇಳಿದ್ದರು. ನಮ್ಮ ಕ್ರೀಡಾ ಇಲಾಖೆಯಲ್ಲಿ ಎಂಥೆಂಥ ಕ್ರೀಡಾ ಸಚಿವರಿದ್ದಾರೆ ಎಂದರೆ, ಚೆಸ್ ಆಟಗಾರರು ನಮ್ಮ ಸಾಧನೆಗೆ ನಗದು ಬಹುಮಾನ ಕೊಡಿ ಎಂದು ಕೇಳಲು ಹೋದಾಗ, ಕ್ರೀಡಾ ಸಚಿವರೊಬ್ಬರು ‘ಚೆಸ್‌ನಲ್ಲಿ ಏನ್ ಶ್ರಮ ಇದೆ, ಕೂತ್ಕೊಂಡು ಆಡೋ ಆಟಕ್ಕೆಲ್ಲ ನಗದು ಬಹುಮಾನ ನೀಡಲಾಗುತ್ತದೆಯೇ?‘ ಎಂದಿದ್ದರು, ಅದೇ ಸಚಿವರು ಅಂಗವಿಕಲ ಕ್ರೀಡಾಪಟುಗಳು ನಗದು ಬಹುಮಾನ ಕೊಡಿ ಎಂದು ಕೇಳಲು ಹೋದಾಗ, ‘ಕೈ ಕಾಲ ಇಲ್ಲದವರಿಗೆಲ್ಲ ಹಣ ಕೊಡಲು ಇಲ್ಲಿ ಅವಕಾಶ ಇಲ್ಲ,‘ ಎಂದು ಅಮಾನವೀಯವಾಗಿ ವರ್ತಿಸಿದ್ದರು. ಇದು ಹಿಂದಿನ ಸರಕಾರದ ಹಣೆಬರಹ ಅಂತ ಮರೆತುಬಿಡೋಣ. ಆದರೆ ಜನರ ಕಷ್ಟಗಳಿಗೆ ಅತ್ಯಂತ ಭಾವುಕರಾದವರಂತೆ ವರ್ತಿಸಿ ಕಣ್ಣೀರಿಡುವ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಕೂಡ ಕ್ರೀಡಾಪಟುಗಳ ಸಾಧನೆಯ ಬಾಕಿ ಹಣವನ್ನು ನೀಡಲು ಮೀನ ಮೇಷ ಎಣಿಸುತ್ತಿರುವುದು ಬೇಸರದ ಸಂಗತಿ.
ಬರೇ ಪ್ರಕಟಣೆ, ನಗದು ಕಾಣೆ!
ಹಿಂದೊಮ್ಮೆ ಮೈಸೂರಿನಲ್ಲಿ ನಡೆದ ನಗದು ಬಹುಮಾನ ವಿತರಣಾ ಸಮಾರಂಭದಲ್ಲಿ ಚೆಸ್ ಸಾಧಕರೊಬ್ಬರಿಗೆ ನೀಡಿದ ಚೆಕ್ ಬೌನ್ಸ್ ಆಗಿ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟಗೊಂಡಿತ್ತು, ಆದರೂ ಸರಕಾರ ಎಚ್ಚೆತ್ತುಕೊಳ್ಳಲಿಲ್ಲ. ರಾಜ್ಯದ ಮೊದಲ ಗ್ರ್ಯಾಂಡ್ ಮಾಸ್ಟರ್ ತೇಜ್ ಕುಮಾರ್ 2017ರಲ್ಲಿ ಗ್ರ್ಯಾಂಡ್ ಮಾಸ್ಟರ್ ಗ್ರೇಡ್ ಪಡೆದ ರಾಜ್ಯದ ಮೊದಲ ಚೆಸ್ ಆಟಗಾರ. ಆಗ ರಾಜ್ಯ ಸರಕಾರ 10 ಲಕ್ಷ ರೂ. ಬಹುಮಾನ ಘೋಷಿಸಿತ್ತು. ತೇಜ್ ಕುಮಾರ್ ಅಲ್ಲಿಂದ ಇಲ್ಲಿಯವರೆಗೆ ಕ್ರೀಡಾ ಇಲಾಖೆಯ ಮೆಟ್ಟಿಲು ಸವೆಸಿದ್ದು ಬಿಟ್ಟರೆ ನಗದು ಹಣ ಮಾತ್ರ ಸಿಗಲೇ ಇಲ್ಲ. ಕೇಳಿದರೆ ತೇಜ್ ಕುಮಾರಿಗೆ 38 ವರ್ಷ ಆಗಿದೆ ಅವರಿಗೆ ಈಗ ಕೊಡಲು ಸಾಧ್ಯವಿಲ್ಲ ಎನ್ನುತ್ತಾರೆ. ವಿದೇಶದಲ್ಲಿ ನೆಲೆಸಿದರೂ 49 ವರ್ಷ ವಯಸ್ಸಿನ ವಿಶ್ವನಾಥನ್ ಆನಂದ್‌ಗೆ ತಮಿಳುನಾಡು ಸರಕಾರ ಈಗಲೂ ಆರ್ಥಿಕ ನೆರವನ್ನು ನೀಡುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿ ಮಾತ್ರ ವಿವಿಧ  ಕಾರಣ ನೀಡಲಾಗುತ್ತದೆ.
ಕರ್ನಾಟಕ ರಾಜ್ಯ ಒಲಿಂಪಿಕ್ಸ್ ಸಂಸ್ಥೆ ಇಂಥ ಸಮಸ್ಯೆಗಳ ಕಡೆಗೆ ಗಮನ ಹರಿಸುವುದಿಲ್ಲ. ಏಕೆಂದರೆ ರಾಜ್ಯ ಸರಕಾರದಲ್ಲಿ ಅವರ ಕೆಲಸ ಮಾತ್ರ ಅತ್ಯಂತ ಸುಲಭವಾಗಿ ಆಗುತ್ತದೆ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅಂಥ ವೇದಿಕೆಯನ್ನು ಸೃಷ್ಟಿಸಿಕೊಟ್ಟಿದ್ದಾರೆ. ಜನರ ತೆರಿಗೆಯ ಹಣವನ್ನು ನಿತ್ಯವೂ ಪತ್ರಿಕೆಗಳ ಜಾಹೀರಾತಿಗೆ ಬಳಸುತ್ತಿರುವ ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ಇಂಥ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕಾಗಿದೆ. ನಿಮ್ಮನ್ನು ಆಯ್ಕೆ ಮಾಡಿ ಕಳುಹಿಸಿರುವುದು ಜನರ ಸೇವೆ ಮಾಡಬೇಕೆಂದೇ ಹೊರತು ಮಾಡಿದ ಕೆಲಸಕ್ಕೆ ಪ್ರಚಾರ ತೆಗೆದುಕೊಳ್ಳಲು ಅಲ್ಲ. ನೀವು ಏನು ಮಾಡಿದ್ದೀರಿ ಎಂಬುದು ಕರ್ನಾಟಕದ ಜನತೆಗೆ ಗೊತ್ತಿದೆ. ಅದಕ್ಕಾಗಿ ಮತ್ತಷ್ಟು ಕೋಟಿ ರೂಪಾಯಿ ವ್ಯಯ ಮಾಡುವ ಅಗತ್ಯವಿಲ್ಲ. ಅದೇ ಹಣದಲ್ಲಿ ಕ್ರೀಡಾಪಟುಗಳ ಬಾಕಿ ಹಣವನ್ನು ಸಂದಾಯ ಮಾಡಿದರೆ ನಿಮ್ಮ ಬಗ್ಗೆ ಪ್ರೀತಿ, ವಿಶ್ವಾಸ ಹೆಚ್ಚುವುದು ಸಹಜ.
ಅಂಗವಿಕಲರ ಮನ ನೋಯಿಸಿದವರಿಗೆ …ಕಟ್ಟಿಹುದು ಬುತ್ತಿ!
ಜಕಾರ್ತದಲ್ಲಿ ನಡೆದ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಕರ್ನಾಟಕಕ್ಕೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಒಂದು ಚಿನ್ನ, ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಬಂದಿದೆ. ಚೆಸ್‌ನಲ್ಲಿ ಕಿಶನ್ ಗಂಗೊಳ್ಳಿ ಒಂದು ಚಿನ್ನ ಹಾಗೂ ಒಂದು ಕಂಚಿನ ಪದಕ ಗೆದ್ದಿದ್ದಾರೆ. ಅವರಿಗೆ ನಗದು ಬಹುಮಾನ ಕೊಡುವುದು ಒತ್ತಟ್ಟಿಗರಲಿ, ಅವರನ್ನು ಗುರುತಿಸುವ, ಅಭಿನಂದಿಸುವ ಕೆಲಸವನ್ನೂ ಸರಕಾರ ಮಾಡಿಲ್ಲ. ಕ್ರೀಡಾ ನಿಯಮದಂತೆ ಸಮರ್ಥರಿಗೆ ಕೊಟ್ಟಂತೆ ವಿಶೇಷ ಚೇತನರಿಗೂ ಸಮಾನ ರೀತಿಯಲ್ಲಿ ನಗದು ಬಹುಮಾನ ಕೊಡಬೇಕು. ಇತರ ರಾಜ್ಯಗಳಲ್ಲಿ ಈ ನಿಯಮ ಜಾರಿಯಲ್ಲಿದೆ. ಆದರೆ ಕರ್ನಾಟಕದಲ್ಲಿ ಕ್ರೀಡೆ ಎಂದರೆ ಅಲರ್ಜಿ. ಎಲ್ಲಿ ಪ್ರಚಾರಕ್ಕೆ ಹೆಚ್ಚು ಅವಕಾಶ ಇರುತ್ತದೋ ಅದಕ್ಕೆ ಮೊದಲ ಆದ್ಯತೆ. ಎಲ್ಲಿ ಓಟ್ ಬ್ಯಾಂಕ್ ಇದೆಯೋ, ಎಲ್ಲಿ ನಮ್ಮ ಜಾತಿಯ ಸಾಧಕರಿದ್ದಾರೋ ಅಲ್ಲಿ ಮೊದಲ ಪ್ರಾಶಸ್ತ್ಯ ಇದು ನಮ್ಮ ರಾಜ್ಯದ ಕ್ರೀಡಾ ದುರಂತ. ಆ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕ್ರೀಡಾಪಟುಗಳು ಸ್ಮರಿಸಲೇಬೇಕು. 2010ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಗೆದ್ದವರೆಲ್ಲರಿಗೂ ನಗದು ಬಹುಮಾನ ನೀಡಿರುವುದಲ್ಲದೆ, ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದರು. ಕ್ರೀಡಾ ಸಾಧಕರ ನೋವು, ವಿಶೇಷ ಚೇತನರ ಕಣ್ಣೀರು ಅಧಿಕಾರದಲ್ಲಿರುವವರನ್ನು ಕಾಡದಿರದು. ಕೇಂದ್ರದಲ್ಲಿ ರಾಜ್ಯವರ್ಧನ  ಸಿಂಗ್ ರಾಥೋಡ್ ಕ್ರೀಡಾ ಸಚಿವರಾದ ಕಾರಣ ಕ್ರೀಡಾಪಟುಗಳ ಸಮಸ್ಯೆಗೆ ಕೂಡಲೇ ಸ್ಪಂದಿಸಿ ಪರಿಹಾರ ನೀಡುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಕ್ರೀಡೆ ಎಂದರೆ ಕೇವಲ ಹೆಸರಿಗೆ ಮಾತ್ರ ಇದೆ. ಅಥ್ಲೀಟ್‌ಗಳು ನಿತ್ಯವೂ ಅಭ್ಯಾಸ ನಡೆಸುವ ಕಂಠೀರವ ಕ್ರೀಡಾಂಗಣವನ್ನು ಜೆಎಸ್‌ಡಬ್ಲ್ಯು ಗೆ ಬಾಡಿಗೆ ನೀಡಿದಾಗಲೇ ನಮಗೆ ಕ್ರೀಡೆಯ ಬಗ್ಗೆ ಎಷ್ಟು ಆಸಕ್ತಿ ಹಾಗೂ ಕಾಳಜಿ ಇದೆ ಎಂಬುದು ಸ್ಪಷ್ಟವಾಗುತ್ತದೆ.
ಉದ್ಯೋಗವೂ ಇಲ್ಲ, ಬಹುಮಾನವೂ ಇಲ್ಲ!
ಏಷ್ಯನ್ ಗೇಮ್ಸ್ ಚೆಸ್‌ನಲ್ಲಿ ಒಂದು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿರುವ ಕಿಶನ್ ಗಂಗೊಳ್ಳಿ ಸ್ಪೋರ್ಟ್ಸ್ ಮೇಲ್ ಜತೆ ಮಾತನಾಡಿ, ‘ನಮ್ಮಂತೆಯೇ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಬೇರೆ ರಾಜ್ಯಗಳಲ್ಲಿ ಉದ್ಯೋಗದ ಜತೆ, ನಗದು ಬಹುಮಾನ ನೀಡಿ ಗೌರವಿಸಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ಉದ್ಯೋಗ, ಬಹುಮಾನ ಬಿಡಿ, ಕನಿಷ್ಠ ಗುರುತಿಸುವ ಕೆಲಸವನ್ನೂ ಮಾಡಲಿಲ್ಲ. ಇದು ಬೇಸರದ ಸಂಗತಿ, ‘ ಎಂದಿದ್ದಾರೆ.

Related Articles