ವಿಕೆಟ್ ಉರುಳುತ್ತಿತ್ತು ಪಾಕ್ ಆಟಗಾರ ಗೊರಕೆ ಹೊಡೆಯುತ್ತಿದ್ದ
ರಾವಲ್ಪಿಂಡಿ: ಪಾಕಿಸ್ತಾನ ದೇಶೀಯ ಕ್ರಿಕೆಟ್ ಪೆಸಿಡೆಂಟ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಆಟಗಾರನೊಬ್ಬ ನಿದ್ದೆ ಮಾಡುತಿದ್ದ, ಕ್ರಿಕೆಟ್ ನಿಯಮದಂತೆ ಅಂಗಣಕ್ಕೆ ಬಾರದ ಆ ಆಟಗಾರನನ್ನು ಅಂಪೈರ್ ಟೈಮ್ಡ್ ಔಟ್ ಎಂದು ಘೋಷಿಸಿದ ಘಟನೆ ವರದಿಯಾಗಿದೆ.
ಭಾರತ ಹಾಗೂ ಪಾಕಿಸ್ತಾನದ ವಿರುದ್ಧ ಫೆಬ್ರವರಿ 23 ರಂದು ದುಬೈಯಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ 62 ರನ್ ಗಳಿಸಿ ಗಮನ ಸೆಳೆದಿದ್ದ ಪಾಕಿಸ್ತಾನದ ಅಂತಾರಾಷ್ಟ್ರೀಯ ಆಟಗಾರ ಸೌದ್ ಶಕೀಲ್ ಈ ವಿಲಕ್ಷಣ ರೀತಿಯಲ್ಲಿ ಔಟಾದ ಆಟಗಾರ. Saud Shakeel become first Pakistani cricketer to be Timed Out.
ಪಾಕಿಸ್ತಾನ್ ಟೆಲಿವಿಜನ್ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ನಡುವೆ ಫೈನಲ್ ಪಂದ್ಯ ನಡೆಯುತ್ತಿತ್ತು. ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ವಿಕೆಟ್ ಲಗುಬಗನೆ ನೆಲಕ್ಕುರುಳಿತು. 5ನೇ ಕ್ರಮಾಂಕದಲ್ಲಿ ಅಂಗಣಕ್ಕಿಳಿಯಬೇಕಾಗಿದ್ದ ಸೌದ್ ಶಕೀಲ್ ಡ್ರೆಸ್ಸಿಂಗ್ ರೂಮ್‌ನಲ್ಲಿ ನಿದ್ದೆ ಮಾಡುತ್ತಿದ್ದ. ಉಮರ್ ಅಮೀದ್ ಹಾಗೂ ಫವಾದ್ ಅಲಮ್ ವಿಕೆಟ್ ಉರುಳಿದ ಕೂಡಲೇ ಸೌದ್ ಅಂಗಣಕ್ಕೆ ಆಗಮಿಸಬೇಕಾಗಿತ್ತು. ಆದರೆ ನಿದ್ದೆ ಮಾಡುತ್ತಿದ್ದ ಕಾರಣ ಅಂಗಣಕ್ಕಿಳಿದಿರಲಿಲ್ಲ. ಇನ್ನೊಬ್ಬ ಆಟಗಾರ ಎಬ್ಬಿಸಿ ಅಂಗಣಕ್ಕೆ ಓಡಿ ಬರುತ್ತಿರುವಾಗಲೇ ಟೈಮ್ಡ್ ಔಟ್ ಆಗಿತ್ತು. ಮೂರು ನಿಮಿಷಗಳ ಅವಧಿಯಲ್ಲಿ ಆತ ಕ್ರೀಸಿನಲ್ಲಿರಬೇಕಾಗಿತ್ತು. ಆದರೆ ಹಾಗಾಗಲಿಲ್ಲ. ಅಂಪೈರ್ ಟೈಮ್ಡ್ ಔಟ್ ನಿಯಮದಂತೆ ಸೌದ್ ಔಟ್ ಎಂದು ಘೋಷಿಸಿದರು. ಈ ರೀತಿಯಲ್ಲಿ ಟೈಮ್ಡ್ ಔಟ್‌ಗೆ ಬಲಿಯಾದ ಪಾಕಿಸ್ತಾನದ ಮೊದಲ ಆಟಗಾರ ಎಂಬ ಕುಖ್ಯಾತಿ ಸೌದ್‌ಗೆ ಒದಗಿಬಂತು.
2023ರ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾದ ಆಂಜಲೋ ಮ್ಯಾಥ್ಯೂಸ್ ಕೂಡ ಇದೇ ರೀತಿಯ ಟೈಮ್ಡ್ ಔಟ್‌ಗೆ ಬಲಿಯಾಗಿದ್ದರು. ಇದುವರೆಗೂ ಕ್ರಿಕೆಟ್ ಜಗತ್ತಿನಲ್ಲಿ ಒಟ್ಟು 9 ಆಟಗಾರರು ವಿವಿಧ ಕಾರಣಗಳಿಂದಾಗಿ ಟೌಮ್ಡ್ ಔಟ್‌ಗೆ ಬಲಿಯಾಗಿದ್ದಾರೆ.
ಟೈಮ್ಡ್ ಔಟ್ ನಿಯಮ: ಕ್ರೀಸಿನಲ್ಲಿ ಆಡುತ್ತಿದ್ದ ಆಟಗಾರ ಔಟ್ ಆದ ಕೂಡಲೇ ಇನ್ನೊಬ್ಬ ಆಟಗಾರ ಕ್ರೀಸಿಗೆ ಬಂದು ಚೆಂಡನ್ನು ಎದುರಿಸಲು 3 ನಿಮಿಷಗಳ ಕಾಲಾವಕಾಶವಿರುತ್ತದೆ. ಹಾಗೆ ಆ ಕಾಲಮಿತಿಯಲ್ಲಿ ಬಾರದಿದ್ದರೆ ಆ ಬ್ಯಾಟ್ಸಮನ್ ಔಟ್ ಎಂದು ಘೋಷಿಸಲಾಗುತ್ತದೆ. ಇದನ್ನು ಟೈಮ್ಡ್ ಔಟ್ ಎನ್ನುತ್ತಾರೆ.