Thursday, September 12, 2024

ದಬಾಂಗ್ ಡೆಲ್ಲಿಗೆ ಸೋಲುಣಿಸಿದ ಸ್ಟೀಲರ್ಸ್

ಸ್ಪೋರ್ಟ್ಸ್ ಮೇಲ್ ವರದಿ

ದಬಾಂಗ್ ಡೆಲ್ಲಿ ತಂಡವನ್ನು 34-31 ಅಂಕಗಳ ಅಂತರದಲ್ಲಿ ಮಣಿಸಿದ ಹರಿಯಾಣ ಸ್ಟೀಲರ್ಸ್ ತಂಡ ಸೋನೆಪತ್ ಲೆಗ್‌ನ ಪ್ರೊ ಕಬಡ್ಡಿ ಲೀಗನ್ನು ಜಯದೊಂದಿಗೆ ಮುಕ್ತಾಯಗೊಳಿಸಿದೆ.

ಸತತ ನಾಲ್ಕು ಪಂದ್ಯಗಳಲ್ಲಿ ಸೋಲನುಭವಿಸಿದ್ದ ಸ್ಟೀಲರ್ಸ್ ತಂಡಕ್ಕೆ ವಿಕಾಸ್ ಕಂಡೋಲಾ ಅವರು ಕೊನೆ ಕ್ಷಣದಲ್ಲಿ ಮಾಡಿದ ರೈಡ್‌ನಲ್ಲಿ ತಂಡಕ್ಕೆ ಜಯ ತಂದುಕೊಟ್ಟರು. ದಬಾಂಗ್ ಡೆಲ್ಲಿ ತಂಡ ಯಾವ ಪ್ರಮಾದವನ್ನು ಎಸಗದಿದ್ದರೂ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಲವಾಯಿತು.
ಸ್ಟಾರ್ ರೈಡರ್  ಮಿರಾಜ್ ಶೇಖ್ ರೈಡಿಂಗ್‌ನಲ್ಲಿ ಕೇವಲ ಎರಡು ಅಂಕ ಗಳಿಸಿದ್ದು ತಂಡದ ಸೋಲಿಗೆ ಪ್ರಮುಖ ಕಾರಣವಾಗಿತ್ತು.
ನಾಯಕ ಮನು ಗೋಯಟ್ ಅವರು ಉತ್ತಮ ರೈಡ್ ಮಾಡುವುದರೊಂದಿಗೆ ಹರಿಯಾಣ ತಂಡ ಮೊದಲ ನಿಮಿಷದಲ್ಲಿ 3-1ರ ಮುನ್ನಡೆ ಕಂಡಿತು. ಸಮಬಲದ ಹೋರಾಟ ಮುಂದುವರಿದು 17ನೇ ನಿಮಿಷದಲ್ಲಿ ಅಂಕ 13-13ರಲ್ಲಿ ಸಮಬಲಗೊಂಡಿತು. ಪ್ರಥಮಾರ್ಧ  16-14ರಲ್ಲಿ ಕೊನೆಗೊಂಡಿತು.
ದ್ವಿತಿಯಾರ್ಧ  28ನೇ ನಿಮಿಷದಲ್ಲಿ ವಿಕಾಸ್ ಕಂಡೋಲಾ ಸೂಪರ್ ರೈಡ್ ಮೂಲಕ ತಂಡಕ್ಕೆ 23-20ರ ಮುನ್ನಡೆ ಕಲ್ಪಿಸಿದರು. 32ನೇ ನಿಮಿಷದಲ್ಲಿ ಕಂಡೋಲಾ ಮತ್ತೊಂದು ಸೂಪರ್ ರೈಡ್ ಸಾಧನೆ ಮಾಡುವುದರೊಂದಿಗೆ ಹರಿಯಾಣ ಸ್ಟೀಲರ್ಸ್ 28-22ರಲ್ಲಿ ಮುನ್ನಡೆ ಕಾಯ್ದುಕೊಂಡಿತು.
5 ನಿಮಿಷ ಬಾಕಿ ಇರುವಾಗ ಹರಿಯಾಣ ತಂಡ 30-25ರಲ್ಲಿ ಮುಂದೆ ಸಾಗಿತ್ತು. ಚಂದ್ರನ್ ರಂಜಿತ್ ಅಮೂಲ್ಯ 2 ಅಂಕಗಳನ್ನು ಗಳಿಸುವುದರೊಂದಿಗೆ ದಿಲ್ಲಿ 28-32ರಲ್ಲಿ ಹೋರಾಟ ಮುಂದುವರಿಸಿತು. ಅಂತಿಮ ಹಂತದ ವರೆಗೂ ಇತ್ತಂಡಗಳು ಉತ್ತಮ ಹೋರಾಟ ನೀಡಿದರೂ ಕಂಡೋಲಾ ಅವರ ಕೊನೆಯ ಸೂಪರ್ ರೈಡ್ ತಂಡಕ್ಕೆ ಜಯ ತಂದುಕೊಟ್ಟಿತು.

Related Articles