Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಮುಂಬೈ ಮೇರಿ ಜಾನ್‌, ಲೆಕಿನ್‌ ಮೈ ಅಲ್‌ ಹಿಲಾಲ್‌ ಫ್ಯಾನ್‌!

ಮುಂಬೈ: ವಿಶ್ವಕಪ್‌ ಕ್ರಿಕೆಟ್‌ ಅಬ್ಬರದ ನಡುವೆ ಫುಟ್ಬಾಲ್‌ ಲೀಗ್‌ ಸದ್ದು ಕೇಳಿಸುತ್ತಲೇ ಇಲ್ಲ. ನಿನ್ನೆ ಬ್ರೆಜಿಲ್‌ನ ನೇಮಾರ್‌ ಸೇರಿರುವ ಸೌದಿ ಅರೇಬಿಯಾದ ಬಲಿಷ್ಠ ತಂಡ ಅಲ್‌ ಹಿಲಾಲ್‌ ಸೌದಿ ಫುಟ್ಬಾಲ್‌ ಕ್ಲಬ್‌ ಹಾಗೂ ಮುಂಬೈ ಸಿಟಿ ಎಫ್‌ಸಿ ನಡುವೆ ಏಷ್ಯನ್‌ ಚಾಂಪಿಯನ್ಸ್‌ ಲೀಗ್‌ ಡಿ.ವೈ ಪಾಟೀಲ್‌ ಕ್ರೀಡಾಂಗಣದಲ್ಲಿ ನಡೆದಿತ್ತು. ಮುಂಬೈ ಫುಟ್ಬಾಲ್‌ ಬಗ್ಗೆ ಪ್ರೀತಿ ಇದೆ ಆದರೆ ಬೆಂಬಲ ಅಲ್‌ ಹಿಲಾಲ್‌ಗೆ Mumbai Meri Jaan but I am Al Hilal Fan

ನೇಮಾರ್‌ ಅನುಪಸ್ಥಿತಿಯ ನಡುವೆಯೂ ಅಲ್‌ ಹಿಲಾಲ್‌ ಮುಂಬೈ ಸಿಟಿ ಎಫ್‌ಸಿ ವಿರುದ್ಧ 2-0 ಗೋಲುಗಳ ಅಂತರದಲ್ಲಿ ಜಯ ಗಳಿಸಿತು. ಭಾರತದಲ್ಲಿ ಫುಟ್ಬಾಲ್‌ ಅಭಿವೃದ್ಧಿ ಮಾಡಬೇಕೆಂದು ಇಂಡಿಯನ್‌ ಸೂಪರ್‌ ಲೀಗ್‌ ಹಾಗೂ ಐ ಲೀಗ್‌ ಪಂದ್ಯಗಳನ್ನು ನಡೆಸಲಾಗುತ್ತಿದೆ. ಆದರೆ ಇಲ್ಲಿಯ ಫುಟ್ಬಾಲ್‌ ಅಭಿಮಾನಿಗಳು ಇಲ್ಲಿಯ ಕ್ಲಬ್‌ಗಳಿಗೆ ಪ್ರೋತ್ಸಾಹ ನೀಡುತ್ತಿಲ್ಲ ಎಂಬುದಕ್ಕೆ ನಿನ್ನೆಯ ಪಂದ್ಯ ಸಾಕ್ಷಿಯಾಯಿತು ಎನ್ನುತ್ತಾರೆ ಭಾರತದ ಕೆಲವು ಫುಟ್ಬಾಲ್‌ ಆಭಿಮಾನಿಗಳು.

ಮೊದಲು ಪಂದ್ಯವನ್ನು ಪುಣೆಯಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಬಹುದೆಂಬ ನಿರೀಕ್ಷೆಯಿಂದ ಡಿವೈ ಪಾಟೀಲ್‌ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಯಿತು. ಡಿವೈ ಪಾಟೀಲ್‌ ಫುಟ್ಬಾಲ್‌ ಅಂಗಣದಲ್ಲಿ ನಿಜವಾಗಿಯೂ ಮುಂಬೈ ಸಿಟಿ ಎಫ್‌ಸಿ ತಂಡಕ್ಕೆ ಮಹಾರಾಷ್ಟ್ರದ ಫುಟ್ಬಾಲ್‌ ಅಭಿಮಾನಿಗಳು ಪ್ರೋತ್ಸಾಹ ನೀಡಬೇಕಾಗಿತ್ತು. ಆದರೆ ನೆರೆದ 30,000ಕ್ಕೂ ಹೆಚ್ಚು ಅಭಿಮಾನಿಗಳಲ್ಲಿ ಅಲ್‌ ಹಿಲಾಲ್‌ ತಂಡಕ್ಕೆ ಪ್ರೋತ್ಸಾಹ ನೀಡಿದರು. ಅಲ್‌ ಹಿಲಾಲ್‌ ತಂಡವನ್ನೇ ಹುರಿದುಂಬಿಸಿದರು. ಇಲ್ಲಿಯ ಫುಟ್ಬಾಲ್‌ ಸ್ಥಿತಿಯನ್ನು ನೋಡಿಯೇ ನೇಮಾರ್‌ ಗಾಯದ ನೆಪ ಹೇಳಿ ಬರಲೇ ಇಲ್ಲ. ಇಲ್ಲಿ ಫುಟ್ಬಾಲ್‌ ಬಗ್ಗೆ ಇರುವ ಪ್ರೀತಿಗಿಂತ ಯೂರೋಪಿಯನ್‌ ಆಟಗಾರ ಬಗ್ಗೆ ಇರುವ ಪ್ರೀತಿಯೇ ಹೆಚ್ಚು.

ಮುಂಬೈ ಸಿಟಿ ಎಫ್‌ಸಿ ತಂಡ ಏಷ್ಯನ್‌ ಚಾಂಪಿಯನ್ಸ್‌‌ ಲೀಗ್‌‌ ಆಡುತ್ತಿರುವುದು ಹೆಮ್ಮೆಯ ಸಂಗತಿ. ಬಲಿಷ್ಠ ತಂಡದ ವಿರುದ್ಧ ನಮ್ಮದೇ ತಂಡ ಆಡುತ್ತಿರುವಾಗ ನಮ್ಮ ತಂಡಕ್ಕೆ ಬೆಂಬಲ ನೀಡಬೇಕಾದವರು ಅಲ್‌ ಹಿಲಾಲ್‌ ತಂಡದ ಜರ್ಸಿ ಧರಿಸಿ ಅಲ್ಲಿಯ ತಂಡವನ್ನು ಹುರಿದುಂಬಿಸಿದರು. ಇದು ಭಾರತದಲ್ಲಿ ಫುಟ್ಬಾಲ್‌ಗೆ ಸಿಗುತ್ತಿರುವ ಪ್ರೀತಿ ಮತ್ತು ಪ್ರೋತ್ಸಾಹ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ. ಭಾರತದಲ್ಲಿ ಹೆಚ್ಚಾಗಿ ಯೂರೋಪಿನ ಫುಟ್ಬಾಲ್‌ ಕ್ಲಬ್‌ ಮತ್ತು ಯೂರೋಪಿನ ಫುಟ್ಬಾಲ್‌ ಆಟಗಾರರ ಅಭಿಮಾನಿಗಳೇ ಹೆಚ್ಚು.

ಕ್ಲಬ್‌ ಪಂದ್ಯಗಳು ನಡೆಯುತ್ತಿರುವಾಗ ಅಭಿಮಾನಿಗಳನ್ನು ಇಂಥದೇ ತಂಡಕ್ಕೆ ಬೆಂಬಲ ನೀಡಿ ಎಂದು ಆದೇಶ ಮಾಡಲಾಗದು. ಬೆಂಗಳೂರಿನಲ್ಲಿ ಮೊದಲು ಫುಟ್ಬಾಲ್‌ ಪಂದ್ಯ ನಡೆದರೆ ನೋಡಲು ಜನ ಬರುತ್ತಿರಲಿಲ್ಲ. ಆದರೆ ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ ಬೆಂಗಳೂರು ಎಫ್‌ಸಿ ತಂಡ ಸ್ಥಾಪನೆಯಾದ ಬಳಿಕ ಕಂಠೀರವ ಕ್ರೀಡಾಂಗಣಲ್ಲಿ ಎಲ್ಲಿ ನೋಡಿದರೂ ನೀಲಿಯ ಅಲೆ. ಬೆಂಗಳೂರು ಎಫ್‌ಸಿಗೆ ಎಲ್ಲಿಲ್ಲದ ಬೆಂಬಲ. ಇದೇ ರೀತಿಯ ಪ್ರೋತ್ಸಾಹ ನಿನ್ನೆ ಮುಂಬೈ ಎಫ್‌ಸಿ ತಂಡಕ್ಕೆ ಸಿಗಬೇಕಾಗಿತ್ತು ಎಂಬುದು ಫುಟ್ಬಾಲ್‌ ಅಭಿಮಾನಿಗಳ ನಿಲುವು.

ಭಾರತ ಫುಟ್ಬಾಲ್‌ ತಂಡ ವಿಶ್ವಕಪ್‌ನಲ್ಲಿ ಆಡಲು ಅರ್ಹತೆ ಪಡೆಯಬೇಕಾದರೆ ಇಲ್ಲಿಯ ಜನ ದೇಶದಲ್ಲಿ ಫುಟ್ಬಾಲ್‌ಗೆ ಬೆಂಬಲ ನೀಡಬೇಕು. ಭಾರತ ಆಡುತ್ತಿರುವಾಗ ಪ್ರೇಕ್ಷಕರೆಲ್ಲೂ ಬ್ರೆಜಿಲ್‌ನ ಟಿ ಶರ್ಟ್‌ ಧರಿಸಿದರೆ ಭಾರತದ ಆಟಗಾರರ ಮನಸ್ಸಿನ ಮೇಲೆ ಪರಿಣಾಮ ಬೀರುವುದಿಲ್ಲವೇ? ಒಂದು ತಂಡದ ಜಯದಲ್ಲಿ ಆಟಗಾರರಂತೆ ಪ್ರೇಕ್ಷಕರ ಪಾತ್ರವೂ ಮಹತ್ತರವಾದುದು.


administrator