ಬಾಕ್ಸಿಂಗ್ನಲ್ಲಿ ಉಡುಪಿಗೆ ಮೊದಲ ಪದಕ ತಂದ ಮಲ್ಪೆಯ ಮಾನ್ಸಿ
ಉಡುಪಿ: ಮಲ್ಪೆಯ ಮೀನುಗಾರರ ಸಮುದಾಯದ ಹುಡುಗಿ, ಮಾನ್ಸಿ ಸುವರ್ಣ ಅವರು ಉಡುಪಿ ಜಿಲ್ಲೆಯ ಕ್ರೀಡಾ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ. ರಾಷ್ಟ್ರೀಯ ಬಾಲಕಿಯರ ಸಬ್ ಜೂನಿಯರ್ ಬಾಕ್ಸಿಂಗ್ನಲ್ಲಿ ಪದಕ ಗೆದ್ದ ಮೊದಲ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. Mansi Suvarna from Malpe won the first National Medal for Udupi District in National Boxing Championship
ಉತ್ತರ ಪ್ರದೇಶದ ಗ್ರೇಟರ್ ನೊಯಿಡಾದಲ್ಲಿ ನಡೆದ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಮಾನ್ಸಿ ಜೆ ಸುವರ್ಣ ಕಂಚಿನ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಮೀನುಗಾರಿಕೆಯಲ್ಲಿ ತೊಡಗಿರುವ ಮಲ್ಪೆಯ ಮಾಲತಿ ಹಾಗೂ ಜಗದೀಶ ಸುವರ್ಣರ ಏಕೈಕ ಪುತ್ರಿ ಮಾನ್ಸಿ ಗೆದ್ದಿರುವ ಕಂಚಿನ ಪದಕ ರಾಜ್ಯದ ಇತರ ಬಾಕ್ಸರ್ಗಳಿಗೆ ಸ್ಪೂರ್ತಿಯಾಗಿದೆ.
ಕರಾವಳಿ ಜಿಲ್ಲೆಗಳಲ್ಲಿ ಬಾಕ್ಸಿಂಗ್ ಕ್ರೀಡೆ ವಿರಳ. ಆದರೆ ಇತ್ತೀಚಿನ ವರ್ಷಗಳಲ್ಲಿ ಮಣಿಪಾಲದ ಶಿವಪ್ರಸಾದ್ ಆಚಾರ್ಯ ಅವರು ತರಬೇತಿ ನೀಡಿ ಉಡುಪಿ ಹಾಗೂ ಮಂಗಳೂರಿನಲ್ಲಿ ಬಾಕ್ಸಿಂಗ್ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

ಸ್ಫೂರ್ತಿಯಾದ ವಿರಾಜ್ ಮೆಂಡನ್: ವೃತ್ತಿಪರ ಬಾಕ್ಸಿಂಗ್ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದ ಮಲ್ಪೆಯ ಕಣ್ಣಿ ಹುಡುಗ ವಿರಾಜ್ ಮೆಂಡನ್ ಹಲವಾರು ಯುವ ಬಾಕ್ಸರ್ಗಳಿಗೆ ಸ್ಫೂರ್ತಿಯಾಗಿದ್ದರು. ಆದರೆ ದುರಾದೃಷ್ಟವಶಾತ್ ವಿರಾಜ್ ಮೆಂಡನ್ ಕಳೆದ ವರ್ಷ ವಿಧಿವಶರಾದರು. ವಿರಾಜ್ ನಮ್ಮನ್ನು ಅಗಲಿದರೂ ಅವರು ಅವರಿಂದ ಸ್ಫೂರ್ತಿ ಪಡೆದ ಮಕ್ಕಳು ಬಾಕ್ಸಿಂಗ್ನಲ್ಲಿ ಮುಂದುವರೆದರು. ಆ ರೀತಿ ಸ್ಫೂರ್ತಿ ಪಡೆದು ರಾಷ್ಟ್ರ ಮಟ್ಟದಲ್ಲಿ ಮಿಂಚಿದವರಲ್ಲಿ ಮಾನ್ಸಿ ಸುವರ್ಣ ಕೂಡ ಒಬ್ಬರು.
“ನನಗೆ ಚಿಕ್ಕಂದಿನಲ್ಲಿ ವಿರಾಜ್ ಮೆಂಡನ್ ಅವರೇ ಸ್ಫೂರ್ತಿ. ನನ್ನನ್ನು ಬಾಕ್ಸಿಂಗ್ ತರಬೇತಿಗಾಗಿ ಶಿವಪ್ರಸಾದ್ ಅವರಲ್ಲಿಗೆ ಕೊಂಡೊಯ್ಯುತಿದ್ದರು. ಇದರಿಂದಾಗಿ ನನಗೆ ಬಾಕ್ಸಿಂಗ್ನಲ್ಲಿ ನನಗೆ ಆಸಕ್ತಿ ಹೆಚ್ಚಿತು. ಮತ್ತೆ ಹೆತ್ತವರು ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿದರು. ನಾನೊಬ್ಬಳ್ಳೇ ಮಗುವಾಗಿದ್ದ ಕಾರಣ ಅಮ್ಮ ನನ್ನಲ್ಲಿ ಅಪಾರ ಕಾಳಜಿ ವಹಿಸಿ ಕ್ರೀಡೆಯಲ್ಲಿ ತೊಡಗಿಕೊಳ್ಳುವಂತೆ ಪ್ರೋತ್ಸಾಹಿಸಿದರು. ಅಮ್ಮನ ಬೆಂಬಲ, ಶಿವಪ್ರಸಾದ್ ಆಚಾರ್ಯ ಸರ್ ಅವರ ತರಬೇತಿಯಿಂದಾಗಿ ಇಂದು ಯಶಸ್ಸಿನ ಹಾದಿ ತುಳಿಯಲು ಸಾಧ್ಯವಾಯಿತು,” ಎನ್ನುತ್ತಾರೆ ಮಾನ್ಸಿ ಸುವರ್ಣ.

ಇತ್ತೀಚೆಗಷ್ಟೇ ಭಾರತೀಯ ಕ್ರೀಡಾ ಪ್ರಾಧಿಕಾರ ಸೇರಿಕೊಂಡಿರುವ ಮಾನ್ಸಿ ಸದ್ಯ ಗೋವಾದ ಭಾರತೀಯ ಕ್ರೀಡಾ ಪ್ರಾಧಿಕಾರ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅಲ್ಲಿನ ಸೇಂಟ್ಮೇರೀಸ್ ಶಾಲೆಯಲ್ಲಿ 9ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಗೋವಾ ಕ್ರೀಡಾ ಪ್ರಾಧಿಕಾರದ ಕೋಚ್ ಆರಿಫ್ ಉದ್ದೀನ್ ಅವರು ಮಾನ್ಸಿಗೆ ಗೋವಾದಲ್ಲಿ ತರಬೇತಿ ನೀಡುತ್ತಿದ್ದಾರೆ.
ರಾಷ್ಟ್ರೀಯ ಚಾಂಪಿಯನ್ಗೇ ಆಘಾತ ನೀಡಿದ ಮಾನ್ಸಿ; ನೊಯಿಡಾದಲ್ಲಿ ನಡೆದ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ಷಿಪ್ನ ಎರಡನೇ ಸುತ್ತಿನಲ್ಲೇ ಮಾನ್ಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ನಾಲ್ಕು ಬಾರಿ ರಾಷ್ಟ್ರೀ ಚಾಂಪಿಯನ್ಷಿಪ್ನಲ್ಲಿ ಪದಕ ವಿಜೇತೆ ಮಧ್ಯಪ್ರದೇಶದ ಬಾಕ್ಸರ್ಗೆ ಸೋಲುಣಿಸಿದ್ದು ಅದ್ಭುತ ಸಾಧನೆ. “ಸೆಮಿಫೈನಲ್ ತಲುಪಿ ಕಂಚಿನ ಪದಕ ಗೆದ್ದಿರುವುದು ಖುಷಿ ಕೊಟ್ಟಿದೆ, ಆದರೆ ಎರಡನೇ ಸುತ್ತಿನಲ್ಲಿ ಹಿರಿಯ ಬಾಕ್ಸರ್ ವಿರುದ್ಧ ಜಯ ಗಳಿಸಿರುವುದು ನನ್ನ ಮನೋಬಲವನ್ನು ಹೆಚ್ಚಿಸುವಂತೆ ಮಾಡಿದೆ,ʼ ಎಂದು ಮಾನ್ಸಿ ಸುವರ್ಣ ಹೇಳಿದ್ದಾರೆ.

ಕೋಚ್ ಶಿವಪ್ರಸಾದ್ ಆಚಾರ್ಯಗೆ ಸಂಭ್ರಮ: ಉಡುಪಿ ಜಿಲ್ಲೆಗೆ ಬಾಕ್ಸಿಂಗ್ ಕ್ರೀಡೆ ತಂದು ಕೊಟ್ಟ ಕೀರ್ತಿ ಕೋಚ್ ಶಿವಪ್ರಸಾದ್ ಆಚಾರ್ಯ ಅವರಿಗೂ ಸಲ್ಲುತ್ತದೆ. ಕಳೆದ ಹಲವಾರು ವರ್ಷಗಳಿಂದ ಅವರು ಉಡುಪಿ ಹಾಗೂ ಮಂಗಳೂರಿನಲ್ಲಿ ಬಾಕ್ಸಿಂಗ್ ತರಬೇತಿ ನೀಡುತ್ತಿದ್ದಾರೆ. ಮಾನ್ಸಿಯ ಸಾಧನೆಯ ಬಗ್ಗೆ ಖುಷಿ ಪಟ್ಟು sportsmail ಜೊತೆ ಸಂಬ್ರಮ ಹಂಚಿಕೊಂಡ ಶಿವಪ್ರಸಾದ್ ಆಚಾರ್ಯ ಅವರು, “ಇದೊಂದು ಅವಿಸ್ಮರಣೀಯ ಕ್ಷಣ, ಕರಾವಳಿಯಲ್ಲಿ ಬಾಕ್ಸಿಂಗ್ ತರಬೇತಿ ಆರಂಭಿಸಿದಾಗ ಇಲ್ಲಿ ಈ ಕ್ರೀಡೆಯನ್ನು ಬೆಳೆಸಿವುದು ಹೇಗೆ ಎಂಬ ಸಂಶಯ ಕಾಡಿತ್ತು. ಆದರೆ ಕಡಲ ತಡಿಯ ಮಕ್ಕಳು ಧೈರ್ಯವಂತರು. ಅವರು ಯಾವುದೇ ಸಾಹಸ ಕ್ರೀಡೆಗೂ ಅಂಜುವುದಿಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ. ಹಿಂದೆ ಮಂಗಳೂರಿನ ಶಾರ್ವಿ ಶೆಟ್ಟಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದರು. ಈಗ ಉಡುಪಿ ಜಿಲ್ಲೆಯ ಮಾನ್ಸಿ ಸುವರ್ಣ ಐತಿಹಾಸಿಕ ಸಾಧನೆ ಮಾಡಿದ್ದಾರೆ, ಈ ಕ್ರೀಡೆ ಮತ್ತಷ್ಟು ಬೆಳೆಯಲಿ. ಕರಾವಳಿಯ ಮಕ್ಕಳು ಬಾಕ್ಸಿಂಗ್ನಲ್ಲಿ ಮಿಂಚಲಿ ಎಂಬುದೇ ಹಾರೈಕೆ,ʼ ಎಂದರು.
ಮೀನುಗಾರರ ಕೇರಿಯಲ್ಲಿ ಸಂಭ್ರಮ: ಬಾಕ್ಸರ್ ಮಾನ್ಸಿ ಸುವರ್ಣ ಅವರು ರಾಷ್ಟ್ರೀಯ ಮಟ್ಟದಲ್ಲಿ ಮೊದಲ ಬಾರಿಗೆ ಜಿಲ್ಲೆಗೆ ಪದಕ ತಂದಿರುವುದು ಮಲ್ಪೆಯಲ್ಲಿ ಸಂಭ್ರಮ ಮನೆ ಮಾಡಿದೆ. ಉಡುಪಿಯಲ್ಲಿ ಮೀನು ವ್ಯಾಪಾರ ಮಾಡುತ್ತಿರುವ ಮಾನ್ಸಿಯ ತಾಯಿ ಮಾಲತಿ ಸುವರ್ಣ ಅವರು ಮಾತನಾಡಿ, “ನಮಗೆ ಒಬ್ಬಳೇ ಮಗಳು, ಅವಳನ್ನು ಉತ್ತಮ ಕ್ರೀಡಾಪಟುವನ್ನಾಗಿ ಮಾಡಬೇಕೆಂಬುದು ಹಂಬಲ. ಅದಕ್ಕೆ ಪ್ರೋತ್ಸಾಹ ನೀಡಿದ್ದು ವಿರಾಜ್ ಮೆಂಡನ್. ಆತ ಈಗ ನಮ್ಮಗಲಿದ್ದಾನೆ. ಚಿಕ್ಕಂದಿನಿಂದಲೂ ಅಂದರೆ ಮೂರನೇ ತರಗತಿಯಿಂದಲೂ ನನ್ನ ಮಗಳನ್ನು ತರಬೇತಿಗೆ ಕರೆದೊಯ್ಯುತ್ತಿದ್ದ. ವಿಕಾಸ್ ಕೂಡ ಮಾನ್ಸಿಯ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇದರಿಂದಾಗಿ ಮಾನ್ಸಿ ಉತ್ತಮ ಬಾಕ್ಸರ್ ಆಗಲು ಸಾಧ್ಯವಾಯಿತು. ಆಕೆ ಪದಕ ಗೆದ್ದಿರುವುದು ನಮ್ಮ ಊರಿನಲ್ಲಿ ಸಂಭ್ರಮ ಮನೆ ಮಾಡಿದೆ. ಇದುವರೆಗೂ ಈ ಸಾಧನೆ ಯೂರೂ ಮಾಡಿರಲಿಲ್ಲ ಎಂಬುದು ಗೊತ್ತಾಯಿತು. ಆಕೆ ಇನ್ನೂ ಹೆಚ್ಚಿನ ಸಾಧನೆ ಮಾಡಲು ನಮ್ಮ ಕರ್ತವ್ಯ,” ಎಂದರು.


