Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಟ್ರೈಬಲ್‌ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದ ಬೈಂದೂರಿನ ಲಿಫ್ಟರ್‌ ಮಂಜುನಾಥ್

ರಾಯ್ಪುರ: ಖೇಲೋ ಇಂಡಿಯಾ ಟ್ರೈಬಲ್‌ ಗೇಮ್ಸ್‌ನ ವೇಟ್‌ಲಿಫ್ಟಿಂಗ್‌ನಲ್ಲಿ ಕರ್ನಾಟಕದ ಉಡುಪಿ ಜಿಲ್ಲೆಯ ಬೈಂದೂರಿನ ಚಿಕ್ಕ ಗ್ರಾಮ ಎಳಜಿತದ ವೇಟ್‌ಲಿಫ್ಟರ್‌ ಮಂಜುನಾಥ್‌ ಮರಾಟಿ ಬೆಳ್ಳಿ ಪದಕ ಗೆದ್ದ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. Manjunath Marati, a weightlifter from a small village in Byndoor, Udupi district of Karnataka, has brought glory to the state by winning a silver medal in weightlifting at the Khelo India Tribal Games.

ಬೈಂದೂರಿನ ಬಚ್ಚ ಮರಾಟಿ ಹಾಗೂ ಪರಮೇಶ್ವರಿ ಅವರ ಮಗ ಮಂಜುನಾಥ್‌ ಈಗಾಗಲೇ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಿಂಚಿ ರಾಜ್ಯಕ್ಕೆ ಕೀರ್ತಿ ತಂದಿರುತ್ತಾರೆ. ಶುಕ್ರವಾರ ರಾಯ್ಪುರದ ಪಂಡಿತ್‌ ರವಿಶಂಕರ್‌ ಶುಕ್ಲಾ ವಿಶ್ವವಿದ್ಯಾನಿಲಯದಲ್ಲಿ ನಡೆದ ಮೊದಲ ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟದ 61ಕೆಜಿ ವಿಭಾಗದಲ್ಲಿ ಎರಡನೇ ಸ್ಥಾನ ಗಳಿದಿ  ಬೆಳ್ಳಿ ಪದಕ ಗೆದ್ದರು.

ಕ್ರೀಡಾ ಸಾಧನೆಯ ಮೂಲಕ ಈಗಾಗಲೇ ರೇಲ್ವೆಯಲ್ಲಿ ಉದ್ಯೋಗಿಯಾಗಿರುವ ಮಂಜುನಾಥ್‌, ಕೊಲ್ಲೂರಿನ ಶ್ರೀ ಮೂಕಾಂಬಿಕಾ ಪ್ರೌಢ ಶಾಲೆ ಕೊಲ್ಲೂರು, ಪಿಯುಸಿ ಶಿಕ್ಷಣವನ್ನು ಕೊಲ್ಲೂರು ಶ್ರೀ ಮೂಕಾಂಬಿಕಾ ಪದವಿಪೂರ್ವ ಕಾಲೇಜು ಹಾಗೂ ಪದವಿಯನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಇಲ್ಲಿ ಪೂರ್ಣಗೊಳಿಸಿರುತ್ತಾರೆ.

ಬಡತನದ ನಡುವೆಯೂ ಕ್ರೀಡೆಯನ್ನು ಮೈಗೂಡಿಸಿಕೊಂಡಿದ್ದರಿಂದ ಇಂದು ಮಂಜುನಾಥ್‌ ರಾಷ್ಟ್ರ ಮಟ್ಟದ ವೇಟ್‌ಲಿಫ್ಟಿಂಗ್‌ನಲ್ಲಿ ಮಿಂಚುತ್ತಿದ್ದಾರೆ. ಬುಡಕಟ್ಟು ಕ್ರೀಡಾಕೂಟದಲ್ಲಿ  ಮಂಜುನಾಥ್‌, ಸ್ಯಾಚ್‌, ಕ್ಲೀನ್‌ & ಜೆರ್ಕ್‌ನಲ್ಲಿ ಒಟ್ಟು 271 ಕೆಜಿ ಭಾರವೆತ್ತಿ ಎರಡನೇ ಸ್ಥಾನಿಯಾದರು.

ರಾಜ್ಯಮಟ್ಟದಲ್ಲಿ ಹಲವಾರು ಬಾರಿ ಚಿನ್ನದ ಪದಕಗಳನ್ನು ಗೆದ್ದಿರುವ ಮಂಜುನಾಥ್‌, ಅಂತರ್‌ ವಿವಿಯಲ್ಲೂ  ಎರಡು ಬಾರಿ ಚಿನ್ನ ಗೆದ್ದಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಚಿನ್ನ ಸೇರಿ ಹತ್ತು ಪದಕಗಳನ್ನು ಗೆದ್ದಿರುವ ಮಂಜುನಾಥ್‌ ಅವರ ಕ್ರೀಡಾ ಸಾಧನೆಯ ಆಧಾರ ಮೇಲೆ ರೇಲ್ವೆಯಲ್ಲಿ ಉದ್ಯೋಗ ದೊರಕಿದೆ.

ಕಾಮನ್ವೆಲ್ತ್‌ ಪದಕ ವಿಜೇತ ಗುರುರಾಜ್‌ ಪ್ರೇರಣೆ: ಕುಂದಾಪುರ ತಾಲೂಕಿನ ವಂಡ್ಸೆಯವರಾದ ಗುರುರಾಜ್‌ ಪೂಜಾರಿ ಅವರು ಕಾಮನ್ವೆಲ್ತ್‌ ಕ್ರೀಡಾಕೂಟದ ವೇಟ್‌ಲಿಫ್ಟಿಂಗ್‌ನಲ್ಲಿ ಒಂದು ಬೆಳ್ಳಿ ಹಾಗೂ ಒಂಚು ಕಂಚಿನ ಪದಕ ಗೆದ್ದಿದ್ದರು. ಗುರುರಾಜ್‌ ತಾವು ಪದಕ ಗೆದ್ದು ಸುಮ್ಮನಿರಲಿಲ್ಲ. ಬದಲಾಗಿ ತಮ್ಮ ಸುತ್ತಮುತ್ತಲಿರುವ ಯುವಕರಿಗೆ ಕ್ರೀಡೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರಣೆ ನೀಡಿದರು. ಅವರು ನೀಡಿದ ಪ್ರೇರಣೆಯಿಂದಾಗಿ ಕರ್ನಾಟಕ ರಾಜ್ಯ ಮತ್ತೊಬ್ಬ ವೇಟ್‌ಲಿಫ್ಟರ್‌ನನ್ನು ಕಾಣುವಂತಾಯಿತು. ಮಾತ್ರವಲ್ಲ ಪದಕವನ್ನೂ ಗೆಲ್ಲುವಂತಾಯಿತು. ಗ್ರಾಮೀಣ ಪ್ರದೇಶದ ಕ್ರೀಡಾಪಟುವೊಬ್ಬರು ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಿದರೆ ಅದು ಆ ಊರಿನ ಯುವಕರಲ್ಲಿ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುಕ್ಕೆ ಗುರುರಾಜ್‌ ಉತ್ತಮ ನಿದರ್ಶನ. ಅವರ ಪ್ರೇರಣೆಯನ್ನು ಮಂಜುನಾಥ್‌ ಮರಾಟಿ ಸ್ಮರಿಸಿದ್ದಾರೆ. “ನನ್ನನ್ನು ವೇಟ್‌ಲಿಫ್ಟಿಂಗ್‌ಗೆ ಕರೆದು ತಂದಿದ್ದೇ ಗುರುರಾಜ್‌ ಮತ್ತು ಹಿರಿಯ ವೇಟ್‌ಲಿಫ್ಟರ್‌ ಅರುಣ್‌. ಗುರುರಾಜ್‌ ನನ್ನನ್ನು ಕರೆದು ವೇಟ್‌ಲಿಫ್ಟಿಂಗ್‌ಗೆ ಸೇರು, ಇದರಿಂದ ಬದುಕು ಕಟ್ಟಿಕೊಳ್ಳಬಹುದು ಎಂದು ಪ್ರೋತ್ಸಾಹಿಸಿದರು. ಮಾತ್ರವಲ್ಲ ಎಲ್ಲ ರೀತಿಯ ನೆರವನ್ನು ನೀಡಿದರು,” ಎಂದು ಮಂಜುನಾಥ್‌ ಕಾಮನ್ವೆಲ್ತ್‌ ಪದಕ ವಿಜೇತ ಗುರುರಾಜ್‌ ಪೂಜಾರಿ ಅವರನ್ನು ಸ್ಮರಿಸಿದ್ದಾರೆ.

ಪುಟ್ಟ ಕೃಷಿಭೂಮಿ ಹೊಂದಿರುವ ಮಂಜುನಾಥ್‌ ಮರಾಟಿ ಅವರ ಕುಟುಂಬ ಕ್ರೀಡಾ ಸಾಧನೆಯಿಂದಾಗಿ ಇಂದು ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಸಮುದಾಯದ ಯುವಕರು ಉತ್ತಮ ಆರೋಗ್ಯ ಹಾಗೂ ಬದುಕನ್ನು ಕಟ್ಟಿಕೊಳ್ಳಲು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮಂಜುನಾಥ್‌ ಸಲಹೆ ನೀಡಿದ್ದಾರೆ. “ಕ್ರೀಡೆ ನಮಗೆ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ನೆರವಾಗುತ್ತದೆ. ಶಿಸ್ತಿನಿಂದ ಬದುಕಲು ಕ್ರೀಡೆ ಸಹಾಯ ಮಾಡುತ್ತದೆ. ಬುಡಕಟ್ಟು ಕ್ರಿಡಾಕೂಟ ಒಂದು ಸಮುದಾಯ ಅಭಿವೃದ್ಧಿ ಹೊಂದಲು ವೇದಿಕೆಯಾಗಿದೆ. ಬಡಕಟ್ಟಿನ ಯುವಕರು ಈ  ರೀತಿ ಕ್ರೀಡೆಯಲ್ಲಿ ತೊಡಗಿಸಕೊಂಡರೆ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ,” ಎಂದು ಮಂಜುನಾಥ್‌ ಹೇಳಿದರು.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.