Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಪಡುಕರೆ ಕಾಲೇಜಿಗೆ ಕೀರ್ತಿ ತಂದ ಪವರ್‌ಲಿಫ್ಟಿಂಗ್‌ ಸ್ಟಾರ್‌ ಜೆ. ರಕ್ಷಾ

ಕೋಟ: ಓದಿನ ಜೊತೆಯಲ್ಲಿ ವಿದ್ಯಾರ್ಥಿಗಳು ಕ್ರೀಡೆಯಲ್ಲೂ ತಮ್ಮನ್ನು ತೊಡಗಿಸಿಕೊಂಡು, ಸಾಧನೆ ಮಾಡಿದರೆ ಆ ಯಶಸ್ಸಿನ ಫಲ ಬದುಕಿನ ಹಾದಿಯಲ್ಲಿ ನೆರವಿಗೆ ಬರುತ್ತದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟ ಪಡುಕರೆಯ ಲಕ್ಷ್ಮೀ ಸೋಮಬಂಗೇರ ಪ್ರಥಮದರ್ಜೆ ಕಾಲೇಜಿನ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿನಿ ಜಗದೀಶ್‌ ರಕ್ಷಾ ಅವರು ಪವರ್‌ಲಿಫ್ಟಿಂಗ್‌ನಲ್ಲಿ ಚಿನ್ನದ ಸಾಧನೆ ಮಾಡಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. Mangalore University Inter College Powerlifting J. Raksha of LSBGFC Kota Padukare won the Gold Medal.

ಇತ್ತೀಚಿಗೆ ಬ್ರಹ್ಮಾವರದ ಎಸ್‌ಎಂಎಸ್‌ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ ಕಾಲೇಜು ಪವರ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಸ್ಕ್ವಾಟ್‌ 135 ಕೆಜಿ, ಬೆಂಚ್‌ 45 ಕೆಜಿ ಹಾಗೂ ಡೆಡ್‌ಲಿಫ್ಟ್‌ನಲಿ 117.5 ಕೆಜಿ ಭಾರವೆತ್ತಿರುವ ಜೆ. ರಕ್ಷಾ ಅಖಿಲ ಭಾರತ ಅಂತರ್‌ ವಿವಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದರು.

ಕುಂಬಾಶಿಯ ಜಗದೀಶ ಹಾಗೂ ಗಾಯತ್ರಿ ದಂಪತಿಯ ಮಗಳಾಗಿರುವ ರಕ್ಷಾ ಶಿಕ್ಷಣದ ಜೊತೆಯಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡಬೇಕೆಂಬ ಹಂಬಲದೊಂದಿಗೆ ಪವರ್‌ಲಿಫ್ಟಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಕೇವಲ ಒಂದು ವರ್ಷದಲ್ಲಿಯೇ ರಕ್ಷಾ ತೋರಿರುವ ಸಾಧನೆಯನ್ನು ಗಮನಿಸಿದಾಗ ಇನ್ನೂ ಉತ್ತಮ ರೀತಿಯಲ್ಲಿ ತರಬೇತಿ ನೀಡಿದರೆ ಅವರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಇನ್ನೂ ಹೆಚ್ಚಿನ ಪದಕಗಳನ್ನು ಗೆಲ್ಲುವ ಸಾಮರ್ಥ್ಯ ಹೊಂದಿರುವ ಲಿಫ್ಟರ್‌. ಈಗಾಗಲೇ 1 ಚಿನ್ನ, 1 ಬೆಳ್ಳಿ ಹಾಗೂ 2 ಕಂಚಿನ ಪದಕ ಗೆದ್ದಿರುವ ರಕ್ಷಾ ಇದೇ ತಿಂಗಳು ಮಂಗಳೂರಿನಲ್ಲಿರುವ ರಾಜ್ಯ ಮಟ್ಟದ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಲಿದ್ದಾರೆ.

76 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ರಕ್ಷಾ, “ಕಾಲೇಜಿನಲ್ಲಿ ಉತ್ತಮ ಪ್ರೋತ್ಸಾಹ ಸಿಕ್ಕಿದೆ, ಮೊದಲು ಬ್ರಹ್ಮಾವರದ ವೀರಮಾರುತಿಯಲ್ಲಿ ತರಬೇತಿ ಪಡೆಯುತ್ತಿದ್ದೆ, ಈಗ ಸಾಲಿಗ್ರಾಮದ ರಾ ಫಿಟ್ನೆಸ್‌ನಲ್ಲಿ ರೋಶನ್‌ ಹಾಗೂ ಮಹೇಶ್‌ ತರಬೇತಿ ನೀಡುತ್ತಿದ್ದಾರೆ. ಓದಿನ ಜೊತೆಯಲ್ಲಿ ಕ್ರೀಡೆಯಲ್ಲೂ ಸಾಧನೆ ಮಾಡಬೇಕೆಂಬ ಹಂಬಲ ಇದೆ. ಅದಕ್ಕೆ ಪೂರಕವಾಗಿ ನಿರಂತರ ಅಭ್ಯಾಸ ನಡೆಸುವೆ,” ಎಂದಿದ್ದಾರೆ.

ಪ್ರಾಂಶುಪಾಲ ರಾಜೇಂದ್ರ ನಾಯಕ್‌ ಅಭಿನಂದನೆ:  ಜೆ. ರಕ್ಷಾ ಅವರು ಪವರ್‌ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದಿರುವುದಕ್ಕೆ ಕಾಲೇಜಿನ ಪ್ರಾಂಶುಪಾಲರಾದ ರಾಜೇಂದ್ರ ಎಸ್‌. ನಾಯಕ್‌ ಅಭಿನಂದನೆ ಸಲ್ಲಿಸಿದ್ದಾರೆ. “ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ನೀಡಿದರೆ ಅವರು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ಈ ನಿಟ್ಟಿನಲ್ಲಿ ನಮ್ಮ ಕಾಲೇಜು ದೈಹಿಕ ಶಿಕ್ಷಣಕ್ಕೂ ಹೆಚ್ಚಿನ ಒತ್ತು ನೀಡುತ್ತ ಬಂದಿದೆ. ಜೆ, ರಕ್ಷಾ ಅವರು ಚಿನ್ನದ ಸಾಧನೆ ಮಾಡಿ ಕಾಲೇಜಿಗೆ, ಊರಿಗೆ ಕೀರ್ತಿ ತಂದಿದ್ದಾರೆ. ಅವರಿಗೆ ಅಭಿನಂದನೆಗಳು. ಅದೇ ರೀತಿಯ ನಮ್ಮ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿ ನಾಗೇಂದ್ರ ದೇಹದಾರ್ಢ್ಯದಲ್ಲಿ ಚಿನ್ನದ ಪದಕ, ಎರಡನೇ ವರ್ಷದ ವಿದ್ಯಾರ್ಥಿ ಸಾಗರ್‌ ಕಂಚಿನ ಪದಕ ಹಾಗೂ ನಾಲ್ಕನೇ ಸ್ಥಾನ ಗೆದ್ದಿರುವ ಕಬಡ್ಡಿ ತಂಡಕ್ಕೂ ಅಭಿನಂದನೆಗಳು. ಈ ಕ್ರೀಡಾ ಸಾಧಕರು ಮುಂದಿನ ಹಂತದಲ್ಲೂ ಯಶಸ್ಸು ಕಾಣಲಿ” ಎಂದು ಶುಭ ಹಾರೈಸಿದ್ದಾರೆ.


administrator