Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಟ್ರೈಬಲ್ ಗೇಮ್ಸ್‌ನಲ್ಲಿ ಕರ್ನಾಟಕದ ಒಂಟಿ ಬಿಲ್ಗಾರ ಮಲ್ಲಿಕಾರ್ಜುನ

ರಾಯ್ಪುರ: ಖೇಲೋ ಇಂಡಿಯಾ ಟ್ರೈಬಲ್‌ ಗೇಮ್ಸ್‌ನಲ್ಲಿ ಮಂಗಳವಾರದಿಂದ ಆರ್ಚರಿ (ಬಿಲ್ಗಾರಿಕೆ) ಸ್ಪರ್ಧೆಗಳು ಆರಂಭ. ಸುಮಾರು ಇನ್ನೂರಕ್ಕೂ ಹೆಚ್ಚು ಸ್ಪರ್ಧಿಗಳ ಪಟ್ಟಿಯನ್ನು ಕಂಡಾಗ ಕರ್ನಾಟಕದಿಂದ ಒಬ್ಬರು, ಇಡೀ ದಕ್ಷಿಣ ಭಾರತದಿಂದ ಇಬ್ಬರು ಪಾಲ್ಗೊಳ್ಳುತ್ತಿರುವುದು ಗಮನಕ್ಕೆ ಬಂತು, ಕರ್ನಾಟಕ ರಾಜ್ಯ ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಚಾಮರಾಜನಗರ ಕ್ರೀಡಾ ಹಾಸ್ಟೆಲ್‌ನಲ್ಲಿ ತರಬೇತಿ ಪಡೆಯುತ್ತಿರುವ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹಳ್ಳಿ ದೇವಪುರದ ಬಿಲ್ಗಾರ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಏಕೈಕ ಬಿಲ್ಗಾರ. Mallikarjuna, from the Valmiki community in Yadgir district of Karnataka, is the only archer representing Karnataka in the Khelo India Tribal Games archery competition.

ವಾಲ್ಮೀಕಿ ಸಮುದಾಯದ ಮಲ್ಲಿಕಾರ್ಜುನ ದೆಹಲಿಯಲ್ಲಿ ನಡೆದ ಖೇಲೋ ಇಂಡಿಯಾ ಅರ್ಹತಾ ಸುತ್ತಿನಲ್ಲಿ ಪಾಲ್ಗೊಂಡು ರಾಜ್ಯದಿಂದ ಆಯ್ಕೆಯಾದ ಏಕೈಕ ಬಿಲ್ಗಾರ ಎನಿಸಿದ್ದಾರೆ. ಸುಮಾರು ಆರೇಳು ಬಿಲ್ಗಾರರು ಅರ್ಹತೆಯಲ್ಲಿ ಪಾಲ್ಗೊಂಡಿದ್ದರು. ಹೆಚ್ಚಿವನರು ಒಂದು ಅಂಕದಿಂದ ಅರ್ಹತೆ ಪಡೆಯುವಲ್ಲಿ ವಿಫಲರಾಗಿರುವುದನ್ನು ಮಲ್ಲಿಕಾರ್ಜುನ ಈ ಸಂದರ್ಭದಲ್ಲಿ ತಿಳಿಸಿದರು.

ರಿಕರ್ವ್‌ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಮಲ್ಲಿಕಾರ್ಜುನ, ಓದು ಮತ್ತು ಬಿಲ್ಗಾರಿಕೆ ಎರಡನ್ನೂ ಸರಿದೂಗಿಸುವುದು ಕಷ್ಟ, ಇದರಿಂದಾಗಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. “ಕರ್ನಾಟಕದಲ್ಲಿ ಆರ್ಚರಿಯ ಯಶಸ್ಸು ಬಹಳ ವಿರಳವಾಗಿದೆ. ಇಲ್ಲಿ ಕಾಲೇಜಿಗೆ ಬಿಡುವಿದ್ದಾಗ ಮಾತ್ರ ತರಬೇತಿಗೆ ಅವಕಾಶ ಸಿಗುತ್ತದೆ. ಬೇರೆ ರಾಜ್ಯಗಳಲ್ಲಿ ನಿರಂತರವಾಗಿ ಅಭ್ಯಾಸಕ್ಕೆ ಅವಕಾಶವಿದೆ. ನಮ್ಮ ರಾಜ್ಯದಲ್ಲಿ 25ಕ್ಕೆ ಹೆಚ್ಚು ವಿದ್ಯಾರ್ಥಿಗಳು ಬಿಲ್ಗಾರಿಕೆ ತರಬೇತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಭ್ಯಾಸಕ್ಕೆ ಹೆಚ್ಚು ಕಾಲಾವಕಾಶ ಸಿಕ್ಕರೆ ಉತ್ತಮ ಪ್ರದರ್ಶನ ತೋರಲು ಸಾಧ್ಯವಾಗುತ್ತದೆ,” ಎಂದು ಮಲ್ಲಿಕಾರ್ಜುನ ಹೇಳಿದ್ದಾರೆ. ಮಲ್ಲಿಕಾರ್ಜುನ ಅವರ ತರಬೇತುದಾರರಾದ ಸುಜಿತ್‌ ಕೆ ಎಸ್‌ ಅವರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಆರ್ಚರಿ ಕ್ರೀಡೆಗೆ ನಿರಂತರ ಅಭ್ಯಾಸದ ಅಗತ್ಯವಿದೆ. ಇದು ಗುರಿಯನ್ನು ಆಧರಿಸಿದ ಕ್ರೀಡೆಯಾದ ಕಾರಣ ಅಭ್ಯಾಸ ನಿರಂತರವಾಗಿ ಬೇಕು. ಶಿಕ್ಷಣ ಹಾಗೂ ಬಿಲ್ಗಾರಿಕೆ ಎರಡನ್ನೂ ಏಕಕಾಲದಲ್ಲಿ ನಿಭಾಯಸಬೇಕೆಂದರೆ ಕಷ್ಟವಾಗುತ್ತದೆ. ತರಬೇತಿಗೆ ಹೆಚ್ಚು ಸಮಯ ಬೇಕಾಗುತ್ತದೆ. ಆರ್ಚರಿ ಉಪಕರಣಗಳಲ್ಲೂ ಸುಧಾರಣೆಗಳಾಗುತ್ತಿವೆ, ಅವುಗಳನ್ನೂ ಬದಲಾವಣೆ ಕಂಡುಕೊಂಡು ಹೊಸತನಕ್ಕೆ ಒಗ್ಗಿಕೊಳ್ಳಬೇಕಾಗಿದೆ. ನಮ್ಮ ಕ್ರೀಡಾ ಇಲಾಖೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಕರ್ನಾಟಕ ಉತ್ತಮ ತಂಡವನ್ನು ಕಟ್ಟಲಿದೆ,” ಎಂದು ಸುಜಿತ್‌ ಹೇಳಿದ್ದಾರೆ.

ಸದ್ಯ ಕರ್ನಾಟಕದ ಬಿಲ್ಗಾರರು ಬಳಸುತ್ತಿರುವುದು ಆರೇಳು ವರ್ಷಗಳ ಹಿಂದಿ ಬಿಲ್ಲು ಬಾಣಗಳು. ಇವುಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಸುಧಾರಣೆಯಾಗಿವೆ. ಹಿಂದಿನ ವರ್ಷಗಳಲ್ಲಿ ಓದಿದ್ದ ಬಿಲ್ಗಾರರು ಬಳಸಿದ್ದ ಬಿಲ್ಲು ಬಾಣಗಳನ್ನೇ ಬಳಸಬೇಕಾಗಿದೆ. ಇದಕ್ಕೆ ಬಳಸುವ ಚಿಕ್ಕಪುಟ್ಟ ಉಪಕರಣಗಳನ್ನು ಬದಲಾಯಿಸುತ್ತಿರಬೇಕು. ಅಭ್ಯಾಸಕ್ಕೆ ಹೆಚ್ಚಿನ ಕಾಲಾವಕಾಶ ಬೇಕಿದೆ. ಕ್ರೀಡಾಪಟುಗಳಿಗೆ ಶೇ25 ರಷ್ಟು ಹಾಜರಾತಿ ನೀಡಿಕೆ ಹಾಗೂ 10 ಗ್ರೇಸ್‌ ಮಾರ್ಕ್‌ ನೀಡುವ ಬಗ್ಗೆ ವರದಿ ಆಗಿತ್ತು. ಆದರೆ ಆ ವರದಿ ಕಾರ್ಯರೂಪಕ್ಕೆ ಬಂದಿದ್ದರೆ ಇಂಥ ಸಮಸ್ಯೆಗಳು ಉದ್ಭವ ಆಗುತ್ತಿರಲಿಲ್ಲ.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.