Friday, February 23, 2024

ಹೊಟೇಲ್‌ನಲ್ಲಿ ದುಡಿಯುತ್ತ ಅಂತಾರಾಷ್ಟ್ರೀಯ ರೆಫರಿಯಾದ ಕುಂಭಾಶಿಯ ಸುಬ್ರಹ್ಮಣ್ಯ ಹತ್ವಾರ್‌

ಸೋಮಶೇಖರ್‌ ಪಡುಕರೆ, ಬೆಂಗಳೂರು

ಓದಿದ್ದು ಎಂಎಸ್‌ಸಿ, ಆಸಕ್ತಿ ವೇಟ್‌ಲಿಫ್ಟಿಂಗ್‌ ಆದರೆ ಹೊಟೇಲ್‌ ಉದ್ಯಮಕ್ಕೆ ಅನಿವಾರ್ಯವಾಗಿ ಒಗ್ಗಿಕೊಳ್ಳಬೇಕಾದ ಪರಿಸ್ಥಿತಿ. ಹೀಗೆ ಓದು, ವೃತ್ತಿ ಹಾಗೂ ಪ್ರವೃತ್ತಿ ಬೇರೆ ಬೇರೆಯಾದರೂ ಕುಂಭಾಶಿಯ ಸುಬ್ರಹ್ಮಣ್ಯ ಹತ್ವಾರ್‌ ಭಾರತದ ಕ್ರೀಡಾ ಇತಿಹಾದಲ್ಲಿ ಹೊಸ ಅಧ್ಯಾಯವನ್ನೇ ಬರೆದು, ಈ ದೇಶದ ಕಂಡ ಉತ್ತಮ ವೇಟ್‌ಲಿಫ್ಟಿಂಗ್‌ ರೆಫರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕುಂಭಾಶಿಯರಾದ ಸುಬ್ರಹ್ಮಣ್ಯ ಹತ್ವಾರ್‌, ಸತತ ಎರಡು ಒಲಿಂಪಿಕ್ಸ್‌ಗಳಲ್ಲಿ ವೇಟ್‌ಲಿಫ್ಟಿಂಗ್‌ ರೆಫರಿಯಾಗಿ ಕಾರ್ಯನಿರ್ವಹಿಸಿದ ಭಾರತದ ಎರಡನೇ ಅಂತಾರಾಷ್ಟ್ರೀಯ ರೆಫರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಾಲಿವುಡ್‌ನ ಮಾಜಿ ನಟ ಡೇವಿಡ್‌ ಅಬ್ರಾಹಂ ಸತತ ಎರಡು ಒಲಿಂಪಿಕ್ಸ್‌ಗಳಲ್ಲಿ ರೆಫರಿಯಾಗಿ ಕಾರ್ಯನಿರ್ವಹಿಸಿದವರಲ್ಲಿ ಮೊದಲಿಗರೆನಿಸಿದ್ದಾರೆ. 68 ವರ್ಷ ಪ್ರಾಯದ ಸುಬ್ರಹ್ಮಣ್ಯ ಹತ್ವಾರ್‌ ಕುಂಭಾಶಿ ಅವರು ಈಗಲೂ ದೇಶದ ಶ್ರೇಷ್ಠ ಅಂತಾರಾಷ್ಟ್ರೀಯ ವೇಟ್‌ಲಿಫ್ಟಿಂಗ್‌ ರೆಫರಿ ಎನಿಸಿದ್ದಾರೆ.

ಸಹ್ಯಾದ್ರಿಯ ಮಡಿಲಲ್ಲಿ ಅರಳಿದ ಪ್ರತಿಭೆ:

ಸುಬ್ರಹ್ಮಣ್ಯ ಅವರ ತಂದೆ ವಾದಿರಾಜ ರಾವ್‌ ಶಿವಮೊಗ್ಗದಲ್ಲಿ ಶ್ರೀರಾಮ ಪ್ರಸನ್ನ ಎಂಬ ಹೊಟೇಲ್‌ ನಡೆಸುತ್ತಿದ್ದರು. ಸಹ್ಯಾದ್ರಿ ಕಾಲೇಜಿನಲ್ಲಿ ಬಿಎಸ್‌ಸಿ ಓದುತ್ತಿದ್ದ ಸುಬ್ರಹ್ಮಣ್ಯ ಅವರಿಗೆ ಒಂದು ದಿನ ಸಂಜೆ ಕಾಲೇಜು ಕ್ರೀಡಾಂಗಣದಲ್ಲಿ ವೇಟ್‌ಲಿಫ್ಟಿಂಗ್‌ ಆಯ್ಕೆ ಟ್ರಯಲ್ಸ್‌ ನಡೆಯುತ್ತಿರುವುದು ಗಮನಕ್ಕೆ ಬಂತು. ಆಯ್ಕೆ ಟ್ರಯಲ್ಸ್‌ ಮುಗಿಯುವವರೆಗೂ ಅಲ್ಲಿ ಭಾರ ಎತ್ತುತ್ತಿರುವುದನ್ನು ಗಮನಿಸಿದರು. ಕ್ರೀಡೆಯಲ್ಲಿ ಪಾಲ್ಗೊಂಡರೆ ಇಂಥಹ ಸವಾಲಿನ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕೆಂದು ಮನದಲ್ಲೇ ಅಂದುಕೊಂಡರು, ಆಯ್ಕೆ ಟ್ರಯಲ್ಸ್‌ನಲ್ಲಿ ಶಿವಮೊಗ್ಗದ ಪುಲಿಕೇಶಿ ವ್ಯಾಯಾಮ ಶಾಲೆಯ ತರಬೇತುದಾರರು ಬಂದಿದ್ದರು. ಇದರಿಂದ ಪ್ರೇರಿತರಾದ ಸುಬ್ರಹ್ಮಣ್ಯ ಪುಲಿಕೇಶಿ ಜಿಮ್‌ ಸೇರಿದರು. 1973ರಲ್ಲಿ ಅಂದರೆ ತಮ್ಮ 19ನೇ ವಯಸ್ಸಿನಲ್ಲಿ ದಾವಣಗೆರೆ ಮತ್ತು ಶಿವಮೊಗ್ಗ ವ್ಯಾಪ್ತಿಯಲ್ಲಿ ನಡೆದ ವೇಟ್‌ಲಿಫ್ಟಿಂಗ್‌ನಲ್ಲಿ ಸ್ಪರ್ಧಿಸಿ ಕಂಚಿನ ಪದಕ ಗಳಿಸಿದರು.

ಬೆಂಗಳೂರಿನಲ್ಲಿ ಮಿಂಚಿದ ಸುಬ್ರಹ್ಮಣ್ಯ:

1974ರಲ್ಲಿ ಪದವಿ ಮುಗಿಸಿದ ಸುಬ್ರಹ್ಮಣ್ಯ ಅವರು ಎಂಎಸ್‌ಸಿ ಮಾಡಲು ಬೆಂಗಳೂರಿಗೆ ಆಗಮಿಸಿದರು. ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡು ಎರಡು ವರ್ಷಗಳ ಕಾಲ ಎಂಎಸ್‌ಸಿ ಪೂರ್ಣಗೊಳಿಸಿದರು. ಈ ನಡುವೆ ಮೂರ್ನಾಲ್ಕು ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ಗಳಲ್ಲಿ ಪಾಲ್ಗೊಂಡು ಪದಕ ಗೆದ್ದುಕೊಂಡಿದ್ದರು. 1976ರಲ್ಲಿ ರಾಜ್ಯ ಜೂನಿಯರ್‌  ಚಾಂಪಿಯನ್‌ ಪಟ್ಟ ಗೆದ್ದರು. ಓದಿನ ನಡುವೆ  ಬೆಂಗಳೂರಿನ ಹನುಮಾನ್‌ ಜಿಮ್ನಾಷಿಯಂನಲ್ಲಿ ತರಬೇತಿ ಮುಂದುವರಿಸಿದರು. ಅವಕಾಶ ಸಿಕ್ಕಾಗೆಲ್ಲ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಆಗ ಬೆಂಗಳೂರು ಮೆಡಿಕಲ್‌ ಕಾಲೇಜಿನ ಎದುರಿಗಿದ್ದ ಕೋಟೆ ಹೈಸ್ಕೂಲು ಮೈದಾನಲದಲ್ಲಿ ಅಮೇಚೂರ್‌ ಬಾರ್‌ಬೆಲ್‌ ತರಬೇತಿ ಕೇಂದ್ರದಲ್ಲಿ ಸಿ.ವಿ. ಸುಬ್ರಹ್ಮಣ್ಯಂ ಎಂಬುವರು ತರಬೇತಿ ನೀಡುತ್ತಿದ್ದರು. ರಾಜಾಜಿನಗರದಲ್ಲಿ ಗಜರಾಜ್‌ ಅವರಿಗೆ ಸೇರಿದ್ದ ಹರ್ಕ್ಯುಲಸ್‌ ಬಾರ್‌ಬೆಲ್‌ ಕ್ಲಬ್‌, ಮಂಗಳೂರಿನ ಬಾಲಾಂಜನೇಯ ವ್ಯಾಯಾಮ ಶಾಲೆ, ಬಾಲ ಮಾರುತಿ ವ್ಯಾಯಾಮಶಾಲೆ, ಶಿವಮೊಗ್ಗದ ಪುಲಿಕೇಶಿ ವ್ಯಾಯಾಮ ಶಾಲೆ ಮತ್ತು ದಾವಣಗೆರೆಯ ಬೀರೇಶ್ವರ ವ್ಯಾಯಾಮ ಶಾಲೆಗಳು ರಾಜ್ಯ ವೇಟ್‌ಲಿಫ್ಟಿಂಗ್‌ ಸಂಸ್ಥೆಯಲ್ಲಿ ನೋದಾಯಿತ ಕ್ಲಬ್‌ಗಳಾಗಿದ್ದವು. ಇಲ್ಲಿಯ ಸ್ಪರ್ಧಿಗಳು ಸುಬ್ರಹ್ಮಣ್ಯ ಅವರ ಮೇಲೆ ಹೆಚ್ಚಿನ ಪ್ರಭಾವ ಬೀರಿದ್ದು ಮುಂದಿನ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಂತಾಯಿತು. 1976ರಲ್ಲಿ ಮೊದಲ ಬಾರಿಗೆ ರಾಜ್ಯ ಮಟ್ಟದಲ್ಲಿ ಹಿರಿಯರೊಂದಿಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿತು.

 

ತಂದೆಯ ಸಾವಿನ ದುರಂತ: ಗಂಭೀರ ಕಾಯಿಲೆಗೆ ತುತ್ತಾದ ವಾದಿರಾಜ ರಾವ್‌ 50ನೇ ವಯಸ್ಸಿನಲ್ಲಿ ನಿಧನರಾದದ್ದು ಸುಬ್ರಹ್ಮಣ್ಯ ಅವರ ಕ್ರೀಡಾ ಬದುಕನ್ನೇ ಕಸಿದುಕೊಳ್ಳುವಂತೆ ಮಾಡಿತು. 1976ರಲ್ಲಿ ಎಂಎಸ್‌ಸಿ ಮುಗಿಸಿ ಶಿವಮೊಗ್ಗಕ್ಕೆ ಬಂದಿಳಿದಾಗ ದಿಕ್ಕುದೋಚದಾಯಿತು. ಒಂದೆಡೆ ತಂದೆಯ ಸಾವು, ಇನ್ನೊಂದೆಡೆ ನಿಂತು ಹೋಗುವ ಹೊಟೇಲ್‌, ಪಿಯುಸಿ ಓದುತ್ತಿದ್ದ ತಮ್ಮನ ಶಿಕ್ಷಣ, ಮದುವೆಯಾಗಿರದ ತಂಗಿ ಹೀಗೆ ಹಲವು ಜವಾಬ್ದಾರಿಗಳು 23 ವರ್ಷ ಪ್ರಾಯದ ಸುಬ್ರಹ್ಮಣ್ಯ ಅವರನ್ನು ಯೋಚಿಸುವಂತೆ ಮಾಡಿತು, ಸ್ವಲ್ಪ ಸಮಯ ವೇಟ್‌ಲಿಫ್ಟಿಂಗ್‌ನಿಂದ ದೂರ ಉಳಿದರು. ಮನೆಯವರನ್ನು ಆರೈಕೆ ಮಾಡುವ ದೃಷ್ಟಿಯಿಂದ ಸ್ನಾತಕೋತ್ತರ ಪದವಿಯನ್ನು ಬದಿಗಿಟ್ಟು ಶ್ರೀರಾಮ ಪ್ರಸನ್ನ ಹೊಟೇಲ್‌ನ ಜವಾಬ್ದಾರಿ ವಹಿಸಿಕೊಂಡರು. ಗಳಿಸಿದ ಪದವಿಯ ನೆನಪು ದೂರವಾದರೂ ಆಸಕ್ತಿಯಿಂದ ಕಲಿತ ವೇಟ್‌ಲಿಫ್ಟಿಂಗ್‌ ಮಾತ್ರ ಸುಬ್ರಹ್ಮಣ್ಯ ಅವರಿಂದ ದೂರವಾಗಲಿಲ್ಲ. ಬಳಿಕ 1978ರಲ್ಲಿ ರಾಜ್ಯಮಟ್ಟದ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡು ಕಂಚಿನ ಪದಕ ಗೆದ್ದರು, ವೇಟ್‌ಲಿಫ್ಟಿಂಗ್‌ ನಡುವೆ ಪವರ್‌ಲಿಫ್ಟಿಂಗ್‌ನಲ್ಲೂ ತಮ್ಮ ಪವರ್‌ ತೋರಿಸಿ ಬೆಳ್ಳಿ ಪದಕ ಗೆದ್ದರು. ಮತ್ತೆ ಬದುಕಿನ ಸ್ಪರ್ಧೆಯಲ್ಲಿ ಮುಂದುವರಿದರು.

ಬೆಂಗಳೂರಿನಲ್ಲಿ ಬದುಕಿಗೆ ಹೊಸ ಲಿಫ್ಟ್‌!

1981ರಲ್ಲಿ ಸುಬ್ರಹ್ಮಣ್ಯ ಅವರು ಕುಂದಾಪುರ ತಾಲೂಕಿನ ಗೋಪಾಡಿ ಮೂಲದ ಸುಜಾತ ಅವರೊಂದಿಗೆ ಮದುವೆಯಾಯಿತು. ಪದವಿ ಮುಗಿಸಿದ ತಮ್ಮನೂ ಹೊಟೇಲ್‌ ಉದ್ಯಮಕ್ಕೆ ಕೈ ಹಾಕಿದರು. ಶಿವಮೊಗ್ಗದ ಹೊಟೇಲಿನ ಜವಾಬ್ದಾರಿಯನ್ನು ತಮ್ಮನಿಗೆ ವಹಿಸಿಕೊಟ್ಟು ಬೆಂಗಳೂರಿನಲ್ಲಿ ಹೊಟೇಲ್‌ ಉದ್ದಿಮೆ ಆರಂಭಿಸಿದರು. ಹೊಟೇಲ್‌ ಉದ್ಯಮದಲ್ಲಿ ತೊಡಗಿಕೊಂಡಿದ್ದರೂ ಕಲಿತ ವೇಟ್‌ಲಿಫ್ಟಿಂಗ್‌ ಕ್ರೀಡೆಯಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲ ಸುಬ್ರಹ್ಮಣ್ಯ ಅವರಿಂದ ದೂರವಾಗಿರಲಿಲ್ಲ.

 

ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆಗದಿದ್ದರೂ ಈ ಕ್ರೀಡೆಯ ಭಾಗವಾಗಿರಬೇಕೆಂದು ಮೊದಲ ಬಾರಿಗೆ 1980ರಲ್ಲಿ ರಾಜ್ಯಮಟ್ಟದ ರೆಫರಿ ಪರೀಕ್ಷೆ ಬರೆದು ಉತ್ತೀರ್ಣರಾದರು. ಆದರೆ ಹೊಟೇಲ್‌ ಉದ್ಯಮದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದರಿಂದ ಯಾವುದೇ ಚಾಂಪಿಯನ್‌ಷಿಪ್‌ಗಳಲ್ಲಿ ರೆಫರಿಯಾಗಿ ಪಾಲ್ಗೊಳ್ಳಲು ಆಗಲಿಲ್ಲ. 1986ರಲ್ಲಿ ರಾಷ್ಟ್ರೀಯ ರೆಫರಿ ಕ್ಯಾಟಗರಿ 1ರ ಪರೀಕ್ಷೆ ಬರೆದು ಅರ್ಹತೆ ಗಳಿಸಿದರು. ಈ ನಡುವೆ ತಮ್ಮ ಶ್ರೀರಾಮ ಪ್ರಸನ್ನ ಹೊಟೇಲನ್ನು ಬೇರೆಯವರಿಗೆ ನೀಡಿ ಬೆಂಗಳೂರಿಗೆ ಆಗಮಿಸಿದರು. ಇದರಿಂದಾಗಿ ಹೊಟೇಲ್‌ ಕೆಲಸದಲ್ಲಿ ತಮ್ಮನ ನೆರವು ಸಿಕ್ಕಿತು. ಬೆಂಗಳೂರಿನ ಊರ್ವಶಿ ಚಿತ್ರಮಂದಿರದ ಎದುರಿಗಿದ್ದ ಪುಷ್ಪವನ ಹೊಟೇಲನ್ನು ಸುಮಾರು 23 ವರ್ಷಗಳ ಕಾಲ ಸುಬ್ರಹ್ಮಣ್ಯ ಅವರು ನಡೆಸಿದರು. ನಂತರ 1991ರಲ್ಲಿ ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ಮೌರ್ಯ ಹೊಟೇಲ್‌ನಲ್ಲಿ ಸೌಮ್ಯ ಪ್ಯಾರಡೈಸ್‌ ಎಂಬ ಹೊಟೇಲನ್ನು ಆರಂಭಿಸಿ 2004ರ ವರೆಗೂ ನಡೆಸಿದರು. ಈ ನಡುವೆ ಹಿರಿಯ ಮಗ ಸುಜಯ್‌ ಎಂಜಿನಿಯರಿಂಗ್‌ ಪದವಿ ಮುಗಿದಿ ಉದ್ಯೋಗ ಸೇರಿದರೆ, ಕಿರಿಯ ಮಗ ಸುಮಂತ್‌ಗೆ ಹೊಟೇಲ್‌ ಉದ್ಯಮದ ಬಗ್ಗೆ ಒಲವು ಸಿಗಬಹುದೆಂದು ಹಲವು ಪ್ರಯತ್ನ ಮಾಡಿದರೂ ಫಲ ಸಿಗಲಿಲ್ಲ. ಕೊನೆಯಲ್ಲಿ ಸುಮಂತ್‌ ಆಮದು ಮತ್ತು ರಫ್ತು ಉದ್ಯಮದಲ್ಲಿ ಪಳಗಿ ಯಶಸ್ಸು ಕಂಡರು.

ಮತ್ತೆ ವೇಟ್‌ಲಿಫ್ಟಿಂಗ್‌ ಕ್ಷೇತ್ರಕ್ಕೆ:

ವೇಟ್‌ಲಿಫ್ಟಿಂಗ್‌ನಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಳ್ಳಲಾಗಲಿಲ್ಲ ಎಂಬ ನೋವು ಸುಬ್ರಹ್ಮಣ್ಯ ಅವರನ್ನು ಯಾವಾಗಲೂ ಕಾಡುತ್ತಿತ್ತು. ಆದರೆ ಅದೇ ನೋವಿನಲ್ಲಿ ಸಮಯವನ್ನು ಕಳೆಯಲಿಲ್ಲ. ರಾಜ್ಯ ವೇಟ್‌ಲಿಫ್ಟಿಂಗ್‌ ಸಂಸ್ಥೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾದರು. ನಂತರ ಉಪಾಧ್ಯಕ್ಷರಾಗಿ 2018ರ ವರೆಗೂ ಆ ಹುದ್ದೆಯಲ್ಲಿದ್ದರು. 1986ರಲ್ಲಿ ರಾಷ್ಟ್ರೀಯ ಪೆಫರಿಯಾಗಿ ಹಲವಾರು ಚಾಂಪಿಯನ್‌ಷಿಪ್‌ಗಳಲ್ಲಿ ರೆಫರಿಯಾಗಿ ಕಾರ್ಯನಿರ್ವಹಿಸಿದರು. 1990ರಲ್ಲಿ ಅಂತಾರಾಷ್ಟ್ರೀಯ ರೆಫರಿ 2ನೇ ಕ್ಯಾಟಗರಿಯನ್ನು ಪೂರ್ಣಗೊಳಿಸಿದರು. ಏಷ್ಯ ಮತ್ತು ಕಾಮನ್‌ವೆಲ್ತ್‌ ಮಟ್ಟದ ಸ್ಪರ್ಧೆಗಳಲ್ಲಿ ತಾಂತ್ರಿಕ ಅಧಿಕಾರಿ ಮತ್ತು ರೆಫರಿಯಾಗಿ ಕಾರ್ಯನಿರ್ವಹಿಸಿರು. 1993ರಲ್ಲಿ ಉನ್ನತ ಅಂತಾರಾಷ್ಟ್ರೀಯ ಮತ್ತು ಜಾಗತಿಕ ಸ್ಪರ್ಧೆಗಳಲ್ಲಿ ರೆಫರಿಯಾಗಿ ಕಾರ್ಯನಿರ್ವಹಿಸಲು ಅಗತ್ಯ ಇರುವ ಅಂತಾರಾಷ್ಟ್ರೀಯ ಕ್ಯಾಟಗರಿ 1ನ್ನು ಪೂರ್ಣಗೊಳಿಸಿ, ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದರು. ಇದು ಒಲಿಂಪಿಕ್ಸ್‌ ಹಾಗೂ ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ರೆಫರಿಯಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಿತು.

ಭಾರತದ ಹೆಮ್ಮೆ:

ಸುಬ್ರಹ್ಮಣ್ಯ ಕುಂಭಾಶಿ ಅವರು ಈಗ ಭಾರತದ ಅತ್ಯಂತ ಹಿರಿಯ ಅಂತಾರಾಷ್ಟ್ರೀಯ ವೇಟ್‌ಲಿಫ್ಟಿಂಗ್‌ ರೆಫರಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಕರ್ನಾಟಕದಲ್ಲಿ ಶ್ಯಾಮಲಾ ಶೆಟ್ಟಿ, ಚಂದ್ರಹಾಸ್‌ ರೈ, ಆನಂದೇ ಗೌಡ, ಕೃಷ್ಣರಾಜ್‌ ಅವರು ಕ್ಯಾಟಗರಿ 1 ಅಂತಾರಾಷ್ಟ್ರೀಯ ರೆಫರಿಗಳೆನಿಸಿದ್ದಾರೆ.

ಲಂಡನ್‌, ರಿಯೋ ಒಲಿಂಪಿಕ್ಸ್‌:

ಸುಬ್ರಹ್ಮಣ್ಯ ಅವರು 2012ರ ಲಂಡನ್‌ ಒಲಿಂಪಿಕ್ಸ್‌ ಹಾಗೂ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ರೆಫರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಲಂಡನ್‌ ಒಲಿಂಪಿಕ್ಸ್‌ನಲ್ಲಿ ಚೀಫ್‌ ಮಾರ್ಷಲ್‌ ಆಗಿದ್ದರೆ, ರಿಯೋ ಒಲಿಂಪಿಕ್ಸ್‌ನಲ್ಲಿ ಕಾಂಪಿಟೀಷನ್‌ ಸೆಕ್ರೆಟರಿಯಾಗಿ ಕಾರ್ಯನಿರ್ವಹಿಸಿದ್ದರು. ಸತತ ಎರಡು ಒಲಿಂಪಿಕ್ಸ್‌ಗಳಲ್ಲಿ ರೆಫರಿಯಾಗಿ ಭಾಗವಹಿಸಿದ ಭಾರತದ ಎರಡನೇ ರೆಫರಿ ಎಂಬ ಹೆಗ್ಗಳಿಕೆಗೆ ಸುಬ್ರಹ್ಮಣ್ಯ ಅವರು ಪಾತ್ರರಾಗಿದ್ದಾರೆ. ಬಾಲಿವುಡ್‌ ನಟ ಡೇವಿಡ್‌ ಅಬ್ರಾಹಂ ಈ ಸಾಧನೆ ಮಾಡಿದ ಭಾರತದ ಮೊದಲ ರೆಫರಿ.

ಮರೆಯಲಾಗದ ದೆಹಲಿ ಕಾಮನ್‌ವೆಲ್ತ್‌ ಗೇಮ್ಸ್‌:

2010ರಲ್ಲಿ ನಡೆದ ಡೆಲ್ಲಿ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಅಂತಾರಾಷ್ಟ್ರೀಯ ವೇಟ್‌ಲಿಫ್ಟಿಂಗ್‌ ಫೆಡರೇಷನ್‌ ಸುಬ್ರಹ್ಮಣ್ಯ ಕುಂಭಾಶಿ ಅವರನ್ನು ಕಾಂಪಿಟೀಷನ್‌ ಮ್ಯಾನೇಜರ್‌ ಆಗಿ ಆಯ್ಕೆ ಮಾಡಿತು. “ಇದು ನನ್ನ ಬದುಕಿನಲ್ಲಿ ಮರೆಲಾಗದ ಕ್ಷಣ” ಎನ್ನುತ್ತಾರೆ ಸುಬ್ರಹ್ಮಣ್ಯ. ಇದು ಇಡೀ ಕ್ರೀಡಾಕೂಟದಲ್ಲಿನ ವೇಟ್‌ಲಿಫ್ಟಿಂಗ್‌ ಸ್ಪರ್ಧೆಯ ಸಂಪೂರ್ಣ ಜವಾಬ್ದಾರಿಯನ್ನು ನಿಭಾಯಿಸುವುದಾಗಿರುತ್ತದೆ. ವಿಶ್ವಚಾಂಪಿಯನ್‌ಷಿಪ್‌ಗಳಲ್ಲಿ ಈ ಜವಾಬ್ದಾರಿಯನ್ನು ಕಾಂಪಿಟೀಷನ್‌ ಡೈರೆಕ್ಟರ್‌ ಎಂದು ಕರೆಯಲಾಗುತ್ತದೆ. ಇದು ಜಾಗತಿಕ ಮಟ್ಟದಲ್ಲಿ ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ ಇರುವವರಿಗೆ ಮಾತ್ರ ಅಂತಾರಾಷ್ಟ್ರೀಯ ಫೆಡರೇಷನ್‌ ನೀಡುತ್ತದೆ. ನಿಭಾಯಿಸುವ ಸಾಮರ್ಥ್ಯ ಇಲ್ಲವೆಂದರೆ ಬೇರೆ ದೇಶಗಳಿಂದ ತಜ್ಞರನ್ನು ನಿಯೋಜಿಸಲಾಗುತ್ತದೆ. ಆಗ ಅಂತಾರಾಷ್ಟ್ರೀಯ ವೇಟ್‌ಲಿಫ್ಟಿಂಗ್‌ ಫೆಡರೇಷನ್‌ನ ಅಧ್ಯಕ್ಷರಾಗಿದ್ದ ಡಾ. ಥಾಮಸ್‌ ಆಜಾನ್‌ ಅವರು ಟೆಕ್ನಿಕಲ್‌ ಡೆಲಿಗೇಟ್‌ ಆಗಿ ಆಗಮಿಸಿದ್ದರು. 18 ತಿಂಗಳ ಕಾಲ ದೆಹಲಿಯಲ್ಲಿ ತಂಗಿದ್ದ ಸುಬ್ರಹ್ಮಣ್ಯ ಅವರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ ಅಂತಾರಾಷ್ಟ್ರೀ ವೇಟ್‌ಲಿಫ್ಟಿಂಗ್‌ ಫೆಡರೇಷನ್‌ನ ಮೆಚ್ಚುಗೆಗೆ ಪಾತ್ರರಾದರು.

ಸಂಘಟನೆಯಲ್ಲಿ ಜವಾಬ್ದಾರಿ:

ಸುಬ್ರಹ್ಮಣ್ಯ ಕುಂಭಾಶಿ ಅವರು ಕೇವಲ ಕರ್ನಾಟಕ ವೇಟ್‌ಲಿಫ್ಟಿಂಗ್‌ ಫೆಡರೇಷನ್ನಿನ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸಿರಲಿಲ್ಲ. ಅವರ ಕಾರ್ಯವೈಖರಿಗೆ ಭಾರತೀಯ ವೇಟ್‌ಲಿಫ್ಟಿಂಗ್‌ ಫೆಡರೇಷನ್‌ ಕೂಡ ಮನ್ನಣೆ ನೀಡಿ ಗೌರವಿಸಿದೆ. 1991 ರಿಂದ 1999ರ ವರೆಗೆ ಭಾರತೀಯ ವೇಟ್‌ಲಿಫ್ಟಿಂಗ್‌ ಫೆಡರೇಷನ್‌ನ ಅಸೋಸಿಯೇಟ್ ವೈಸ್‌ ಪ್ರೆಸಿಡೆಂಟ್‌ ಆಗಿ ಜವಾಬ್ದಾರಿ ನಿಭಾಯಿಸಿದ್ದರು. 1999ರಿಂದ 2017ರ ವರೆಗೆ ಭಾರತೀಯ ವೇಟ್‌ಲಿಫ್ಟಿಂಗ್‌ ಫೆಡರೇಷನ್‌ನ ಉಪಾಧ್ಯಕ್ಷರಾಗಿಯೂ ಜವಾಬ್ದಾರಿ ನಿಭಾಯಿಸಿದ್ದಾರೆ. 1994 ರಿಂದ 2017ರವರೆಗೆ ಭಾರತೀಯ ವೇಟ್‌ಲಿಫ್ಟಿಂಗ್‌ ಫೆಡರೇಷನ್‌ನ ತಾಂತ್ರಿಕ ಸಮಿತಿಯ ಚೇರ್ಮನ್‌ ಆಗಿಯೂ ಕಾರ್ಯನಿರ್ವಹಿಸಿದ್ದಾರೆ.

ಸಂತೃಪ್ತ ಬದುಕು:  ಸುಬ್ರಹ್ಮಣ್ಯ ಕುಂಭಾಶಿ ಅವರು ಸಾಗಿ ಬಂದ ಬದುಕಿನ ಹಾದಿಯನ್ನೊಮ್ಮೆ ಹಿಂದಿರುಗಿ ನೋಡಿದಾಗ ಹೊಟೇಲ್‌ ಉದ್ಯಮ ಅವರ ಕ್ರೀಡಾ ಬದುಕನ್ನು ಕಸಿದುಕೊಂಡಿತು ಎಂಬ ಭಾವ ಮೂಡುವುದು ಸಹಜ. ಆದರೆ ಸ್ವತಃ ಸುಬ್ರಹ್ಮಣ್ಯ ಅವರಿಗೆ ಎಂದೂ ಹಾಗನಿಸಲಿಲ್ಲ. ಅವರಲ್ಲಿ ಧನ್ಯತಾ ಭಾವವಿದೆ. “ಪಡೆದ ಶಿಕ್ಷಣದ ಮೂಲಕ ಬದುಕನ್ನು ಮುನ್ನಡೆಸಲಿಲ್ಲವೆಂಬ ಬೇಸರ ಎಂದೂ ಮೂಡಲಿಲ್ಲ. ಬದುಕನ್ನು ಬಂದಂತೆ ಸ್ವೀಕರಿಸಿ ಖುಷಿಪಟ್ಟಿರುವೆ. ಕ್ರೀಡೆಯನ್ನು ನಾನು ವೃತ್ತಿ ಮತ್ತು ಪ್ರವೃತ್ತಿಯಾಗಿ ನೋಡಿ ಅದರಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ದೇವರು ನೀಡಿದ್ದಾರೆ. ನಮ್ಮ ತಂದೆ ಇನ್ನಷ್ಟು ಕಾಲ ಬದುಕಿರುತ್ತಿದ್ದರೆ ನಾನು ಹೊಟೇಲ್‌ ಉದ್ಯಮಕ್ಕೆ ಬಾರದೆ, ಶೈಕ್ಷಣಿಕ ಬದುಕಿನಲ್ಲಿ ಮುಂದುವರಿಯುತ್ತಿದ್ದೆನೇನೋ. ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದರಿಂದ ನಾನು ಈ ವಯಸ್ಸಿನಲ್ಲಿಯೂ ಯುವಕರಂತೆ ಉತ್ಸಾಹದಿಂದ ಕೂಡಿರುವೆ. ಇದು ನನ್ನನ್ನು ಸದಾ ಕ್ರಿಯಾಶೀಲನಾಗಿರುವಂತೆ ಮಾಡಿದೆ. ಈಗ ನನ್ನ ಕುಟುಂಬ ಮತ್ತು ಕ್ರೀಡೆಯೊಂದಿಗೆ ಬದುಕನ್ನು ನೆಮ್ಮದಿಯಾಗಿ ಮುನ್ನಡೆಸುತ್ತಿದ್ದೇನೆ,” ಎಂದು ಹೇಳುವ ಸುಬ್ರಹ್ಮಣ್ಯ ಕುಂಭಾಶಿ ಅವರ ಮಾತಿನಲ್ಲಿ ಬದುಕಿನ ಸಂತೃಪ್ತಿ ಸ್ಪಷ್ಟವಾಗುತ್ತದೆ.

Related Articles