Saturday, October 5, 2024

ಬ್ಯಾಡ್ಮಿಂಟನ್‌ನಲ್ಲಿ ರಾಜ್ಯಕ್ಕೆ ಕೀರ್ತಿ ತಂದ ಶಿವಮೊಗ್ಗದ ಎಂಜಿನಿಯರ್‌ ನಿತಿನ್‌

ಚಿಕ್ಕ ಹುಡುಗ ಕ್ರಿಕೆಟ್‌ ಆಡುವುದರಲ್ಲೇ ಸಮಯ ಕಳೆಯುತ್ತಿದ್ದಾನೆ. ಇದನ್ನು ತಪ್ಪಿಸಲು ಆತನನ್ನು ಬ್ಯಾಡ್ಮಿಂಟನ್‌ ಅಕಾಡೆಮಿಗೆ ಸೇರಿಸುತ್ತಾರೆ. ಅಲ್ಲಿಯೂ ಚಿನ್ನ ಗೆಲ್ಲುತ್ತಾನೆ. ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ ಪುಲ್ಲೆಲಾ ಗೋಪಿಚಂದ್‌ಗೂ ಈತನ ಆಟ ಖುಷಿ ಕೊಡುತ್ತದೆ. ಮೊನ್ನೆ ಮುಕ್ತಾಯಗೊಂಡ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಆ ಆಟಗಾರ ಎರಡು ಚಿನ್ನದ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತರುತ್ತಾನೆ. ಓದಿನಲ್ಲೂ ಟಾಪ್‌, ಬ್ಯಾಡ್ಮಿಂಟನ್‌ನಲ್ಲೂ ಅಗ್ರ ಸ್ಥಾನ. ಇದು ಶಿವಮೊಗ್ಗದ ಮೆಕ್ಯಾನಿಕಲ್‌ ಎಂಜಿಯರ್‌ ನಿತಿನ್‌ ಎಚ್‌.ವಿ. ಬ್ಯಾಡ್ಮಿಂಟನ್‌ನಲ್ಲಿ ಇಟ್ಟ ಚಿನ್ನದ ಹೆಜ್ಜೆ. Karnataka’s Nithin H V of Shivamogga creates history in National Games Goa.

ಮೂಲತಃ ಶಿವಮೊಗ್ಗ ಜಿಲ್ಲೆಯ ಹರತಾಳು ನಿತಿನ್‌ ಅವರ ಊರು. ತಂದೆ ವೇದಮೂರ್ತಿ ವೃತ್ತಿಯಲ್ಲಿ ವಕೀಲರು. ನಿತಿನ್‌ ಐದನೇ ವಯಸ್ಸಿನಲ್ಲಿ ಕ್ರಿಕೆಟ್‌ ಆಡುವ ಆಶಯ ವ್ಯಕ್ತಪಡಿಸಿದ. ಚಿಕ್ಕ ಮಗುವಿನ ಆಸಕ್ತಿಗೆ ಅಡ್ಡಿ ಆಗಬಾರದೆಂದು ವೇದಮೂರ್ತಿ ಅವರು ಅವಕಾಶ ಕೊಟ್ಟರು. ಆದರೆ ಶಿವಮೊಗ್ಗದಲ್ಲಿ ಕ್ರಿಕೆಟ್‌ ಪ್ರತಿಭೆಗಳಿಗೆ ಅವಕಾಶ ಕಡಿಮೆ. ಅದು ಕೂಡ ಯಾವಾಗಲೂ ಬಿಸಿಲಿನಲ್ಲಿಯೇ ಆಡಬೇಕು ಎಂದು ಮಗನ ಕಾಳಜಿಗಾಗಿ ಯಾವುದಾದರೂ ಒಳಾಂಗಣ ಕ್ರೀಡೆಯಲ್ಲಿ ತೊಡಗಿಸಬೇಕೆಂದು ಬಯಸಿದರು. ಆಗ ತರಬೇತುದಾರ ಅರುಣ್‌ ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್‌ ತರಬೇತಿ ನೀಡುತ್ತಿದ್ದರು. ನಿತಿನ್‌ನಲ್ಲಿರುವ ಆಸಕ್ತಿಯನ್ನು ನೋಡಿ ಅವಕಾಶ ನೀಡಿದರು. ಅಲ್ಲಿಂದಲೇ ನಿತಿನ್‌ ಯಶಸ್ಸಿನ ಹಾದಿ ತುಳಿದರು.

12ನೇ ವಯಸ್ಸಿನಲ್ಲಿ ಬ್ಯಾಡ್ಮಿಂಟನ್‌ ಅಂಗಣಕ್ಕೆ ಕಾಲಿಟ್ಟ ನಿತಿನ್‌ ಮತ್ತೆ ಹಿಂದಿರುಗಿ ನೋಡಲಿಲ್ಲ. ಹಲವಾರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ವಿವಿಧ ವಯೋಮಿತಿಯ ಚಾಂಪಿಯನ್‌ಷಿಪ್‌ಗಳಲ್ಲಿ ಗೆದ್ದ ಪದಕಗಳು ಮನೆಯನ್ನು ತುಂಬಲಾರಂಭಿಸಿದವು. ಶಿವಮೊಗ್ಗದ ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌ನಲ್ಲಿ ಓದುತ್ತಿದ್ದ ನಿತಿನ್‌ ಕ್ರೀಡೆಯ ಕಾರಣ ಹೇಳಿ ಓದಿನಲ್ಲಿ ಹಿಂದೆ ಬೀಳುತ್ತಿರಲಿಲ್ಲ. ಅಗ್ರಶ್ರೇಣಿಯಲ್ಲಿಯೇ ಉತ್ತೀರ್ಣನಾಗುತ್ತಿದ್ದ. ಶಿವಮೊಗ್ಗದಲ್ಲಿದ್ದರೂ ಬೆಂಗಳೂರಿನಲ್ಲಿರುವ ತರಬೇತುದಾರರಿಗೆ ನಿತಿನ್‌ ಅವರ ಆಟ ಇಷ್ಟವಾಯಿತು. ಈತ ಭಾರತದ ಭವಿಷ್ಯದ ತಾರೆ ಎಂಬುದನ್ನು ಅರಿತ ಬೆಂಗಳೂರಿನ ಬ್ಯಾಡ್ಮಿಂಟನ್‌ ತರಬೇತುದಾರರಾದ ಯಶು ಕುಮಾರ್‌ ಹಾಗೂ ಕೆಕೆ ಸರ್‌ ಬೆಂಗಳೂರಿನಲ್ಲಿ ತರಬೇತಿ ಪಡೆಯುವಂತೆ ವೇದಮೂರ್ತಿ ಅವರಿಗೆ ಸಲಹೆ ನೀಡಿದರು. ಮಗನ ಕ್ರೀಡಾ ಬದುಕಿನ ಬಗ್ಗೆ ಅಪಾರ ಭರವಸೆ ಹೊಂದಿರುವ ವೇದಮೂರ್ತಿ ಹೆಚ್ಚಿನ ತರಬೇತಿಗಾಗಿ ಬೆಂಗಳೂರಿಗೆ ಕಳುಹಿಸಿಕೊಟ್ಟರು. ಅಲ್ಲಿಯೇ ಎಂಜಿನಿಯರಿಂಗ್‌ ಶಿಕ್ಷಣವೂ ಮುಗಿಯಿತು. ಬ್ಯಾಡ್ಮಿಂಟನ್‌ನಲ್ಲಿ ಯಾವೆಲ್ಲ ವಿಭಾಗಳಿವೆಯೋ ಅವೆಲ್ಲದರಲ್ಲೂ ನಿತಿನ್‌ ಯಶಸ್ಸು ಕಂಡರು. ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಪದಕ ಗೆದ್ದು ತಾನೊಬ್ಬ ಭವಿಷ್ಯದ ಉತ್ತಮ ಆಟಗಾರ ಎಂಬುದನ್ನು ತೋರಿಸಿದರು. ಖೇಲೋ ಇಂಡಿಯಾದಂಥ ಪ್ರಮುಖ ರಾಷ್ಟ್ರೀಯ ಟೂರ್ನಿಗಳಲ್ಲಿ ಪದಕ ಗೆದ್ದು ಗಮನ ಸೆಳೆದರು. ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟಗಳಲ್ಲಿ ಗೆದ್ದ ಪದಕಗಳನ್ನು ಎಣಿಸಿದರೆ ಅರ್ಧ ಶತಕ ದಾಟುತ್ತದೆ. ಕಳೆದ ವರ್ಷ ಬಹೆರಿನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ನಿತಿನ್‌ ಮೊದಲ ಅಂತಾರಾಷ್ಟ್ರೀಪ ಪದಕಕ್ಕೆ ಮುತ್ತಿಟ್ಟರು.

ಗೋಪಿಚಂದ್‌ ಅಕಾಡೆಮಿಯಲ್ಲಿ ತರಬೇತಿ:

ಆಲ್‌ ಇಂಗ್ಲೆಂಡ್‌ ಮಾಜಿ ಚಾಂಪಿಯನ್‌ ಪುಲ್ಲೆಲ ಗೋಪಿಚಂದ್‌ ಅವರ ಅಕಾಡೆಮಿಯಲ್ಲಿ ತರಬೇತಿ ಪಡೆಯಲು ಅವಕಾಶ ಸಿಗಬೇಕೆಂದರೆ ಅದೃಷ್ಟ ಇರಬೇಕು. ಏಕೆಂದರೆ ಈ ದೇಶದ ಪ್ರಮುಖ ಬ್ಯಾಡ್ಮಿಂಟನ್‌ ತಾರೆಯರು ತರಬೇತಿ ಪಡೆಯುತ್ತಿರುವುದು ಇದೇ ಅಕಾಡೆಮಿಯಲ್ಲಿ. ನಿತಿನ್‌ ಈ ಬಾರಿಯ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಟೀಮ್‌ ವಿಭಾಗದಲ್ಲಿ ಮೊದಲ ಚಿನ್ನ ಗೆದ್ದು ನಂತರ ಶಿವಮೊಗ್ಗದವರೇ ಆದ ಪ್ರಥ್ವಿ ರಾಯ್‌ ಅವರೊಂದಿಗೆ ಜೊತೆ ಗೂಡಿ ಡಬಲ್ಸ್‌ನಲ್ಲೂ ಚಿನ್ನದ ಸಾಧನೆ ಮಾಡಿದ್ದಾರೆ. ವೇದಮೂರ್ತಿ ಎಚ್‌. ಎಚ್‌. ಹಾಗೂ ಭಾರತಿ ಎಚ್‌.ವಿ ದಂಪತಿಯ ಮಗನಾಗಿರುವ ನಿತಿನ್‌ ವಿಶ್ವ ಪುರುಷರ ಡಬಲ್ಸ್‌ನಲ್ಲಿ ಸದ್ಯ 292ನೇ ರ‍್ಯಾಂಕ್ ಹೊಂದಿದ್ದು 106ನೇ ರ‍್ಯಾಂಕ್ ಅವರ ಉತ್ತಮ ಸಾಧನೆಯಾಗಿತ್ತು. ಮಿಶ್ರ ಡಬಲ್ಸ್‌ನಲ್ಲಿ 198ನೇ ರ‍್ಯಾಂಕ್ ಈಗಿನದ್ದಾಗಿದ್ದರೆ 81 ಇದುವರೆಗಿನ ಉತ್ತಮ ಸಾಧನೆ. ಭಾರತದ ರಾಷ್ಟ್ರೀಯ ರಾಂಕಿಂಗ್‌ನಲ್ಲಿ ಪುರುಷ ಡಬಲ್ಸ್‌ನಲ್ಲಿ 8ನೇ ಸ್ಥಾನ ಹಾಗೂ 4ನೇ ರ‍್ಯಾಂಕ್ ಅವರ ಉತ್ತಮ ಸಾಧನೆಯಾಗಿತ್ತು. ಮಿಶ್ರ ಡಬಲ್ಸ್‌ನಲ್ಲಿ ಈಗ 12 ನೇ ರ‍್ಯಾಂಕ್ ಹೊಂದಿರುವ ನಿತಿನ್‌ ಒಮ್ಮೆ 6ನೇ ರ‍್ಯಾಂಕ್ ತಲುಪಿದ್ದರು.

ಓದಿನಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡು ಕ್ರೀಡೆಯಲ್ಲೂ ಚಿನ್ನ ಗೆಲ್ಲುವುದು ಅಷ್ಟು ಸುಲಭವಲ್ಲ. ಆದರೆ ನಿತಿನ್‌ ಉನ್ನತಶ್ರೇಣಿಯಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಉತ್ತೀರ್ಣರಾಗುವುದರ ಜೊತೆಯಲ್ಲಿ ದೇಶದ ಉತ್ತಮ ಬ್ಯಾಡ್ಮಿಂಟನ್‌ ತಾರೆ ಎನಿಸಿಕೊಂಡಿರುವುದು ಶ್ರೇಷ್ಠ. ಗ್ರಾಮೀಣ ಪ್ರತಿಭೆಗಳಿಗೆ ಉತ್ತಮ ರೀತಿಯಲ್ಲಿ ತರಬೇತಿ ನೀಡಿದರೆ ಅವರು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವ ರೀತಿಯಲ್ಲಿ ಯಶಸ್ಸು ಕಂಡು ದೇಶಕ್ಕೆ ಕೀರ್ತಿ ತರಬಲ್ಲರು ಎಂಬುದಕ್ಕೆ ನಿತಿನ್‌ ಉತ್ತಮ ಉದಾಹರಣೆ. “ನಿತಿನ್‌ ತರಗತಿಯಲ್ಲಿ ಯಾವಾಗಲೂ ಅಗ್ರ ಸ್ಥಾನದಲ್ಲೇ ಇರುತ್ತಿದ್ದ. ಇದರಿಂದಾಗಿ ಆತನ ಓದಿಗೆ ಕ್ರೀಡೆ ಅಡ್ಡಿಯಾಗದು ಎಂದು ನಂಬಿಕೆ ಇಟ್ಟಿದ್ದೆ. ಓದಿನಲ್ಲೂ ಉತ್ತಮ ಹಾಗೂ ಕ್ರೀಡೆಯಲ್ಲೂ ಚಿನ್ನ ಎನಿಸಿಕೊಂಡಿರುವುದು ಖುಷಿ ಕೊಟ್ಟಿದೆ. ಒಬ್ಬ ಕ್ರೀಡಾಪಟುವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಸಜ್ಜುಗೊಳಿಸುವುದು ಅಷ್ಟು ಸುಲಭವಲ್ಲ. ಸಾಕಷ್ಟು ಹಣ ವ್ಯಯ ಮಾಡಬೇಕಾಗುತ್ತದೆ. ತರಬೇತಿ, ಫಿಟ್ನೆಸ್‌ ಹಾಗೂ ಸಾರಿಗೆ ಇವುಗಳಿಂದಾಗಿ ಹೆಚ್ಚು ವ್ಯಯವಾಗುತ್ತದೆ. ಆದೆ ನಮ್ಮ ಮಗ ಉತ್ತ ರೀತಿಯಲ್ಲಿ ಪ್ರದರ್ಶನ ತೋರುತ್ತಿರುವುದರಿಂದ ಅಲ್ಲೊಂದು ಖುಷಿ ಇದೆ,” ಎನ್ನುತ್ತಾರೆ ನಿತಿನ್‌ ಅವರ ತಂದೆ ವೇದಮೂರ್ತಿ ಎಚ್‌.

Related Articles