ಮೀನುಗಾರರ ಕೇರಿಯಲ್ಲಿ ಅರಳಿದ ಬಾಕ್ಸರ್ ವಿಕಾಸ
ಉಡುಪಿ: ಕೆಲವು ಸಮಯದ ಹಿಂದೆ ಮಲ್ಪೆಯ ಮೀನುಗಾರ ಸಮುದಾಯದ ಯುವತಿಯೊಬ್ಬಳು ರಾಷ್ಟ್ರೀಯ ಬಾಕ್ಸಿಂಗ್ನಲ್ಲಿ ಮಿಂಚಿ ಕರಾವಳಿಗೆ ಮೊದಲ ಪದಕ ತಂದುಕೊಟ್ಟ ಸುದ್ದಿಯನ್ನು ಓದಿದ್ದೀರಿ. ಈಗ ಅದೇ ಮೀನುಗಾರಿಕಾ ವೃತ್ತಿಯನ್ನು ಮಾಡುತ್ತಿದ್ದ ಯುವಕನೊಬ್ಬ ರಾಜ್ಯದ ಬಾಕ್ಸಿಂಗ್ನಲ್ಲಿ “ಬೆಸ್ಟ್ ಬಾಕ್ಸರ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ಈಗ ಚೆನ್ನೈನಲ್ಲಿ ಫೆಡರೇಷನ್ ಕಪ್ನಲ್ಲಿ ಸ್ಪರ್ಧಿಸುತ್ತಿದ್ದಾರೆ. Karnataka State best Boxer Vikas Malpe need support from Govt and Fishermen community
ಒಬ್ಬ ಕ್ರೀಡಾಪಟು ಒಂದು ಸಮುದಾಯದ ಯುವಕರ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರಬಲ್ಲ ಎಂಬುದಕ್ಕೆ ಇತ್ತೀಚಿಗೆ ನಮ್ಮನ್ನಗಲಿದ ರಾಷ್ಟ್ರೀಯ ಯುವ ಬಾಕ್ಸರ್ ವಿರಾಜ್ ಮೆಂಡನ್ ಸಾಕ್ಷಿ. ವಿರಾಜ್ ಅವರಿಂದ ಸ್ಪೂರ್ತಿ ಪಡೆದ ವಿಕಾಸ್ ಮಲ್ಪೆ ಈಗ ರಾಜ್ಯ ಮಟ್ಟದಲ್ಲಿ ಮಿಂಚಿ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದಾರೆ. ಮೀನುಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಿಡುವಿನ ಸಮಯದಲ್ಲಿ ಈ ಕರಾವಳಿಗೆ ಹೊಸತೆನಿಸಿರುವ ಬಾಕ್ಸಿಂಗ್ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಈ ಯುವಜನರು ಕ್ರೀಡೆಯಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ.

ಬೋಟಲ್ಲಿ ರೈಟರ್, ಬಾಕ್ಸಿಂಗ್ನಲ್ಲಿ ಫೈಟರ್!: ಮಲ್ಪೆಯ ಒಡಬಾಂಡೇಶ್ವರದ ನಿವಾಸಿ ವಿಜಯ ಕುಮಾರ್ ಹಾಗೂ ಸೌಮ್ಯ ದಂಪತಿಯ ಪುತ್ರ ವಿಕಾಸ್ ಮಲ್ಪೆ ರಾಜ್ಯ ಪಟ್ಟದಲ್ಲಿ ವಿವಿಧ ವಿಭಾಗಗಳಲ್ಲಿ ಸರ್ಪರ್ಧಿಸಿ ಆರು ಚಿನ್ನ, ಮೂರು ಬೆಳ್ಳಿ ಹಾಗೂ ದಕ್ಷಿಣ ವಲಯದಲ್ಲಿ ಎರಡು ಕಂಚಿನ ಪದಕ ಗೆದ್ದಿರುವುದು ಮಾತ್ರವಲ್ಲದೆ, ಎರಡು ಬಾರಿ ರಾಜ್ಯದ ಉತ್ತಮ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವಿಕಾಸ್ ಅವರು ಮಲ್ಪೆಯ ಬಂದರಿನಲ್ಲಿ ಬೋಟಿನ ಲೆಕ್ಕ ಬರೆಯುವ ಕೆಲಸ ಮಾಡುತ್ತಿದ್ದಾರೆ. ಒಮ್ಮೆ ವಿರಾಜ್ ಮೆಂಡನ್ ದಕ್ಷಿಣ ವಲಯದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಾಗ ರಸ್ತೆಯಲ್ಲಿ ದೊಡ್ಡ ಕಟೌಟ್ ಹಾಕಿದ್ದರು. ಎಲ್ಲರೂ ವಿರಾಜ್ ಬಗ್ಗೆ ಮಾತನಾಡುತ್ತಿದ್ದರು. ಇದರಿಂದ ಸ್ಫೂರ್ತಿ ಪಡೆದ ವಿಕಾಸ್ ತಾನೂ ಕೂಡ ಬಾಕ್ಸಿಂಗ್ ಕ್ರೀಡೆಯಲ್ಲಿ ಪಾಲ್ಗೊಂಡು ರಾಜ್ಯ ಹಾಗೂ ದೇಶವನ್ನು ಪ್ರತಿನಿಧಿಸುವ ಕನಸು ಕಂಡರು. ಅದೇ ರೀತಿಯಲ್ಲಿ ಕಠಿಣ ಶ್ರಮದಿಂದ ತಮ್ಮ ಕನಸನ್ನು ನನಸಾಗಿಸುವ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ.

ಬಡತನದ ನಡುವೆ ಬಾಕ್ಸಿಂಗ್ ಬದುಕು: ಬುಧವಾರ ಚೆನ್ನೈನಿಂದ sportsmail ಜೊತೆ ಮಾತನಾಡಿದ ವಿಕಾಸ್, “ಪಿಯುಸಿ ಶಿಕ್ಷಣ ಮುಗಿಸಿ ಬೇರೆ ದಾರಿ ಇಲ್ಲದೆ ನಮ್ಮ ಕುಲಕಸುಬಿನಲ್ಲಿ ತೊಡಗಿಸಿಕೊಂಡೆ. ನಾವು ಅವಳಿ ಸಹೋದರರು. ವಿಶ್ವಾಸ್ ಕೂಡ ಮಲ್ಪೆ ಬಂದರಿನಲ್ಲಿ ಕೆಲಸ ಮಾಡುತ್ತಿದ್ದಾನೆ. ವಿರಾಜ್ ಮೆಂಡನ್ ಅವರ ಸಾಧನೆಯ ಕಟೌಟ್ ನೋಡಿದಾಗ ನಾನು ಕೂಡ ಬಾಕ್ಸರ್ ಆಗಬೇಕೆಂದು ಕಸನು ಕಂಡೆ. ಅದಕ್ಕೆ ಕೋಚ್ ಶಿವಪ್ರಸಾದ್ ಸರ್ ಅವರು ಪ್ರೋತ್ಸಾಹ ನೀಡಿದರು. ರಾಜ್ಯ ಹಾಗೂ ವಲಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ತೋರಿ ಈಗ ಫೆಡರೇಷನ್ ಕಪ್ ತಲುಪಿರುವೆ. ಮುಂದೆ ಉತ್ತಮ ತರಬೇತಿ ಪಡೆದು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಒಲಿಂಪಿಕ್ಸ್ನಲ್ಲಿ ದೇಶವನ್ನು ಪ್ರತಿನಿಧಿಸುವ ಹಂಬಲ ಇದೆ. ಇದು ಸುಲಭದ ಹಾದಿಯಲ್ಲ. ಹಣಕಾಸಿನ ಪ್ರೋತ್ಸಾಹದ ಅಗತ್ಯವಿದೆ. ಸಮಾಜದ ಮುಖಂಡರು, ಕ್ರೀಡಾಭಿಮಾನಿಗಳ ಪ್ರೋತ್ಸಾಹದ ಅಗತ್ಯವಿದೆ,” ಎಂದರು.

ಕ್ರೀಡಾಭಿಮಾನಿಗಳೇ ಪ್ರೋತ್ಸಾಹ ನೀಡಿ: ಮಲ್ಪೆಯಲ್ಲಿ ಸಾವಿರಕ್ಕೂ ಹೆಚ್ಚು ಬೋಟುಗಳಿವೆ. ಈ ಎಲ್ಲ ಬೋಟಿನ ಮಾಲೀಕರು ದೊಡ್ಡ ಮನಸ್ಸು ಮಾಡಿ ಈ ಕ್ರೀಡಾಪಟುವಿಗೆ ಸಣ್ಣ ಪ್ರಮಾಣದಲ್ಲಿ ನೆರವು ನೀಡಿದರೆ ಇವರು ಉತ್ತಮ ತರಬೇತಿ ಪಡೆದು ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತರಬಲ್ಲರು. ಮೀನುಗಾರರು ಮನಸ್ಸು ಮಾಡಿದರೆ ಇದು ಕಷ್ಟದ ಕೆಲಸವಲ್ಲ. ಈ ಬಗ್ಗೆ ಮೀನುಗಾರಿಕಾ ಫೆಡರೇಷನ್ ಗಮನಹರಿಸುವುದು ಸೂಕ್ತ. ಇಂಥ ಸಾಧಕರಿಗೆ ಮೀನುಗಾರರ ಸಮುದಾಯ ಸಹಾಯ ಮಾಡುವ ಅಗತ್ಯವಿದೆ. ಅಲ್ಲದೆ ಕರಾವಳಿಯ ಕ್ರೀಡಾಭಿಮಾನಿಗಳು ಬಾಕ್ಸಿಂಗ್ನಂಥ ಕ್ರೀಡೆಗೆ ಉತ್ತೇಜನ ನೀಡಲು ಇಂಥ ಬಡಕುಟುಂಬದಿಂದ ಬಂದ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕಾದ ಅನಿವಾರ್ಯತೆ ಇದೆ.

