Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಕೊಲ್ಲಿ ರಾಷ್ಟ್ರದಲ್ಲಿ ಅರಳಿದ ಅವಳಿ ಕ್ರಿಕೆಟಿಗರು: ಹರೇನ್‌, ಹರೀತ್‌ ಶೆಟ್ಟಿ

ಇತ್ತೀಚಿಗೆ ಮುಕ್ತಾಯಗೊಂಡ 19 ವರ್ಷ ವಯೋಮಿತಿಯ ಏಷ್ಯಾಕಪ್‌ ಕ್ರಿಕೆಟ್‌ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ ತಲುಪಿದ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ತಂಡದಲ್ಲಿ ಹದಿಮೂರು ಮಂದಿ ಆಟಗಾರರು ಭಾರತೀಯರಿದ್ದರು. ಅದರಲ್ಲಿ ಕನ್ನಡಿಗರ ಪಾಲು ಅಧಿಕವಾಗಿತ್ತು. ಕೊಲ್ಲಿ ರಾಷ್ಟ್ರದಲ್ಲಿ ನೆಲೆಸಿರುವ ಮೂಡಬಿದಿರೆಯ ಹರೀಶ್‌ ಶೆಟ್ಟಿ ಹಾಗೂ ರೇಣುಕಾ ಶೆಟ್ಟಿ ದಂಪತಿಯ ಅವರ ಅವಳಿ ಮಕ್ಕಳಾದ ಹರೇನ್‌ ಮತ್ತು ಹರೀತ್‌ ಶೆಟ್ಟಿ ಪ್ರಮುಖರು. ಹರೀತ್‌ ಯುಎಇ ತಂಡದ ಪರ ಆಡಿದರೆ ಹರೇನ್‌ ಇಂಗ್ಲೆಂಡ್‌ನಲ್ಲಿ ಅಧ್ಯಯನ ಮಾಡುತ್ತ ಕ್ಲಬ್‌ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. Karnataka Shetty brothers shines in UAE cricket

ಯುಎಇಯಲ್ಲಿ ಜನರಿಗೆ ಕ್ರಿಕೆಟ್‌ ಆಸಕ್ತಿ ಇದ್ದರೂ ಅಲ್ಲಿ ಒಂದು ಸಿಸ್ಟಮ್‌ ಎಂಬುದು ಇಲ್ಲ. ಬಿಡುವಿನ ಸಮಯದಲ್ಲಿ ಮಾತ್ರ ಕ್ರಿಕೆಟ್‌. ಇದರಿಂದಾಗಿ ಹೆಚ್ಚಿನ ಆಟಗಾರರು ವೃತ್ತಿಪರರಾಗಿ ಮುಂದುವರಿಯುತ್ತಿಲ್ಲ. ಆದರೆ ಹರೀಶ್‌ ಶೆಟ್ಟಿಯವರು ಮಕ್ಕಳಿಗೆ ಓದಿನ ಜೊತೆಯಲ್ಲಿ ಕ್ರಿಕೆಟ್‌ಗೂ ಪ್ರೋತ್ಸಾಹ ನೀಡುತ್ತ, ಅವರನ್ನು ವೃತ್ತಿಪರ ಆಟಗಾರರನ್ನಾಗಿ ಮಾಡುವ ಹಂಬಲ ಹೊಂದಿದ್ದಾರೆ. ಹರೇನ್‌ ಮತ್ತು ಹರೀತ್‌ ಚಿಕ್ಕಂದಿನಿಂದಲೂ ಕ್ರಿಕೆಟ್‌ನಲ್ಲಿ ಡಗಿಸಿಕೊಂಡವರು. ಯುಎಇಯ ಡೆಸರ್ಟ್‌ ಕ್ಲಬ್‌ನಲ್ಲಿ ಆಡವಾಡಿಕೊಂಡು ಬೆಳೆದವರು. ವಿವಿಧ ವಯೋಮಿತಿಯ ಟೂರ್ನಿಗಳಲ್ಲಿ ಗಮನ ಸೆಳೆದವರು. ಹರೀಶ್‌ ಶೆಟ್ಟಿ ಕಳೆದ ಹಲವು ವರ್ಷಗಳಿಂದ ದುಬೈಯಲ್ಲಿ ವ್ಯವಹಾರ ನಡೆಸುತ್ತಿದ್ದು ಮಕ್ಕಳಿಗೆ ಕ್ರಿಕೆಟ್‌ನಲ್ಲಿ ಪ್ರೋತ್ಸಾಹ ನೀಡುತ್ತಿದ್ದಾರೆ. ಕ್ಲಬ್‌ ಪ್ರತಿನಿಧಿಗಳಾಗಿ ಹರೇನ್‌ ಮತ್ತು ಹರೀತ್‌ ಹಲವು ರಾಷ್ಟ್ರಗಳಲ್ಲಿ ಕ್ರಿಕೆಟ್‌ ಆಡಿದ್ದಾರೆ. ಜಿಂಬಾಬ್ವೆ ಪ್ರವಾಸಲ್ಲಿ ಹರೀತ್‌ ಉತ್ತಮ ಪ್ರದರ್ಶನ ತೋರಿದ್ದರು. ಬೆಂಗಳೂರಿನ ಜೈನ್‌ ಕಾಲೇಜು, ರಾಹುಲ್‌ ದ್ರಾವಿಡ್‌ ಅವರ ಸಿಕ್ಸ್‌ ಅಕಾಡೆಮಿ, ಶಾರ್ದೂಲ್‌ ಠಾಕೂರ್‌ ಅವರ ಮುಂಬೈಯಲ್ಲಿರುವ ಅಕಾಡೆಮಿಗಳಲ್ಲಿ ತರಬೇತಿ ಪಡೆದು ಪಳಗಿರುತ್ತಾರೆ.

ಹರೀತ್‌ ಮಧ್ಯಮ ವೇಗದ ಬೌಲರ್‌ ಹಾಗೂ ಉತ್ತಮ ಆಲ್ರೌಂಡರ್‌. ನೇಪಾಳದಲ್ಲಿ ನಡೆದ U19 ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯದಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಒಂದು ಪಂದ್ಯದಲ್ಲಿ 5 ವಿಕೆಟ್‌ ಸೇರಿದಂತೆ 10 ವಿಕೆಟ್‌ ಗಳಿಕೆಯ ಸಾಧನೆ ಮಾಡಿದ್ದಾರೆ. ಮಲೇಷ್ಯಾದಲ್ಲಿ ನಡೆದ ಪ್ರೀಮಿಯರ್‌ ಲೀಗ್‌ನಲ್ಲಿ 5 ಪಂದ್ಯಗಳಲ್ಲಿ 11 ವಿಕೆಟ್‌ ಗಳಿಕೆಯ ಸಾಧನೆ ಮಾಡಿದ್ದಾರೆ. ಫೈನಲ್‌ ಪಂದ್ಯದಲ್ಲಿ 5 ವಿಕೆಟ್‌ ಗಳಿಸಿ ಗಮನ ಸೆಳೆದಿದ್ದರು. ಈ ಸಾಧನೆ ಅವರನ್ನು ಯುಎಇ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ಸಹಾಯ ಮಾಡಿತು.

ಹರೇನ್‌ ವಿಕೆಟ್‌ ಕೀಪರ್‌ ಹಾಗೂ ಆರಂಭಿಕ ಆಟಗಾರ. U16 ವಯೋಮಿತಿಯಲ್ಲಿ ಯುಎಇನಲ್ಲಿ ವಿವಿಧ ಕ್ಲಬ್‌ಗಳ ಪರ ಆಡಿ ಈಗ ಉನ್ನತ ವ್ಯಾಸಂಗಕ್ಕಾಗಿ ಇಂಗ್ಲೆಂಡ್‌ನಲ್ಲಿ ನೆಲೆಸಿದ್ದು ಅಲ್ಲಿಯ ಕ್ಲಬ್‌ಗಳಲ್ಲಿ ಆಡುತ್ತಿದ್ದಾರೆ. ಇಂಗ್ಲೆಂಡ್‌ನ ಗ್ರಮ್ಸರ್ಸ್‌ ಕ್ರಿಕೆಟ್‌ ಕ್ಲಬ್‌ ಪರ ಆಡುತ್ತಿರುವ ಹರೇನ್‌ ಇದುವರೆಗೂ ಆಡಿರುವ ಹರೇನ್‌ 6 ಟಿ20 ಪಂದ್ಯಗಳಲ್ಲಿ 250 ರನ್‌ ಗಳಿಸಿರುತ್ತಾರೆ. ವೈಯಕ್ತಿಕ ಗರಿಷ್ಠ 97*. 24 ಬೌಂಡರಿ ಹಾಗೂ 11 ಸಿಕ್ಸರ್‌ ಸೇರಿದೆ. ಇತರ 23 ಲೀಗ್‌ ಪಂದ್ಯಗಳಲ್ಲಿ 730 ರನ್‌ ಗಳಿಸಿರುತ್ತಾರೆ. ವೈಯಕ್ತಿಕ ಗರಿಷ್ಠ ಮೊತ್ತ 102. 64 ಬೌಂಡರಿ ಹಾಗೂ 28 ಸಿಕ್ಸರ್‌ ಸೇರಿದೆ.  “ಇಲ್ಲಿ ಮಕ್ಕಳಿಗೆ ವೃತ್ತಿಪರ ಕ್ರಿಕೆಟ್‌ ತರಬೇತಿ ಸಿಗುತ್ತಿಲ್ಲ. ಒಂದು ಪ್ರಮುಖ ಟೂರ್ನಿ ಮುಗಿದ ನಂತರ ನಿರಂತರ ತರಬೇತಿಯ ಬಗ್ಗೆ ಗಮನ ಹರಿಸುತ್ತಿಲ್ಲ. ಇದರಿಂದಾಗಿ ಅವರಲ್ಲಿರುವ ಪ್ರತಿಭೆ ಕುಂಠಿತವಾಗುತ್ತದೆ. ಇಂಗ್ಲೆಂಡ್‌ನಲ್ಲಿ ಓದಿನ ಜೊತೆಯಲ್ಲಿ ಕ್ರಿಕೆಟ್‌ನಲ್ಲಿ ಉತ್ತಮ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇದೆ, ಹರೀತ್‌ಗೆ ಕ್ರಿಕೆಟ್‌‌ ಜೊತೆಯಲ್ಲಿ ಬಿಸಿನೆಸ್‌ ಬಗ್ಗೆ ಆಸಕ್ತಿ ಇದೆ,” ಎಂದು ಹರೀಶ್‌ ಶೆಟ್ಟಿ ಹೇಳಿದ್ದಾರೆ.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.