ಕರ್ನಾಟಕ ಪ್ರೀಮಿಯಲ್ ಲೀಗ್ (ಈಗ ಮಹಾರಾಜ ಟ್ರೋಫಿ) 102 ವಿಕೆಟ್, ಪರ್ಪಲ್ ಕ್ಯಾಪ್, ವೇಗದ ಅರ್ಧ ಶತಕ, ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಕಿಂಗ್ಸಲ್ ಇಲೆವೆನ್ ಪಂಜಾಬ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಪರ ಆಡಿ, ವಿರಾಟ್ ಕೊಹ್ಲಿಯ ವಿಕೆಟ್ ಗಳಿಕೆ ಸೇರಿ 19 ವಿಕೆಟ್, ರಣಜಿಯಲ್ಲಿ 51, ವಿಜಯ್ ಹಜಾರೆಯಲ್ಲಿ 34, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 60 ವಿಕೆಟ್ ಗಳಿಸಿ ರಾಜ್ಯದ ಪರ ಅತಿ ಹೆಚ್ಚು ವಿಕೆಟ್ ಗಳಿಸಿದ ಮೂರನೇ ಬೌಲರ್., ಮಹಾರಾಜ ಪ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ದೇಶದ ಉತ್ತಮ ಎಡಗೈ ಸ್ಪಿನ್ನರ್‌ಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸಂಭಾವ್ಯರ ಪಟ್ಟಿಯಲ್ಲೂ ಅವಕಾಶ ನೀಡುವುದಿಲ್ಲವೆಂದರೆ ಈ ರಾಜ್ಯದ ಕ್ರಿಕೆಟ್‌ಗೆ ಯಾವ ದುರ್ಗತಿ ಬಂದಿದೆ ಎಂಬುದನ್ನು ಅರ್ಥೈಸಿಕೊಳ್ಳಿ. What Jagdeesha Suchith has to do again playing for Karnataka?
ನಾನು ಹೇಳ ಹೊರಟಿರುವುದು ಈ ರಾಜ್ಯ ಕಂಡ ಉತ್ತಮ ಎಡಗೈ ಸ್ಪಿನ್ನರ್ ಹಾಗೂ ಆಲ್ರೌಂಡರ್ ಮೈಸೂರಿನ ಜಗದೀಶ್ ಸುಚಿತ್ ಅವರ ಬಗ್ಗೆ. “ರಾಜ್ಯದ ಯುವ ಪ್ರತಿಭೆಗಳಿಗೆ ಅವಕಾಶ ನೀಡುವುದೇ ನಮ್ಮ ಉದ್ದೇಶ” ಎಂದು ಹೇಳಿಕೊಂಡು ರಂಗಪ್ರವೇಶ ಮಾಡುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಯ್ಕೆ ಸಮಿತಿ ಒಬ್ಬ ಕ್ರಿಕೆಟಿಗನಿಂದ ಏನನ್ನು ಬಯಸುತ್ತಿದೆ ಎಂಬುದು ಅರ್ಥವಾಗದು. “ವಯಸ್ಸಿನ ಕಾರಣವ”ವನ್ನೊಡ್ಡಿ ಪ್ರತಿಭಾವಂತ ಕ್ರಿಕೆಟಿಗರು ಮನೆಯಲ್ಲಿರುವಂತೆ ಮಾಡುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಈ ಬಾರಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತಕ್ಕ ಬೆಲೆ ನೀಡಿದೆ. ರಣಜಿಯಲ್ಲೂ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ.
2015ರಲ್ಲಿ ಬಾಂಗ್ಲಾದೇಶ ಎ ತಂಡದ ವಿರುದ್ಧ ಪ್ರಥಮ ದರ್ಜೆ ಕ್ರಿಕೆಟ್ ಕಾಲಿಟ್ಟ ಸಚಿತ್ ಮೊದಲ ಎರಡು ಇನ್ನಿಂಗ್ಸ್‌ಗಳಲ್ಲಿ 7 ವಿಕೆಟ್ ಸಾಧನೆ ಮಾಡಿ ಗಮನ ಸೆಳೆದಿದ್ದರು. ನಂತರ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಹಲವು ಬಾರಿ ಅತಿ ಹೆಚ್ಚು ವಿಕೆಟ್ ಗಳಿಕೆಯ ಸಾಧನೆ ಮಾಡಿದವರು. ಹೆಚ್ಚಿನ ಋತುಗಳಲ್ಲಿ ಅತಿ ಹೆಚ್ಚು ವಿಕೆಟ್ ಗಳಿಕೆಯ ಬೌಲರ್ ಎನಿಸಿ ಒಟ್ಟು 102 ವಿಕೆಟ್ ಗಳಿಸಿದರು. ಇದರಿಂದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುವ ಅವಕಾಶವೂ ಸಿಕ್ಕಿತು. ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡುವ ಅವಕಾಶ ಸಿಗಬೇಕಾದರೆ ಆ ಬೌಲರ್ ಎಷ್ಟು ನೈಪುಣ್ಯತೆ ಹೊಂದಿರಬೇಕು ಎಂಬುದನ್ನುನೀವೇ ಊಹಿಸಿಕೊಳ್ಳಿ. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಜೆ. ಸುಚಿತ್ ಬ್ಯಾಟಿಂಗ್‌ನಲ್ಲೂ ಮಿಂಚಬಲ್ಲ ಆಟಗಾರ. ಇದಕ್ಕೆ ಅವರು ಎಲ್ಲ ಮಾದರಿಗಳಲ್ಲೂ ಗಳಿಸಿರುವ 821 ರನ್ ಸಾಕ್ಷಿ. 2018ರ ರಣಜಿ ಋತವಿನಲ್ಲಿ ಮುಂಬಯಿ, ವಿದರ್ಭ ಮತ್ತು ಮಹಾರಾಷ್ಟ್ರದಂಥ ಬಲಿಷ್ಠ ತಂಡಗಳ ವಿರುದ್ಧ 24 ವಿಕೆಟ್ ಗಳಿಸಿ ಗಮನ ಸೆಳೆದ ಸುಚಿತ್ ಅವರಿಗೆ 2019ರ ನಂತರ ಅವಕಾಶವೇ ಸಿಗಲಿಲ್ಲ. 2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯವಾಡಿದ್ದೇ ಕೊನೆ. ಇದು ಒಬ್ಬ ಉತ್ತಮ ಸ್ಪಿನ್ ಬೌಲರ್‌ಗೆ ರಾಜ್ಯ ಕ್ರಿಕೆಟ್ ಸಂಸ್ಥೆ ಮಾಡಿದ ಅನ್ಯಾಯ.
ಕೆಎಸ್‌ಸಿಎ ಒಬ್ಬ ಆಟಗಾರನ ಭವಿಷ್ಯ ಹೇಗೆ ನಾಶ ಮಾಡುತ್ತದೆ?
ಇದು ವಯಸ್ಸಾದವರೇ ಸೇರಿಕೊಂಡು ವಯಸ್ಸಾದವರನ್ನು ತೆಗೆಯುವ ತಂತ್ರ. ಕೆಪಿಎಲ್‌ನಲ್ಲಿ ವಿಕೆಟ್ ತೆಗೆಯುವಾಗ ಹೊಗಳುತ್ತಾರೆ. ಆದರೆ ರಾಜ್ಯದ ವಿಷಯ ಬಂದಾಗ ವಯಸ್ಸಾಗಿದೆ ಎನ್ನುತ್ತಾರೆ. ಮಹಾರಾಜ ಟ್ರೋಫಿಗೆ ಕಳೆ ಬರಲು ಈ ಆಟಗಾರರು ಬೇಕು. ಆದರೆ ರಣಜಿ, ಮುಷ್ತಾಕ್ ಅಲಿ ಅಥವಾ ವಿಜಯ ಹಜಾರೆ ಟ್ರೋಫಿ ಬರುತ್ತಲೇ ಈ ಆಟಗಾರರಿಗೆ ವಯಸ್ಸಾಗುತ್ತದೆ. ಸಾಮಾನ್ಯವಾಗಿ ಸಂಭಾವ್ಯರ ಪಟ್ಟಿಯನ್ನು ಆಯ್ಕೆ ಮಾಡುವಾಗ ಗರಿಷ್ಠ 30 ಆಟಗಾರರಿಗೆ ಅವಕಾಶ ನೀಡಲಾಗುತ್ತದೆ. ಆದರೆ ವಿಜಯ ಹಜಾರೆ ಟ್ರೋಫಿಗೆ ಅಯ್ಕೆಯಾದ ಸಂಭಾವ್ಯ ಆಟಗಾರರೇ 24. ಸಂಭಾವ್ಯರ ಪಟ್ಟಿಯಿಂದಲೇ ಕೈ ಬಿಟ್ಟರೆ ಮತ್ತೆ ಸಮಸ್ಯೆನೇ ಇರುವುದಿಲ್ಲ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಐಪಿಎಲ್ ಸೇರಿದಂತೆ ಇತರ ಟಿ20 ಲೀಗ್‌ಗಳಿಗೆ ಅವಕಾಶ ಸಿಗುವ ಟೂರ್ನಿ ಅಲ್ಲಿಗೇ ಆಯ್ಕೆ ಮಾಡದಿದ್ದರೆ ಕತೆ ಮುಗಿಸಿದಂತೆ. ರಣಜಿ ಸಂಭಾವ್ಯರ ತಂಡದದಿಂದಲೇ ಕೈ ಬಿಟ್ಟರೆ ರಣಜಿ ಆಡುವುದಾರೂ ಹೇಗೆ? ಅಲ್ಲಿಗೆ ಕ್ರಿಕೆಟ್ ಬದುಕೇ ಮುಗಿಸಿದಂತೆ. ಆಯ್ಕೆ ಸಮಿತಿಯಲ್ಲಿದ್ದುಕೊಂಡು ಕ್ರಿಕೆಟ್‌ಗಾಗಿ ಇಷ್ಟು ಕೆಲಸ ಮಾಡದಿದ್ದರೂ ಹೇಗೆ? ಯುವಕರಿಗೆ ಅವಕಾಶ ಕೊಡಬೇಕು, ಆದರೆ ಟೂರ್ನಿಯ ಮಧ್ಯೆ ಒಂದೊಂದು ಪಂದ್ಯಗಳಿಗೆ ಅವಕಾಶ ನೀಡಿದರೆ ಅದು ಒಂದು ರೀತಿ. 29 ವರ್ಷಕ್ಕೇ ಒಬ್ಬ ಕ್ರಿಕೆಟಿಗನಿಗೆ ವಯಸ್ಸಾಯಿತು ಎಂದು ಹೇಳುವವರು 35 ವರ್ಷದ ಆಟಗಾರನಿಗೆ ಅವಕಾಶ ನೀಡುತ್ತಲೇ ಇರುತ್ತಾರೆ. ಇದೆಂಥ ನ್ಯಾಯ? ಅನಿಸುವುದಿಲ್ಲವೇ?
ಬೇರೆ ರಾಜ್ಯಗಳಿಗೆ ಮನಸ್ಸು ಮಾಡಿದಾಗ!
ಒಂದು ರಾಜ್ಯವನ್ನು ತೊರೆದು ಇನ್ನೊಂದು ರಾಜ್ಯಕ್ಕೆ ಹೋಗಬೇಕಾದರೆ ಒಂದು ವರ್ಷ ಮುಂಚಿತವಾಗಿ ಸಿದ್ಧತೆ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಆಟಗಾರರು ಆಯಾ ರಾಜ್ಯಗಳ ಕ್ರಿಕೆಟ್ ಸಂಸ್ಥೆಯನ್ನು ಎನ್‌ಒಸಿಗಾಗಿ ಸಂಪರ್ಕಿಸುತ್ತಾರೆ. ಹಿರಿಯರಿಂದ ಏನಾದರೂ ಭರವಸೆ ಸಿಗಬಹುದೇ ಎಂದು ಪ್ರಯತ್ನಿಸುತ್ತಾರೆ. “ಅಯ್ಯೋ ನೀನು ಉತ್ತಮ ಆಟಗಾರ, ಉತ್ತಮ ಬೌಲರ್. ನೀನಿಲ್ಲದೆ ತಂಡ ಕಟ್ಟಲು ಹೇಗೆ ಸಾಧ್ಯ?, ಆತುರದ ನಿರ್ಧಾರರ ಬೇಡ, ಸ್ವಲ್ಪ ಕಾದು ನೋಡಿ,” ಎಂಬ ಉತ್ತರ ಸಿಗುವುದು ಸಹಜ. ಆದರೆ ಸಂಭಾವ್ಯರ ಪಟ್ಟಿ ಪ್ರಕಟಿಸುವಾಗ ಆ ಆಟಗಾರನನ್ನು ಹೊರಗಿಟ್ಟಿರುತ್ತಾರೆ, ಕೇಳಿದರೆ, “ವಯಸ್ಸಾಗಿದೆ” ಎಂದು. ಅಲ್ಲಿಗೆ ಒಂದು ವರ್ಷ ಕ್ರಿಕೆಟ್‌ನಿಂದ ದೂರ.
ಜಿ.ಆರ್. ವಿಶ್ವನಾಥ್, ಬೃಜೇಶ್ ಪಟೇಲ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಸುನಿಲ್ ಜೋಶಿ, ವೆಂಕಟೇಶ್ ಪ್ರಸಾದ್, ರೋಜರ್ ಬಿನ್ನಿ, ವಿನಯ್ ಕುಮಾರ್, ಕೆ.ಎಲ್. ರಾಹುಲ್, ಕರುಣ್ ನಾಯರ್, ದೊಡ್ಡ ಗಣೇಶ್, ರಾಬಿನ್ ಉತ್ತಪ್ಪ ಅವರಂಥ ಶ್ರೇಷ್ಠ ಆಟಗಾರರನ್ನು ಜಗತ್ತಿಗೆ ನೀಡಿದ ಒಂದು ಶ್ರೇಷ್ಠ ಕ್ರಿಕೆಟ್ ಸಂಸ್ಥೆಯಲ್ಲಿ ಈ ರೀತಿ ನಡೆಯುತ್ತಿವೆ ಎಂದು ತಿಳಿದಾಗ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರವಾಗುವುದು ಸಹಜ.
ರಾಜ್ಯದ ಕ್ರಿಕೆಟಿಗರು ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿರುವ ಕಾರಣವನ್ನು ಮಾಜಿ ಆಟಗಾರ ರಾಬಿನ್ ಉತ್ತಪ್ಪ ಬಯಲು ಮಾಡಿದ್ದಾರೆ. ರಾಜ್ಯ ಕ್ರಿಕೆಟ್ ಸಂಸ್ಥೆಯ ಆಯ್ಕೆಗೆ ಪೂರಕವೆಂಬಂತೆ ನಮ್ಮ ತಂಡ ರಾಷ್ಟ್ರ ಮಟ್ಟದಲ್ಲಿ ಪ್ರದರ್ಶನ ತೋರುತ್ತಿದೆ. ಒಂದು ಕಾಲದಲ್ಲಿ ಭಾರತ ತಂಡದಲ್ಲಿ ಅತಿ ಹೆಚ್ಚು ಆಟಗಾರರನ್ನು ಹೊಂದಿದ್ದ ಕರ್ನಾಟಕದ ಆಟಗಾರರು ಈಗ ವಿರಳವಾಗುತ್ತಿದ್ದಾರೆ. ಇದಕ್ಕೆ ಪ್ರತಿಭೆಯ ಆಯ್ಕೆ ಪ್ರಕ್ರಿಯೆಯೇ ಕಾರಣ.