ವೆಸ್ಟ್ ಇಂಡೀಸ್ ಗೆ ಸೋಲಲು ಮೂರು ದಿನ ಬೇಕಾಗಿಲ್ಲ!
ಏಜೆನ್ಸಿಸ್ ರಾಜ್ ಕೋಟ್
ಮೊದಲ ದಿನದಲ್ಲಿ ಪ್ರಥ್ವಿ ಶಾ, ಎರಡನೇ ದಿನದಲ್ಲಿ ವಿರಾಟ್ ಕೊಹ್ಲಿ (139) ಹಾಗೂ ರವೀಂದ್ರ ಜಡೇಜಾ (100*) ಶತಕ ಸಿಡಿಸುವುದರೊಂದಿಗೆ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 649 ರನ್ ಗಳಿಸಿರುವ ಭಾರತ ಗೆಲ್ಲಲು ವೇದಿಕೆ ಸಜ್ಜುಮಾಡಿಕೊಂಡಿದೆ.
ಮೊದಲ ಇನ್ನಿಂಗ್ಸ್ ನಲ್ಲಿ 9 ವಿಕೆಟ್ ನಷ್ಟಕ್ಕೆ 649 ರನ್ ಗಳಿಸಿ ಡಿಕ್ಲೇರ್ ಘೋಷಿಸಿತು. ಬೃಹತ್ ಮೊತ್ತವನ್ನು ಬೆಂಬತ್ತಿದ ವೆಸ್ಟ್ ಇಂಡೀಸ್ 94 ರನ್ ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.ಭಾರತಕ್ಕೆ ಎರಡನೇ ಇನ್ನಿಂಗ್ಸ್ ಗೆ ಅವಕಾಶ ನೀಡಲು 555 ಗಳಿಸಬೇಕಾಗಿದೆ.
ಇನ್ನು ಮೂರು ದಿನದ ಪಂದ್ಯ ಬಾಕಿ ಉಳಿದಿದ್ದು ವೆಸ್ಟ್ ಇಂಡೀಸ್ ಬೃಹತ್ ಸೋಲಿನ ಆತಂಕದಲ್ಲಿದೆ.
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ 24ನೇ ಶತಕ ಪೂರ್ಣಗೊಳಿಸಿದರು. ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯಂತ ವೇಗದಲ್ಲಿ 24ನೇ ಶತಕ ಪೂರ್ಣಗೊಳಿಸಿದ ಎರಡನೇ ಆಟಗರೆನಿಸಿದರು. ಡಾನ್ ಬ್ರಾಡ್ಮನ್ 66 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದರೆ ಕೊಹ್ಲಿ 123ನೇ ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದರು. ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್ ನಲ್ಲಿ ಚೊಚ್ಚಲ ಶತಕ ಗಳಿಸಿದರು.
92 ರನ್ ಗಳಿಸಿದ ರಿಷಬ್ ಪಂತ್ ಶತಕದಿಂದ ವಂಚಿತರಾದರು. ವೆಸ್ಟ್ ಇಂಡೀಸ್ ತಂಡದಿಂದ ಹಿಂದಿನ ವೈಭವ ನಿರೀಕ್ಷಿಸಲು ಸಾಧ್ಯವಿಲ್ಲ ಎಂಬುದನ್ನು ಈಗಿನ ತಂಡ ಮತ್ತೊಮ್ಮೆ ಸಾಬೀತುಪಡಿಸಿತು. ಹೆಚ್ಚು ಹೊತ್ತು ಕ್ರೀಸಿನಲ್ಲಿ ನಿಲ್ಲದ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದರು. ಮೊಹಮ್ಮದ್ ಶಮಿ 11ಕ್ಕೆ 2 ವಿಕೆಟ್ ಗಳಿಸಿದರೆ ಅಶ್ವಿನ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್ ತಲಾ ಒಂದು ವಿಕೆಟ್ ಗಳಿಸಿದರು.