Friday, October 4, 2024

ಭಾರತದಲ್ಲಿ ಕ್ರಿಕೆಟ್‌ ನಡೆಯುತ್ತಿರುವುದೇ ರಾಜಕೀಯದ ಪಿಚ್‌ನಲ್ಲಿ

ರಾಜಕೀಯ ಪ್ರವೇಶವಾದ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ)ಯು ಶ್ರೀಲಂಕಾ ಕ್ರಿಕೆಟ್‌ ಮಂಡಳಿಯನ್ನು ಅಮಾನತುಗೊಳಿಸಿರುವುದು ಸ್ವಾಗತಾರ್ಹ. ಅದೇ ರೀತಿ ಭಾರತದಲ್ಲಿ ಕ್ರಿಕೆಟ್‌ ರಾಜಕೀಯದಿಂದ ಹೊರತಾಗಿದೆಯೇ? ಇಲ್ಲಿ ನಿಜವಾದ ಕ್ರಿಕೆಟಿಗರು ಸಂಸ್ಥೆಗಳನ್ನು ನಡೆಸುತ್ತಿದ್ದಾರೆಯೇ? ಎಂಬ ಪ್ರಶ್ನೆ ಉದ್ಭವಿಸುವುದು ಸಹಜ.ಇಲ್ಲಿ ರಾಜಕೀಯ ಪ್ರವೇಶವಿಲ್ಲ, ಆದರೆ ರಾಜಕಾರಣಿಗಳೇ ದೇಶದ ಕ್ರಿಕೆಟ್‌ ಸಂಸ್ಥೆಯನ್ನು ನಡೆಸುತ್ತಿದ್ದಾರೆ ಎನ್ನುವುದು ಸ್ಪಷ್ಟ. In India cricket Administration run in Political pitch.

ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ)ಯನ್ನೇ ತೆಗೆದುಕೊಳ್ಳಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಮಗ ಜೇ ಶಾ ಬಿಸಿಸಿಐ ಕಾರ್ಯದರ್ಶಿ. ಕಾಂಗ್ರೆಸ್‌ನ ರಾಜೀವ ಶುಕ್ಲಾ 2000 ಇಸವಿಯಿಂದ ಬಿಸಿಸಿಐನ ವಿವಿಧ ಹುದ್ದೆಯಲ್ಲಿದ್ದಾರೆ. ಶರದ್ ಪವಾರ್‌ ಬಿಸಿಸಿಐನ ಅಧ್ಯಕ್ಷರಾಗಿದ್ದವರು. ಬಿಜೆಪಿಯ ಆಶೀಶ್‌ ಶೆಹ್ಲಾರ್‌ ಬಿಸಿಸಿಐನ ಖಜಾಂಚಿ. ಬಿಜೆಪಿ ಅನುರಾಗ್‌ ಠಾಕೂರ್‌ ಹಿಂದೆ ಬಿಸಿಸಿಐನ ಕಾರ್ಯದರ್ಶಿ ಮತ್ತು ಅಧ್ಯಕ್ಷರಾಗಿದ್ದವರು.ಈಗ ಹಿಮಾಚಲ ಪ್ರದೇಶ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ. 2019ರಲ್ಲಿ ಠಾಕೂರ್‌ ಸಹೋದರ ಅರುಣ್‌ ಧುಮಾಲ್‌ ಬಿಸಿಸಿಐಗೆ ಪ್ರವೇಶ ಮಾಡಿದರು.

ಪ್ರಧಾನಿ ನರೇಂದ್ರ ಮೋದಿಯವರು ಪ್ರಧಾನಿಯಾಗುವವರೆಗೂ ಗುಜರಾಜ್‌ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷರಾಗಿದ್ದರು. ನಂತರ ಅಮಿತ್‌ ಶಾ ಆ ಸ್ಥಾನವನ್ನು ತುಂಬಿದರು. ಬಳಿಕ ಅಮಿತ್‌ ಶಾ ಅವರ ಮಗ ಕಾರ್ಯದರ್ಶಿಯಾದರು. ಬಹಳ ಸಮಯದ ವರೆಗೂ ಗುಜರಾತ್‌ ಕ್ರಿಕೆಟ್‌ ಸಂಸ್ಥೆಯಲ್ಲಿ ಅಧ್ಯಕ್ಷರಿರಲಿಲ್ಲ. ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಧನರಾಜ್‌ ಪಿರಮಲ್‌ ನಾಥ್ವಾನಿ ಅವರು ಅಧ್ಯಕ್ಷರಾದರು. ಇವರೆಲ್ಲರೂ ರಾಜಕೀಯದ ಕೊಂಡಿ ಇರುವವರೇ.

ಜೇ ಶಾ ಬಿಸಿಸಿಐ ಕಾರ್ಯದರ್ಶಿಯಾದ ನಂತರ ಗುಜರಾತ್‌ ಕ್ರಿಕೆಟ್‌ ಸಂಸ್ಥೆಯ ಕಾರ್ಯದರ್ಶಿ ಸ್ಥಾನವನ್ನು ತೊರೆದರು. ನಂತರ ಏಷ್ಯನ್‌ ಕ್ರಿಕೆಟ್‌ ಮಂಡಳಿಯ ಅಧ್ಯಕ್ಷ ಹಾಗೂ ಐಸಿಸಿಯ ಹಣಕಾಸು ಸಮಿತಿಯಲ್ಲಿ ಸದಸ್ಯತ್ವ ಎಲ್ಲವೂ ಸಹಜವಾಗಿಯೇ ಸಿಕ್ಕಿತು.

ಇತಿಹಾಸವನ್ನೊಮ್ಮೆ ಹಿಂದಿರುಗಿ ನೋಡಿದಾಗ:

ಬಿಸಿಸಿಐನ ಇತ್ತೀಚಿನ ವರ್ಷಗಳ ಇತಿಹಾಸವನ್ನು ಗಮನಿಸಿದಾಗ ಹೆಚ್ಚಿನ ರಾಜ್ಯ ಸಂಸ್ಥೆಗಳಲ್ಲಿ ರಾಜಕಾರಣಿಗಲೇ ಆಟ ಆಡಿದ್ದಾರೆ. ಇಲ್ಲವೇ ತಮ್ಮ ಬಂಧುಗಳನ್ನು ಆ ಜಾಗದಲ್ಲಿ ಕೂರಿಸಿರುವ ಅಂಶ ಸ್ಪಷ್ಟವಾಗುತ್ತದೆ. ಅದು ಕಾಂಗ್ರೆಸ್‌ ಮತ್ತು ಬಿಜೆಪಿಯ ಪ್ರಭುತ್ವದಲ್ಲಿರುವುದು ಸ್ಪಷ್ಟ. ಕಾಂಗ್ರೆಸ್‌ನ ಮಾಧವ ರಾವ್‌ ಸಿಂಧಿಯಾ ಬಿಸಿಸಿಐನ ಅಧ್ಯಕ್ಷರಾಗಿದ್ದರು, ಇದರಿಂದಾಗಿ ಜ್ಯೋತಿರಾದಿತ್ಯ ಸಿಂಧಿಯಾ ಗ್ವಾಲಿಯರ್‌ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷರಾದರು. ಇದು ಅವರ ಮಗ ಮಹಾನಾರಾಯಮನ್‌ ಸಿಂಧಿಯಾ ಗ್ವಾಲಿಯರ್‌ ಕ್ರಿಕೆಟ್‌ ಸಂಸ್ಥೆಯ ಉಪಾಧ್ಯಕ್ಷರಾದರು.

ಫಾರೂಕ್‌ ಅಬ್ದುಲ್ಲಾ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದಾಗ ಅಲ್ಲಿಯ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಅರುಣ್‌ ಜೇಟ್ಲಿ ಡೆಲ್ಲಿ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷರಾಗಿದ್ದವರು, ಈಗ ಅವರ ಹೆಸರನ್ನು ಆ ಕ್ರೀಡಾಂಗಣಕ್ಕಿಡಲಾಗಿದೆ. ರಾಜಸ್ಥಾನ್‌ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ಸ್ಥಾನವನ್ನು ಬಿಜೆಪಿ ಅಮಿನ್‌ ಪಠಾಣ್‌ ವಹಿಸಿಕೊಂಡಿದ್ದರು. ಅಮಿತಾಬ್‌ ಚೌಧರಿ ಜಾರ್ಖಂಡ್‌ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಇವರು 2014ರಲ್ಲಿ ಬಿಜೆಪಿ ಸೇರಿದ್ದರು. ಆಂಧ್ರಪ್ರದೇಶದ ಕ್ರಿಕೆಟ್‌ ಸಂಸ್ಥೆಯನ್ನು ಬಿಜೆಪಿ ಸಂಸದ ಗೋಕರಾಜು ಗಂಗಾರಾಜು ಅಲಂಕರಿಸಿದ್ದರು. ಬಿಜೆಪಿಯ ಸಮರ್ಜಿತ್‌ ಸಿನ್ಹಾ ಬರೋಡ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಮನೋಹರ್‌ ಪರಿಕ್ಕರ್‌ ಅವರ ಆತ್ಮೀಯ ಗೆಳೆಯರಾಗಿದ್ದ ಶೇಖರ್‌ ಗೋವಾ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಒಡಿಶಾ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷರಾಗಿ ಕಾಂಗ್ರೆಸ್‌ನ ರಣಜಿಬ್‌ ಬಿಸ್ವಾಲ್‌ ಜವಾಬ್ದಾರಿ ನಿಭಾಯಿಸಿದ್ದರು. ಇವರು ಕಾಂಗ್ರೆಸ್‌ನ ಎಂಎಲ್‌ಸಿ. ಹರಿಯಾಣ ಕ್ರಿಕೆಟ್‌ ಸಂಸ್ಥೆಯನ್ನು ಅನಿರುಧ್‌ ಚೌಧರಿ ಮುನ್ನಡೆಸಿದ್ದರು.

ದೇಶದ ವಿವಿಧ ರಾಜ್ಯಗಳ ಕ್ರಿಕೆಟ್‌ ಸಂಸ್ಥೆಗಳ  ಈಗಿರುವ ಅಧ್ಯಕ್ಷರು, ಕಾರ್ಯದರ್ಶಿ, ಉಪಾಧ್ಯಕ್ಷ ಹಾಗೂ ಖಜಾಂಚಿ ಹುದ್ದೆಯಲ್ಲಿರುವವರನ್ನು ಗಮನಿಸಿದಾಗ ಅವರು ಒಂದಲ್ಲ ಒಂದು ರೀತಿಯಲ್ಲಿ ರಾಜಕೀಯದ ಪ್ರಭಾವದಿಂದಲೇ ಅಲ್ಲಿರುವುದು ಸ್ಪಷ್ಟವಾಗುತ್ತದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ ಇದನ್ನು ಹೇಗೆ ಪತ್ತೆ ಮಾಡುತ್ತದೆ. ಅದು ಏನೂ ಮಾಡೊಲ್ಲ ಏಕೆಂದರೆ ಕ್ರಿಕೆಟ್‌ ಜಗತ್ತು ನಡೆಯುತ್ತಿರುವುದೇ ಬಿಸಿಸಿಐ ಮೂಲಕ. ಹಣದ ಮುಂದೆ ಯಾವುದೇ ಆಟ ನಡೆಯದು. ಬಿಸಿಸಿಐ ಅಧ್ಯಕ್ಷ ಸ್ಥಾನದಲ್ಲಿರುವ ವಿಶ್ವಕಪ್‌ ವಿಜೇತ ತಂಡದ ಮಾಜಿ ಆಟಗಾರ ರೋಜರ್‌ ಬಿನ್ನಿ ಏನಾದರೂ ಧ್ವನಿ ಎತ್ತುವರೇ? ಇಲ್ಲ. ಅವರು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷರಾಗಿದ್ದಾಗಲೂ ಹೀಗೆಯೇ ಇದ್ದರು. ಆಡುವವರು ಆಡಿದರು ಅಷ್ಟೆ.

Related Articles