Saturday, July 27, 2024

ಸ್ಪೋರ್ಟ್‌ ಕ್ಲೈಮಿಂಗ್‌ ವಿಶ್ವಕಪ್‌: ಮಣಿಕಂಠನ್‌ಗೆ ಕಂಚು

ಬೆಂಗಳೂರು: ಸ್ವಿಜರ್ಲೆಂಡ್‌ನ ವಿಲ್ಲಾರ್ಸ್‌ನಲ್ಲಿ ಅಂತಾರಾಷ್ಟ್ರೀಯ ಸ್ಪೋರ್ಟ್‌ಪ್ಯಾರಾ ಕ್ಲೈಮಿಂಗ್‌ ಫೆಡರೇಷನ್‌ ಆಯೋಜಿಸಿದ್ದ ಸ್ಪೋರ್ಟ್‌ ಕ್ಲೈಮಿಂಗ್‌ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕರ್ನಾಟಕದ ಮಣಿಕಂಠನ್‌ ಕುಮಾರ್‌ ಕಂಚಿನ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.

ಅಮೆರಿಕದ ಸ್ಪರ್ಧಿ ಚಿನ್ನದ ಪದಕ ಗೆದ್ದರೆ, ಬೆಳ್ಳಿ ಇಸ್ರೆಲ್‌ನ ಪಾಲಾಯಿತು.

“ಈ ಬಾರಿ ಚಿನ್ನಗೆಲ್ಲುವ ಗುರಿ ಇಟ್ಟುಕೊಂಡಿದ್ದೆ, ಆದರೆ ಕೊನೆಯ ಕ್ಷಣದಲ್ಲಿ ಮಾಡಿದ ಪ್ರಮಾದದಿಂದಾಗಿ ಮೊದಲೆರಡು ಸ್ಥಾನಗಳಿಂದ ವಂಚಿತನಾದೆ. ಆ ತಪ್ಪು ಮುಂದಿನ ಸ್ಪರ್ಧೆಗಳಲ್ಲಿ ಪುನರಾವರ್ತನೆಯಾಗದಂತೆ ನೋಡಿಕೊಳ್ಳುವೆ, ಕಂಚಿನ ಪದಕ ಖುಷಿ ಕೊಟ್ಟಿದೆ ಎಂದು ಮಣಿಕಂಠನ್‌ ಹೇಳಿದ್ದಾರೆ.

ಈ ಋತುವಿನಲ್ಲಿ ನಡೆದ ಮೂರು ಜಾಗತಿಕ ಮಟ್ಟದ ಸ್ಪರ್ಧೆಯಲ್ಲಿ ಮಣಿಕಂಠನ್‌ ಎರಡು ಪದಕಗಳನ್ನು ಗೆದ್ದಿದ್ದಾರೆ. ಅಮೇರಿಕಾದಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಹಾಗೂ ಸ್ವಿಜರ್ಲೆಂಡ್‌ನಲ್ಲಿ ಕಂಚು. ಆಸ್ಟ್ರಿಯಾದಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದರು.

“ಈ ಸ್ಪರ್ಧೆಯೊಂದಿಗೆ ಈ ವರ್ಷದ ಸ್ಪರ್ಧೆಗಳು ಮುಗಿದಿದ್ದು, 2023ರ ವಿಶ್ವಕಪ್‌ ಮತ್ತೆ ಸ್ವಿಜರ್ಲೆಂಡ್‌ನ ಬರ್ನ್‌ನಲ್ಲಿ ನಡೆಯಲಿದೆ, ಅಲ್ಲಿ ಉತ್ತಮ ಪ್ರದರ್ಶನ ತೋರಲು ನಿರಂತರ ಶ್ರಮವಹಿಸುವೆ,” ಎಂದು ಹೇಳಿದರು.

ಪ್ಯಾರಾ ಸ್ಪೋರ್ಟ್‌ ಕ್ಲೈಮಿಂಗ್‌ನಲ್ಲಿ ಸದ್ಯ ವಿಶ್ವದಲ್ಲೇ ಮೂರನೇ ರಾಂಕ್‌ ಹೊಂದಿರುವ ಮಣಿಕಂಠನ್‌ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಹಲವಾರು ಪದಕಗಳನ್ನು ಗೆದ್ದ ತಂದ ಸಾಧಕ.

Related Articles