ಬ್ಯಾಂಡ್ಮಿಟನ್ ಅಭಿವೃದ್ಧಿಗೆ ಪ್ರೋತ್ಸಾಹಿಸಲು ಮುಖ್ಯಮಂತ್ರಿಗಳಿಗೆ ಮನವಿ
ಬೆಂಗಳೂರು: ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ ನೂತನ ಅಧ್ಯಕ್ಷ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರು ತಮ್ಮ ನಿಯೋಗದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು, ರಾಜ್ಯದಲ್ಲಿ ಬ್ಯಾಡ್ಮಿಂಟನ್ ಅಭಿವೃದ್ಧಿಗೆ ಪ್ರೋತ್ಸಾಹ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ. Former Minister Kumar Bangarappa, the new president of the Karnataka Badminton Association, along with his delegation, met Chief Minister Siddaramaiah and requested him to encourage the development of badminton in the state
ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಕಾಲದಲ್ಲಿ ಅದ್ಭುತ ಬೆಳವಣಿಗೆ ಕಂಡಿದ್ದ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಗೆ ಅವರ ಮಗ ಕುಮಾರ ಬಂಗಾರಪ್ಪ ಅವರೇ ಅಧ್ಯಕ್ಷರಾಗಿದ್ದು, ಹೊಸ ಯೋಜನೆಗಳೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ.
ಭಾರತದ ಬ್ಯಾಡ್ಮಿಂಟನ್ ಇತಿಹಾಸವನ್ನು ಗಮನಿಸಿದಾಗ ಕರ್ನಾಟಕದ ಕೊಡುಗೆ ಅಪಾರವಾದುದು. ಪ್ರಕಾಶ್ ಪಡುಕೋಣೆ, ವಿಮಲ್ ಕುಮಾರ್, ಅರವಿಂದ್ ಭಟ್, ಅಶ್ವಿನಿ ಪೊಪ್ಪಪ್ಪ, ಅನೂಪ್ ಶ್ರೀಧರ್ ಹಾಗೂ ಇತರರ ಕೊಡುಗೆ ಗಣನೀಯ. ಭಾರತದ ಶ್ರೇಷ್ಠ ಆಟಗಾರರಿಗೆ ಬೆಂಗಳೂರಿನಲ್ಲಿ ತರಬೇತಿ ಸಿಕ್ಕರೆ ಅವರ ಆಟಕ್ಕೆ ಹೊಸ ರೂಪ ಸಿಕ್ಕಂತೆ. ಇಂಥ ಸಂಸ್ಥೆಗೆ ಈಗ ಮತ್ತಷ್ಟು ಚೈತನ್ಯ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಟೂರ್ನಿಗಳನ್ನು ನಡೆಸುವ ಹಾಗೂ ಗ್ರಾಮೀಣ ಮಟ್ಟದಲ್ಲಿ ಒಲಿಂಪಿಕ್ಸ್ ಕ್ರೀಡೆ ಬ್ಯಾಡ್ಮಿಂಟನ್‌ಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡುವ ಗುರಿಯನ್ನು ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಹೊಂದಿದೆ.

ಕ್ರೀಡಾ ಇಲಾಖೆಯನ್ನು ಸ್ವತಃ ಮುಖ್ಯಮಂತ್ರಿಗಳೇ ಹೊಂದಿದ್ದರಿಂದ ಕ್ರೀಡಾಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ರಾಜ್ಯದಲ್ಲಿ ಪ್ರತಿಯೊಂದು ಕ್ರೀಡೆಗಳಿಗೂ ಹೆಚ್ಚಿನ ಒತ್ತು ನೀಡುತ್ತಿದ್ದು, ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಕೂಟಗಳು ನಡೆಯುತ್ತಿವೆ.
ಕರ್ನಾಟಕದ ಯುವ ಆಟಗಾರರು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಅತ್ಯಾಧುನಿಕ ಮೂಲಸೌಕರ್ಯ, ವೈಜ್ಞಾನಿಕ ತರಬೇತಿ ಮತ್ತು ಸಮಗ್ರ ಬೆಂಬಲ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ತನ್ನ ಮೂಲಸೌಕರ್ಯ ವಿಸ್ತರಣೆ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣಗಳು ಹಾಗೂ ತರಬೇತಿ ಕೇಂದ್ರಗಳ ಸ್ಥಾಪನೆ, ಜೊತೆಗೆ ಜಿಲ್ಲೆ ಮತ್ತು ಗ್ರಾಮೀಣ ಪ್ರದೇಶಗಳ ಪ್ರತಿಭೆಗಳ ಉತ್ತೇಜನಕ್ಕೆ ಸರ್ಕಾರದ ಸಹಕಾರವನ್ನು ನೀಡುವಂತೆ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಕುಮಾರ್ ಬಂಗಾರಪ್ಪ ನೇತೃತ್ವದ ನಿಯೋಗವು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.
ಈ ಬಾರಿ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಗೆ ಉತ್ತಮ ಆಡಳಿತ ತಂಡ ಆಯ್ಕೆಯಾಗಿದೆ. ಸದಸ್ಯರು ಕ್ರೀಡೆಯ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಆಯ್ಕೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಆಟಗಾರರು, ಆಡಳಿತದಲ್ಲಿ ನುರಿತವರು, ತರಬೇತಿಯಲ್ಲಿ ಪಳಗಿದವರು, ಹಿಂದೆ ಬ್ಯಾಡ್ಮಿಂಟನ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿ ಅನುಭವ ಪಡೆದವರೇ ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿದಿರುವುದರಿಂದ ರಾಜ್ಯದಲ್ಲಿ ಬ್ಯಾಡ್ಮಿಂಟನ್ ಕ್ರೀಡೆ ಇನ್ನಷ್ಟು ಅಭಿವೃದ್ಧಿ ಹೊಂದುವುದರಲ್ಲಿ ಸಂಶಯವಿಲ್ಲ.

