Friday, April 19, 2024

ಅಗ್ರ ಪಂಕ್ತಿಯಲ್ಲಿ ಉಗ್ರ ಹೋರಾಟ

ಗುವಾಹಟಿ, ಡಿಸೆಂಬರ್ 4

ಬೆಂಗಳೂರು ಎಫ್ ಸಿ ತಂಡ ಲೀಗ್‌ನಲ್ಲಿ ಇದುವರೆಗೂ ಉತ್ತಮ ತಂಡವಾಗಿ ಮೂಡಿ ಬಂದಿದೆ. ಆಡಿರುವ ಎಂಟು ಪಂದ್ಯಗಳಲ್ಲಿ ಬೆಂಗಳೂರು ಅಜೇಯವಾಗಿ ಉಳಿಸಿದೆ. ಏಳು ಪಂದ್ಯಗಳಲ್ಲಿ ಜಯ ಗಳಿಸಿದೆ. ಸತತ ಆರು ಪಂದ್ಯಗಳಲ್ಲಿ ನಿರಂತರ ಜಯ ಕಂಡಿದೆ.

ಆದರೆ ಇನ್ನು ಮುಂದೆ ಲೀಗ್‌ನಲ್ಲಿ ತನಗಂತಿ ಬಲಿಷ್ಠ ತಂಡಗಳೊಂದಿಗೆ ಹೋರಾಡುವ ಹಂತ ತಲುಪಿದೆ. ಅವುಗಳಲ್ಲಿ ಒಂದು ನಾರ್ತ್ ಈಸ್ಟ್ ಯುನೈಟೆಡ್ ತಂಡ. ಇಲ್ಲಿನ ಇಂದಿರಾ ಗಾಂಧಿ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ಇತ್ತಂಡಗಳು ಕುತೂಹಲದ ಪಂದ್ಯಕ್ಕೆ ಮುಖಾಮುಖಿಯಾಗಲಿವೆ.
ಬೆಂಗಳೂರು ತಂಡದ ಅಜೇಯ ಓಟಕ್ಕೆ ಬ್ರೇಕ್ ಹಾಕಲು ನಾರ್ತ್ ಈಸ್ಟ್ ತಂಡದ ಕೋಚ್ ಎಲ್ಕೋ ಷಟೋರಿ ಉತ್ಸುಕರಾಗಿದ್ದಾರೆ. ಆತಿಥೇಯ ತಂಡ ಮನೆಯಂಗಣದಲ್ಲಿ ಮಿಶ್ರಫಲ ಕಂಡಿದೆ. ಮನೆಯಂಗಣದಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ಗೆದ್ದಿರುವುದು ಒಂದು ಮಾತ್ರ. ಆದರೆ ಬುಧವಾರದ ಪಂದ್ಯದಲ್ಲಿ ನಾರ್ತ್ ಈಸ್ಟ್ ತಂಡ ಬೆಂಗಳೂರಿನ ಓಟಕ್ಕೆ ತಡೆಯೊಡ್ಡಲಿದೆ ಎಂದು ಷಟೋರಿ ಅತ್ಯಂತ ಆತ್ಮವಿಶ್ವಾಸದಲ್ಲಿ ಹೇಳಿದ್ದಾರೆ. ಆದರೆ ನಿರಂತರ ಪಂದ್ಯಗಳು ಇರುವುದರಿಂದ ನಾರ್ತ್ ಈಸ್ಟ್ ತಂಡಕ್ಕೆ ಇದು ಸುಲಭ  ಸಾಧ್ಯವಾದುದಲ್ಲ.
‘ವೇಳಾಪಟ್ಟಿಯನ್ನು ಗಮನಿಸಿದರೆ ಬೆಂಗಳೂರು ತಂಡಕ್ಕೆ ಇಲ್ಲಿ ಹೆಚ್ಚು ಲಾಭವಾಗಿದೆ. ಆದರೆ ಅವರ ಉತ್ತಮ ಆಟಗಾರ ಮಿಕು ಅವರು ಅಲಭ್ಯವಾಗಿದ್ದಾರೆ. ಇದು ತಂಡಕ್ಕೆ ಹಿನ್ನಡೆಯ ವಿಚಾರ. ಆದರೆ ಅವರು ಮಿಕು ಇಲ್ಲದೆಯೂ ಪಂದ್ಯ ಗೆಲ್ಲಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಬಾರ್ತಲೋಮ್ಯೊ ಒಗ್ಬಚೆ ಅವರೊಂದಿಗೆ ಗೋಲ್ಡನ್ ಬೂಟ್ ಸ್ಪರ್ಧೆಯಲ್ಲಿ ಮಿಕು ಕೂಡ ಇದ್ದಾರೆ,‘ ಎಂದು ಷಟೋರಿ ಹೇಳಿದ್ದಾರೆ.
ಬೆಂಗಳೂರು ತಂಡದ ಡಿಮಾಸ್ ಡೆಲ್ಗಾಡೋ ಹಾಗೂ ಎಲಿಕ್ ಪಾರ್ತಲು ಅವರಿಗೆ ಮಿಡ್‌ಫೀಲ್ಡ್‌ನಲ್ಲಿ ಸವಾಲೊಡ್ಡಲು ಜೋಸ್ ಲ್ಯೂಡೋ ಹಾಗೂ ರೌಲಿಂಗ್ ಬೋರ್ಗಸ್ ಸಜ್ಜಾಗಿದ್ದಾರೆ.
ಮನೆಯಂಗಣದ ಹೊರಗಡೆ ನಡೆದ ಪಂದ್ಯದಲ್ಲಿ ಬೆಂಗಳೂರು ಆಡಿರುವ ನಾಲ್ಕು ಪಂದ್ಯಗಳಲ್ಲಿ ನಾಲ್ಕರಲ್ಲೂ ಜಯ ಗಳಿಸಿ ಶೇ. 100ರ ಸಾಧನೆ ಮಾಡಿದೆ. ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿರುವ ಮಿಕು ಅವರ ಅನುಪಸ್ಥಿತಿಯಲ್ಲೂ ಸುನಿಲ್ ಛೆಟ್ರಿ ಹಾಗೂ ಉದಾಂತ ಸಿಂಗ್ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ.
ತಂಡದ ಸಮಗ್ರ ಹೋರಾಟದ ಬಗ್ಗೆ ಬೆಂಗಳೂರು ಕೋಚ್ ಕಾರ್ಲಸ್ ಕ್ಯೂಡ್ರಾಡ್ ಅವರಿಗೆ ಮೆಚ್ಚುಗೆ ಇದೆ. ರಾಹುಲ್ ಭಿಕೆ ಹಾಗೂ ನಿಶು ಕುಮಾರ್ ಅವರಂಥ ಆಟಗಾರರು ತಂಡದ ಗೋಲು ಗಳಿಕೆಯಲ್ಲಿ ಪ್ರಮುಖ ಪಾತ್ರವಹಿಸಿರುತ್ತಾರೆ. ತಂಡದ ಪ್ಲೇ ಆಫ್  ಹಾದಿಯಲ್ಲಿ ಪ್ರತಿಯೊಬ್ಬ ಆಟಗಾರರೂ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ.
‘ಈ ಋತುವಿನಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ತಂಡ ಉತ್ತಮ ಪ್ರದರ್ಶನ ತೋರಿದೆ. ಅವರು ಆಡಿರುವ ಪ್ರತಿಯೊಂದು ಪಂದ್ಯಲವನ್ನೂ ವೀಕ್ಷಿಸಿದಾ, ತಂಡದ ಯಶಸ್ಸಿನ  ಹಿಂದೆ ಉತ್ತಮ ರೀತಿಯಲ್ಲಿ ಶ್ರಮವಹಿಸಲಾಗುತ್ತಿದೆ ಎಂಬುದು ಸ್ಪಷ್ಟ. ತಂಡದ ಆಟಗಾರರು ಕಠಿಣ ಶ್ರಮ ವಹಿಸುತ್ತಿದ್ದಾರೆ. ಅವರು ಕೆಲವು ಉತ್ತಮ ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದಾರೆ, ಇದರಿಂದ ಕ್ಲಬ್ ಉತ್ತಮ ರೀತಿಯಲ್ಲಿ ಬೆಳೆಯುತ್ತಿರುವುದನ್ನು ಗಮನಿಸಬಹುದು,‘ ಎಂದು ಕ್ಯೂಡ್ರಾಟ್ ಹೇಳಿದ್ದಾರೆ.
ಮನೆಯಂಗಣದ ಹೊರಗಡೆ ಬೆಂಗಳೂರು ತಂಡ ಒತ್ತಡವನ್ನು ಉತ್ತಮ ರೀತಿಯಲ್ಲಿ ನಿಭಾಯಿಸುತ್ತಿದೆ. ಬೆಂಗಳೂರು ತಂಡವನ್ನು ನಿಯಂತ್ರಿಸುವುದು ಹೇಗೆ ಎಂಬುದರ ಬಗ್ಗೆ ಷಟೋರಿ ತಮ್ಮ ಆಟಗಾರರಿಗೆ ರಣತಂತ್ರವನ್ನು ಹೇಳಿಕೊಟ್ಟಿದ್ದಾರೆ. ಆದ್ದರಿಂದ ನಾಳೆಯ ಪಂದ್ಯ ಸಾಕಷ್ಟು ಕುತೂಹಲದಿಂದ ಕೂಡಿರುವುದು ಸ್ಪಷ್ಟ.

Related Articles