ಗೋವಾ, ನವೆಂಬರ್, 22, 2020
ಕ್ವಿಸಿ ಅಪ್ಪಿಯ್ಯ (49ನೇ ನಿಮಿಷ) ಪೆನಾಲ್ಟಿ ಮೂಲಕ ಗಳಿಸಿದ ಏಕೈಕ ಗೋಲಿನಿಂದ ಪ್ರಭುತ್ವ ಸಾಧಿಸಿದ ನಾರ್ಥ್ ಈಸ್ಟ್ ಯುನೈಟೆಡ್ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಮುಂಬೈ ಸಿಟಿ ವಿರುದ್ಧ 1-0 ಗೋಲಿನಿಂದ ಜಯ ಗಳಿಸಿ 7ನೇ ಆವೃತ್ತಿಯಲ್ಲಿ ಜಯದ ಹೆಜ್ಜೆ ಇಟ್ಟಿತು. ಅಹಮದ್ ಜಾಹವ್ ರೆಡ್ ಕಾರ್ಡ್ ಗೆ ತುತ್ತಾಗಿ ಕೇವಲ 10 ಮಂದಿ ಆಟಗಾರರಲ್ಲೇ ಹೆಚ್ಚಿನ ಅವಧಿನ್ನು ಆಡಬೇಕಾಗಿ ಬಂದದ್ದು ಮುಂಬೈ ಸಿಟಿ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು.
ಪೆನಾಲ್ಟಿಯಲ್ಲಿ ಗೋಲಿನ ಮಿಂಚು
ಕೇವಲ 10 ಆಟಗಾರರಲ್ಲೇ ದ್ವಿತಿಯಾರ್ಧವನ್ನು ಆರಂಭಿಸಿದ ಮುಂಬೈಸಿಟಿ ತಂಡಕ್ಕೆ ಆರಂಭದಲ್ಲೇ ಅನಿರೀಕ್ಷಿತ ಆಘಾತ. ಕಾರ್ನರ್ ಹೊಡೆತವೊಂದಕ್ಕೆ ಮುಂಬೈ ಆಟಗಾರನ ಕೈ ತಗಲಿದ್ದನ್ನು ಗಮನಿಸಿದ ರೆಫರಿ ನಾರ್ಥ್ ಈಸ್ಟ್ ಗೆ ಪೆನಾಲ್ಟಿ ಗೋಲಿಗೆ ಅವಕಾಶ ಕಲ್ಪಿಸಿದರು. 49ನೇ ನಿಮಿಷದಲ್ಲಿ ಸಿಕ್ಕ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಕ್ವಿಸಿ ಅಪ್ಪಿಯ್ಯ ಮುಂಬೈ ತಂಡದ ಗೋಲ್ ಕೀಪರ್ ನನ್ನು ವಂಚಿಸಿ ಗೋಲು ಗಳಿಸಿದರು. ನಾರ್ಥ್ ಈಸ್ಟ್ ತಂಡ ಆ ಬಳಿಕ ಪಂದ್ಯದ ಮೇಲೆ ಹಿಡಿತ ಸಾಧಿಸಿತು.
ಗೋಲಿಲ್ಲದ ಪ್ರಥಮಾರ್ಧ
ಮುಂಬೈ ಸಿಟಿ ಎಫ್ ಸಿ ಮತ್ತು ನಾರ್ಥ್ ಈಸ್ಟ್ ಯುನೈಟೆಡ್ ತಂಡಗಳ ನಡುವಿನ ಪಂದ್ಯದ ಪ್ರಥಮಾರ್ಧದಲ್ಲಿ ಅಲ್ಪ ಮಟ್ಟದ ಪ್ರಮಾದವನ್ನು ಎಸಗಿದ ಮುಂಬೈ ತಂಡದ ಅಹಮದ್ ಜಾಹವ್ ಅವರಿಗೆ ತರಾತುರಿಯಲ್ಲಿ ರೆಡ್ ಕಾರ್ಡ್ ನೀಡಿದ್ದು ಚರ್ಚೆಗೆ ಗ್ರಾಸವಾಯಿತು. ಉಳಿದಂತೆ ಲೊಬೆರೊ ಪಡೆ ಚೆಂಡಿನ ಮೇಲೆ ಹೆಚ್ಚಿನ ನಿಯಂತ್ರಣ ಸಾಧಸಿತ್ತು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಮುಂಬೈ ವಿಫಲವಾಗಿತ್ತು. ಉತ್ತಮ ಕಾರ್ನರ್, ಫ್ರೀ ಕಿಕ್ ಅವಕಾಶಗಳು ಮುಂಬೈ ತಂಡದಿಂದ ಗೊಲಾಗಿ ಪರಿವರ್ತನೆಯಾಗಲಿಲ್ಲ. ಪಂದ್ಯದ ಆರಂಭದಿಂದಲೂ ನಾರ್ಥ್ ಈಸ್ಟ್ ಚೆಂಡಿನ ಮೇಲೆ ನಿಯಂತ್ರಣ ಸಾಧಿಸುವಲ್ಲಿ ವಿಫಲವಾಗಿತ್ತು. ಕಳೆದ ಋತುವಿನಲ್ಲಿ ಮಿಂಚಿದ್ದ ಬಾರ್ಥಲೋಮ್ಯು ಓಗ್ಬಚೆ ಅವರಿಗೆ ಅವಕಾಶ ಸಿಗಲಿಲ್ಲ. ಮುಂಬೈ ಸಿಟಿ ತಂಡ 306 ಬಾರಿ ಚೆಂಡನ್ನು ಪಾಸ್ ಮಾಡಿದ್ದರೂ ಯಾವುದೂ ಗೋಲ್ ಬಾಕ್ಸ್ ಕಡೆಗೆ ಗುರಿಯಾಗಿ ಸಾಗಲಿಲ್ಲ. ನಾರ್ಥ್ ಈಸ್ಟ್ ತಂಡ ತನ್ನ ಹಿಂದಿನ ದೌರ್ಬಲ್ಯಗಳನ್ನು ಸರಿಪಡಿಸಿಕೊಂಡಲ್ಲಿ ಮುಂಬೈ ಸವಾಲನ್ನು ಮಸರ್ಥವಾಗಿ ಎದುರಿಸಬಹುದು.
ಹೊಸ ಉತ್ಸಾಹದಲ್ಲಿ ಹೊಸ ಹೋರಾಟ
ಹೀರೋ ಇಂಡಿಯನ್ ಸೂಪರ್ ಲೀಗ್ ನ 7ನೇ ಆವೃತ್ತಿಯ 2ನೇ ಪಂದ್ಯದಲ್ಲಿ ಮುಂಬೈ ಸಿಟಿ ಎಫ್ ಸಿ ಮತ್ತು ನಾರ್ಥ್ ಈಸ್ಟ್ ಯುನೈಟೆಡ್ ತಂಡಗಳು ತಿಲಕ್ ಮೈದಾನದಲ್ಲಿ ಮುಖಾಮುಖಿಯಾದವು. ಎರಡೂ ತಂಡಗಳಲ್ಲಿ ಗಮನೀಯವಾದ ಬದಲಾವಣೆ ಇರುವುದರಿಂದ ಎರಡೂ ತಂಡಗಳು ಜಯವನ್ನೇ ಗುರಿಯಾಗಿಸಿಕೊಂಡು ಅಂಗಣಕ್ಕಿಳಿದವು. ಹಿಂದಿನ ಋತುವಿಗಿಂತ ಉತ್ತಮ ಫಲಿತಾಂಶವನ್ನು ಇತ್ತಂಡಗಳು ನಿರೀಕ್ಷಿಸಿವೆ. ಗೋವಾ ತಂಡದ ಯಶಸ್ಸಿಗೆ ಕಾರಣರಾಗಿದ್ದ ಸರ್ಗಿಯೋ ಲೊಬೆರಾ ಅವರ ಆಗಮನ ಮುಂಬೈ ಸಿಟಿ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಬಾರ್ಥಲೋಮ್ಯು ಓಗ್ಬಚೆ, ಹ್ಯುಗೋ ಬೌಮಾಸ್, ಸಿ ಗೊಡಾರ್ಡ್ ಮತ್ತು ಮೊರ್ತದಾ ಫಾಲ್ ಅವರು ಮುಂಬೈ ಸಿಟಿ ತಂಡವನ್ನು ಸೇರಿದ್ದು ತಂಡದ ಬಲವನ್ನು ಹೆಚ್ಚಿಸಿದೆ. ಈಗ ಮುಂಬೈ ಸಿಟಿ ತಂಡದಲ್ಲಿ ಗೆಲ್ಲಲು ಬೇಕಾದ ಎಲ್ಲ ರೀತಿಯ ಸೌಲಭ್ಯ ಇದೆ. ಆದರೆ ಯಾವ ರೀತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂಬುದು ಕುತೂಹಲ. ನಾರ್ಥ್ ಈಸ್ಟ್ ಯುನೈಟೆಡ್ ಉತ್ತಮ ಆಟಗಾರರಿಂದ ಕೂಡಿದ ತಂಡ. ಇದ್ರಿಸ್ಸಾ ಸಿಲ್ಲಾ ಮತ್ತು ಕ್ವಿಸಿ ಅಪ್ಪಿಯ್ಯ ಅವರಂಥ ಉತ್ತಮ ವಿದೇಶಿ ಆಟಗಾರರಿದ್ದಾರೆ. ಪರ್ವತಪ್ರದೇಶದ ತಂಡ ಡಿಫೆನ್ಸ್ ವಿಭಾಗದಲ್ಲಿ ದುರ್ಬಲವಾಗಿದೆ, ಕಳೆದ ಬಾರಿ 30 ಗೋಲುಗಳನ್ನು ಗಳಿಸುವ ಅವಕಾಶ ನೀಡಿದೆ, ಈ ಬಾರಿ ಆ ತಪ್ಪುಗಳ ಪುನರಾವರ್ತನೆಯಾಗದಂತೆ ನೋಡಿಕೊಂಡರೆ ನಾರ್ಥ್ ಈಸ್ಟ್ ಹೊಸ ಹಾದಿಕಂಡುಕೊಳ್ಳಬಹುದು.