Tuesday, March 19, 2024

ನಾರ್ತ್ ಈಸ್ಟ್ ತಂಡಕ್ಕೆ ಅಮೂಲ್ಯ ಜಯ

ಪುಣೆ, ನವೆಂಬರ್ 27

ಬಾರ್ತಲೋಮ್ಯೊ ಒಗ್ಬಚೆ (23ನೇ ನಿಮಿಷ) ಹಾಗೂ ಜುವಾನ್ ಮಾಸ್ಕಿಯ (90ನೇ ನಿಮಿಷ ) ಗಳಿಸಿದ ಗೋಲಿನಿಂದ ಆತಿಥೇಯ ಎಫ್ ಸಿ ಪುಣೆ ಸಿಟಿ ವಿರುದ್ಧದ  ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ತಂಡ 2-0 ಅಂತರದಲ್ಲಿ ಜಯ ಗಳಿಸಿ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ತಲುಪಿದೆ.

ಪ್ರಥಮಾರ್ಧದಲ್ಲಿ ಮುನ್ನಡೆ
ನಾರ್ತ್ ಈಸ್ಟ್ ಯುನೈಟೆಡ್ ತಂಡವನ್ನು ಕಳೆದ ಬಾರಿ ಅತ್ಯಂತ  ಹಗುರವಾಗಿ ಪರಿಗಣಿಸಲಾಗಿತ್ತು. ಆದರೆ ಈ ಬಾರಿ ಪ್ರಶಸ್ತಿ ಗೆಲ್ಲುವು ಫೇವರಿಟ್ ತಂಡಗಳಲ್ಲಿ ಒಂದಾಗಿ ರೂಪುಗೊಳ್ಳುತ್ತಿದೆ. ಇದಕ್ಕೆ ಮುಖ್ಯ ಕಾರಣ ಬಾರ್ತಲೋಮ್ಯೊ ಒಗ್ಬಚೆ.  ಪ್ರತಿಯೊಂದು ಜಯದಲ್ಲೂ ಈ ಆಟಗಾರನ ಪಾತ್ರ ಪ್ರಮುಖವಾಗಿತ್ತು.  ಇತ್ತಂಡಗಳಿಗೂ ಗೋಲು ಗಳಿಸುವ ಅವಕಾಶ ಉತ್ತಮವಾಗಿತ್ತು. ನಾರ್ತ್ ಈಸ್ಟ್ ಯುನೈಟೆಡ್‌ನ ಗೋಲ್‌ಕೀಪರ್ ಪವನ್ ಕುಮಾರ್‌ಗೆ ನಿಜವಾಗಿಯೂ ಹೀರೋ ಆಫ್ ದಿ  ಮ್ಯಾಚ್ ಗೌರವ ನೀಡಬೇಕು. ಏಕೆಂದರೆ ಪವನ್ ಕುಮಾರ್ ಅವರು ನಿಯಂತ್ರಣ ಕಳೆದುಕೊಳ್ಳುತ್ತಿದ್ದರೆ ಮನೆಯಂಗಣದಲ್ಲಿ ಪುಣೆ ತಂಡ ಈಗಾಗಲೇ ಮೂರು ಗೋಲುಗಳನ್ನು ಗಳಿಸಿರುತ್ತಿತ್ತು.  23ನೇ ನಿಮಿಷದಲ್ಲಿ ಒಗ್ಬಚೆ ಗಳಿಸಿದ ಗೋಲಿನಿಂದ ಪ್ರವಾಸಿ ತಂಡ ನಾರ್ತ್ ಈಸ್ಟ್ ಯುನೈಟೆಡ್ ಮೇಲುಗೈ ಸಾಧಿಸಿತು. ಪ್ರಥಮಾರ್ಧದ  ಆಟ ಕುತೂಹಲದಿಂದ ಕೂಡಿದ್ದರೂ ಆತಿಥೇಯರ ಪಾಲಿಗೆ ಅಂತಿಮವಾಗಿ ನಿರಾಸೆಯುಂಟಾಗಿತ್ತು.
ಒಗ್ಬಚೆ ಮಿಂಚು
21ನೇ ನಿಮಿಷದಲ್ಲಿ ಬಾರ್ತಲೋಮ್ಯೊ ಒಗ್ಬಚೆಗೆ ಗೋಲು ಗಳಿಸುವ ಅವಕಾಶ ಉತ್ತಮವಾಗಿತ್ತು. ಆದರೆ ಕಮಲ್ಜಿತ್ ಸಿಂಗ್ ಉತ್ತಮ ರೀತಿಯಲ್ಲಿ ತಡೆದು ಆರಂಭಿಕ ತಡೆಯೊಡ್ಡಿದರು. 23ನೇ ನಿಮಿಷದಲ್ಲಿ ಒಗ್ಬಚೆಯನ್ನು ತಡೆಯಲು ಯಾರಿಂದಲೂ ಸಾ‘್ಯವಾಗಲಿಲ್ಲ. ಇಂಡಿಯನ್ ಸೂಪರ್ ಲೀಗ್‌ನಲ್ಲಿ ನಾರ್ತ್ ಈಸ್ಟ್ ಪರ 8ನೇ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಫೆಡರಿಕೊ ಗಲೆಗೋ ನೀಡಿದ  ಕಾರ್ನರ್‌ನಿಂದ ನೀಡಿದ ಪಾಸ್ ಎಲ್ಲರನ್ನೂ ದಾಟಿ ಒಗ್ಬಚೆ ಅವರ ನಿಯಂತ್ರಣಕ್ಕೆ ಸಿಕ್ಕಿತು. ಎದೆಯಲ್ಲೇ ಚೆಂಡನ್ನು ನಿಯಂತ್ರಿಸಿದ ಒಗ್ಬಚೆ ನೇರವಾಗಿ  ಗೋಲ್‌ಬಾಕ್ಸ್‌ಗೆ ತಳ್ಳಿದರು. ಇದರೊಂದಿಗೆ ಪ್ರಸಕ್ತ ಲೀಗ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಸಮಬಲ ಸಾಧಿಸಿದರು. ಗೋವಾದ ಫೆರಾನ್ ಕೊರೊಮಿನಾಸ್ ಕೂಡ 8 ಗೋಲುಗಳನ್ನು ಗಳಿಸಿ ಅಗ್ರ ಸ್ಥಾನದಲ್ಲಿದ್ದಾರೆ.
ಹೀರೋ ಇಂಡಿಯನ್ ಸೂಪರ್ ಲೀಗ್‌ನ 41 ಪಂದ್ಯಕ್ಕೆ ನಾರ್ತ್ ಈಸ್ಟ್ ಯುನೈಟೆಡ್ ಹಾಗೂ ಆತಿಥೇಯ ಪುಣೆ ತಂಡ ಸಜ್ಜಾದವು. ಎರಡೂ ತಂಡಗಳಿಗೂ ಈ ಪಂದ್ಯ ಪ್ರಮುಖವಾಗಿದೆ. ನಾರ್ತ್ ಈಸ್ಟ್ ಗೆದ್ದರೆ ಎರಡನೇ ಸ್ಥಾನ ತಲುಪಲಿದೆ. ಪುಣೆಗೆ ಅಂಕಪಟ್ಟಿಯಲ್ಲಿ ಮೇಲೇರಬೇಕಾದರೆ ಜಯದ ಅನಿವಾರ್ಯತೆ ಇದೆ. ಕಳೆದ ವಾರ ಜೆಮ್ಷೆಡ್ಪುರ ಎಫ್ಸಿ  ವಿರುದ್ಧ ಜಯ ಗಳಿಸಿದ ಆತ್ಮವಿಶ್ವಾಸದಲ್ಲಿರುವ ಪುಣೆ ತಂಡ ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ. ಪುಣೆ ತಂಡದ ಪರ ಮಾರ್ಸೆಲಿನೋ ಗೋಲು ಗಳಿಸುತ್ತಾರೆಂಬ ನಿರೀಕ್ಷೆ ತಂಡದ್ದು. ಇಯಾನ್ ಹ್ಯೂಮೆ ತಂಡದಲ್ಲಿರುವುದು ಪುಣೆ ಪಡೆ ಆತ್ಮವಿಶ್ವಾಸ ಹೆಚ್ಚಲು ಮತ್ತೊಂದು ಕಾರಣ.
ಮನೆಯಂಗಣದ ಹೊರಗಡೆ ನಡೆದ ಎಲ್ಲ ಮೂರು ಪಂದ್ಯಗಳಲ್ಲೂ ನಾರ್ತ್ ಈಸ್ಟ್ ಜಯ ಗಳಿಸಿರುವುದು ಗಮನಾರ್ಹ. ಇಲ್ಲಿಯೂ ಫೇವರಿಟ್ ಆಗಿಯೇ ಅಂಗಣಕ್ಕಿಳಿದಿದೆ. ಬಾರ್ತಲೋಮ್ಯೊ ಒಗ್ಬಚೆ ಅತಿ ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಗ್ಯಾಲೆಗೊ ಗೋಲು ಗಳಿಸಲು ನೆರವಾಗುತ್ತಿದ್ದಾರೆ.

Related Articles