Saturday, July 27, 2024

ಮೊದಲು ಖಾಲೋ , ಬಳಿಕ ಖೇಲೋ ಫಿಫಾ ವಿಶ್ವಕಪ್‌ ಫುಟ್ಬಾಲ್‌!

ಸೋಮಶೇಖರ್‌ ಪಡುಕರೆ, ಬೆಂಗಳೂರು

ಭಾನುವಾರದಿಂದ ಪುಟ್ಟ ರಾಷ್ಟ್ರ ಕತಾರ್‌ನಲ್ಲಿ ಫಿಫಾ ವಿಶ್ವಕಪ್‌ ಫುಟ್ಬಾಲ್‌ ಸಮರ ಆರಂಭಗೊಳ್ಳುತ್ತಿದೆ. ಜಗತ್ತಿನ ಅತ್ಯಂತ ಕುತೂಹಲದ ಫುಟ್ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಪಾಲ್ಗೊಳ್ಳುತ್ತಿಲ್ಲ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಇದಕ್ಕೆ ಕಾರಣ ಭಾರತ ಅರ್ಹತೆ ಪಡೆದಿಲ್ಲ, ಅದಕ್ಕೆ ಆಡುತ್ತಿಲ್ಲ. ಉತ್ತರ ಎಷ್ಟು ಸರಳ. ಆದರೆ ಭಾರತೀಯ ಕ್ರೀಡಾಭಿಮಾನಿಗಳು ಅತ್ಯಂತ ನೋವಿನಿಂದ ಈ ಉತ್ತರವನ್ನು ಕೊಡಬೇಕು. ಜಗತ್ತಿನ ಮಾಧ್ಯಮಗಳು ಕೂಡ ಪ್ರತಿ ಬಾರಿ ವಿಶ್ವಕಪ್‌ಗೆ ಸ್ವಲ್ಪ ದಿನ ಬಾಕಿ ಇರುವಂತೆ ಭಾರತ ಯಾಕೆ ಪಾಲ್ಗೊಳ್ಳುತ್ತಿಲ್ಲ? ಎಂಬ ಒಂದು ವರದಿಯನ್ನು ಬರೆದು ಕೈತೊಳೆದುಕೊಳ್ಳುತ್ತವೆ. ಇಲ್ಲಿ ಖೇಲೋಗಿಂತ ಖಾಲೋ ಪದಕ್ಕೆ ಹೆಚ್ಚಿನ ಒತ್ತು ಇದೆ. ಹಾಗಾಗಿ ಭಾರತದಲ್ಲಿ ಫುಟ್ಬಾಲ್‌ ಅಂಗಣಕ್ಕಿಂತ ಹೊರಗಡೆಯೇ ಹೆಚ್ಚು ತುಳಿತಕ್ಕೊಳಗಾಗಿದೆ.

1950ರಲ್ಲಿ ಬ್ರಜಿಲ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಭಾರತಕ್ಕೆ ಪಾಲ್ಗೊಳ್ಳಲು ಆಹ್ವಾನ ಬಂದಿತ್ತು. ಆದರೆ ಬರಿಗಾಲಿನಲ್ಲಿ ಆಡುವ ಅವಕಾಶ ನೀಡದ ಕಾರಣ ಭಾರತ ಪಾಲ್ಗೊಂಡಿಲ್ಲ ಎಂದು ಕೆಲವರ ಅಭಿಪ್ರಾಯವಾದರೆ, ಭಾರತ ವಿಶ್ವಕಪ್‌ಗೆ ಹೆಚ್ಚು ಪ್ರಾಧಾನ್ಯತೆ ನೀಡದೆ ಒಲಿಂಪಿಕ್ಸ್‌ ಕಡೆಗೆ ಗಮನ ಹರಿಸಿತೆಂಬುದು ಇನ್ನೊಂದು ಉತ್ತರ.

ಕ್ರಿಕೆಟ್‌ನಿಂದಾಗಿ ಫುಟ್ಬಾಲ್‌ ಸೋತಿಲ್ಲ!

ಮಾತೆತ್ತಿದರೆ ಕ್ರಿಕೆಟ್‌ನಿಂದಾಗಿ ಫುಟ್ಬಾಲ್‌ ಸೇರಿದಂತೆ ಇತರ ಕ್ರೀಡೆಗಳು ಭಾರತದಲ್ಲಿ ಏಳಿಗೆ ಕಾಣಲಿಲ್ಲ ಎನ್ನುವುದು ಸಾಮಾನ್ಯ ವಾದವಾಗಿದೆ. ಆದರೆ ಕ್ರಿಕೆಟ್‌ ಒಂದೇ ಕಾರಣವಲ್ಲ. ಕ್ರಿಕೆಟ್‌ನಲ್ಲಿ ಹಣ ಬರುತ್ತದೆ ಅದಕ್ಕೆ ಅದು ಅಭಿವೃದ್ಧಿ ಹೊಂದಿತು, ಜನರು ಹೆಚ್ಚು ಆಸಕ್ತಿ ವಹಿಸುತ್ತಾರೆ ಅದಕ್ಕೆ ಅಭಿವೃದ್ಧಿ ಹೊಂದಿತು ಎಂಬೆಲ್ಲ ಕಾರಣಗಳೂ ಸಿಗುತ್ತವೆ. ಭಾರತದಲ್ಲಿ ಫುಟ್ಬಾಲ್‌ ಏಳಿಗೆ ಕಾಣದಿರಲು ಕೇವಲ ಕ್ರಿಕೆಟ್‌ ಒಂದೇ ಕಾರಣವಲ್ಲ. ಕ್ರಿಕೆಟ್‌ನಲ್ಲಿರುವ ವೃತ್ತಿಪರತೆ ಇತರ ಕ್ರೀಡೆಗಳಲ್ಲಿಲ್ಲ. ಕಬಡ್ಡಿ ನೋಡಿ, ಪ್ರೋ ಕಬಡ್ಡಿ ಲೀಗ್‌ ಯಶಸ್ಸು ಕಂಡಿತು. ಹಣವೇ ಇಲ್ಲದ ಕಬಡ್ಡಿಯಲ್ಲೀಗ ಆಟಗಾರರು ಹರಾಜಿನಲ್ಲಿ 2.5 ಕೋಟಿ ರೂ. ವರಗೆ ಖರೀದಿ ಆಗುತ್ತಿದ್ದಾರೆ. ಯಾಕೆ ಕ್ರಿಕೆಟ್‌ ನಡುವೆಯೂ ಕಬಡ್ಡಿ ಯಶಸ್ಸು ಕಂಡಿತು? ಇದಕ್ಕೆ ವೃತ್ತಿಪರತೆ, ಆಟಗಾರರಿಗೆ ಸಿಗುವ ಗೌರವ. ಲೀಗ್‌ ಆಯೋಜನೆ. ಮೂಲಭೂತ ಸೌಕರ್ಯ, ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ, ಉತ್ತಮ ಆಡಳಿತ ವ್ಯವಸ್ಥೆ ಇವುಗಳೆಲ್ಲವೂ ಒಂದು ಕ್ರೀಡೆಯ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಈಗ ಬೆಂಗಳೂರಿನಲ್ಲಿ ಸೂಪರ್‌ ಡಿವಿಜನ್‌ ಫುಟ್ಬಾಲ್‌ ಚಾಂಪಿಯನ್‌ಷಿಪ್‌ ನಡೆಯುತ್ತಿದೆ. ಎಷ್ಟು ವರದಿಗಾರರು ಅಲ್ಲಿಗೆ ಹೋಗಿ ವರದಿ ಮಾಡುತ್ತಾರೆ? ಎಷ್ಟು ಪತ್ರಿಕೆಗಳು ಪಂದ್ಯಗಳ ಫಲಿತಾಂಶವನ್ನು ಪ್ರಕಟಿಸುತ್ತಿವೆ? ಎಷ್ಟು ಸುದ್ದಿ ವಾಹಿನಿಗಳು ಕನಿಷ್ಠ ಸ್ಕ್ರಾಲ್‌ ಸುದ್ದಿಯನ್ನಾದರೂ ಪ್ರಕಟಿಸುತ್ತಿವೆ? ಕರ್ನಾಟಕ ರಾಜ್ಯ ಫುಟ್ಬಾಲ್‌ ಸಂಸ್ಥೆ ಎಷ್ಟು ಜಿಲ್ಲೆಗಳಲ್ಲಿ ಪ್ರತಿಭಾನ್ವೇಷಣೆ ಕಾರ್ಯಕ್ರಮ ನಡೆಸುತ್ತಿದೆ. ಎಷ್ಟು ಗ್ರಾಮೀಣ ಆಟಗಾರರು ಬೆಂಗಳೂರಿನಲ್ಲಿ ಆಡುತ್ತಿದ್ದಾರೆ? ಇದಕ್ಕೆಲ್ಲ ಉತ್ತರ ಹುಡುಕುತ್ತ ಹೋದರೆ ಭಾರತ ಫಿಫಾ ವಿಶ್ವಕಪ್‌ ಫುಟ್ಬಾಲ್‌ ಆಡಲು ಯಾಕೆ ಅರ್ಹತೆ ಪಡೆಯಲಿಲ್ಲ ಎಂಬುದಕ್ಕೆ ಉತ್ತರ ಸಿಗುತ್ತದೆ.

ಈಗ ದೇಶದ ಪ್ರಮುಖ ನಗರಗಳಲ್ಲಿ ಇಂಡಿಯನ್‌ ಸೂಪರ್‌ ಲೀಗ್‌ ಫುಟ್ಬಾಲ್‌ ಚಾಂಪಿಯನ್‌ಷಿಪ್‌ ನಡೆಯುತ್ತಿದೆ. ಇಲ್ಲಿಯ ಪಂದ್ಯಗಳ ವರದಿಯನ್ನು ಎಷ್ಟು ಮಾಧ್ಯಮಗಳು ವರದಿ ಮಾಡುತ್ತಿವೆ? ದೇಶದ ಈ ಪ್ರತಿಷ್ಠಿತ ಲೀಗ್‌ ಬಗ್ಗೆ ಎಷ್ಟು ಕ್ರೀಡಾಭಿಮಾನಿಗಳಿಗೆ ಅರಿವು ಇದೆ? ಬೈಚುಂಗ್‌ ಭುಟಿಯಾ, ಐ ಎಂ ವಿಜಯನ್‌, ಸುನಿಲ್‌ ಛೆಟ್ರಿ ಹೊರತುಪಡಿಸಿದರೆ ಬೇರೆ ಆಟಗಾರರ ಪರಿಚಯ ಯಾರಿಗಿದೆ? ನಮಗೆ ಯೂರೋಪಿಯನ್‌ ಫುಟ್ಬಾಲ್‌ನಲ್ಲಿ ಆಡುವ ಆಟಗಾರರ ಪರಿಚಯ, ಅವರ ಆದಾಯ, ಅವರು ಆಡುವ ತಂಡ ಇವುಗಳ ಬಗ್ಗೆ ಪರಿಚಯ ಇರುತ್ತದೆ. ಆದರೆ ನಮ್ಮ ದೇಶದಲ್ಲಿ ನಡೆಯುತ್ತಿರುವ ಲೀಗ್‌ ಬಗ್ಗೆ ಅಷ್ಟು ಗೊತ್ತಿರುವುದಿಲ್ಲ. ಕಾರಣ ಲೀಗ್‌ ನಿರ್ವಹಣೆ ಮಾಡುವ ರೀತಿ. ಪ್ರಸಾರ, ಪ್ರಚಾರ, ಪ್ರೇಕ್ಷರ ಆಕರ್ಷಣೆ ಇವೆಲ್ಲ ಭಾರತಕ್ಕೆ ಹೊಸತು. ಯೂರೋಪಿಯನ್‌ ಪ್ರೀಮಿಯರ್‌ ಲೀಗ್‌ನ ಫೈನಲ್‌ ಪಂದ್ಯ ವೀಕ್ಷಣೆಗೆ ಯಾವುದೋ ಪಿಆರ್‌ ಏಜೆನ್ಸಿಯ ಮೂಲಕ ಫುಟ್ಬಾಲ್‌ ಅಭಿಮಾನಿಗಳಿಗೆ ಪಂದ್ಯ ವೀಕ್ಷಿಸಲು ಅನುವು ಮಾಡಿಕೊಟ್ಟ ಉದಾಹರಣೆಗಳಿಗೆ. ಆದರೆ ಇಂಡಿಯನ್‌ ಸೂಪರ್‌ ಲೀಗ್‌ ಫುಟ್ಬಾಲ್‌ ಅಭಿಮಾನಿಗಳ ಆಕರ್ಷಣೆಗಾಗಿ ಯಾವ ಯೋಜನೆಯನ್ನು ಹಾಕಿಕೊಂಡಿದೆ ಎಂದರೆ ಉತ್ತರ ಸಿಗುವುದಿಲ್ಲ.

141 ಕೋಟಿ ಜನ ಸಂಖ್ಯೆ ಇರುವ ಭಾರತದಲ್ಲಿ ಫುಟ್ಬಾಲ್‌ ಅಭಿವೃದ್ಧಿಯನ್ನು ಮಾಡಲು ತಮ್ಮ ತರಬೇತಿ ಕೇಂದ್ರಗಳನ್ನು ನಡೆಸಲು ಯೂರೋಪಿಯನ್‌ ಫುಟ್ಬಾಲ್‌ ತಂಡಗಳು ತಮ್ಮ ತರಬೇತಿ ಕೇಂದ್ರಗಳನ್ನು ನಡೆಸಲು ಮುಂದಾಗಿವೆ. ಮುಂದಾದರೂ ಸುನಿಲ್‌ ಛೆಟ್ರಿ ಅವರಂಥ ಆಟಗಾರರನ್ನು ನಾವು ಕಾಣಬಹುದೋ ಏನೋ.

ಆಡಳಿತ ವ್ಯವಸ್ಥೆ:

ಭಾರತದ ಯಾವುದೇ ಕ್ರೀಡಾ ಸಂಸ್ಥೆಗಳ ತೆಗೆದುಕೊಳ್ಳಿ, ಅಲ್ಲಿ ಉನ್ನತ ಹುದ್ದೆಯಲ್ಲಿರುವವರು ಮಂತ್ರಿಗಳು, ಸಂಸದರು, ಶಾಸಕರು ಅಥವಾ ಅವರ ಮಕ್ಕಳು ಇಲ್ಲ ರಾಜಕೀಯ ಪಕ್ಷಗಳ ಪ್ರಮುಖರೇ ಇರುತ್ತಾರೆ. ಕರ್ನಾಟಕ ಫುಟ್ಬಾಲ್‌ ಸಂಸ್ಥೆಯಲ್ಲಿ ಎರಡು ಮೂರು ವರ್ಷಗಳ ಹಿಂದಿನ ಪದಾಧಿಕಾರಿಗಳ ಪಟ್ಟಿಯನ್ನು ನೋಡಿದಾಗ ಅಲ್ಲಿ 75 ವರ್ಷ ಮೇಲ್ಪಟ್ಟವರೇ ಇರುತ್ತಾರೆ. ಇವರಿಗೆ ಫುಟ್ಬಾಲ್‌ ಅಭಿವೃದ್ಧಿಗಿಂತ ಅವರ ಹುದ್ದೆಯನ್ನು ಕಾಯ್ದುಕೊಳ್ಳುವುದೇ ಮುಖ್ಯವಾಗಿರುತ್ತದೆ. ರಾಜಕಾರಣಿ ಪ್ರಫುಲ್‌ ಪಟೇಲ್‌ ಅವರಂಥವರು ದಶಕಗಳ ಕಾಲ ಅಖಿಲ ಭಾರತ ಫುಟ್ಬಾಲ್‌ ಸಂಸ್ಥೆಯ ಉನ್ನತ ಹುದ್ದೆಯನ್ನು ಇತರರಿಗೆ ಬಿಟ್ಟುಕೊಡಲಿಲ್ಲ. ಕೊನೆಗೆ ನ್ಯಾಯಾಲಯವೇ ಮಧ್ಯಸ್ಥಿಕೆ ವಹಿಸಬೇಕಾಯಿತು. ಆದರೆ ಫಿಫಾ ಈ ಕ್ರಮವನ್ನು ವಿರೋಧಿಸಿ ಎಐಎಫ್‌ಎಫ್‌ ಗೆ ನಿಷೇಧ ಹೇರಿತು. ಇದು ಜಾಗತಿಕ ಮಟ್ಟದಲ್ಲಿ ನಮಗಾದ ಅವಮಾನ. ಈಗ ಚುನಾವಣೆ ನಡೆದು ಭಾರತ ಫುಟ್ಬಾಲ್‌ ತಂಡದ ಮಾಜಿ ಗೋಲ್‌ಕೀಪರ್‌ ಕಲ್ಯಾಣ್‌ ಚೌಬೆ ಅವರು ಅಧ್ಯಕ್ಷರಾಗಿದ್ದಾರೆ. ಆದರೆ ಕರ್ನಾಟಕದ ಹ್ಯಾರಿಸ್‌ ಅವರಂಥ ರಾಜಕಾರಣಿಗಳೂ ಉಪಾಧ್ಯಕ್ಷ ಹುದ್ದೆಯನ್ನು ಹೊಂದುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಹ್ಲಿ ಬೇಕು, ಛೆಟ್ರಿ ಬೇಡ:

ನಮ್ಮ ಮಕ್ಕಳಲ್ಲಿ ಮತ್ತು ಹೆತ್ತವರಲ್ಲಿ ಕ್ರಿಕೆಟ್‌ ಯಾವ ರೀತಿಯಲ್ಲಿ ಪ್ರಭಾವ ಬೀರಿದೆ ಎಂದರೆ ಕ್ರೀಡೆಯಲ್ಲಿ ಯಾರಂತಾಗುವೆ ಎಂದು ಮಗುವನ್ನು ಕೇಳಿದರೆ ಆ ಮಗು ಕ್ರಿಕೆಟ್‌ ತಾರೆ ವಿರಾಟ್‌ ಕೊಹ್ಲಿಯ ಹೆಸರು ಹೇಳುತ್ತದೆಯೇ ವಿನಃ ಫುಟ್ಬಾಲ್‌ ತಾರೆ ಸುನಿಲ್‌ ಛೆಟ್ರಿಯಂತಾಗುವೆ ಎಂದು ಹೇಳುವುದಿಲ್ಲ. ಬೆಟ್ಟಿಂಗ್‌ ಆಪ್‌ಗಳು ಭಾರತಕ್ಕೆ ಕಾಲಿಟ್ಟಾಗಿನಿಂದ ಕ್ರಿಕೆಟ್‌ ಬಗ್ಗೆ ಯುವಕರಲ್ಲಿ ಕ್ರಿಕೆಟ್‌ನ ಬಗ್ಗೆ ಹೆಚ್ಚು ಕಾಳಜಿ ಇದೆಯೇ ಹೊರತು ಫುಟ್ಬಾಲ್‌ ಅಥವಾ ಇತರ ಕ್ರೀಡೆಗಳ ಬಗ್ಗೆ ಆಸಕ್ತಿ ಇಲ್ಲ. ಭಾರತದಲ್ಲಿ ರಾಜಕೀಯ ಪಕ್ಷಗಳೂ ಕ್ರಿಕೆಟ್‌ನ ಸಮಸ್ಯೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತವೆಯೇ ಹೊರತು ಇತರ ಕ್ರೀಡೆಗಳ ಬಗ್ಗೆ ಇಲ್ಲ. ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಬಗ್ಗೆ ಇರುವ ಆಸಕ್ತಿ ಕರ್ನಾಟಕ ರಾಜ್ಯ ಫುಟ್ಬಾಲ್‌ ಸಂಸ್ಥೆಯ ಬಗ್ಗೆ ರಾಜಕೀಯ ಪಕ್ಷಗಳಿಗೆ ಇರುವುದಿಲ್ಲ. ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಜೇ ಶಾ ಅವರ ಸ್ಥಾನದ ಬಗ್ಗೆ ಇರುವ ಕಾಳಜಿ ಫುಟ್ಬಾಲ್‌ ಸಂಸ್ಥೆಯ ಕಾರ್ಯದರ್ಶಿ ಸ್ಥಾನದ ಬಗ್ಗೆ ಇರುವುದಿಲ್ಲ.

ಗ್ರಾಮೀಣ ಶಾಲೆಗಳಲ್ಲಿ ಎಲ್ಲಿದೆ ಫುಟ್ಬಾಲ್‌?

ಯಾವುದೋ ದೇಶದಲ್ಲಿ ಫಿಫಾ ವಿಶ್ವಕಪ್‌ ನಡೆದರೆ ನಮ್ಮಲ್ಲಿ ಹೇಳುವುದು ಒಂದೇ, “141 ಕೋಟಿ ಜನಸಂಖ್ಯೆ ಇದ್ದರೂ ಭಾರತ ಫುಟ್ಬಾಲ್‌ ವಿಶ್ವಕಪ್‌ ಆಡುವಲ್ಲಿ ವಿಫಲವಾಗಿದೆ,” ಎಂದು. ಜನಸಂಖ್ಯೆ ತೆಗೆದುಕೊಂಡು ಏನು ಮಾಡುವುದು? ರಾಜಕೀಯ ಪಕ್ಷಗಳ ಪ್ರಚಾರದ ಸಭೆಯನ್ನೆ?. ನಮ್ಮ ಊರಿನಲ್ಲಿರುವ ಶಾಲೆಗಳ ಕಡೆಗೆ ಗಮನ ಹರಿಸುವ ಎಷ್ಟು ಶಾಲೆಗಳಲ್ಲಿ ಆಟದ ಅಂಗಣ ಇದೆ? ಎಷ್ಟು ಶಾಲೆಗಳಲ್ಲಿ ಮಕ್ಕಳನ್ನು ಆಡುವುದಕ್ಕೆ ಬಿಡುತ್ತಾರೆ? ಎಷ್ಟು ಶಾಲೆಗಳಲ್ಲಿ ಮಕ್ಕಳು ನಿತ್ಯ ಫುಟ್ಬಾಲ್‌ ಆಡುತ್ತಾರೆ (ವಾರ್ಷಿಕ ಕ್ರೀಡಾಕೂಟ ಹೊರತಾಗಿ), ಎಷ್ಟು ಶಾಲೆಗಳಲ್ಲಿ ಫುಟ್ಬಾಲ್‌ ತರಬೇತುದಾರರಿದ್ದಾರೆ? ಎಷ್ಟು ಶಾಲೆಗಳಲ್ಲಿ ಕನಿಷ್ಠ ಫುಟ್ಬಾಲ್‌ ಚೆಂಡು ಇದೆ? ಫುಟ್ಬಾಲ್‌ ಆಡಿದ ಎಷ್ಟು ಆಟಗಾರರಿಗೆ ಕೆಲಸ ಸಿಕ್ಕಿದೆ? ಗ್ರಾಮೀಣ ಪ್ರದೇಶದಲ್ಲಿ ಎಲ್ಲಿಯಾದರೂ ಫುಟ್ಬಾಲ್‌ ಪ್ರತಿಭಾನ್ವೇಷಣೆ ನಡೆದಿದೆಯಾ? ಕ್ರೀಡಾ ಸಚಿವರಿಗೆ ಯಾವುದಾದರೂ ಕ್ರೀಡೆಯ ಅರಿವಿದೆಯೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕಲು ಪ್ರಯತ್ನಿಸಿದರೆ ಭಾರತ ಫುಟ್ಬಾಲ್‌ ತಂಡ ಫಿಫಾ ವಿಶ್ವಕಪ್‌ ಫುಟ್ಬಾಲ್‌ನಲ್ಲಿ ಆಡುವುದು ಯಾವಾಗ? ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ. ಅದು ಬಿಟ್ಟರೆ U17 ವಿಶ್ವಕಪ್‌ನಂತೆ ಭಾರತ ಫಿಫಾ ವಿಶ್ವಕಪ್‌ನ ಆತಿಥ್ಯ ವಹಿಸಿದರೆ ನಮ್ಮ ತಂಡ ವಿಶ್ವಕಪ್‌ ಆಡುವುದು ಖಚಿತ. ಇದರ ಸಾಧ್ಯತೆ ಹೆಚ್ಚಿದೆ ಏಕೆಂದರೆ ಫಿಫಾ ಹೆಸರಿನಲ್ಲಿ “ಸ್ವಾಹಾ” ಮಾಡಬಹದು. ಮೊದಲು ಖಾಲೋ ಇಂಡಿಯಾ, ಬಳಿಕ ಖೇಲೋ ಫುಟ್ಬಾಲ್‌!

Related Articles