ಕದ್ದು ಮುಚ್ಚಿ ಟೆನಿಸ್ ಆಡಿ, ಗೆದ್ದು ದೇಶಕ್ಕೆ ಕೀರ್ತಿ ತಂದ ಪ್ರತಿಮಾ ರಾವ್
ಉಡುಪಿ: ಹೆಣ್ಣು ಮಗು, ಅದರಲ್ಲೂ ವಿಶೇಷ ಚೇತನ. ಉದ್ಯೋಗದ ನಡುವೆ ಸಮಯ ಮಾಡಿಕೊಂಡು, ವೀಲ್ ಚೇರ್ ಟೆನಿಸ್ನಲ್ಲಿ ತರಬೇತಿ ಪಡೆದು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಗೆದ್ದು, ಅದು ಪತ್ರಿಕೆಯಲ್ಲಿ ಪ್ರಕಟವಾದ ಬಳಿಕವೇ ಮನೆಯವರಿಗೆ ಗೊತ್ತಾಯಿತೇ ಹೊರತು ಈ ಸಾಧಕಿ ತಿಳಿಸಿರಲೇ ಇಲ್ಲ. ಹೆತ್ತವರಿಗೆ ತಿಳಿಸದೆ ಕ್ರೀಡೆಯಲ್ಲಿ ಸಾಧನೆ ಮಾಡಿದೆ ಎಂದು ನಗುತ್ತ ಉತ್ತರ ಕೊಡುತ್ತಾರೆ. ಇಂದು ಹೇಳ ಹೊರಟಿದ್ದು, ಮೂಲತಃ ಉಡುಪಿ ಜಿಲ್ಲೆಯ ಸಾಲಿಗ್ರಾಮದವರಾಗಿದ್ದು ಈಗ ಬೆಂಗಳೂರಿನಲ್ಲಿ ನೆಲೆಸಿರುವ ಅಂತಾರಾಷ್ಟ್ರೀಯ ವೀಲ್ ಚೇರ್ ಟೆನಿಸ್ ಚಾಂಪಿಯನ್ ಪ್ರತಿಮಾ ರಾವ್ ಅವರ ಸಾಹಸ ಬದುಕಿನ ಕುರಿತು. Earlier She learned wheelchair tennis from YouTube, practiced without telling her family, won national, international medals and now Pratima Rao, India’s greatest wheelchair tennis star, is an inspiration to all champions.
ಮಾರ್ಚ್ನಲ್ಲಿ ಕೊಲಂಬೋದಲ್ಲಿ ನಡೆಯಲಿರುವ BNP Paribas World Team Cup Asia Qualifier ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲು ಐವರು ಆಟಗಾರರು ಆಯ್ಕೆಯಾಗಿದ್ದಾರೆ. ಅವರಲ್ಲಿ ಪ್ರತಿಮಾ ರಾವ್ ಕೂಡ ಒಬ್ಬರು. ಭಾರತದ ನಂಬರ್ ಒನ್ ವೀಲ್ ಚೇರ್ ಟೆನಿಸ್ ಆಟಗಾರ್ತಿ ಆಗಿದ್ದ ಪ್ರತಿಮಾ ರಾವ್, ಈಗ ವಿಶ್ವದಲ್ಲಿ 83ನೇ ರಾಂಕ್ ಹೊಂದಿದ್ದಾರೆ.

ವೀಲ್ ಚೇರ್ ಟೆನಿಸ್ ಬದುಕಿಗೆ ಮುನ್ನುಡಿ: ನಾರಾಯಣ ರಾವ್ ಹಾಗೂ ಹೇಮಾ ದಂಪತಿಯ ಪುತ್ರಿ ಪ್ರತಿಮಾ ರಾವ್ ಹುಟ್ಟಿ ಮೂರು ವರ್ಷದ ಬಳಿಕ ಪೊಲಿಯೋಗೆ ತುತ್ತಾಗಿ, ಕಾಲಿನ ಅಂಗವೈಕಲ್ಯ ಹೊಂದಿದರು. ಪೊಲಿಯೋಗೆ ಲಸಿಕೆ ನೀಡಿದ ನಂತರ ಜ್ವರ ಬಂದು ಬಲಗಾಲು ಶಕ್ತಿ ಕಳೆದುಕೊಂಡಿತು. ಕಂಪ್ಯೂಟರ್ನಲ್ಲಿ ಡಿಪ್ಲೊಮಾ ಶಿಕ್ಷಣ ಪಡೆದಿರುವ ಪ್ರತಿಮಾ ರಾವ್ ಐಟಿಪಿಎಲ್ನಲ್ಲಿ ಕೆಲಸ ಮಾಡುತ್ತಿದ್ದರು. ಸೀತಾರಾಮ್ ಅವರಿಂದ ವೀಲ್ಚೇರ್ ಟೆನಿಸ್ ಬಗ್ಗೆ ಪರಿಚಯವಾಯಿತು. ಆಗ ಪ್ರತಿಮಾ ಅವರ ಡಬಲ್ಸ್ ಜೊತೆಗಾತಿ ಶಿಲ್ಪಾ ಅವರು ತರಬೇತಿ ಪಡೆಯುತ್ತಿದ್ದರು. ಪ್ರತಿಮಾ ಅವರು ಯೂಟ್ಯೂಬ್ ನೋಡಿಕೊಂಡು ವೀಲ್ ಚೇರ್ ಟೆನಿಸ್ ಆಡಲಾರಂಭಿಸಿದರು. ವಾರದ ಕೋನೆಯಲ್ಲಿ ತರಬೇತಿ ಪಡೆಯುತ್ತಿದ್ದರು. ಪ್ರತಿಮಾ ಅವರಿಗೆ ವೀಲ್ ಚೇರ್ಗೆ ಹೊಂದಿಕೊಳ್ಳಲು ಸುಮಾರು ಹದಿನೈದು ದಿನಗಳೇ ಬೇಕಾಯಿತು.

ಕದ್ದು ಮುಚ್ಚಿ ತರಬೇತಿ: ಪ್ರತಿಮಾ ಕ್ರೀಡಾ ಜಗತ್ತಿಗೆ ಕಾಲಿಟ್ಟ ನಂತರ ಅವರಿಗೆ ಸಮಾಜದೊಂದಿಗೆ ಬೆರೆಯುವ ಅವಕಾಶ ಸಿಕ್ಕಿತು. ಆಗ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯಲ್ಲಿ ವೀಲ್ ಚೇರ್ ಟೆನಿಸ್ಗೆ (2012) ತರಬೇತಿ ನೀಡುತ್ತಿದ್ದಾರೆಂಬ ವಿಷಯ ತಿಳಿಯಿತು. ಪ್ರತಿಮಾ ಈ ವಿಷಯವನ್ನು ಮನೆಯವರಿಗೆ ತಿಳಿಸಲಿಲ್ಲ. “ಕೆಲಸದ ಬಿಡುವು ಇರುವಾಗ ಅಭ್ಯಾಸ ಮಾಡತೊಡಗಿದೆ, ವೀಲ್ ಚೇರ್ ಟೆನಿಸ್ ಒಂದು ಸವಾಲಿನ ಕ್ರೀಡೆ. ಸಾಮಾನ್ಯ ಟೆನಿಸ್ಗಿಂತ ಕಷ್ಟವಾದುದು. ಇದು ಶಕ್ತಿಯ ಜೊತೆಗೆ ಬುದ್ಧಿಗೂ ಕೆಲಸ ಇದೆ. ಒಮ್ಮೆ ಪತ್ರಿಕೆಯೊಂದರಲ್ಲಿ ನನ್ನ ವೀಲ್ ಚೇರ್ ಸಾಧನೆಯ ಬಗ್ಗೆ ಲೇಖನ ಬಂದಿತ್ತು. ಆಗ ಮನೆಯವರಿಗೆ ಗೊತ್ತಾಯಿತು. ಆದರೆ ನನಗೆ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲವಿದ್ದಿತ್ತು. ಲೇಖನ ನೋಡಿ ತಂದೆಯವರಿಗೆ ಬಹಳ ಖುಷಿಯಾತ್ತು,” ಎಂದು ಪ್ರತಿಮಾ ರಾವ್ ತಮ್ಮ ಆರಂಭಿಕ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ.

ಸಾಲ ಮಾಡಿ ಟೂರ್ನಿಗಳಲ್ಲಿ ಭಾಗಿಯಾಗುವುದು: ಇದು ಭಾರತದ ಕ್ರೀಡೆಯಲ್ಲಿನ ಸಾಮಾನ್ಯ ದುಃಸ್ಥಿತಿ. ವಿಶೇಷ ಚೇತನರಿಗೆ ಇನ್ನೂ ಹೆಚ್ಚಿನ ಸಮಸ್ಯೆ. ಪ್ರತಿಮಾ ರಾವ್ ಈಗ ಭಾರತದಲ್ಲಿ ಎರಡನೇ ರಾಂಕ್ ಆಟಗಾರ್ತಿ ಹಾಗೂ ಅಂತಾಷ್ಟ್ರೀಯ ಮಟ್ಟದಲ್ಲಿ 83ನೇ ರಾಂಕ್ ಹೊಂದಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪದಕಗಳನ್ನು ಗೆದ್ದಿದ್ದಾರೆ. 5-6 ದೇಶಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ. 3೦-40 ಪದಕಗಳಿವೆ, ಆದರೆ ಅವರ ಯಶಸ್ಸಿನ ಹಾದಿ ಅಷ್ಟು ಸುಗಮವಾಗಿರಲಿಲ್ಲ. ಹಲವು ಬಾರಿ ಬ್ಯಾಂಕಿನಲ್ಲಿ ವೈಯಕ್ತಿಕ ಸಾಲ ಮಾಡಿಕೊಂಡು ಟೂರ್ನಿಗಳಲ್ಲಿ ಪಾಲ್ಗೊಂಡ ಕಹಿ ಅನುಭವವನ್ನು ಪ್ರತಿಮಾ ರಾವ್ ಹಂಚಿಕೊಂಡಿದ್ದಾರೆ. ಜೊತೆಯಲ್ಲಿ ಸರಕಾರಕ್ಕೆ ಮನವಿಯನ್ನೂ ಮಾಡಿದ್ದಾರೆ. “ಒಲಿಂಪಿಕ್ಸ್ನಲ್ಲಿ ಪದಕ ಗೆದ್ದವರಿಗೆ ಸರಕಾರ 6 ಕೋಟಿ ರೂ. ನಗದು ಬಹುಮಾವನ್ನು ಘೋಷಿಸಿದೆ. ಒಲಿಂಪಿಕ್ಸ್ ತರಬೇತಿಗಾಗಿ ನಗದು ಹಣವನ್ನೂ ನೀಡುತ್ತಿದೆ. ಅದೇ ರೀತಿ ವಿಶೇಷ ಚೇತನ ಕ್ರೀಡಾಪಟುಗಳಿಗೂ ನೆರವು ಅಗತ್ಯವಿದೆ. ವಿದೇಶದ ಟೂರ್ನಿಗಳಲ್ಲಿ ಪಾಲ್ಗೊಂಡು ಬಂದ ನಂತರ ವಿಮಾನ ಟಿಕೆಟ್ಗೆ ಹಣ ನೀಡುತ್ತಾರೆ. ಇದನ್ನೇ ವಿದೇಶಕ್ಕೆ ಹೋಗುವಾಗ ನೀಡಿದರೆ ನಮ್ಮಂಥ ವಿಶೇಷ ಚೇತನ ಕ್ರೀಡಾಪಟುಗಳಿಗೆ ನೆರವಾಗುತ್ತದೆ. ಎಷ್ಟೋ ಬಾರಿ ಹಣ ಇಲ್ಲದೆ ಸ್ಪರ್ಧೆಯಿಂದ ಹಿಂದೆ ಸರಿದಿರುವೆ, ಇದು ನಮ್ಮಂಥ ಕ್ರೀಡಾಪಟುಗಳ ಸಾಮಾನ್ಯ ಸ್ಥಿತಿ. ಸರಕಾರ ವಿಶೇಷ ಚೇತನ ಕ್ರೀಡಾಪಟುಗಳ ಸಮಸ್ಯೆಗಳತ್ತ ವಿಶೇಷ ಕಾಳಜಿ ವಹಿಸಬೇಕಾದ ಅಗತ್ಯವಿದೆ,ʼ ಎಂದು ಪ್ರತಿಮಾ ರಾವ್ ಹೇಳಿದರು.

ಚಂದ್ರಕಾಂತ್ ಬಾಲ್ದೋಟ[Chandrakant Baldota] ಪ್ರೋತ್ಸಾಹ: ಚಂದ್ರಕಾಂತ್ ಬಾಲ್ದೋಟ ಅವರು ಕರ್ನಾಟಕ ವೀಲ್ ಚೇರ್ ಟೆನಿಸ್ ಸಂಸ್ಥೆಯ ಅಧ್ಯಕ್ಷರಾದಾಗಿನಿಂದ ಇಲ್ಲಿಯ ಕ್ರೀಡಾಪಟುಗಳಿಗೆ ಉತ್ತಮ ಪ್ರೋತ್ಸಾಹ ನೀಡುತ್ತಿದ್ದಾರೆ. ಪ್ರತಿಮಾ ರಾವ್ ಅವರ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಿ ಪ್ರೋತ್ಸಾಹ ನೀಡಿದುದರ ಪರಿಣಾಮ ಅವರು ಉತ್ತಮ ಸಾಧನೆ ಮಾಡುವಂತಾಯಿತು. “ಚಂದ್ರಕಾಂತ್ ಬಾಲ್ದೋಟ ಅವರು ಪ್ರತಿಯೊಬ್ಬ ವೀಲ್ ಚೇರ್ ಪಟುವಿನ ಬಗ್ಗೆ ಕಾಳಜಿ ವಹಿಸುತ್ತಿದ್ದು, ಉತ್ತಮ ನೆರವನ್ನು ನೀಡುತ್ತಿದ್ದಾರೆ. ಅವರ ಕಾಳಜಿಯಿಂದಾಗಿ ನಮ್ಮ ಕರ್ನಾಟಕ ತಂಡ ಉತ್ತಮ ರೀತಿಯಲ್ಲಿ ಪ್ರದರ್ಶನ ತೋರುತ್ತಿದೆ. 2024ರ ವರೆಗೂ ನನಗೆ ಟಾಪ್ 100 ರಾಂಕಿಂಗ್ನಲ್ಲಿ ಸ್ಥಾನ ಸಿಕ್ಕಿರಲಿಲಿಲ್ಲ. ಆದರೆ ನನಗೆ ಬೆಂಬಲವಾಗಿ ಯಾರೋ ನಿಂತಿದ್ದಾರೆ, ನಾನು ಇನ್ನೂ ಉತ್ತಮವಾಗಿ ಆಡಬೇಕೆಂದಿನಿಸಿತು. ನನ್ನ ಮನೋಬಲ ಹೆಚ್ಚಿತು. ಇದರಿಂದ ರಾಂಕಿಂಗ್ನಲ್ಲಿ ಟಾಪ್ 100 ತಲುಪಲು ಸಾಧ್ಯವಾಯಿತು. ಈಗ ಭಾರತ ತಂಡದಲ್ಲೂ ನಮ್ಮವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮುಂಬರುವ ವಿಶ್ವಕಪ್ ಏಷ್ಯನ್ ಅರ್ಹತಾ ಸುತ್ತಿನಲ್ಲಿ ಉತ್ತಮ ಪ್ರದರ್ಶನ ತೋರಿ ಪ್ಯಾರಿಸ್ನಲ್ಲಿ ಆಡಲು ಅರ್ಹತೆ ಪಡೆಯಬೇಕು. ಅದೇ ನಮ್ಮ ಗುರಿ” ಎಂದು ಪ್ರತಿಮಾ ರಾವ್ ಹೇಳಿದರು.
ದುಬಾರಿ ವೀಲ್ ಚೇರ್: ವೀಲ್ ಚೇರ್ ಟೆನಿಸ್ ಆಡಲು ಸಾಮಾನ್ಯ ಟೆನಿಸ್ಗಿಂತಲೂ ವೆಚ್ಚ ಜಾಸ್ತಿ. ಸಾಮಾನ್ಯ ವೀಲ್ ಚೇರ್ ಕಡಿಮೆ ಬೆಲೆಯಲ್ಲಿ ಸಿಗುತ್ತದೆ. ಆದರೆ ಟೆನಿಸ್ ಆಡಲು ಬಳಸುವ ವೀಲ್ ಚೇರ್ಗೆ 60,000 ರೂ. ಗಳಿಂದ 5,00,000 ರೂ. ವರೆಗೆ ಇರುತ್ತದೆ. ಬಡ ಕುಟುಂಬದಿಂದ ಬಂದ ವಿಶೇಷಚೇತನರಿಗೆ ಈ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಕಷ್ಟವಾಗುವುದು ಸಹಜ.

ಪ್ರತಿಮಾ ರಾವ್ ಅವರ ಪತಿ ಎಸ್ ಎಲ್ ಎನ್ ಮೂರ್ತಿ ಅವರು ಜಿವಿಕೆ ಸಮೂಹದಲ್ಲಿ ಕೆಲಸ ಮಾಡುತ್ತಿದ್ದು ಸದ್ಯ ಲಖನೌದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಪತ್ನಿಯ ಕ್ರೀಡಾ ಬದುಕಿಗೆ ಅವರು ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದ್ದಾರೆ. ಮಗ ಪ್ರಥ್ವಿ ಕೂಡ ತಾಯಿಯ ಕ್ರೀಡಾ ಸಾಧನೆಯಿಂದ ಪ್ರೇರಿತನಾಗಿದ್ದಾನೆ. ಮಗನ ಬಗ್ಗೆ ಪ್ರತಿಮಾ ರಾವ್ ಹೇಳಿದ ಒಂದು ಮಾತನ್ನು ಇಲ್ಲಿ ಸ್ಮರಿಸಲೇ ಬೇಕು, “ನನ್ನ ಬದುಕನ್ನು ಮಗ ಪ್ರಥ್ವಿ ಚೆನ್ನಾಗಿ ಅರ್ಥೈಸಿಕೊಂಡಿದ್ದಾನೆ. ಬದುಕಿನಲ್ಲಿ ನಾನು ಅವನಿಗೆ ನೆರವು ನೀಡಿದ್ದಕ್ಕಿಂತ ಹೆಚ್ಚು ಆತ ನನಗೆ ನೆರವು ನೀಡಿದ್ದಾನೆ,” ಎಂದು ಹೇಳುವ ಅವರ ನುಡಿಯಲ್ಲಿ ತಾಯಿಯ ತ್ಯಾಗ ಸ್ಪಷ್ಟವಾಗುತ್ತದೆ.
ಇಂದು ಪ್ರತಿಮಾ ರಾವ್ ದೇಶದ ಶ್ರೇಷ್ಠ ವೀಲ್ ಚೇರ್ ಟೆನಿಸ್ ಆಟಗಾರ್ತಿಯಾಗಿದ್ದಾರೆ, ಅಂದು ವಿಶೇಷ ಚೇತನ ಎಂದು ದೂರ ಸರಿದವರೆಲ್ಲ ಇಂದು ಹತ್ತಿರಕ್ಕೆ ಬಂದು ಅಭಿನಂದಿಸುತ್ತಿದ್ದಾರೆ. ಹೆತ್ತವರ ಮೊಗದಲ್ಲಿ ಸದಾ ಖುಷಿ ತುಂಬುವಂತೆ ಮಾಡಿದ ಪ್ರತಿಮಾ ರಾವ್ ಅವರು ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಸಾಧನೆ ಮಾಡಿ, ದೇಶಕ್ಕೆ ಕೀರ್ತಿ ತರಲಿ ಹಾಗೂ ಇತರ ವಿಶೇಷ ಚೇತನರಿಗೆ ಸ್ಫೂರ್ತಿಯಾಗಲಿ ಎಂಬುದೇ ಹಾರೈಕೆ.

