Friday, June 14, 2024

ಕ್ರೀಡಾಂಗಣ ಕಟ್ಟುವುದಕ್ಕಾಗಿ 57 ಮ್ಯೂಸಿಕಲ್‌ ನೈಟ್‌ ನಡೆಸಿದ್ದ ಡಾ. ರಾಜ್‌ಕುಮಾರ್‌!

ಕರ್ನಾಟಕದ ಮೇರು ನಟ, ಅಣ್ಣಾವ್ರು ಡಾ. ರಾಜ್‌ಕುಮಾರ್‌ ಕರ್ನಾಟಕದ ಕ್ರೀಡೆಗೆ ನೀಡಿದ ಕೊಡುಗೆಯನ್ನು ಮರೆಯುವಂತಿಲ್ಲ. ಅವರು ಕರ್ನಾಟಕದ ವಿವಿಧ ಭಾಗಗಳಲ್ಲಿ ನಡೆಸಿದ ಸಂಗೀತ ಕಚೇರಿ, (ಮ್ಯೂಸಿಕಲ್‌ ನೈಟ್‌) ಯಿಂದ ಬಂದ ಹಣವನ್ನು ರಾಜ್ಯದ 21 ಜಿಲ್ಲೆಗಳಲ್ಲಿ ಜಿಲ್ಲಾ ಕ್ರೀಡಾಂಗಣವನ್ನು ನಿರ್ಮಿಸಲು ನೆರವು ನೀಡಿದ್ದಾರೆ. Dr Rajkumar organized 57 musical nights and donate the money to build stadiums in 21 districts of Karnataka.

ಅಣ್ಣಾವ್ರು ಒಬ್ಬ ಉತ್ತಮ ಯೋಗ ಪಟು, ಅದೇ ರೀತಿ ಕುಸ್ತಿಯನ್ನೂ ಬಲ್ಲವರು. ಅವರ ಫಿಟ್ನೆಸ್‌ ಮಂತ್ರವೇ ಕ್ರೀಡೆ. ಅವರ ಮಕ್ಕಳಾದ ಡಾ. ಶಿವರಾಜ್‌ ಕುಮಾರ್‌ ಹಾಗೂ ಸ್ವರ್ಗಸ್ಥರಾಗಿರುವ ಪುನೀತ್‌ ರಾಜ್‌ ಕುಮಾರ್‌ ಅವರಲ್ಲಿ ಕಂಡಿದ್ದೇವೆ.

ಕರ್ನಾಟಕದ ಕ್ರೀಡಾ ಅಭಿವೃದ್ಧಿಯನ್ನು ಕಂಡಾಗ ಪ್ರತಿಯೊಂದು ಜಿಲ್ಲೆಯಲ್ಲೂ ಕ್ರೀಡಾಂಗಣ ಇರುವುದನ್ನು ಗಮನಿಸುತ್ತಿದ್ದೇವೆ. ಆದರೆ ಅವುಗಳನ್ನು ಕಟ್ಟಿದ್ದು ಸರಕಾರ ಎಂದು ಈಗಲೂ ತಿಳಿದುಕೊಂಡಿದ್ದೇವೆ. ಆದರೆ  ಡಾ. ರಾಜ್‌ಕುಮಾರ್‌ ಅವರ ಹೆಸರನ್ನು ನಾವು ನೆನಪಿಸುವುದೇ ಇಲ್ಲ. ಕೆಲವು ಕ್ರೀಡಾಂಗಣಗಳಿಗೆ ಮಾತ್ರ ಡಾ. ರಾಜ್‌ಕುಮಾರ್‌ ಅವರ ಹೆಸರನ್ನಿಟ್ಟಿದ್ದೇವೆ. ಇದು ನಮ್ಮ ದೌರ್ಭಾಗ್ಯ.

ಡಾ. ರಾಜ ಕುಮಾರ್‌ ತಮ್ಮ ಬದುಕಿಗಾಗಿ ಕೂಡಿಟ್ಟಿದ್ದು, ಜೋಪಾನ ಮಾಡಿದ್ದು ಅವರ ಮಕ್ಕಳನ್ನು ಮಾತ್ರ. ತಮಗೆ ಸಮಾಜ ಏನು ನೀಡಿದೆಯೋ ಅದನ್ನು ಸಮಾಜಕ್ಕೇ ನೀಡಿದ್ದಾರೆ. ಶಿವಣ್ಣ ಹಾಗೂ ಪುನೀತ್‌ ಅವರೂ ತಂದೆಯ ಹಾದಿಯಲ್ಲಿ ಮುನ್ನಡೆದಿದ್ದರು. ಶಿವಣ್ಣ ಈಗಲೂ ಕ್ರಿಕೆಟ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಶಕ್ತರಿಗೆ ದಾನ ಮಾಡುತ್ತಿದ್ದಾರೆ. ದಾದಾ ಸಾಹೇಬ್‌ ಪಾಲ್ಕೆ ಪ್ರಶಸ್ತಿ ಸಿಕ್ಕಾಗ ಬಂದ ನಗದು ಬಹುಮಾನದ ಮೊತ್ತವನ್ನು ಡಾ. ರಾಜ್‌ಕುಮಾರ್‌ ಅವರು ಕನ್ನಡ ಸಾಹಿತ್ಯ ಪರಿಷತ್‌ಗೆ ದಾನ ಮಾಡಿದ್ದಾರೆ. ಅವರ ಹೆಸರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಯಾವ ಕಾರ್ಯಕ್ರಮ ಮಾಡುತ್ತಿದೆಯೋ ತಿಳಿಯದು.

ಡಾ. ರಾಜ್‌ ಕುಮಾರ್‌ ತಾವು ದಾನ ಮಾಡಿದ್ದನ್ನು ಎಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ. ಇಂದು ಹಿರಿಯ ಕ್ರಿಕೆಟಿಗರೊಬ್ಬರನ್ನು ಮಾತನಾಡಿಸಿದಾಗ ಅವರು ಕ್ರೀಡೆಗೆ ಡಾ. ರಾಜ್‌ಕುಮಾರ್‌ ಅವರ ಕೊಡುಗೆಯನ್ನು ತಿಳಿಸಿದರು. 57 ಮ್ಯೂಸಿಕಲ್‌ ನೈಟ್‌ ನೋಡುವಾಗ ನಾವೆಲ್ಲರೂ ಹೆಜ್ಜೆ ಹಾಕಿ ಕುಣಿದಿದ್ದೇವೆ. ಆದರೆ ಅವರು ಯಾಕೆ ಈ ರೀತಿಯಲ್ಲಿ ಬೇರೆ ಬೇರೆ ಜಿಲ್ಲೆಗಳಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ಮಾಡಿದರು ಎಂಬುದು ಯಾರಿಗೂ ತಿಳಿದಿರಲಿಲ್ಲ. ಅವರು ಕ್ರೀಡಾಂಗಣ ಕಟ್ಟಲು ಹಣ ಸಂಗ್ರಹಿಸುತ್ತಿದ್ದೇನೆ ಎಂದು ಯಾರಲ್ಲೂ ಹೇಳಿರಲಿಲ್ಲ. ಬಂದ ಹಣವನ್ನು ರಾಜ್ಯದ 21 ಜಿಲ್ಲೆಗಳಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಿಸಿ ಎಂದು ದಾನವಾಗಿ ನೀಡಿದ್ದಾರೆ.

ಈ ರೀತಿಯಲ್ಲಿ ದಾನ ಮಾಡಿದ ಡಾ. ರಾಜ್‌ ಕುಮಾರ್‌ ಅವರ ಹೆಸರಿನಲ್ಲಿ ಒಂದು ರಾಜ್ಯ ಅಥವಾ ರಾಷ್ಟ್ರ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸುವ ಔದಾರ್ಯ ನಮ್ಮಲ್ಲಿ ಇಲ್ಲವಾಗಿದೆ. ಯಾವುದೋ ರಾಜಕಾರಣಿಗಳನ್ನು ಕೂರಿಸಿ, ಅವರ ಗುಣಗಾನ ಮಾಡಿ ಸಂಭ್ರಮಿಸುವುದು ಸಾಮಾನ್ಯವಾಗಿದೆ.

Related Articles