Sunday, May 28, 2023

ಸಾವನ್ನೇ ಗೆದ್ದ ಚಾಂಪಿಯನ್‌ ಸಂತೋಷ್‌ಗೆ ಮತ್ತೆ ರ್‍ಯಾಲಿಯ ಹಂಬಲ

 ಸೋಮಶೇಖರ್‌ ಪಡುಕರೆ, ಬೆಂಗಳೂರು

ಜಗತ್ತಿನ ಅತ್ಯಂತ ಅಪಾಯಕಾರಿ ಡಕಾರ್‌ ರ್‍ಯಾಲಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಸುಮಾರು ಒಂದು ವರ್ಷಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿ ಚೇತರಿಸಿಕೊಂಡ ಭಾರತದ ಶ್ರೇಷ್ಠ ರ್‍ಯಾಲಿಪಟು ಸಿ.ಎಸ್‌. ಸಂತೋಷ್‌ ಮತ್ತೆ ಡಕಾರ್‌ ರ್‍ಯಾಲಿಯಲ್ಲಿ ಪಾಲ್ಗೊಳ್ಳುವ ಆಶಯ ವ್ಯಕ್ತಪಡಿಸಿದ್ದಾರೆ.

ಫಿಟ್ನೆಸ್‌ ಪರೀಕ್ಷೆಗಾಗಿ ಆಸ್ಟ್ರೀಯಾಕ್ಕೆ ತೆರಳುವ ಮುನ್ನ sportsmail ಜತೆ ಮಾತುಕತೆ ನಡೆಸಿದ ಸಂತೋಷ್‌ ರ್‍ಯಾಲಿ ಇಲ್ಲದ ನನ್ನ ಬದುಕನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿ ಮತ್ತೆ ರ್‍ಯಾಲಿಯಲ್ಲಿ ಪಾಲ್ಗೊಳ್ಳುವೆ, ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

2021ರ ಜನವರಿಯಲ್ಲಿ ಸೌದಿ ಅರೇಬಿಯಾದಲ್ಲಿ ನಡೆದ ಡಕಾರ್‌ ರ್‍ಯಾಲಿಯ ನಾಲ್ಕನೇ ಸುತ್ತಿನಲ್ಲಿ ಹೀರೋ ಮೋಟೋ ಸ್ಪೋರ್ಟ್‌ ತಂಡವನ್ನು ಪ್ರತಿನಿಧಿಸುತ್ತಿದ್ದ ಸಂತೋಷ್‌ ಚಲಾಯಿಸುತ್ತಿದ್ದ ಬೈಕ್‌ ಕಲ್ಲು ಬಂಡೆಗೆ ಬಡಿದಿತ್ತು. ತಲೆ ಬಂಡೆಗೆ ಬಡಿದ ಪರಿಣಾಮ ಸಮತೋಷ್‌ ಪ್ರಜ್ಞೆ ಕಳೆದುಕೊಂಡರು. ಭುಜದ ಮೂಳೆ ಕೂಡ ಮುರಿದಿತ್ತು. ಘಟನೆ ನಡೆದು 20 ತಿಂಗಳು ಕಳೆದರೂ “ನನಗೆ ಇನ್ನೂ ಘಟನೆ ನಡೆದ ಬಗ್ಗೆ ಏನೂ ಗೊತ್ತಿಲ್ಲ, ಆದರೆ ದೇಹದಲ್ಲಿನ ಬದಲಾವಣೆಗಳೇ ದುರ್ಘಟನೆ ನಡೆದಿದೆ ಎಂಬುದನ್ನು ಹೇಳುತ್ತಿವೆ,” ಎನ್ನುತ್ತಾರೆ ಸಂತೋಷ್‌.

ಡಕಾರ್‌ ದುರ್ಘಟನೆಯ ನಂತರ ಬದುಕು ಹೇಗಿದೆ? ಎಂಬ ಪ್ರಶ್ನೆಗೆ ಉತ್ತರಿಸಿದ ಸಂತೋಷ್‌, “ನಾನೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ, ಹೊಸ ಉತ್ಸಾಹದೊಂದಿಗೆ ಹೊರ ಜಗತ್ತಿಗೆ ಕಾಣಿಸಿಕೊಳ್ಳುತ್ತಿದ್ದೇನೆ, ಕಳೆದ 20 ತಿಂಗಳುಗಳನ್ನ ಹೇಗೆ ಕಳೆದೆ ಎಂಬುದೇ ಗೊತ್ತಿಲ್ಲ. ಬದುಕು ಒಂದು ರೀತಿಯಲ್ಲಿ ಬಿಟ್ಟ ಸ್ಥಳಗಳನ್ನು ತುಂಬುವಂತಾಗಿದೆ. ಡಕಾರ್‌ನಲ್ಲಿ ಏನಾಯಿತು ಎಂಬುದು ನನಗೆ ಇನ್ನೂ ತಿಳಿದಿಲ್ಲ. ಸುದ್ದಿಯನ್ನು ಇತ್ತೀಚಿಗೆ ಓದುತ್ತಿದ್ದೇನೆ. ಹಳೆಯ ನೆನಪುಗಳನ್ನು ಮೆಲುಕು ಹಾಕಲು ಕಷ್ಟವಾಗುತ್ತಿದೆ, ಆದರೆ ನನ್ನ ಆತ್ಮವಿಶ್ವಾಸ ಮೊದಲಿನಂತೆಯೇ ಇದೆ. ಏಕೆಂದರೆ ನಾನು ರ್‍ಯಾಲಿ ಟ್ರ್ಯಾಕ್‌ನಲ್ಲಿ ಅನುಭವಿಸಿದ ದುರಂತಗಳ ಅರಿವಿದೆ. ಆದರೆ ಡಕಾರ್‌ನಲ್ಲಿ ಏನಾಯಿತೆಂಬುದು ಇನ್ನೂ ಗೊತ್ತಿಲ್ಲ. ಇದು ನನ್ನ ಪಾಲಿಗೆ ಹೊಸ ಬದುಕು.

ಮತ್ತೆ ರ್ಯಾಲಿಯಲ್ಲಿ ಸ್ಪರ್ಧಿಸುವೆ!

“ಡಕಾರ್‌ ರ್‍ಯಾಲಿ ಜಗತ್ತಿನಲ್ಲಿಯೇ ಅಪಾಯಕಾರಿ ರ್‍ಯಾಲಿ ಎಂಬುದು ಜಗತ್ತಿಗೇ ಗೊತ್ತಿದೆ. ಅಲ್ಲಿ ಮತ್ತೆ ಸ್ಪರ್ಧಿಸುವ ಗುರಿ ಇದೆ. ಆದರೆ ನನ್ನ ತಂಡ, ನನ್ನ ಕುಟುಂಬ ಮತ್ತು ನನ್ನ ಗೆಳೆಯರನ್ನು ಒಪ್ಪಿಸಬೇಕು, ಅಂದರೆ ನಾನು ಸಂಪೂರ್ಣ ಫಿಟ್‌ ಆಗಬೇಕು. ಅದಕ್ಕಾಗಿಯೇ ಇಂದು ರೆಡೆಬುಲ್‌ ಅಕಾಡೆಮಿ ಇರುವ ಆಸ್ಟ್ರಿಯಾಕ್ಕೆ ಪ್ರಯಾಣಿಸುತ್ತಿದ್ದೇನೆ. ಖಂಡಿತವಾಗಿಯೂ ಮತ್ತೆ ಡಕಾರ್‌ನಲ್ಲಿ ಸ್ಪರ್ಧಿಸುವೆ,” ಎಂದು ಸಂತೋಷ್‌ ಅತ್ಯಂತ ಆತ್ಮವಿಶ್ವಾಸದಲ್ಲಿ ನುಡಿದರು.

ಹೆತ್ತವರ ಆಶೀರ್ವಾದ, ಒಳ್ಳೆಯವರ ಸಂಬಂಧ:

“ನಾನಿಂದು ನಿಮ್ಮೊಂದಿಗೆ ಅತ್ಯಂತ ಆತ್ಮವಿಶ್ವಾಸದಿಂದ ಮಾತನಾಡಲು ನನ್ನ ಹೆತ್ತವರೇ ಕಾರಣ, ಒಬ್ಬ ರೈತನ ಮಗನಾಗಿ ನಾನು ಜಗತ್ತಿನ ಅತ್ಯಂತ ಅಪಾಯಕಾರಿ ರ್‍ಯಾಲಿಯಲ್ಲಿ ಸ್ಪರ್ಧಿಸಲು ನನ್ನ ಹೆತ್ತವರ ಆಶೀರ್ವಾದವೇ ಕಾರಣ. ನನ್ನ ಬದುಕಿನಲ್ಲಿ ಯಾವಾಗಲೂ ಉತ್ತಮರ ಸಹವಾಸ ಮಾಡಿದ್ದೇನೆ, ಅವರ ಆಶೀರ್ವಾದ ಯಾವಾಗಲೂ ನನ್ನ ಮೇಲೆ ಇರುತ್ತದೆ, ನಾನು ಪ್ರತಿನಿಧಿಸಿದ್ದು ದೇಶವನ್ನ, ಆದ್ದರಿಂದ ದೇಶದ ಜನರ ಹಾರೈಕೆ ಯಾವಾಗಲೂ ಇರುತ್ತದೆ,” ಎಂದರು.

ಸ್ಫೂರ್ತಿಯ ಸೆಲೆ:

ಡಕಾರ್‌ ರ್‍ಯಾಲಿಯನ್ನು ಪೂರ್ಣಗೊಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರರಾಗಿರುವ ಸಂತೋಷ್‌, ತಾನು ಚಲಾಯಿಸುತ್ತಿದ್ದ ಬೈಕಿನ ಟಯರ್‌ ಅನ್ನು ತಂಡದ ಸದಸ್ಯ ಮಾರ್ಕ್‌ ಕೊಮ ಅವರಿಗೆ ನೀಡಿದ ಪರಿಣಾಮ ಮಾರ್ಕ್‌ ರ್‍ಯಾಲಿ ಚಾಂಪಿಯನ್‌ ಪಟ್ಟ ಗೆದ್ದುಕೊಂಡರು. ತಂಡದ ಜಯಕ್ಕಾಗಿ ಸಂತೋಷ್‌ ಮಾಡಿದ ಈ ತ್ಯಾಗ ಜಗತ್ತಿನಾದ್ಯಂತ ಮೆಚ್ಚುಗೆಗೆ ಪಾತ್ರವಾಗಿತ್ತು. “ನಾನು ರ್‍ಯಾಲಿಯಲ್ಲಿ ಚಾಂಪಿಯನ್‌ ಪಟ್ಟ ಗೆಲ್ಲುವುದಿಲ್ಲವೆಂದು ಗೊತ್ತಿತ್ತು, ಆದರೆ ನಮ್ಮ ತಂಡದ ಸದಸ್ಯರೊಬ್ಬರು ಗೆಲ್ಲುವುದು ನನಗೆ ಹೆಮ್ಮೆಯ ಸಂಗತಿಯಾಗಿತ್ತು. ಈ ಕಾರಣಕ್ಕಾಗಿ ನನ್ನ ಟಯರ್‌ ಅವರಿಗೆ ಕೊಟ್ಟು ಅವರ ಸವೆದ ಟಯರ್‌ನಲ್ಲಿ ನಾನು ಬೈಕ್‌ ಚಲಾಯಿಸಿದೆ, ಇದು ಬದುಕಿನ ಪಾಠ, ಇದು ಸದಾ ನೆನಪಿನಲ್ಲಿ ಉಳಿಯುವಂಥದ್ದು. ಆ ಅವಕಾಶ ನನಗೆ ಸಿಕ್ಕಿದ್ದೇ ಅದೃಷ್ಟ,” ಎಂದರು.

ಬಿಗ್‌ರಾಕ್‌ ಡರ್ಟ್‌ಪಾರ್ಕ್‌:

ಸಿ.ಎಸ್‌. ಸಂತೋಷ್‌ ಅವರು ತಮ್ಮದೇ ಆದ ಸೂಪರ್‌ ಕ್ರಾಸ್‌ ಟ್ರ್ಯಾಕ್‌ ಹೊಂದಿದ್ದಾರೆ. ಸಂತೋಷ್‌ ಅವರ ಹೆಸರು ಕೇಳಿ ಚಿಕ್ಕ ಮಕ್ಕಳು ಕೂಡ ತರಬೇತಿಗಾಗಿ ಬೆಂಗಳೂರಿನಿಂದ ಆಗಮಿಸುತ್ತಿದ್ದಾರೆ. “ಇದು ದೇವರ ಆಶೀರ್ವಾದದಿಂದ ಮಾತ್ರ ಸಾಧ್ಯ. ನನ್ನ ರ್‍ಯಾಲಿ ಬದುಕು ಬೇರೆಯವರಿಗೆ ಸ್ಫೂರ್ತಿದಾಯಕವಾಗಿದೆ ಎಂದರೆ ಅದೇ ದೊಡ್ಡ ಪ್ರಶಸ್ತಿ. ತರಬೇತಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ರ್‍ಯಾಲಿಪಟುಗಳು ಬರುತ್ತಿದ್ದಾರೆ. ಈ ಕ್ರೀಡೆ ಮತ್ತಷ್ಟು ಜನಪ್ರಿಯವಾಗಲಿ,” ಎಂದರು.

Related Articles