ಭಾರತ ತಂಡಕ್ಕೆ ಪಂತ್‌ ಅನುಪಸ್ಥಿತಿ ಕಾಡಲಿದೆ: ಗಂಗೂಲಿ

0
122

ಕೋಲ್ಕತಾ:  ಇತ್ತೀಚೆಗೆ ಮುಕ್ತಾಯವಾದ 12ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದ ಯುವ ವಿಕೆಟ್ ಕೀಪರ್‌ ರಿಷಭ್‌ ಪಂತ್‌ ಅವರ ಅನುಪಸ್ಥಿತಿ ಮುಂಬರುವ ಐಸಿಸಿ ವಿಶ್ವಕಪ್‌ನಲ್ಲಿ ಕಾಡಲಿದೆ ಎಂದು ಭಾರತ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದೇ 30 ರಿಂದ ಇಂಗ್ಲೆಂಡ್‌ ಹಾಗೂ ವೇಲ್ಸ್‌ನಲ್ಲಿ ಆರಮಭವಾಗುವ ಐಸಿಸಿ ವಿಶ್ವಕಪ್‌ಗೆ ಪ್ರಕಟಿಸಲಾದ ಭಾರತದ 15 ಆಟಗಾರರ ಪಟ್ಟಿಯಲ್ಲಿ ಡೆಲ್ಲಿಯ ಸ್ಫೋಟಕ  ಬ್ಯಾಟ್ಸ್‌ಮನ್‌ ಹಾಗೂ ವಿಕೆಟ್‌ಕೀಪರ್‌ ರಿಷಭ್‌ ಪಂತ್‌ ಸ್ಥಾನ ಪಡೆಯುವಲ್ಲಿ  ವಿಫಲರಾಗಿದ್ದರು. ಪಂತ್‌ ಬದಲಾಗಿ ಅನುಭವಿ ದಿನೇಶ್‌ ಕಾರ್ತಿಕ್‌ ಅವರನ್ನು ಹೆಚ್ಚುವರಿ  ವಿಕೆಟ್‌ಕೀಪರ್‌ ಸ್ಥಾನದಲ್ಲಿ ವಿಶ್ವಕಪ್‌ ತಂಡಕ್ಕೆ ಸೇರ್ಪಡೆ ಮಾಡಲಾಗಿದೆ.

” ರಿಷಭ್‌ ಪಂತ್‌ ಹಾಗೂ ದಿನೇಶ್‌ ಕಾರ್ತಿಕ್‌ ಇಬ್ಬರೂ ಎಂ.ಎಸ್‌ ಧೋನಿ ಅವರಿಗೆ ಪರ್ಯಾಯ ವಿಕೆಟ್‌ ಕೀಪರ್‌ಗಳು. ಇವರಿಬ್ಬರೂ ಅದ್ಭುತ ಆಟಗಾರರು. ಆದರೆ, ವಿಕೆಟ್‌ ಕೀಪಿಂಗ್‌ ಕೌಶಲವನ್ನು ಪರಿಗಣಿಸಿ ಹಿರಿಯ ಆಟಗಾರನಿಗೆ ಮಣೆ ಹಾಕಲಾಗಿದೆ. ಪಂತ್‌ಗೆ ಇನ್ನೂ ಸಾಕಷ್ಟು ಅವಕಾಶಗಳಿವೆ” ಎಂದು ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥ ಎಂ.ಎಸ್‌.ಕೆ ಪ್ರಸಾದ್‌ ಅವರು ದಿನೇಶ್‌ ಕಾರ್ತಿಕ್‌ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದರು.

ಆದರೆ, ಇತ್ತೀಚೆಗಷ್ಟೇ ಅಂತ್ಯಗೊಂಡ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟಿ20  ಟೂರ್ನಿಯಲ್ಲಿ ಪಂತ್‌ ಭರ್ಜರಿ ಬ್ಯಾಟಿಂಗ್‌ ಮತ್ತು ವಿಕೆಟ್‌ಕೀಪಿಂಗ್‌ ಮೂಲಕ  ಮಿಂಚಿದ್ದರು. ಅಲ್ಲದೆ 2012ರ ಬಳಿಕ ಇದೇ ಮೊದಲ ಬಾರಿ ಡೆಲ್ಲಿ ತಂಡವನ್ನು ಪ್ಲೇ ಆಪ್ಸ್‌  ತಲುಪುವಂತೆ ಮಾಡುವಲ್ಲಿ ಪ್ರಮುಖ ಯುವ ಎಡಗೈ ಬ್ಯಾಟ್ಸ್‌ಮನ್‌ ಪ್ರಧಾನ ಪಾತ್ರ ವಹಿಸಿದ್ದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಮೆಂಟರ್‌ ದಾದಾ, ” ವಿಶ್ವಕಪ್‌ ವೇಳೆ ಭಾರತ ತಂಡಕ್ಕೆ ಪಂತ್‌ ಅವರ ಕೊರತೆ ಕಾಡಲಿದೆ”. ಇದೇ ವೇಳೆ ಗಾಯಾಳು ಕೇದಾರ್‌ ಜಾಧವ್‌  ಅವರ ಸ್ಥಾನದಲ್ಲಿ ಪಂತ್‌ ಅವರನ್ನು ತಂಡಕ್ಕೆ ಸೇರಿಸಬಹುದಲ್ಲವೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು “ಈ ರೀತಿ ಹೇಳುವುದು ಸರಿಯಲ್ಲ. ಕೇದಾರ್‌ ಬಹು ಬೇಗನೆ ಚೇತರಿಸಲಿ ಎಂದು  ಆಶಿಸುತ್ತೇನೆ. ಆದರೂ ತಂಡಕ್ಕೆ ಪಂತ್‌ ಅವರ ಕೊರತೆ ಕಾಡಲಿದೆ,” ಎಂದರು.

ಇನ್ನು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ಗೆ ನಾಲ್ಕನೇ ಪ್ರಶಸ್ತಿ ಗೆದ್ದುಕೊಟ್ಟ  ರೋಹಿತ್‌ ಶರ್ಮಾ ಅವರ ನಾಯಕತ್ವದ ಕುರಿತಾಗಿಯೂ ಮಾತನಾಡಿರುವ ಸೌರವ್‌, ‘ರೋಹಿತ್‌  ಶ್ರೇಷ್ಠ ನಾಯಕರಲ್ಲಿ ಒಬ್ಬರು’ ಎಂದು ಹೇಳಿದ್ದಾರೆ. “ಈ ತಲೆಮಾರಿನ ಶ್ರೇಷ್ಠ ನಾಯಕರಲ್ಲಿ  ರೋಹಿತ್‌ ಶರ್ಮಾ ಕೂಡ ಒಬ್ಬರು. ಚೆನ್ನೈ ಮತ್ತು ಮುಂಬೈ ಎರಡೂ ಅದ್ಭುತ ತಂಡಗಳು”  ಎಂದು ಗಂಗೂಲಿ ಗುಣಗಾನ ಮಾಡಿದರು.