Saturday, July 27, 2024

ಹ್ಯಾಂಪ್‌ಶೈರ್ ಸೇರಿದ ಅಜಿಂಕ್ಯಾ ರಹಾನೆ

ಲಂಡನ್:  ಇಂಗ್ಲೆಂಡ್‌ನಲ್ಲಿ ಮುಂದಿನ ತಿಂಗಳು ಆರಂಭವಾಗುವ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಹ್ಯಾಂಪ್‌ಶೈರ್‌ ತಂಡದ ಪರ ಭಾರತ ಟೆಸ್ಟ್ ತಂಡದ ಉಪ ನಾಯಕ ಅಜಿಂಕ್ಯಾ ರಹಾನೆ ಆಡಲಿದ್ದಾರೆ.

ಸಾಗರೋತ್ತರ ಆಟಗಾರರಾಗಿ ಅಜಿಂಕ್ಯಾ ರಹಾನೆ ಅವರನ್ನು ಕ್ಲಬ್‌ಗೆ ಸಹಿ ಮಾಡಿಸಲಾಗಿದೆ ಎಂದು ಪ್ರಥಮ ದರ್ಜೆಯ ಹ್ಯಾಂಪ್‌ಶೈರ್‌ ತಂಡ ಗುರುವಾರ ತಿಳಿಸಿದೆ.30ರ ಪ್ರಾಯದ ಅಜಿಂಕ್ಯಾ ರಹಾನೆ ಹ್ಯಾಂಪ್‌ಶೈರ್‌ ಕ್ಲಬ್‌ಗೆ ಸಹಿ ಮಾಡಿದ ಮೊದಲ ಭಾರತೀಯ ಆಟಗಾರರಾಗಿದ್ದಾರೆ.
ಐಡೆನ್ ಮಕ್ರಾಮ್ ಅವರು ದಕ್ಷಿಣ ಆಫ್ರಿಕಾ ಐಸಿಸಿ ವಿಶ್ವಕಪ್ ತಂಡದಲ್ಲಿ ಆಡುತ್ತಿರುವ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ರಹಾನೆ ಅವರನ್ನು ಪರಿಗಣಿಸಲಾಗಿದೆ. ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಮೇ, ಜೂನ್ ಹಾಗೂ ಜುಲೈ ಮೊದಲ ವಾರದವರೆಗೆ ಒಟ್ಟು ಎಂಟು ಪಂದ್ಯಗಳಲ್ಲಿ ರಹಾನೆ ಆಡಲಿದ್ದಾರೆ.
ಬಲಗೈ ಬ್ಯಾಟ್ಸ್‌ಮನ್ ಅಜಿಂಕ್ಯಾ ರಹಾನೆ ಅವರು 56 ಟೆಸ್ಟ್ ಪಂದ್ಯಗಳಲ್ಲಿ ಒಂಬತ್ತು ಶತಕ ಹಾಗೂ 17 ಅರ್ಧ ಶತಕ ಸೇರಿದಂತೆ ಒಟ್ಟು 3,488 ರನ್ ಹಾಗೂ 90 ಏಕದಿನ ಪಂದ್ಯಗಳಲ್ಲಿ ಮೂರು ಶತಕ ಹಾಗೂ 24 ಅರ್ಧಶತಕದೊಂದಿಗೆ 2,962 ರನ್ ಸಿಡಿಸಿದ್ದಾರೆ. ಜತೆಗೆ, 125 ಪ್ರಥಮ ದರ್ಜೆ ಪಂದ್ಯಗಳಲ್ಲಿ 29 ಶತಕಗಳೊಂದಿಗೆ 9,649 ರನ್ ಗಳಿಸಿದ್ದಾರೆ.
“ಹ್ಯಾಂಪ್‌ಶೈರ್‌  ಕ್ಲಬ್ ಪರ ಆಡುತ್ತಿರುವ ಮೊದಲ ಭಾರತೀಯ ಆಟಗಾರರಾಗಿರುವುದಕ್ಕೆ  ಸಂತಸವಾಗುತ್ತಿದೆ. ಹೆಚ್ಚು ರನ್ ಗಳಿಸಿ ತಂಡದ ಗೆಲುವಿಗೆ ನೆರವಾಗಲಿದ್ದೇನೆ ಎಂಬ ವಿಶ್ವಾಸವಿದೆ. ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುವುದಕ್ಕೆ ಅವಕಾಶ ನೀಡಿರುವ ಬಿಸಿಸಿಐಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದು ಅಜಿಂಕ್ಯಾ ರಹಾನೆ ಹೇಳಿದ್ದಾರೆ.

Related Articles