Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಮೀನು ಮಾರುತ, ಕ್ರೀಡೆ ಬೆಳಗುವ “ಕಡಲ್‌ ಫಿಶ್‌” ಖ್ಯಾತಿಯ ಚೇತನ್‌

ಉಡುಪಿ: ಕ್ರೀಡೆಗೆ ಪ್ರೋತ್ಸಾಹ ನೀಡಲು ಹಣಕ್ಕಿಂತ ಮುಖ್ಯವಾಗಿ ಬದ್ಧತೆ ಇರಬೇಕು. ಆ ಕ್ರೀಡೆಯ ಬಗ್ಗೆ ಕಾಳಜಿ ಮತ್ತು ಪ್ರೀತಿ ಇರಬೇಕು. ಹಣ ಮಾಡುವ ಉದ್ದೇಶದಿಂದ ಕ್ರೀಡಾಕೂಟಗಳನ್ನು ನಡೆಸಿ ಕೈಸುಟ್ಟುಕೊಂಡವರೇ ಹೆಚ್ಚು. ಹಲವರು ಪಲಾಯನವಾದಿಗಳಾದರೆ ಇನ್ನು ಕೆಲವರು ಬದ್ಧತೆಯನ್ನೇ ಬದುಕಾಗಿಸಿಕೊಂಡು ಯಶಸ್ಸಿನ ಹಾದಿ ತುಳಿಯುತ್ತಾರೆ. ಹೀಗೆ ಕ್ರೀಡೆಯ ಬಗ್ಗೆ ಬದ್ಧತೆ ಮತ್ತು ಅಪಾರ ಪ್ರೀತಿ ಹೊಂದಿ, ಮೀನು ಮಾರಾಟದ ನಡುವೆ ಟೂರ್ನಿಗಳನ್ನು ಆಯೋಜಿಸಿ, ಸಾಲ ಮಾಡಿಯದರೂ ಬಹುಮಾನ ನೀಡಿ, ಎಲ್ಲರ ಪ್ರೀತಿಗೆ ಪಾತ್ರರಾಗಿರುವ ಉಡುಪಿ ಜಿಲ್ಲೆಯ, ಪಡುಬಿದ್ರಿಯ “ಕಡಲ್‌ ಫಿಶ್”‌ [KADAL FISH] ಖ್ಯಾತಿಯ ಚೇತನ್‌ ಕೋಟ್ಯಾನ್‌ ಅವರ ಬದುಕಿನ ಕತೆ ಇದು. Chetan Kotian, of Kadal Fish fame, a fisherman from Padubidri, Udupi district, who sells fish in Tempo and encourages the sport.

ಉಡುಪಿ ಜಿಲ್ಲೆಯಲ್ಲಿ ಬೀಚ್‌ ಕ್ರಿಕೆಟ್‌ ನಡೆಸಿದ ಕೀರ್ತಿಗೆ ಪಾತ್ರರಾಗಿರುವ ಚೇತನ್‌ ಪಡುಬಿದ್ರಿ ಅವರು ವೃತ್ತಿಯಲ್ಲಿ ಮೀನು ವ್ಯಾಪಾರಿ. ಚೇತನ್‌ ಅವರ ತಾಯಿ ಮೀನಾಕ್ಷಿ ಕೆ. ಸಾಲ್ಯಾನ್‌ ಕೂಡ ಮೀನು ಮಾರಾಟ ಮಾಡುತ್ತಿದ್ದಾರೆ. 2024ರಲ್ಲಿ ಪಡುಬಿದ್ರಿಯಲ್ಲಿ ಕಡಲ್‌ಫಿಶ್‌ ಟ್ರೋಫಿಯನ್ನು ಆಯೋಜಿಸಿರುವ ಚೇತನ್‌ ಪಡುಬಿದ್ರಿ ಟೂರ್ನಿಗಾಗಿ ಸುಮಾರು 28 ಲಕ್ಷ ರೂ. ವ್ಯಯ ಮಾಡಿದ್ದಾರೆ. ಶ್ರೀಲಂಕಾದ ಆಟಗಾರರನ್ನು ಕರೆಸಿ ಕ್ರಿಕೆಟ್‌ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ಟೂರ್ನಿಯ ಯಶಸ್ಸಿಗಾಗಿ 8.5 ಲಕ್ಷ ರೂ. ಬ್ಯಾಂಕ್‌ ಸಾಲ, ಗೆದ್ದ ತಂಡಕ್ಕೆ ಬಹುಮಾನದ ಮೊತ್ತ ಅಡ್ಡಿಯಾಗದಂತೆ ನೋಡಿಕೊಂಡಿದ್ದಾರೆ.

1992ರಿಂದ ಕ್ರಿಕೆಟ್‌ ಆಡಲು ಆರಂಭಿಸಿದ ಚೇತನ್‌ ಪಡುಬಿದ್ರಿ 2003ರಲ್ಲಿ ಉದ್ಯೋಗ ಅರಸಿ ಕೊಲ್ಲಿ ರಾಷ್ಟ್ರ ಬಹೆರಿನ್‌ಗೆ ಹೋಗುತ್ತಾರೆ. ಅಲ್ಲಿ ಮೊಗವೀರ್ಸ್‌ ಬೆಹರಿನ್‌ ಸಂಘದ ಕ್ರೀಡಾ ಕಾರ್ಯದರ್ಶಿಯಾಗಿ, ಮೊಗವೀರ್ಸ್‌ ಬೆಹರಿನ್‌ ಟ್ರೋಫಿ ಕ್ರಿಕೆಟ್‌ ಟೂರ್ನಿ ಆರಂಭಿಸಿ, ಪ್ರಥಮ ಸ್ಥಾನ ಗೆದ್ದ ತಂಡಕ್ಕೆ 50 ಸಾವಿರ ರೂ. ಹಾಗೂ ರನ್ನರ್ಸ್‌ ಅಪ್‌ಗೆ 25 ಸಾವಿರ ರೂ. ನಗದು ಬಹುಮಾನ ಘೋಷಿಸುತ್ತಾರೆ. ಇದರಲ್ಲಿ ಸಂಘಕ್ಕೆ 1 ಲಕ್ಷ ರೂ. ನಿಧಿ ಸಂಗ್ರಹವಾಗುತ್ತದೆ.

ಬೀಚ್‌ ಕ್ರಿಕೆಟ್‌ ಆಯೋಜನೆ: ತಂದೆ ಕೃಷ್ಣ ಸಾಲ್ಯಾನ್‌ ಅವರ ನಿಧನದ ನಂತರ ಗಲ್ಫ್‌ಗೆ ವಿದಾಯ ಹೇಳಿ ಊರಿಗೆ ಆಗಮಿಸಿದ ಚೇತನ್‌, ಅಲ್ಲಿಲ್ಲಿ ಕೆಲಸ ಮಾಡಿಕೊಂಡಿದ್ದರೂ ಕ್ರೀಡೆಯ ಬಗ್ಗೆ ಇರುವ ಪ್ರೀತಿಯನ್ನು ಕಳೆದುಕೊಂಡಿಲ್ಲ. ಪಡಬಿದ್ರಿಯ ಬೂಡು ಫ್ರೆಂಡ್ಸ್‌ಗೆ ಹೊಸ ರೂಪ ನೀಡಿದರು. ಜೊತೆಯಲ್ಲಿ ಬೀಚ್‌ ಕ್ರಿಕೆಟ್‌ ಆಯೋಜಿಸಿ ಯಶಸ್ಸು ಕಂಡರು. ಮಗನ ಹೆಸರಿನಲ್ಲಿ ಸಮರ್ಥ್‌ ಫ್ರೆಂಡ್ಸ್‌ ಕ್ರಿಕೆಟರ್ಸ್‌ ಮೂಲಕ ಸಮರ್ಥ್‌ ಟ್ರೋಫಿಯನ್ನು ಆಯೋಜಿಸಿ 1 ಲಕ್ಷ ರೂ. ನಗದು ಬಹಮಾನ ಹಾಗೂ ರನ್ನರ್ಸ್‌ ಅಪ್‌ಗೆ 50000 ರೂ. ಬಹುಮಾನ ನೀಡಿದರು.

ಯಶಸ್ವಿ ಕಡಲ್‌ ಫಿಶ್‌ ಟ್ರೋಫಿ: ಗಲ್ಫ್‌ನಿಂದ ತಾಯ್ನಾಡಿಗೆ ಬಂದ ನಂತರ ಚೇತನ್‌ ಅವರಿಗೆ ಕೈ ಹಿಡಿದದ್ದು ಕುಲಕಸುಬಾದ ಮೀನುಗಾರಿಗೆ. ಟೆಂಪೋದಲ್ಲಿ ಮೀನು ಮಾರಾಟ ಆರಂಭಿಸಿ ಯಶಸ್ಸು ಕಂಡರು. ಕನ್ನಡ ಕರಾವಳಿಯಲ್ಲಿ  ಸಮುದ್ರದ ಮೀನು ಎಷ್ಟು ಜನಪ್ರಿಯತೆ ಹೊಂದಿದೆಯೋ ಅಷ್ಟೇ ಜನಪ್ರಿಯತೆ ಚೇತನ್‌ ಅವರ “ಕಡಲ್‌ ಫಿಶ್‌” ಬ್ರಾಂಡ್‌ಗೂ ದಕ್ಕಿತು, ಬದುಕು ನೀಡಿದ ಊರಿನ ಯುವಕರ ಕ್ರೀಡಾ ಬದುಕು ಯಾವಾಗಲೂ ಉತ್ಸಾಹದಿಂದ ಕೂಡಿರಲಿ ಎಂಬ ಉದ್ದೇಶದಿಂದ ಚೇತನ್‌ 2024ರಲ್ಲಿ ಸ್ನೇತರೊಂದಿಗೆ ಕೂಡಿ “ಕಡಲ್‌ ಫಿಶ್‌ ಟ್ರೋಫಿ”ಯನ್ನು ಆಯೋಜಿಸಿದರು.

ಈ ಟೂರ್ನಿಗೆ ಸುಮಾರು 28 ಲಕ್ಷ ರೂ ವೆಚ್ಚವಾಗಿತ್ತು. ಶ್ರೀಲಂಕಾದಿಂದ ತಂಡವನ್ನು ಕರೆಸಲಾಗಿತ್ತು. ಮೊದಲ  ಬಹುಮಾನ 5 ,00,000 ರೂ. ಹಾಗೂ ದ್ವಿತೀಯ ಬಹುಮಾನ 3,00,000 ರೂ. ಚೇತನ್‌ ಅವರು ಕೆಲಸ ಬಗ್ಗೆ ಬದ್ಧತೆಯನ್ನು ಹೊಂದಿರುವವರು, ಅದು ಮೀನಿನ ವ್ಯಾಪಾರ ಆಗಿರಬಹುದು ಇಲ್ಲವೇ ಕ್ರೀಡೆಯಾಗಿರಬಹುದು. ಕೊನೆಯ ಕ್ಷಣದಲ್ಲಿ ಗೊಂದಲಕ್ಕೆ ಆಸ್ಪದ ಮಾಡಿಕೊಡುವವರಲ್ಲ. ಕೊನೆಯ ಕ್ಷಣದಲ್ಲಿ ಟೂರ್ನಿಗೆ ನಿರೀಕ್ಷಿತ ಮಟ್ಟದಲ್ಲಿ ಪ್ರಾಯೋಜಕತ್ವ ಸಿಗದೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ತಮ್ಮಲ್ಲಿರುವ ಎಲ್‌ಐಸಿ ಬಾಂಡನ್ನು ಒತ್ತೆ ಇಟ್ಟು 10 ಲಕ್ಷ ರೂ ಸಾಲ ಪಡೆದಿದ್ದರು. ಎಲ್ಲ ಸಂಘಟಕರೂ ಹೀಗೆ ಮಾಡುತ್ತಾರೆಂದಲ್ಲ, ಚೇತನ್‌ ಅವರಲ್ಲಿರುವ ಕಾಳಜಿಯಿಂದಾಗಿ ಟೂರ್ನಿ ಸಾಂಗವಾಗಿ ನಡೆದು, ಬಹುಮಾನಕ್ಕೆ ಯಾವುದೇ ರೀತಿಯಲ್ಲಿ ತೊಂದರೆ ಆಗಬಾರದು ಎಂಬುದು ಅವರ ಉದ್ದೇಶವಾಗಿತ್ತು.

ಉತ್ತಮ ಸಂಘಟಕ: ಚೇತನ್‌ ಉತ್ತಮ ರೀತಿಯಲ್ಲಿ ಟೂರ್ನಿಗಳನ್ನು ಆಯೋಜಿಸಿರುತ್ತಾರೆ. ಕ್ರಿಕೆಟ್‌ ಅಥವಾ ಯಾವುದೇ ಕ್ರೀಡೆ ಇರಲಿ ಸರಿಯಾದ ರೀತಿಯಲ್ಲಿ ಯೋಜನೆ ಮಾಡಿದರೆ ಯಶಸ್ಸು ಕಾಣಲು ಸಾಧ್ಯ ಎನ್ನುತ್ತಾರೆ ಚೇತನ್‌. “ಹಣ ಇಲ್ಲದೆ ಕ್ರೀಡಾ ಕೂಟಗಳನ್ನು ನಡೆಸಲಾಗದು. ಹಾಗಂಥ ಹಣದಿಂದಲೇ ಎಲ್ಲವೂ ನಡೆಸುತ್ತೇನೆ ಎನ್ನಲಾಗದು. ಟೂರ್ನಿಗಳನ್ನು ಅಯೋಜಿಸಿ ಹಣ ಕಳೆದುಕೊಳ್ಳುವ ಪ್ರಸಂಗವೂ ಬರುತ್ತದೆ. ಆದರೆ ಟೂರ್ನಿ ಯಶಸ್ವಿಯಾದ ಸಿಗುವ ಖುಷಿ ಎಲ್ಲವನ್ನೂ ಮರೆಸುತ್ತದೆ. ಹಣ ಮಾಡಬೇಕೆಂಬ ಒಂದೇ ಉದ್ದೇಶದಿಂದ ಟೂರ್ನಿಗಳನ್ನು ಆಯೋಸಿವುದು ಸರಿಯಲ್ಲ. ಖುಷಿ ಹಾಗೂ ಸಂಭ್ರಮಕ್ಕಾಗಿಯೂ ನಡೆಸಬೇಕು. ಕ್ರೀಡೆ ಅರೋಗ್ಯ ಹಾಗೂ ಖುಷಿಯನ್ನು ನೀಡುತ್ತದೆ,” ಎಂದು ಚೇತನ್‌ ಹೇಳಿದ್ದಾರೆ.

ಚೇತನ್‌ ಅವರಿಗೆ ಇಬ್ಬರು ಮಕ್ಕಳು. ಮಗ ಸಮರ್ಥ್‌ ಸಿ ಕೋಟ್ಯಾನ್‌ ಹಾಗೂ ಮಗಳು ಮೃಣಾಲಿ ಸಿ ಕೋಟ್ಯಾನ್. ಮಗಳು ಮೃಣಾಲಿಗೆ ಪಿ.ಟಿ ಉಷಾ ಅವರನ್ನು ನೋಡುವ ಹಂಬಲ. ಓಟ್‌ ಹಾಗೂ ಲಾಂಗ್‌ಜಂಪ್‌ನಲ್ಲಿ ಸ್ಪರ್ಧಿಸುತ್ತಿರುವ ಮೃಣಾಲಿಗೆ ಉತ್ತಮ ಕ್ರೀಡಾಪಟುವಾಗುವ ಹಂಬಲ.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.