Thursday, September 12, 2024

ರಾಷ್ಟ್ರೀಯ ಕ್ರೀಡಾಕೂಟ: ಗೋವಾದಲ್ಲಿ ಕನ್ನಡಿಗರಿಗೆ ಮೋಸ, ತಪ್ಪಿದ ಪದಕ

ಗೋವಾದಲ್ಲಿ ನಡೆಯುತ್ತಿರುವ 37ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕದ ಪೆಂಕಾಕ್‌ ಸೆಲತ್‌ ರೆಗು ತಂಡಕ್ಕೆ ಅನ್ಯಾಯವಾಗಿದ್ದು ಇದನ್ನು ಪ್ರತಿಭಟಿಸಿದರೂ ಪ್ರಯೋಜನವಾಗಲಿಲ್ಲ. Karnataka Pencak Silat Regu team cheated by referees

ಕರ್ನಾಟಕ ಹಾಗೂ ಗೋವಾ ತಂಡಗಳ ನಡುವೆ ಪೆಂಕಾಕ್‌ ಸೆಲತ್‌ನ ರೆಗು ವಿಭಾಗದಲ್ಲಿ ಮೊದಲ ಸುತ್ತಿನ ಹೋರಾಟ ನಡೆದಿತ್ತು. ಮೂರು ಜನ ಸ್ಪರ್ಧಿಗಳು 3 ನಿಮಿಷಗಳ ಕಾಲ ಏಕಪ್ರಕಾರದಲ್ಲಿ ಒಟ್ಟಿಗೆ ಪ್ರದರ್ಶನ ನೀಡುವುದಾಗಿತ್ತು. ಕರ್ನಾಟಕದ ಸ್ಪರ್ಧಿಗಳು 2 ನಿಮಿಷ 56 ಸೆಕೆಂಡುಗಳಲ್ಲಿ ಪ್ರದರ್ಶನ ಮುಗಿಸಿ 4 ಸೆಕೆಂಡುಗಳ ಉಳಿತಾಯ ಕಾಯ್ದುಕೊಂಡರು. ಗೋವಾದ ಸ್ಪರ್ಧಿಗಳು 2. 54 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿರುವುದು ಮಾತ್ರವಲ್ಲದೆ ಸಮತೋಲನ ಇಲ್ಲದ ಮತ್ತು ಹೊಂದಾಣಿಗೆ ಇಲ್ಲದ ಪ್ರದರ್ಶನ ನೀಡಿದರು. ಮೂವರೂ ಸ್ಪರ್ಧಿಗಳು ಲಯಬದ್ಧವಾಗಿ ಪ್ರದರ್ಶನ ತೋರಬೇಕಾಗಿರುವುದು ಇಲ್ಲಿಯ ಪ್ರಮುಖ ನಿಯಮ. ಆದರೆ ಗೋವಾದ ಸ್ಪರ್ಧಿಗಳಲ್ಲಿ ಒಬ್ಬರು ಇಬ್ಬರಿಗಿಂತ ಭಿನ್ನವಾಗಿದ್ದರು. ಈ ವ್ಯತ್ಯಯ ಎಲ್ಲರ ಕಣ್ಣಿಗೆ ಕಾಣುತ್ತಿತ್ತು.

ಆದರೆ ಅಂಕ ನೀಡುವಾಗ ಕರ್ನಾಟಕಕ್ಕೆ 126.3 ಮತ್ತು ಗೋವಾಕ್ಕೆ 126.5 ನೀಡಲಾಯಿತು. ಮೊದಲ ಬಾರಿಗೆ ಪೆಂಕಾಕ್‌ ಸೆಲತ್‌ ರೆಗು ಸ್ಪರ್ಧೆಗೆ ಅವಕಾಶ ನೀಡಲಾಗಿತ್ತು. ಕರ್ನಾಟಕ ಈ ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ತೋರಿದೆ. ಈ ರೀತಿಯ ವ್ಯತಿರಿಕ್ತ ಫಲಿತಾಂಶ ಬಂದಾಗ ತಂಡದ ಮ್ಯಾನೇಜರ್‌ ರಜಾಕ್‌ ಅವರು ಪ್ರಶ್ನಿಸಿದರು. ಇದು ಪಂದ್ಯ ಮುಗಿದ 15 ನಿಮಿಷಗಳ ಒಳಗಾಗಿ ನಡೆಬೇಕಾಗಿದೆ. ಪಂದ್ಯ ನಡೆದ ವೀಡಿಯೋ ನೋಡಿ ಎಂದು ವಿನಂತಿ ಮಾಡಿಕೊಂಡರೂ ಸ್ಪಂದಿಸಲಿಲ್ಲ. ಇರುವ 20 ನಿಮಿಷಗಳ ಅವಕಾಶವನ್ನು ನಿರ್ಲಕ್ಷ್ಯಕ್ಕಾಗಿಯೇ ಸಂಘಟಕರು ವಿನಿಯೋಗಿಸಿದರು. ಇವೆಲ್ಲವೂ ಕ್ರೀಡಾಕೂಟವನ್ನು ಆಯೋಜಿಸಿರುವ ಗೋವಾದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ. ಯಾವುದೇ ಕ್ರೀಡಾಕೂಟ ನಡೆಯಲಿ ಯಾರು ಆತಿಥ್ಯ ವಹಿಸುತ್ತಾರೆಯೋ ಅವರು ಹೆಚ್ಚಿನ ಪದಕ ಗೆಲ್ಲುತ್ತಾರೆ. ಅದು ಅಗ್ರ ಸ್ಥಾನವಲ್ಲದಿದ್ದರೂ ಹಿಂದಿನ ಕೂಟಕ್ಕಿಂತ ಅದು ಜಾಸ್ತಿಯಾಗಿರುತ್ತದೆ.

ಭಾರತ ಮೂಲದ ಪೆಂಕಾಕ್‌ ಸೆಲತ್‌ ಈಗ ಇಂಡೋನೇಷ್ಯಾದ ಜನಪ್ರಿಯ ಮಾರ್ಷಲ್‌ ಆರ್ಟ್‌ ಆಗಿದೆ. ಇದೇ ಮೊದಲ ಬಾರಿಗೆ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಅವಕಾಶ ನೀಡುತ್ತಿರುವುದರಿಂದ ಕರ್ನಾಟಕ ತಂಡದವರು ವಿಷಯವನ್ನು ಅಲ್ಲಿಗೇ ಬಿಟ್ಟು ಅದನ್ನು ಪ್ರಕರಣ ಮಾಡಲು ಹೋಗಲಿಲ್ಲ. ಆದರೆ ಗೋವಾದವರು ದೇಶದ ಪ್ರಮುಖ ಪತ್ರಿಕೆಗಳಲ್ಲಿ ಘಟನೆಗೆ ವಿರುದ್ಧವಾಗಿ ವರದಿ ಪ್ರಕಟವಾಗುವಂತೆ ಮಾಡಿದರು. ಕರ್ನಾಟಕದ ಪ್ರತಿಭಟೆನೆಯ ನಡುವೆಯೂ ಪದಕ ಗೆಲ್ಲುವಂತಾಯಿತು ಎಂದು ಬರೆಸಿದರು.

Related Articles