ರಚಿತಾ ಹತ್ವಾರ್, ಲಿಯಾಂಕ ಶೆಟ್ಟಿ ಮಿಂಚು: ಕರ್ನಾಟಕಕ್ಕೆ ಜಯ
ಬೆಂಗಳೂರು: ನಾಯಕಿ ರಚಿತಾ ಹತ್ವಾರ್ (59*) ಹಾಗೂ ಲಿಯಾಂಕ ಶೆಟ್ಟಿ (56) ಅವರ ಆಕರ್ಷಕ ಬ್ಯಾಟಿಂಗ್ ನೆವಿನಿಂದ ಕರ್ನಾಟಕ ತಂಡ 19 ವರ್ಷ ವಯೋಮಿತಿಯ ವನಿತೆಯರ ಏಕದಿನ ಪಂದ್ಯದಲ್ಲಿ ಬಿಹಾರ ವಿದ್ಧದ ಪಂದ್ಯದಲ್ಲಿ ಕರ್ನಾಟಕ 9 ವಿಕೆಟ್ ಜಯ ಗಳಿಸಿದೆ. Captain Rachita Hatwar (59*) and Liyanka Shetty (56) played a brilliant batting performance as Karnataka defeated Bihar by 9 wickets in the Under-19 Women’s ODI.
ಕುಂದಾಪುರದ ರಚಿತಾ ಹತ್ವಾರ್ ನಾಯಕತ್ವದಲ್ಲಿ ಕರ್ನಾಟಕ ಸತತ ಮೂರು ಪಂದ್ಯಗಳಲ್ಲಿ ಜಯ ಗಳಿಸಿರುವುದು ವಿಶೇಷ. ಬಿಹಾರ ನೀಡಿದ 117 ರನ್ಗಳ ಸಾಧಾರಣ ಮೊತ್ತವನ್ನು ಬೆಂಬತ್ತಿದ ಕರ್ನಾಟಕ 16.1 ಓವರ್ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು ಜಯದ ಗುರಿ ತಲುಪಿತು.
ಮೊದಲ ಪಂದ್ಯದಲ್ಲಿ 156 ರನ್ ಗಳಿಸಿದ್ದ ರಚಿತಾ ಹತ್ವಾರ್, ಛತ್ತೀಸ್ಗಢ ವಿರುದ್ಧದ ಎರಡನೇ ಪಂದ್ಯದಲ್ಲಿ ಕೇವಲ 17 ರನ್ ಗಳಿಸಿ ಪೆವಿಲಿಯನ್ ಸೇರಿದ್ದರು. ಆದರೆ ಅದ್ಭುತ ಯೋಜನೆಯನ್ನು ರೂಪಿಸಿ ತಂಡ ಸತತ ಎರಡನೇ ಜಯ ಗಳಿಸಿತ್ತು. ಬಿಹಾರ ವಿರುದ್ಧದ ಮೂರನೇ ಪಂದ್ಯದಲ್ಲಿ ಕರ್ನಾಟಕದ ಬೌಲರ್ಗಳು ಉತ್ತಮ ಪ್ರದರ್ಶನ ತೋರಿದ ಪರಿಣಾಮ ಬಿಹಾರ 40.2 ಓವರ್ಗಳಲ್ಲಿ 117 ರನ್ಗೆ ಸರ್ವ ಪತನ ಕಂಡಿತು. ಕರ್ನಾಟಕದ ಪರ ಹರಿಣಿ ಎನ್ (2/24), ಕಶ್ವಿ ಕಂಡಿಕುಪ್ಪ (2/14), ವೇದ ವರ್ಷಿಣಿ ವಿ (3/17) ಹಾಗೂ ಧೀಕ್ಷಾ ಜೆ (1/17) ಉತ್ತಮ ಬೌಲಿಂಗ್ ಪ್ರದರ್ಶಿಸಿ ಎದುರಾಳಿ ತಂಡದ ರನ್ ಗಳಿಕೆಗೆ ಕಡಿವಾಣ ಹಾಕಿದ್ದರು.

ಕರ್ನಾಟಕದ ನಾಯಕಿ ಹಾಗೂ ಆರಂಭಿಕ ಆಟಗಾರ್ತಿ ರಚಿತಾ ಹತ್ವಾರ್ 51 ಎಸೆತಗಳನ್ನೆದುರಿಸಿ 11 ಬೌಂಡರಿ ನೆರವಿನಿಂದ ಅಜೇಯ 59 ರನ್ ಗಳಿಸಿ ಜಯದ ಹಾದಿ ಸುಗಮಗೊಳಿಸಿದರು. ಇದಕ್ಕೂ ಮುನ್ನ ಆಲ್ರೌಂಡರ್ ಲಿಯಾಂಕ ಶೆಟ್ಟಿ 45 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 56 ರನ್ ಸಿಡಿಸಿ ತಂಡದ ಜಯಕ್ಕೆ ಕಾರಣರಾದರು.
ಆಡಿದ ಮೂರು ಪಂದ್ಯಗಳಲ್ಲಿ ಮೂರು ಇನ್ನಿಂಗ್ಸ್ ಆಡಿರುವ ರಚಿತಾ, ಒಂದು ಶತಕ ಹಾಗೂ ಒಂದು ಅರ್ಧ ಶತಕದೊಂದಿಗೆ ಒಟ್ಟು 231 ರನ್ ಗಳಿಸಿ ಸದ್ಯ U19 ಗರಿಷ್ಠ ರನ್ ಗಳಿಕೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದ್ದಾರೆ. ರಚಿತಾ ಅವರದ್ದು 116 ಸರಾಸರಿ ಹಾಗೂ 99.14 ಸ್ಟ್ರೈಕ್ ರೇಟ್. ಮೂರು ಪಂದ್ಯಗಳಲ್ಲಿ ಗಳಿಸಿದ ಒಟ್ಟು ಬೌಂಡರಿ 35.

