Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಕ್ಯಾನ್ಸರ್‌ ಗೆದ್ದು ಚಿನ್ನ ಗೆಲ್ಲುವ ಕಣಿವೆಯ ಸಾಧಕಿ ಶಿವಾನಿ ಚರಕ್‌

ಬೆಂಗಳೂರು:  ಸತತ ನಾಲ್ಕೂವರೆ ವರ್ಷಗಳ ಕಾಲ ಕ್ಯಾನ್ಸರ್‌ ವಿರುದ್ಧ ಹೋರಾಟ, ಸಾವು ಬದುಕಿನ ನಡುವೆ ಸೆಣಸು,  ಕ್ಯಾನ್ಸರ್‌ ಗೆದ್ದ ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಯುವರಾಜ್‌ ಸಿಂಗ್‌ ಅವರೇ ಸ್ಫೂರ್ತಿ, ನೋವು ನಲಿವುಗಳ ನಡುವೆ ಆಯ್ಕೆ ಮಾಡಿಕೊಂಡಿದ್ದು ಸಾಹಸ ಕ್ರೀಡೆಯನ್ನು, ಅದರಲ್ಲೂ ಕ್ಲೈಮಿಂಗ್‌, ಬೆಟ್ಟ ಏರುವುದು. ಜಮ್ಮು ಮತ್ತು ಕಾಶ್ಮೀರ ರಾಜ್ಯದ ಜಮ್ಮು ಜಿಲ್ಲೆಯ ರಜೋರಿ ಎಂಬ ಪುಟ್ಟ ಹಳ್ಳಿಯ ಸಾಧಕಿ ಕ್ಲೈಮಿಂಗ್‌ ಕ್ರೀಡೆಯಲ್ಲಿ ಏಷ್ಯ ಮಟ್ಟದಲ್ಲಿ ಸಾಧನೆ ಮಾಡಿ ಒಲಿಂಪಿಕ್ಸ್‌ ಅರ್ಹತೆಗೆ ಶ್ರಮವಹಿಸುತ್ತಿರುವ ಶಿವಾನಿ ಚರಕ್‌ ಅವರ ಬದುಕಿನ ಸಾಹಸ ಕತೆ ಇದು. Cancer survivor Shivani Charak who emerged as the nation’s top sport climber.

ಒಲಿಂಪಿಕ್ಸ್‌ ಕ್ರೀಡೆಯಾಗಿರುವ ಕ್ಲೈಮಿಂಗ್‌ (ಈ ಹಿಂದೆ ಇದಕ್ಕೆ ಸ್ಪೋರ್ಟ್‌ ಕ್ಲೈಮಿಂಗ್‌ ಎಂದು ಕರೆಯಲಾಗುತ್ತಿತ್ತು) ರಾಷ್ಟ್ರೀಯ ಚಾಂಪಿಯನ್‌ಷಿಪ್‌ ರಾಷ್ಟ್ರೀಯ ಮೌಂಟೆನೇರಿಂಗ್‌ ಫೌಂಡೇಷನ್‌ ಹಾಗೂ ಜನರಲ್‌ ತಿಮ್ಮಯ್ಯ ಸಾಹಸ ಅಕಾಡೆಮಿಯ ಸಂಯುಕ್ತ ಆಶ್ರಯದಲ್ಲಿ ನಡೆದಿತ್ತು. ಇಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 170 ಕ್ಕೂ ಹೆಚ್ಚು ಆರೋಹಣಗಾರರು ಈ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿದ್ದರು, ಅವರಲ್ಲಿ ಎಲ್ಲರ ಗಮನ ಸೆಳೆದಿದ್ದು ಜಮ್ಮುವಿನ ಶಿವಾನಿ ಚರಕ್‌.

ಚಿಕ್ಕಂದಿನಲ್ಲಿಯೇ ಅಂಡಾಶಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಶಿವಾನಿಗೆ ಜಮ್ಮವಿನ ಪರ್ವತ ಪ್ರದೇಶ, ಒಂದು ಮನೆಯಿಂದ ಇನ್ನೊಂದು ಮನೆಗೆ ಇರುವ ಅಂತರ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಸಹೋದರ ಹಾಗೂ ಸಹೋದರಿಯು ಆರೋಹಣ  ಕ್ರೀಡೆಯಲ್ಲಿ ತೊಡಗಿಕೊಂಡಿರುವುದು ಬಹಳ ನೆರವಾಯಿತು.

ನಾಲ್ಕು ವರ್ಷಗಳ ಕಾಲ ಕ್ಯಾನ್ನರ್‌ನಿಂದ ಬಳಲಿದ ಶಿವಾನಿಯ ಬಲ ಅಂಡಾಶಯವನ್ನು ತೆಗೆದು ಹಾಕಲಾಯಿತು. ಈ ಮಹಾ ಮಾರಿಯಿಂದ ಚೇತರಿಸಿಕೊಳ್ಳಲು ಬಹಳ ಸಮಯ ತಲಿತು. ಶಾಲೆಗೆ ಸೇರಿದ ಶಿವಾನಿಗೆ ಬದುಕಿನಲ್ಲಿ ಏನಾದರೂ ವಿಶೇಷ ಸಾಧನೆ ಮಾಡಬೇಕೆಂದೆನಿಸಿತು. ಆಗ ಭಾರತ ಕ್ರಿಕೆಟ್‌ ತಂಡದ ಆಟಗಾರ ಯುವರಾಜ್‌ ಸಿಂಗ್‌ ಕ್ಯಾನ್ಸರ್‌ನಿಂದ ಚೇತರಿಸಿಕೊಂಡ ಸ್ಫೂರ್ತಿಯ ಕತೆ ದೇಶವನ್ನೇ ಆವರಿಸಿತ್ತು. ಯುವರಾಜ್‌ ಸಿಂಗ್‌ ಅವರ ಬದುಕಿನಿಂದ ಸ್ಫೂರ್ತಿ ಪಡೆದ ಶಿವಾನಿ ಸಾಧನೆಯ ಕಡೆಗೆ ಮುಖ ಮಾಡಿದರು.

ಶಾಲೆಯಲ್ಲಿ ಸ್ಪೋರ್ಟ್‌ ಕ್ಲೈಮಿಂಗ್‌ನಲ್ಲಿ ಆಸಕ್ತಿ ಇರುವವರು ಅರ್ಜಿಯನ್ನು ತುಂಬಿಸಿ ಎಂದು ಸೂಚಿಸಿದ್ದರು. ಶಿವಾನಿ ಕ್ಯಾನ್ಸರ್‌ನಿಂದ ಚೇತರಿಸಿಕೊಂಡ ಕಾರಣ ಈ ಸಾಹಸ ಕ್ರೀಡೆಯಲ್ಲಿ ಪಾಲ್ಗೊಳ್ಳುದರ ಬಗ್ಗೆ ಹೆತ್ತವರಿಗೆ ಆತಂಕವಿದ್ದಿತ್ತು.  ಆದರೆ ಸಹೋದರಿ ಹಾಗೂ ಸಹೋದರರ ಸಾಹಸವನ್ನು ನೋಡಿ, ಆತ್ಮವಿಶ್ವಾಸ ಹೆಚ್ಚಿಕೊಂಡಿದ್ದ ಶಿವಾನಿ ಮನೆಯವರ ಮಾತನ್ನು ದಿಕ್ಕರಿಸಿ ಆರೋಹಣ ಶಿಬಿರದಲ್ಲಿ ಪಾಲ್ಗೊಂಡರು.

ಅಂದು ಅವರು ಕೈಗೊಂಡ ಉತ್ತಮ ತೀರ್ಮಾನದಿಂದಾಗಿ ಇಂದು ಭಾರತದ ಉತ್ತಮ ಸ್ಪೋರ್ಟ್‌ ಕ್ಲೈಂಬರ್‌ ಆಗಿ ಮೂಡಿಬಂದಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ 13 ಚಿನ್ನ, 16 ಬೆಳ್ಳಿ ಹಾಗೂ 7 ಕಂಚಿನ ಪದಕಗಳ ಸಾಧನೆ ಮಾಡಿ ಅಚ್ಚರಿ ಮೂಡಿಸಿದ್ದಾರೆ. 2019 ರಲ್ಲಿ ಶಿವಾನಿ ಏಷ್ಯನ್‌ ಯೂಥ್‌ ಚಾಂಪಿಯನ್‌ಷಿಪ್‌ನ ಸ್ಪೀಡ್‌ ಕ್ಲೈಮಿಂಗ್‌ನಲ್ಲಿ ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಕ್ರೀಡಾ ಜಗತ್ತಿನಲ್ಲಿ ಅಚ್ಚರಿ ಮೂಡಿಸಿದ್ದಾರೆ. 2023ರ ಏಷ್ಯನ್‌ ಗೇಮ್ಸ್‌ನಲ್ಲೂ ಶಿವಾನಿ ದೇಶವನ್ನು ಪ್ರತಿನಿಧಿಸಿದ್ದಾರೆ.

ಕ್ಯಾನ್ಸರ್‌ ಗೆದ್ದವಳಿಗೆ ಪದಕ ಗೆಲ್ಲಲು ಅಸಾಧ್ಯವೇ?

ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಆರೋಹಣಾ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಲು ಆಗಮಿಸಿದ್ದ ಶಿವಾನಿ ಚರಕ್‌, sportsmail ಜೊತೆ ಮಾತನಾಡುವಾಗ ಕೆಲವು ಅದ್ಭುತ ವಿಷಗಳನ್ನು ಹಂಚಿಕೊಂಡಿದ್ದಾರೆ. “ನಾನು ಕ್ಯಾನ್ಸರ್‌ ಗೆದ್ದವಳು, ಇಲ್ಲಿ ಪದಕ ಗೆಲ್ಲಲು ಅಸಾಧ್ಯವೆನ್ನಲಾಗದು. ನನ್ನ ಯಶಸ್ಸು ಬೇರೆಯವರಿಗೆ ಸ್ಫೂರ್ತಿಯಾದರೆ ಅದೇ ನನಗೆ ಗೌರವ, ಪಕದ. ಮೊದಲ ಬಾರಿಗೆ ಸ್ಪೋರ್ಟ್‌ ಕ್ಲೈಮಿಂಗ್‌ ಸೇರಿದಾಗ ನಮ್ಮ ಸುತ್ತಮುತ್ತಲಿನವರು ಸಾಕಷ್ಟು ಮಾತನಾಡಿದ್ದಾರೆ. ಆದರೆ ಪದಕ ಗೆದ್ದ ನಂತರ ತಮ್ಮ ಮಕ್ಕಳನ್ನೂ ಕಳುಹಿಸಲು ಆರಂಭಿಸಿದರು. ಇದು ಕ್ರೀಡೆಗಿರುವ ಶಕ್ತಿ,” ಎಂದು ಶಿವಾನಿ ಹೇಳಿದ್ದಾರೆ.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.