ಬೆಂಗಳೂರು: ಕಠಿಣ ಸವಾಲುಗಳ ನಡುವೆಯೂ ಬೆಂಗಳೂರಿನ 49 ವರ್ಷ ಪ್ರಾಯದ ಸಿದ್ಧಾರ್ಥ್ ಅಗರ್ವಾಲ್ ಇಂಗ್ಲಿಷ್ ಕಡಲ್ಗಾಲುವೆಯನ್ನು ಈಜಿದ ಭಾರತದ ಅತ್ಯಂತ ಹಿರಿಯ ಈಜುಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. Bengaluru’s Siddhartha Agarwal becomes the oldest Indian to swim across the English Channel solo
49 ವರ್ಷದ ಸಿದ್ಧಾರ್ಥ್ ಆಗಸ್ಟ್ 29ರಂದು 42 ಕಿ,ಮೀ ಅಂತರವನ್ನು 15 ಗಂಟೆಗಳು ಮತ್ತು 15 ನಿಮಿಷಗಳ ಅವಧಿಯಲ್ಲಿ ಈಜಿ ನೂತನ ದಾಖಲೆ ಬರೆದರು.
“2017ರಲ್ಲಿ ಸ್ವಿಮ್ ಲೈಫ್ ಸ್ಥಾಪಕ ಸತೀಶ್ ಕುಮಾರ್ ಅವರು ಈಜು ಕೊಳದಲ್ಲಿ ಓಪನ್ ವಾಟರ್ ಸ್ಮಿಮ್ಮಿಂಗ್ ಬಗೆಗಿನ ಸವಾಲುಗಳ ಬಗ್ಗೆ ತಿಳಿಸಿದ್ದರು. ಅಲ್ಲದೆ ನನಗೆ ಸವಾಲನ್ನೂ ಹಾಕಿದ್ದರು. ಆ ಬಗ್ಗೆ ಹೆಚ್ಚು ಯೋಚನೆ ಇಲ್ಲದೆ ನಾನು ಸ್ವೀಕರಿಸಿದ್ದೆ. ಇಂಗ್ಲಿಷ್ ಕಡಲ್ಗಾಲುವೆ ಬಗ್ಗೆ ಚಿಕ್ಕವನಾಗಿದ್ದಾಗ ಪತ್ರಿಕೆಗಳಲ್ಲಿ ಓದಿದ್ದೆ, ಆದರೆ ಒಂದು ದಿನ ಈಜುತ್ತೇನೆಂದು ಊಹಿಸಿರಲಿಲ್ಲ,” ಎಂದು ಬೆಂಗಳೂರಿನ ಭೋರುಕಾ ಪಾರ್ಕ್ ಕಂಪೆನಿಯ ಸ್ಥಾಪಕ ಮತ್ತು ಆಡಳಿತ ನಿರ್ದೇಶಕ ಅಗರ್ವಾಲ್ ಹೇಳಿದ್ದಾರೆ.
2018ರಲ್ಲಿ ಎಂಟು ಸದಸ್ಯರ ಈಜು ರಿಲೇ ತಂಡ ಇಂಗ್ಲಿಷ್ ಕಡಲ್ಗಾಲುವೆಯನ್ನು ಈಜುವ ಮೂಲಕ ಸಿದ್ಧಾರ್ಥ್ ಅವರಿಗೆ ಈ ಸಾಹಸ ಪರಿಚಯವಾಗಿತ್ತು. ಕುತೂಹಲದ ಸಂಗತಿಯೆಂದರೆ ಅದೇ ವರ್ಷ ಬೆಂಗಳೂರಿನ 46 ವರ್ಷದ ಶ್ರೀಕಾಂತ್ ವಿಶ್ವನಾಥನ್ ಇಂಗ್ಲಿಷ್ ಕಡಲ್ಗಾಲುವೆಯನ್ನು ಈಜಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡಿದ್ದರು. ಈಗ ಆರು ವರ್ಷಗಳ ಬಳಿಕ ಈಜು ವಲಯದಲ್ಲಿ ಸಿಡ್ ಎಂದೇ ಖ್ಯಾತರಾಗಿರುವ ಸಿದ್ಧಾರ್ಥ್ ಯಶಸ್ವಿಯಾಗಿ 42 ಕಿಮೀ ಅಂತರವನ್ನು ಈಜಿ ದಾಖಲೆ ಬರೆದರು. ಕೊನೆಯ ಹತ್ತು ಕಿಲೋಮೀಟರ್ ಈಜು ಅತ್ಯಂತ ಕಠಿಣವಾಗಿತ್ತು ಏಕೆಂದರೆ ಅತಿಯಾದ ಗಾಳಿ ಇದ್ದುದರಿಂದ ಈಜು ಅಷ್ಟು ಸುಲಭವಾಗಿರಲಿಲ್ಲ. “ಅಂತಿಮವಾಗಿ ಗುರಿ ತಲುಪುವ ವರೆಗೂ ಈ ಈಜನ್ನು ಪೂರ್ಣಗೊಳಿಸುತ್ತೇನೆಂಬ ನಂಬಿಕೆ ನನಗೆ ಇದ್ದಿರಲಿಲ್ಲ. ಕಠಿಣ ಅಭ್ಯಾಸ ಮಾಡಿರುವೆ ಮತ್ತು ನನ್ನ ಕೋಚ್ ಬಗ್ಗೆ ನನಗೆ ನಂಬಿಕೆ ಇದ್ದಿತ್ತು. ಇದರಿಂದಾಗಿ ಈ ಸವಾಲು ಪೂರ್ಣಗೊಳಸಿಲು ಸಾಧ್ಯವಾಯಿತು,” ಎಂದು ಸಿದ್ಧಾರ್ಥ್ ಹೇಳಿದ್ದಾರೆ.