ಆಳ್ವಾಸ್: ಪುರುಷರ, ಮಹಿಳಾ ವಿಭಾಗದಲ್ಲಿ ಸಮಗ್ರ ಚಾಂಪಿಯನ್ಸ್
ಮೂಡುಬಿದಿರೆ: ಎರಡು ಕೂಟ ದಾಖಲೆಗಳನ್ನು ಬರೆದ ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜು ಇಲ್ಲಿನ ಸ್ವರಾಜ್ ಮೈದಾನದಲ್ಲಿ ಗುರುವಾರ ಮುಕ್ತಾಯಗೊಂಡ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ‘23ನೇ ಅಂತರ ಕಾಲೇಜು ವಾರ್ಷಿಕ ಅಥ್ಲೆಟಿಕ್ ಚಾಂಪಿಯನ್ಶಿಪ್ನಲ್ಲಿ ಪುರುಷ ಮತ್ತು ಮಹಿಳಾ ಚಾಂಪಿಯನ್ಶಿಫ್ ಸಹಿತ ಎರಡು ವಿಭಾಗದ ಸಮಗ್ರ ತಂಡ ಪ್ರಶಸ್ತಿಯನ್ನು ಗೆದ್ದುಕೊಂಡಿತು. Alva’s Allied Health Sciences College won the overall team award in both the men’s and women’s championships in the ’23rd Inter-College Annual Athletic Championship’ of Rajiv Gandhi University of Health Sciences
ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ಆತಿಥ್ಯದಲ್ಲಿ ಮೂರು ದಿನ ನಡೆದ ಕ್ರೀಡಾಕೂಟದಲ್ಲಿ ಬೆಂಗಳೂರಿನ ಗಂಗೋತ್ರಿ ನರ್ಸಿಂಗ್ ಕಾಲೇಜಿನ ಆಕಾಶ್ ಬೆನಡಿಕ್ಟ್ ಹಾಗೂ ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜಿನ ಅನುರಾಧಾ ರಾಣಿ, ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದ ವೈಯಕ್ತಿಕ ಚಾಂಪಿಯನ್ ಆಗಿ ಮೂಡಿಬಂದರು.

ಸಮಗ್ರ ತಂಡ ಪ್ರಶಸ್ತಿ: ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಆಳ್ವಾಸ್ ಅಲೈಡ್ ಹೆಲ್ತ್ಸೈನ್ಸಸ್ ಕಾಲೇಜು ಕ್ರಮವಾಗಿ 48 ಹಾಗೂ 60 ಅಂಕಗಳನ್ನು ಪಡೆದು ಸಮಗ್ರ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಒಟ್ಟು 108 ಅಂಕಗಳೊಂದಿಗೆ ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜು ಸಮಗ್ರ ತಂಡ ಪ್ರಶಸ್ತಿ ಪಡೆಯಿತು.
ನೂತನ ಕೂಟ ದಾಖಲೆ: ಉದ್ದ ಜಿಗಿತದಲ್ಲಿ ಆಳ್ವಾಸ್ನ ಅನುರಾಧ ರಾಣಿ ನೂತನ ಕೂಟ ದಾಖಲೆ ನಿರ್ಮಿಸಿದರೆ, ಟ್ರಿಪಲ್ ಜಂಪ್ನಲ್ಲಿ ಆಳ್ವಾಸ್ನ ಸ್ವಾತಿ ಸಿಂಗ್ ನೂತನ ಕೂಟ ದಾಖಲೆ ಬರೆದರು. ಗುರುವಾರ ಸಂಜೆ ನಡೆದ ಸಮಾರೋಪದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ ಶಿವಶರಣ್ ಶೆಟ್ಟಿ ಮಾತನಾಡಿ, ಶಿಕ್ಷಣ ಮತ್ತು ಕ್ರೀಡೆಯ ನಡುವಿನ ಸಮತೋಲನ ಪ್ರತಿಯೊಬ್ಬರಿಗೂ ಅತೀ ಮುಖ್ಯ. ಸೋಲಿನ ಅನುಭವವು ವಿದ್ಯಾರ್ಥಿಗಳಿಗೆ ಸಹನಶೀಲತೆ, ವಿನಯಶೀಲತೆ ಮತ್ತು ಮುಂದಿನ ಸ್ಪರ್ಧೆಗಳಿಗೆ ಬೇಕಾದ ಪಾಠಗಳನ್ನು ಕಲಿಸುತ್ತದೆ. ವಿದ್ಯಾರ್ಥಿಗಳು ದೇಹಸೌಷ್ಟವ, ಕ್ರೀಡೆ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡರೆ ನೆಮ್ಮದಿಯ ಜೀವನ ಸಾಧ್ಯ ಎಂದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮಾಜಿ ಸೆನೆಟ್ ಸದಸ್ಯ ಡಾ. ಶರಣ ಶೆಟ್ಟಿ ಮಾತನಾಡಿ, ಕ್ರೀಡೆ ಒಂದು ದಿನದ ಅಭ್ಯಾಸವಲ್ಲ. ನಿರಂತರವಾಗಿ ಅಭ್ಯಾಸ ಮಾಡಿದಾಗ ಮಾತ್ರ ಅದರ ಫಲ ಲಭಿಸುವುದು. ಕ್ರೀಡೆಯು ದೈಹಿಕ ಹಾಗೂ ಮಾನಸಿಕ ಕ್ಷಮತೆಯನ್ನು ಹೆಚ್ಚಿಸುವುದರ ಜೊತೆಗೆ ಜೀವನದಲ್ಲಿ ಎದುರಾಗುವ ಯಾವುದೇ ಸಮಸ್ಯೆಯನ್ನು ಧೈರ್ಯವಾಗಿ ಎದುರಿಸುವ ಶಕ್ತಿಯನ್ನು ನೀಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕ್ರೀಡಾಕೂಟದ ವೀಕ್ಷಕರುಗಳಾದ ಡಾ ಅನಿಲ್ ಜೋಸೆಫ್, ಡಾ ಜಯಕುಮಾರ್, ಆಳ್ವಾಸ್ ಟ್ರಸ್ಟಿ ಡಾ ವಿನಯ್ ಆಳ್ವ, ನರ್ಸಿಂಗ್ ಕಾಲೇಜು ಪ್ರಾಂಶುಪಾಲ ಡಾ ಯತಿಕುಮಾರಸ್ವಾಮಿಗೌಡ, ನ್ಯಾಚುರೋಪಥಿ ಕಾಲೇಜು ಪ್ರಾಚರ್ಯೆ ಡಾ ವನಿತಾ ಶೆಟ್ಟಿ, ಆಳ್ವಾಸ್ನ ದೈಹಿಕ ನಿರ್ದೇಶಕ ಹಾಗೂ ಕ್ರೀಡಾಕೂಟದ ಸಂಚಾಲಕ ಅವಿನಾಶ್ ಎಸ್, ಆಯ್ಕೆ ಸಮಿತಿ ಸದಸ್ಯರಾದ ಶ್ರದ್ಧಾ ಶೆಟ್ಟಿ, ಹರೀಶ ಗೌಡ ಇದ್ದರು. ಆಳ್ವಾಸ್ ಆಯುರ್ವೇದ ಕಾಲೇಜಿನ ಪ್ರಾರ್ಯ ಡಾ ಸುಶೀಲ ಶೆಟ್ಟಿ ವಂದಿಸಿ, ದೈಹಿಕ ನಿರ್ದೇಶಕ ಡಾ ರಾಮಚಂದ್ರ ಕಾರ್ಯಕ್ರಮ ನಿರೂಪಿಸಿದರು.

