ತಾಲಿಬಾನಿಗಳಿಂದ ತಪ್ಪಿಸಿ ಕ್ರಿಕೆಟ್ ಆಡುವ ಆಫ್ಘಾನ್ ಮಹಿಳೆಯರು
ಮೆಲ್ಬೋರ್ನ್: 2021ರಲ್ಲಿ ಅಫಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡ ನಂತರ ಅಲ್ಲಿಯ ಮಹಿಳೆಯರು ಹಲವಾರು ಕಟ್ಟುಪಾಡುಗಳನ್ನು ಹಾಕಲಾಯಿತು. ಅವರು ಯಾವುದೇ ಕ್ರೀಡೆಯಲ್ಲಿ ಪಾಲ್ಗೊಳ್ಳುವಂತಿಲ್ಲ, ವೈದ್ಯಕೀಯ ಶಿಕ್ಷಣ ಪಡೆಯುವಂತಿಲ್ಲ ಎಂಬ ಕೆಟ್ಟ ನಿಯಮವನ್ನು ಜಾರಿಗೆ ತರಲಾಯಿತು. ಇದರಿಂದಾಗಿ ಅನೇಕ ಮಹಿಳೆಯರು ಆ ದೇಶವನ್ನು ತೊರೆದು ಬೇರೆ ದೇಶಗಳಲ್ಲಿ ನಿರಾಶ್ರಿತರಾಗಿ ಬದುಕ ತೊಡಗಿದರು. ಅಂಥವರಲ್ಲಿ ಅಫಘಾನಿಸ್ತಾನದ ಮಹಿಳಾ ಕ್ರಿಕೆಟ್ ತಂಡವೂ ಒಂದು. ಮೂರು ವರ್ಷಗಳ ಬಳಿಕ ಅವರು ಗುರುವಾರ ಆಸ್ಟ್ರೇಲಿಯಾದಲ್ಲಿ ಪ್ರದರ್ಶನ ಪಂದ್ಯವನ್ನಾಡಲಿದ್ದಾರೆ. Afghanistan women’s cricket team playing first exhibition match in Australia after fleeing the Taliban.
ಆಸ್ಟ್ರೇಲಿಯಾಕ್ಕೆ ಬಂದು ನೆಲೆಸಿದ ಮಹಿಳಾ ಕ್ರಿಕೆಟ್ ತಂಡ ಯಾವುದೇ ಅಧಿಕೃತ ಟೂರ್ನಿಯನ್ನು ಆಡುವಂತಿಲ್ಲ. ಆದರೆ ಪ್ರದರ್ಶನ ಪಂದ್ಯವನ್ನು ತಡೆಯಲು ಯಾವುದೇ ತಾಲಿಬಾನಿಗಳಿಂದ ಸಾಧ್ಯವಿಲ್ಲ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡಗಳ ನಡುವಿನ ಆಷಸ್ ಸರಣಿ ಆರಂಭವಾಗುವುದಕ್ಕೆ ಮುನ್ನ ಗುರುವಾರ ಮೆಲ್ಬೋರ್ನ್‌ಲ್ಲಿರುವ ಜಂಕ್ಷನ್ ಓವಲ್‌ನಲ್ಲಿ ಅಫಘಾನಿಸ್ತಾನ ಮಹಿಳಾ ತಂಡ ಕ್ರಿಕೆಟ್ ವಿದೌಟ್ ಬಾರ್ಡರ್ಸ್ XI ತಂಡದ ವಿರುದ್ಧ ಕೇವಲ ಪ್ರದರ್ಶನ ಪಂದ್ಯವನ್ನಾಡಲಿದೆ. ನಿಜವಾಗಿಯೂ ಆಫಘಾನಿಸ್ತಾನದ ಈ ಮಹಿಳಾ ಕ್ರಿಕೆಟಿಗರ ಧೈರ್ಯ ಮತ್ತು ಬದ್ಧತೆಯನ್ನು ಮೆಚ್ಚಲೇಬೇಕು.
2021ರಲ್ಲಿ ಅಫಘಾನಿಸ್ತಾನ ತೊರೆದು ಬಂದ ಈ ಮಹಿಳೆಯರು ಕ್ಯಾನ್ಬೆರಾ ಹಾಗೂ ಮೆಲ್ಬೋರ್ನ್‌ನಲ್ಲಿ ವಾಸವಾಗಿದ್ದರು. ಇಲ್ಲಿಯ ಫಲಿತಾಂಶ ಮುಖ್ಯವಲ್ಲ, ಬದಲಾಗಿ ಈ ಮಹಿಳೆಯರು ತೋರಿದ ದಿಟ್ಟ ಸಾಧನೆಗೆ ಜಗತ್ತು ಮೆಚ್ಚುಗೆ ವ್ಯಕ್ತಪಡಿಸಿದೆ. ಒಲಿಂಪಿಕ್ಸ್ ವೇಳೆಯೂ ಅಫಘಾನಿಸ್ತಾನವನ್ನು ತೊರೆದ ಕೆಲವು ಮಹಿಳಾ ಕ್ರೀಡಾಪಟುಗಳು ಐಒಸಿ ಧ್ವಜ ಹಿಡಿದು ಸ್ಪರ್ಧಿಸಿದ್ದನ್ನು ನಾವಿಲ್ಲಿ ಸ್ಮರಿಸಬಹುದು.
ಜಗತ್ತಿನಲ್ಲಿ ಯಾವುದೇ ದೇಶದಲ್ಲೂ ಇಲ್ಲದ ಈ ನಿಯಮದ ವಿರುದ್ಧವಾಗಿ ಧ್ವನಿ ಎತ್ತುವವರೂ ಯಾರೂ ಇಲ್ಲದಾಗಿದೆ. ಇದು ಕ್ರೀಡಾ ಜಗತ್ತಿನಲ್ಲಿ ಬೇರೆಲ್ಲೂ ಕಾಣ ಸಿಗದ ಅಸಹ್ಯ ತಾರತಮ್ಯ ನೀತಿಯಾಗಿದೆ. ಆದರೆ ಆಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಈ ತಾಲಿಬಾನಿಗೆ ಹೆದರಿ ತನ್ನ ನಿಯಮವನ್ನು ತಾನೇ ಗಾಳಿಗೆ ತೂರಿದಂತಿದೆ. ಪುರುಷರ ತಂಡವನ್ನು ಬೆಂಬಲಿಸುತ್ತ ಮಹಿಳಾ ತಂಡದ ಬಗ್ಗೆ ಯಾವುದೇ ರೀತಿಯ ಪರಿಹಾರ ಕ್ರಮ ಕೈಗೊಂಡಿಲ್ಲ. ಮಹಿಳಾ ಕ್ರಿಕೆಟ್ ತಂಡದ ಹೆಸರಿನಲ್ಲಿ ಬಿಡುಗಡೆಯಾದ ಹಣವನ್ನು ಅಫಘಾನಿಸ್ತಾನ ಕ್ರಿಕೆಟ್ ಮಂಡಳಿ ಬಳಸಿಕೊಂಡಿದೆ. ಐಸಿಸಿಯ ನಿಯಮವನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ ಅಫಘಾನಿಸ್ತಾನ ಕ್ರಿಕೆಟ್ ಸಂಸ್ಥೆಯ ಬಗ್ಗೆ ಐಸಿಸಿ ಮೌನವಾಗಿರುವುದು ಅಚ್ಚರಿ ಎನಿಸಿದೆ.
2020ರಲ್ಲಿ ಅಫಘಾನಿಸ್ತಾನ ಕ್ರಿಕೆಟ್ ಮಂಡಳಿ ಮಹಿಳಾ ತಂಡವನ್ನು ಕಟ್ಟಲು 25 ಆಟಗಾರರಿಗೆ ಗುತ್ತಿಗೆ ನೀಡಿತ್ತು. ಅದೇ ಆಟಗಾರರು ಇಂದು ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಆಡುತ್ತಿದ್ದಾರೆ. ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಮಹಿಳೆಯರು ಕ್ರೀಡೆಯಲ್ಲಿ ಪಾಲ್ಗೊಳ್ಳವುದನ್ನು ನಿಷೇಧಿಸಲಾಯಿತು. ಹಾಗೆ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿರುವುದು ಗಮನಕ್ಕೆ ಬಂದರೆ ಅಂಥವರಿಗೆ ಕಿರುಕುಳ ಮತ್ತು ಶಿಕ್ಷೆ ನೀಡಲಾರಂಭಿಸಿದರು.
ಆಗ ಕ್ಯಾನ್ಬೆರಾ ವಿಶ್ವವಿದ್ಯಾನಿಲಯದಲ್ಲಿ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಪ್ರೊಫೆಸರ್ ಕ್ಯಾಥರಿನ್ ಆರ್ಡ್‌ವೇ, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರ್ತಿ ಮೆಲ್ ಜೋನ್ಸ್ ಹಾಗೂ ಕ್ರಿಕೆಟ್ ವಿಕ್ಟೋರಿಯಾದ ಎಮ್ಮಾ ಸ್ಟಾಪ್ಲೆಸ್ ಹಾಗೂ ಕೆಲವು ಸ್ವಯಂ ಸೇವಕರು ಅಫಘಾನಿಸ್ತಾನದಲ್ಲಿರುವ ಈ ಮಹಿಳಾ ಆಟಗಾರ್ತಿಯರನ್ನು ಆಸ್ಟ್ರೇಲಿಯಾಕ್ಕೆ ತರುವ ಯೋಚನೆ ಮಾಡಿದರು. ಗುತ್ತಿಗೆಯ ವ್ಯಾಪ್ತಿಯಲ್ಲಿ ಬರುವ ಆಗಾರ್ತಿಯರಿಗೆ ತುರ್ತು ಮಾನವೀಯ ವೀಸಾಗಳನ್ನು ಒದಗಿಸುವಂತೆ ಆಸ್ಟ್ರೇಲಿಯಾ ಸರಕಾರಕ್ಕೆ ಮನವಿ ಮಾಡಿದರು. ಅದರಂತೆ ಅನುಮತಿಯೂ ಸಿಕ್ಕಿತು. ಈ ಮಹಿಳಾ ಕ್ರಿಕೆಟ್ ಆಟಗಾರರು ಮಾತುಕತೆಗೆ ಅವಕಾಶ ಕಲ್ಪಿಸುವಂತೆ ಅಂತಾರಷ್ಟ್ರೀಯ ಕ್ರಿಕೆಟ್ ಸಮಿತಿಯನ್ನು ಹಲವಾರು ಬಾರಿ ವಿನಂತಿ ಮಾಡಿಕೊಂಡರೂ ಪ್ರಯೋಜವಾಗಲಿಲ್ಲ. ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ಎರಡು ದೇಶಗಳ ನಡುವೆ ದ್ವಿಪಕ್ಷೀಯ ಪಂದ್ಯಗಳನ್ನಾಡಲು ಒಪ್ಪಿಕೊಂಡಿಲ್ಲ. ಆದರೆ ಒಂದು ಪ್ರದರ್ಶನ ಪಂದ್ಯಕ್ಕೆ ಅವಕಾಶ ಮಾಡಿಕೊಟ್ಟಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಈ ಸಮಸ್ಯೆಗೆ ಪರಿಹಾರ ನೀಡಲು ಹಲವಾರು ಮಾರ್ಗಗಳಿವೆ. ಅಫಘಾನಿಸ್ತಾನದ ಕ್ರಿಕೆಟ್ ಮಂಡಳಿಯ ಬದಲಿಗೆ ಐಸಿಸಿ ಆಡಳಿತಾಧಿಕಾರಿಗಳನ್ನು ನೇಮಿಸಬೇಕು, ಅದರಲ್ಲಿ ಮಹಿಳೆಯರಿಗೆ ಅವಕಾಶ ಕಲ್ಪಿಸಬೇಕು. ಐಸಿಸಿ ನೀಡುವ ನಿಧಿ ಮಹಿಳಾ ಕ್ರಿಕೆಟಿನ ಅಭಿವೃದ್ಧಿಗೂ ಉಪಯೋಗವಾಗುವಂತೆ ನೋಡಿಕೊಳ್ಳುವುದು. ಜಾಗತಿಕ ಅಭಿವೃದ್ಧಿ ನಿಧಿಯನ್ನು ಸ್ಥಾಪಿಸಿ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ತರಬೇತಿ ನೀಡುವುದು. ಕ್ರೀಡಾ ಜಗತ್ತಿನಲ್ಲಿ ಫುಟ್ಬಾಲ್‌ನಲ್ಲಿ ಫಿಫಾ ನಾರ್ಮಲೈಸೇಷನ್ ಕಮಿಟಿ ಹಾಗೂ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯಲ್ಲಿ ಸ್ವತಂತ್ರ ಅಗತ್ಯತಾ ಸಮಿತಿ ರೀತಿಯಲ್ಲಿ ಐಸಿಸಿ ಸಮಿತಿಗಳನ್ನು ರಚಿಸಿ ಅಘಫಾನಿಸ್ತಾನದಲ್ಲಿ ಆಗುತ್ತಿರುವ ಲಿಂಗ ತಾರತಮ್ಯವನ್ನು ನಿಯಂತ್ರಿಸಬಹುದು. ಒಲಿಂಪಿಕ್ಸ್‌ನಲ್ಲಿ ನಿರಾಶ್ರಿತರಿಗಾಗಿ ಪ್ರತ್ಯೇಕ ವ್ಯವಸ್ಥೆ ಇರುವಂತೆ ಕ್ರಿಕೆಟ್‌ನಲ್ಲೂ ಆ ರೀತಿಯ ವ್ಯವಸ್ಥೆಯನ್ನು ಕಲ್ಪಿಸಿದರೆ ಅಫಘಾನಿಸ್ತಾನದ ಮಹಿಳಾ ತಂಡವೂ ಐಸಿಸಿ ಪಂದ್ಯಗಳನ್ನು ಆಡಬಹುದು ಮತ್ತು ಇತರ ರಾಷ್ಟ್ರಗಳೊಂದಿಗೆ ಟೂರ್ನಿಗಳನ್ನು ನಡೆಸಬಹುದು.