Monday, December 4, 2023

ಅಫಘಾನಿಸ್ತಾನಕ್ಕೆ ಭಾರತವೇ ಕ್ರಿಕೆಟ್‌ ಮನೆ!

ಅಫಘಾನಿಸ್ತಾನ ತಂಡ ಪ್ರಸಕ್ತ ವಿಶ್ವಕಪ್‌ನಲ್ಲಿ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ವಿರುದ್ಧ 69 ರನ್‌ಗಳ ಅಂತರದಲ್ಲಿ ಐತಿಹಾಸಿಕ ಜಯ ಗಳಿಸಿತು. ಆದರೆ ಈ ಜಯದಲ್ಲಿ ಭಾರತದ ಪಾತ್ರ ಪ್ರಮುಖವಾಗಿತ್ತು. How India helped Afghanistan cricket Team?

ಅಫಘಾನಿಸ್ತಾನ ದೇಶ ಯಾವಾಗಲೂ ದುರಂತದ ನೆರಳಲ್ಲೇ ಇರುತ್ತದೆ. ತಾಲಿಬಾನ್‌ ಆಡಳಿತದಿಂದಾಗಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಇಲ್ಲದಾಗಿದೆ. ಮನೆಯಂಗಣದಲ್ಲಿ ಅಭ್ಯಾಸ ಮಾಡಲು, ಪಂದ್ಯಗಳನ್ನು ನಡೆಸಲು ಉತ್ತಮ ಗುಣ ಮಟ್ಟದ ಕ್ರೀಡಾಂಗಣ ಇಲ್ಲವಾಗಿದೆ. ಇದನ್ನು ಅರಿತ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಭಾರತ ಸರಕಾರದ ನೆರವಿನಿಂದ ಆ ದೇಶದ ಕ್ರಿಕೆಟ್‌ ತಂಡಕ್ಕೆ ತನ್ನ ನೆಲದಲ್ಲಿ ಅಭ್ಯಾಸ ಮಾಡಲು ಅವಕಾಶ ಕಲ್ಪಿಸಿದೆ.

2010 ರಿಂದ 2016ರ ವರೆಗೆ ಶಾರ್ಜಾ ಕ್ರಿಕೆಟ್‌ ಅಂಗಣದಲ್ಲಿ ಅಫಘಾನಿಸ್ತಾನ ಕ್ರಿಕೆಟ್‌ ತಂಡ ಅಭ್ಯಾಸ ಮಾಡುತ್ತಿತ್ತು. ಬಳಿಕ ಬಿಸಿಸಿಐನಲ್ಲಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ 2017ರಲ್ಲಿ ಗ್ರೇಟರ್‌ ನೊಯಿಡಾದಲ್ಲಿರುವ ಶಹೀದ್‌ ವಿಜಯ ಸಿಂಗ್‌ ಪಾಥಿಕ್‌ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್‌ನಲ್ಲಿ ಅವಕಾಶ ನೀಡಲಾಯಿತು. 2018 ರಿಂದ 2019ರ ವರೆಗೆ ಡೆಹ್ರಾಡೂನ್‌ನಲ್ಲಿರುವ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಅವಕಾಶ ಕಲ್ಪಿಸಲಾಯಿತು. 2019 ರಿಂದ ಅಫಘಾನಿಸ್ತಾನ ತಂಡ ಲಖನೌದಲ್ಲಿರುವ ಭಾರತ ರತ್ನ ಶ್ರೀ ಅಟಲ್‌ ಬಿಹಾರಿ ವಾಜಪೇಯಿ ಎಕಾನ ಕ್ರಿಕೆಟ್‌ ಅಂಗಣದಲ್ಲಿ ಅಭ್ಯಾಸ ಮಾಡುತ್ತಿದೆ.

ಇದರಿಂದಾಗಿ ಗ್ರೇಟರ್‌ ನೊಯಿಡಾದಲ್ಲಿ 2017ರಲ್ಲಿ ಐರ್ಲೆಂಡ್‌ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳನ್ನಾಡಲು ಅಫಘಾನಿಸ್ತಾನಕ್ಕೆ ಸಾಧ್ಯವಾಯಿತು. ಡೆಹ್ರಾಡೂನ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಟಿ20 ಸರಣಿಗೆ ಆತಿಥ್ಯವನ್ನೂ ನೀಡಿತು. ಭಾರತದ ಮಾಜಿ ಆಟಗಾರರಾದ ಲಾಲ್‌ಚಂದ್‌ ರಜಪೂತ್‌ ಹಾಗೂ ಮನೋಜ್‌ ಪ್ರಭಾಕರ್‌ ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದರು. ಈಗ ಪ್ರಸಕ್ತ ವಿಶ್ವಕಪ್‌ನಲ್ಲಿ ಭಾರತದ ಮಾಜಿ ಕ್ರಿಕೆಟಿಗ ಅಜಯ್‌ ಜಡೇಜಾ ಅವರು ಅಫಘಾನಿಸ್ತಾನ ತಂಡದ ಮೆಂಟರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅಫಘಾನಿಸ್ತಾನದ ಆಟಗಾರರು ಕಷ್ಟದ ಹಾದಿಯಲ್ಲಿ ಸಾಗಿ ಬಂದವರು. ಯುದ್ಧಪೀಡಿತ ಪ್ರದೇಶಗಳಲ್ಲಿ ನಿರಾಶ್ರಿತರ ತಾಣದಲ್ಲಿ ಬೆಳೆದು ಬಂದ ಆಟಗಾರರೇ ಹೆಚ್ಚು. ಈ ಕಾರಣಕ್ಕಾಗಿ ಅಲ್ಲಿಯ ಆಟಗಾರರ ಬಗ್ಗೆ ಭಾರತ ಯಾವಾಗಲೂ ತನ್ನ ಸಹಾನುಭೂತಿಯನ್ನು ತೋರಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗಳಲ್ಲಿ ಆ ದೇಶದ ಆಟಗಾರರಿಗೆ ಆಡುವ ಅವಕಾಶ ಕಲ್ಪಿಸಿದೆ.

1995 ರಲ್ಲಿ ಅಫಘಾನಿಸ್ತಾನ ಕ್ರಿಕೆಟ್‌ ಫೆಡರೇಷನ್‌ ಹುಟ್ಟಿ 23 ವರ್ಷಗಳ ಬಳಿಕ ಆ ದೇಶಕ್ಕೆ ಟೆಸ್ಟ್‌ ಮಾನ್ಯತೆ ಸಿಕ್ಕಿತು. ಮೊದಲ ಟೆಸ್ಟ್‌ ಪಂದ್ಯವೂ ಭಾರತದಲ್ಲೇ ನಡೆಯಿತು. ಅದು ಕೂಡ ಬೆಂಗಳೂರಿನಲ್ಲಿ. ಆಗ ಭಾರತ ತಂಡದ ನಾಯಕತ್ವವನ್ನು ಅಜಿಂಕ್ಯ ರಹಾನೆ ವಹಿಸಿದ್ದರು. ಸೋತ ಅಫಘಾನಿಸ್ತಾನದ ತಂಡದ ಜೊತೆ ಭಾರತ ತಂಡ ಗ್ರೂಪ್‌ ಫೋಟೋ ತೆಗೆಸಿಕೊಂಡಿದ್ದು ಎರಡು ದೇಶಗಳ ನಡುವಿನ ಆತ್ಮೀಯ ಬಂಧಕ್ಕೆ ಸಾಕ್ಷಿಯಾಗಿತ್ತು. ಸಾಮಾನ್ಯವಾಗಿ ಸೋತ ತಂಡದ ಜೊತೆ ಗೆದ್ದ ತಂಡ ಒಂದಾಗಿ ಫೋಟೋ ತೆಗೆಸಿಕೊಳ್ಳುವ ದೃಶ್ಯ ಕಾಣಸಿಗುವುದು ಕಷ್ಟ.

Related Articles