Sunday, September 8, 2024

ತಂದೆಯ ಸ್ಫೂರ್ತಿಯಲ್ಲೇ ಸಾಗುವ ರ್‍ಯಾಲಿ ಚಾಂಪಿಯನ್‌ ಆಕಾಶ್‌ ಐತಾಳ್‌

ಪುತ್ತೂರು: ಡಾ. ಶಂಕರನಾರಾಯಣ ಐತಾಳ್‌ ಅವರು ವೈದ್ಯರಾಗಿ ಜನಪ್ರಿಯಗೊಂಡವರು. ಅವರು ತಮ್ಮ ಮಗ ಆಕಾಶ್‌ ಐತಾಳ್‌ ಅವರನ್ನು ಡಾಕ್ಟರನ್ನಾಗಿ ಮಾಡಲಿಲ್ಲ. ಬದಲಾಗಿ ದೇಶದ ಉತ್ತಮ ರ್‍ಯಾಲಿ ಪಟುವನ್ನಾಗಿ ಮಾಡಿದರು. “ನಮ್ಮ ತಂದೆ ಮಾನವನ ದೇಹದ ಮೂಳೆಗಳನ್ನು ಜೋಡಿಸುವ ಕೆಲಸ ಮಾಡುತ್ತಿದ್ದರು. ಅದರಲ್ಲಿ ತಜ್ಞರಾಗಿದ್ದರು. ಈಗ ಅವರು ನಮ್ಮನ್ನಗಲಿದ್ದಾರೆ. ಆದರೆ ನನ್ನಲ್ಲಿರುವ ಪ್ರತಿಭೆಯನ್ನು ಎಂಟನೇ ತರಗತಿಯಲ್ಲೇ ಗುರುತಿಸಿ ಚಿಕ್ಕ ಬೈಕ್‌ ತಂದುಕೊಟ್ಟಿದ್ದರು. ಆ ಬಳಿಕ ಪ್ರತಿಯೊಂದು ರ್‍ಯಾಲಿಗೂ ಪ್ರೋತ್ಸಾಹ ನೀಡುತ್ತಿದ್ದರು. ಅವರ ಪ್ರೋತ್ಸಾಹದಿಂದಾಗಿ ಮನೆಯಲ್ಲಿ ಇಂದು ಆರು ನೂರಕ್ಕೂ ಹೆಚ್ಚು ಟ್ರೋಫಿಗಳು ರಾರಾಜಿಸುತ್ತಿವೆ. ಸ್ಪರ್ಧೆಯ ಜೊತೆಯಲ್ಲೇ ಮೋಟಾರ್‌ ಬೈಕಲ್ಲೇ ಬದುಕನ್ನು ರೂಪಿಸಿಕೊಂಡೆ. ನಮಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಅದನ್ನೇ ವೃತ್ತಿಯಾಗಿಸಿಕೊಳ್ಳಬೇಕು. ಪೃವೃತ್ತಿ ಹಾಗೂ ವೃತ್ತಿಗೂ ಸಾಮ್ಯತೆ ಇದ್ದಾಗ ಸಾಧನೆಗೆ ಸಹಾಯವಾಗುತ್ತದೆ ಎನ್ನುತ್ತಾರೆ ಭಾರತದ ಶ್ರೇಷ್ಠ ರ್‍ಯಾಲಿ ಪಟುಗಳಲ್ಲಿ ಒಬ್ಬರಾದ ಆಕಾಶ್‌ ಐತಾಳ್‌. Aakash Aithal first Indian rider to win the National Motor rally Championship with Royal Enfield

ಫಾರ್ಮುಲಾ ಒನ್‌ ಮಾಜಿ ಚಾಂಪಿಯನ್‌ ಮೈಕಲ್‌ ಷುಮಾಕರ್‌ ಅವರ ಗುರು, ಫೆರಾರಿ ತಂಡದ ಪ್ರಮುಖ ಜಾನ್‌ ಟಾಡ್‌ ಅವರಿಂದ ಪ್ರಶಸ್ತಿ ಸ್ವೀಕರಿಸುವ ಭಾಗ್ಯ ರ್‍ಯಾಲಿಪಟುಗಳಿಗೆ ಸಿಗುವುದು ಅಪೂರ್ವ. ಅದರಲ್ಲೂ ಭಾರತದಲ್ಲಿ ಅಂಥ ಶ್ರೇಷ್ಠರಿಂದ ಪ್ರಶಸ್ತಿ ಸ್ವೀಕರಿಸುವುದೆಂದರೆ ಅದು ಕನಸಿನ ಮಾತು. ಆದರೆ ಅಂಥ ಶ್ರೇಷ್ಠರಿಂದ ಪ್ರಶಸ್ತಿ ಪಡೆದ ಅದೃಷ್ಟವಂತರು. ಹೈದರಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಟಾಡ್‌ ಅವರಿಂದ ಪ್ರಶಸ್ತಿ ಸ್ವೀಕರಿಸಿದ ಆಕಾಶ್‌ ಐತಾಳ್‌ ಅದೊಂದು ಅವಿಸ್ಮರಣೀಯ ದಿನ ಎನ್ನುತ್ತಾರೆ.

ಮೊದಲ ರಾಯಲ್ ‌ಎನ್‌ಫೀಲ್ಡ್‌ ಚಾಂಪಿಯನ್‌ (First Royal Enfield Champion of India): ಆಕಾಶ್‌ ಐತಾಳ್‌ 2016ರಲ್ಲಿ ರಾಯಲ್‌ ಎನ್‌ಫೀಲ್ಡ್‌ 550CC Classic ಬೈಕನ್ನು ಚಲಾಯಿಸಿ ರಾಷ್ಟ್ರೀಯ ರ್‍ಯಾಲಿ ಚಾಂಪಿಯನ್‌ ಪಟ್ಟ ಗೆದ್ದ ದೇಶದ ಮೊದಲ ರ್‍ಯಾಲಿಪಟು. ಇಂಗ್ಲೆಂಡ್‌ನ ಮೋಟಾರ್‌ ಸೈಕಲ್‌ ಚಾಂಪಿಯನ್‌ ಗಯ್‌ ಮಾರ್ಟಿನ್‌ ಅವರೊಂದಿಗೂ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದ ಆಕಾಶ್‌ ಐತಾಳ್‌ ಸಾಧನೆಗೆ ಪ್ರೋತ್ಸಾಹ ನೀಡುತ್ತಿರುವುದು ಪತ್ನಿ ನಾಗಶ್ರೀ ಹಾಗೂ ಮಗಳು ಆಕಾಂಕ್ಷಾ ಐತಾಳ್‌.

1990ರಿಂದ ರ್‍ಯಾಲಿಯಲ್ಲಿ ಪಾಲ್ಗೊಳ್ಳುತ್ತಿದ್ದ ಆಕಾಶ್‌ ವೃತ್ತಿ ಬದುಕಿನ ನಡುವೆ ಈ ಸಾಹಸ ಕ್ರೀಡೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. “ಇದು ನಿಜವಾದ ಸಾಹಸ ಕ್ರೀಡೆ. ಇಲ್ಲಿ ಗೆದ್ದರೆ ಏನು ಸಿಗುತ್ತದೆ ಎನ್ನುವುದಕ್ಕಿಂತ ಒಂದು ರ್‍ಯಾಲಿಗಾಗಿ ನಾವು ಎಷ್ಟು ಖರ್ಚು ಮಾಡುತ್ತೇವೆ ಎನ್ನುವುದು ಮುಖ್ಯ. ಇದು ಹಣ ಮಾಡುವ ಕ್ರೀಡೆಯಲ್ಲ. ಈ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕಾದರೆ ನಾವು ಚಲಾಯಿಸುವ ಬೈಕ್‌ ಅಥವಾ ಕಾರಿನ ತಂತ್ರಜ್ಞಾನವನ್ನು ಚೆನ್ನಾಗಿ ಅರಿತಿರಬೇಕು. ಎಷ್ಟು ದುಬಾರಿ ಬೆಲೆಯ ವಾಹನವನ್ನು ಚಲಾಯಿಸುತ್ತಿದ್ದೇವೆ ಎಂಬುದು ಮುಖ್ಯವಲ್ಲ. ಆ ವಾಹನದ ತಂತ್ರಜ್ಞಾನದ ಬಗ್ಗೆ ನನಗೆಷ್ಟು ಗೊತ್ತಿದೆ ಎನ್ನುವುದು ಮುಖ್ಯ. ಯುವ ರೈಡರ್‌ಗಳು ಈ ಬಗ್ಗೆ ಗಮನ ಹರಿಸಬೇಕು,” ಎನ್ನುತ್ತಾರೆ ಆಕಾಶ್‌.

ಎಂಟು ಕಡೆ ಮೂಳೆ ಮುರಿದಿದೆ: ರ್‍ಯಾಲಿಯಲ್ಲಿ ಅಪಘಾತ ಸಂಭವಿಸುವುದು ಸಾಮಾನ್ಯ. ಆದರೆ ಎಷ್ಟು ಎಚ್ಚರಿಕೆ ವಹಿಸುತ್ತೇವೋ ಅಷ್ಟು ಉತ್ತಮ. ನಮ್ಮ ತಂದೆ ಮೂಳೆ ತಜ್ಞರು. ಅವರು ಬುಲೆಟ್‌ ರೈಡ್‌ ಮಾಡುತ್ತಿದ್ದರು. ಅವರ ಬುಲೆಟ್‌ ರೈಡಿಂಗ್‌ ನೋಡಿಯೇ ಸ್ಫೂರ್ತಿ ಲಭಿಸಿದ್ದು. ಆರಂಭದ ದಿನಗಳಲ್ಲಿ ರ್‍ಯಾಲಿಯಲ್ಲಿ ಪಾಲ್ಗೊಂಡು ಬಿದ್ದಾಗ, ಮೂಳೆ ಮುರಿದಾಗ ತಂದೆಯೇ ಚಿಕಿತ್ಸೆ ನೀಡುತ್ತಿದ್ದರು. ಇತ್ತೀಚಿಗೆ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಆಕಾಶ್ ಮತ್ತೆ ಸ್ಪರ್ಧಾ ಕಣಕ್ಕೆ ಇಳಿಯಲಿದ್ದಾರೆ.

ಆಗ ಪ್ರಾಯೋಜಕರೇ ಇರುತ್ತಿರಲಿಲ್ಲ: ರ್‍ಯಾಲಿಯಲ್ಲಿ ಪಾಲ್ಗೊಳ್ಳಬೇಕಾದರೆ ಮೊದಲು ಬದ್ಧತೆ, ಛಲ ಮತ್ತು ಸಾಹಸ ಪ್ರವೃತ್ತಿ ನಮ್ಮಲ್ಲಿರಬೇಕು. ಈಗಿರುವಂತೆ ಆಗ ಪ್ರಾಯೋಜಕರು ಇರುತ್ತಿರಲಿಲ್ಲ. ಈ ಕ್ರೀಡೆಯಲ್ಲಿ ಸಾಹಸ ಇದ್ದರೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ಯಾವುದೇ ರೀತಿಯ ನೆರವು ನೀಡುತ್ತಿರಲಿಲ್ಲ. ಈಗ ಕೇಂದ್ರ ಸರಕಾರ ಅರ್ಜುನ ಪ್ರಶಸ್ತಿ ನೀಡಲು ಆರಂಭಿಸಿದೆ. ಅದು ಕೂಡ ಹಲವು ಬಾರಿ ಮನವಿ ಮಾಡಿದ ನಂತರ. ವಿದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮೋಟಾರ್‌ ಸ್ಪೋರ್ಟ್ಸ್‌ಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿಲ್ಲ. ಕೆಲವು ಕಾರ್ಪೊರೇಟ್‌ ಕಂಪೆನಿಗಳು ನೆರವು ನೀಡುತ್ತಿರುವುದನ್ನು ಹೊರತುಪಡಿಸಿದರೆ ಅಷ್ಟೇನೂ ಇಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಈ ಕ್ರೀಡೆಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಕೇಂದ್ರ ಮತ್ತು ರಾಜ್ಯ ಕ್ರೀಡಾ ಇಲಾಖೆ ಮೋಟಾರ್‌ ಸ್ಪೋರ್ಟ್ಸ್‌ಗೆ ಆರ್ಥಿಕ ನೆರವನ್ನು ನೀಡಬೇಕು. ಈ ಕ್ರೀಡೆಯಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕು. ಇತರ ಕ್ರೀಡಾಪಟುಗಳಿಗೆ ಪ್ರಶಸ್ತಿ ನೀಡುವಾಗ ಮೋಟಾರ್‌ ಸ್ಪೋರ್ಟ್ಸ್‌ ಸಾಧಕರನ್ನೂ ಪರಿಗಣಿಸಬೇಕು. ಹಾಗಾದಲ್ಲಿ ಮಾತ್ರ ಈ ಕ್ರೀಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾಗವಹಿಸಲು ಸಾಧ್ಯ,” ಎನ್ನುತ್ತಾರೆ ಆಕಾಶ್‌ ಐತಾಳ್‌.

ಕುಂದಾಪುರದ ಕೋಟೇಶ್ವರ ಮೂಲ: ಆಕಾಶ್‌ ಐತಾಳ್‌ ಅವರು ಮೂಲತಃ ಕುಂದಾಪುರ ತಾಲೂಕಿನ ಕೋಟೇಶ್ವರದವರು. ಆದರೆ ಹಿರಿಯರು ಪುತ್ತೂರಿನಲ್ಲಿ ನೆಲೆಸಿದ್ದರಿಂದ ಆಕಾಶ್‌ ಐತಾಳ್‌ ಈಗ ಪುತ್ತೂರಿನಲ್ಲೇ ವಾಸವಾಗಿದ್ದಾರೆ. ದೇಶದ ಪ್ರಮುಖ ರ್‍ಯಾಲಿ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡು ನೂರಕ್ಕೂ ಹೆಚ್ಚು ಚಾಂಪಿಯನ್‌ ಪಟ್ಟ, 600ಕ್ಕೂ ಹೆಚ್ಚು ಟ್ರೋಫಿಗಳನ್ನು ಗೆದ್ದಿರುವ ಆಕಾಶ್‌ ಐತಾಳ್‌ ಅವರು ಇಂದಿನ ಯುವ ಪೀಳಿಗೆಗೆ ಆದರ್ಶ ಎನಿಸಿದ್ದಾರೆ.

ಪತ್ನಿ-ಮಗಳ ಪ್ರೋತ್ಸಾಹ: ಆರಂಭದಲ್ಲಿ ಕಾರ್‌ ರ್‍ಯಾಲಿಯಲ್ಲಿ ಪಾಲ್ಗೊಳ್ಳುತ್ತಿದ್ದ ಆಕಾಶ್‌ ಅವರಿಗೆ ಒಮ್ಮೆ ತೀವ್ರವಾದ ಅಪಘಾತವಾಗಿತ್ತು. ಆವಾಗ ಈ ಕ್ರೀಡೆಯೇ ಬೇಡ ಎಂದು ದೂರ ಸರಿದಿದ್ದರು. ಆದರೆ ಪತ್ನಿ ನಾಗಶ್ರೀ ಐತಾಳ್‌ ಹಾಗೂ ಮಗಳು ಆಕಾಂಕ್ಷಾ “ಇಷ್ಟೆಲ್ಲ ಟ್ರೋಫಿ ಗೆದ್ದು ಸಾಧನೆ ಮಾಡಿ ಮೂಲೆಗುಂಪಾಗುವುದು ಬೇಡ, ನಿಮ್ಮಿಂದ ಸಾಧ್ಯವಾದಷ್ಟು ರ್‍ಯಾಲಿಗಳಲ್ಲಿ ಪಾಲ್ಗೊಂಡು ಉಲ್ಲಾಸದಿಂದ ಇರಿ,” ಎಂದು ಹೇಳಿದ ಮೇಲೆ ಮತ್ತೆ ರಾಯಲ್‌ ಎನ್‌ಫೀಲ್ಡ್‌ ಹಾಗೂ KTM ಬೈಕ್‌ ತೆಗೆದುಕೊಂಡು ರ್‍ಯಾಲಿಯಲ್ಲಿ ಮುಂದುವರಿದೆ ಎನ್ನುತ್ತಾರೆ ಆಕಾಶ್‌. ಇವೆಲ್ಲದರ ನಡುವೆ ತಾಯಿ ಲೀಲಾ ಐತಾಳ್‌ ಅವರು ಮಗನ ಸಾಧನೆಗೆ ಪ್ರೋತ್ಸಾಹ ಹಾಗೂ ಆಶೀರ್ವಾದ ನೀಡುತ್ತಿರುವುದು ಗಮನಾರ್ಹ.

ಏಸ್‌ ಈವೆಂಟ್ಸ್‌ ACE Events:  ಬದುಕಿನ ಹಾದಿಯಲ್ಲಿ ತಾನೊಬ್ಬನೇ ಬೆಳೆದರೆ ಸಾಲದು, ತನ್ನಂತೆ ಇತರರೂ ಬೆಳೆಯಬೇಕು. ರ್‍ಯಾಲಿ ಕೇವಲ ನಗರಗಳಿಗೇ ಮೀಸಲಾಗಬಾರದು. ಹಳ್ಳಿಯಲ್ಲಿರುವ ಯುವಕರಿಗೂ ಇದರಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗಬೇಕು. ಹಾಗಾಗಬೇಕಾದರೆ ಅವರಲ್ಲಿ ಅರಿವು ಮೂಡಿಬೇಕು. ಈ ಸಮಾಜಮುಖಿ ಕಾರ್ಯವನ್ನು ಗಮನದಲ್ಲಿರಿಸಿಕೊಂಡ ಆಕಾಶ್‌ ಐತಾಳ್‌ 2016ರಲ್ಲಿ ಏಸ್‌ ಈವೆಂಟ್ಸ್‌ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದರು. ರ್‍ಯಾಲಿಯಲ್ಲಿ ಪಾಲ್ಗೊಳ್ಳುವುದರ ಜೊತೆಯಲ್ಲಿ ಇತರ ಯುವ ರ್‍ಯಾಲಿಪಟುಗಳಿಗೆ ನೆರವಾಗುತ್ತಿದ್ದ ಆಕಾಶ್‌ ಈಗ Ace Events ಮೂಲಕ ಗ್ರಾಮೀಣ ಪ್ರದೇಶಗಳಿಗೆ ಮೋಟಾರ್‌ ರ್‍ಯಾಲಿಯನ್ನು ಪರಿಚಯಿಸುವ ಕೆಲಸ ಆರಂಭಿಸಿದರು. 2016ರಿಂದ ಏಸ್‌ ಈವೆಂಟ್ಸ್‌ MRF National Rally Championship ಆಯೋಜನೆ ಮಾಡುತ್ತ ಬಂದಿದೆ. ಪುತ್ತೂರು, ಕೊಡಗು, ಕನಕಪುರ, ಬೆಂಗಳೂರು, ಹಂಪಿ ಮೊದಲಾದ ಕಡೆಗಳಲ್ಲಿ ಆಕಾಶ್‌ ಅವರ Ace Events ರ್‍ಯಾಲಿಗಳನ್ನು ಆಯೋಜಿಸಿ ಯುವಕರಿಗೆ ಪ್ರೋತ್ಸಾಹ ನೀಡುತ್ತ ಬಂದಿದೆ. ಇದರಿಂದಾಗಿ ಗ್ರಾಮೀಣ ಭಾಗದ ಯುವಕರು ರ್‍ಯಾಲಿಯಲ್ಲಿ ಪಾಲ್ಗೊಳ್ಳುವುದು ಕಂಡು ಬಂತು. ಯುವ ರ್‍ಯಾಲಿಪಟುಗಳು ರ್‍ಯಾಲಿಯಲ್ಲಿ ಪಾಲ್ಗೊಳ್ಳುವಾಗ ಆಕಾಶ್‌ ಅವರಿಗೆ ಹಲವು ರೀತಿಯ ನೆರವನ್ನು ನೀಡುತ್ತಿದ್ದರು. ಅದು ತಾಂತ್ರಿಕ, ಆರ್ಥಿಕ ಮತ್ತು ಮನೋಬಲದ ನೆರವು ಆಗಿರುತ್ತದೆ. ಯುವ ರ್‍ಯಾಲಿ ಪಟು ಅನೀಶ್‌ ಶೆಟ್ಟಿ ಅವರು ಆಕಾಶ್‌ ಅವರ KTM ಬೈಕ್‌ನಲ್ಲಿ ಸ್ಪರ್ಧಿಸಿದ್ದು ಇದಕ್ಕೆ ಉತ್ತಮ ಉದಾಹರಣೆ. ರ್‍ಯಾಲಿಯ ಬಗ್ಗೆ ಅಷ್ಟೇನು ಗೊತ್ತಿಲ್ಲದ ಪುತ್ತೂರಿನಂಥ ಪ್ರದೇಶದಲ್ಲಿ ರ್‍ಯಾಲಿಯನ್ನು ಆಯೋಜಿಸಿರುವ ಆಕಾಶ್‌ ಅವರ ದೂರದೃಷ್ಠಿ ಏನೆಂಬುದು ಸ್ಪಷ್ಟವಾಗುತ್ತದೆ.

ಸದಾ ಕ್ರಿಯಾಶೀಲರಾಗಿದ್ದು ಸಮಾಜ ಮುಖಿಯಾಗಿ ಬೆಳೆಯಲು ಹಂಬಲಿಸುವ ಆಕಾಶ್‌ ಭಾರತೀಯ ಮೋಟಾರ್‌ ಸ್ಪೋರ್ಟ್ಸ್‌ ಫೆಡರೇಷನ್‌ FMSCI The Federation Motorsports Club of India ನಲ್ಲಿ ಸ್ಟಿವಾರ್ಡ್‌ STEWARD ಮತ್ತು ಡರ್ಟ್‌ ಕಮಿಷನ್‌ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

Related Articles