ಮಹಿಳಾ ನೇಷನ್ಸ್ ಕಪ್ ಹಾಕಿ: ಭಾರತ ತಂಡ ಫೈನಲ್ಗೆ
ಆಕ್ಲಂಡ್: ನ್ಯೂಜಿಲೆಂಡ್ನ ಅಕ್ಲಂಡ್ನಲ್ಲಿ ನಡೆಯುತ್ತಿರುವ ಎಫ್ಐಎಚ್ ಮಹಿಳಾ ನೇಷನ್ಸ್ ಕಪ್ ಹಾಕಿ ಚಾಂಪಿಯನ್ಷಿಪ್ನಲ್ಲಿ ಭಾರತ ತಂಡ ಚಿಲಿಯನ್ನು 6-0 ಅಂತರದಲ್ಲಿ ಸೋಲಿಸಿ ಫೈನಲ್ ಪ್ರವೇಶಿಸಿದೆ. Dominant India put six past Chile to book their place in the final of the FIH Hockey Women’s Nations Cup New Zealand.
ಶನಿವಾರ ಆಕ್ಲೆಂಡ್ನಲ್ಲಿ ನಡೆದ ಪಂದ್ಯದಲ್ಲಿ ನವ್ನೀತ್ ಕೌರ್ (6’, 13’), ದೀಪಿಕಾ (14’, 18’), ನೇಹಾ (32’) ಹಾಗೂ ರುತುಜಾ ದಾದಾಸೋ ಪಿಸಾಲ್ (39’) ಭಾರತ ಪರ ಗೋಲುಗಳನ್ನು ಗಳಿಸಿದರು. ತಂಡದ ನಾಯಕಿ ಸಲಿಮಾ ಟೆಟೆ ತಮ್ಮ ಆಲ್ರೌಂಡ್ ಪ್ರದರ್ಶನಕ್ಕಾಗಿ ‘ಪ್ಲೇಯರ್ ಆಫ್ ದ ಮ್ಯಾಚ್’ ಪ್ರಶಸ್ತಿಗೆ ಭಾಜನರಾದರು.
ಫೈನಲ್ನಲ್ಲಿ ಭಾರತ ತಂಡವು ಅಮೆರಿಕ ಮತ್ತು ಆತಿಥೇಯ ನ್ಯೂಜಿಲೆಂಡ್ ನಡುವಿನ ಎರಡನೇ ಸೆಮಿಫೈನಲ್ ಪಂದ್ಯದ ವಿಜೇತ ತಂಡವನ್ನು ಎದುರಿಸಲಿದೆ.
ಪಂದ್ಯದ ಆರಂಭದಿಂದಲೇ ಚೆಂಡಿನ ಮೇಲಿನ ನಿಯಂತ್ರಣ ಸಾಧಿಸಿದ್ದ ಭಾರತ ತಂಡವು 6ನೇ ನಿಮಿಷದಲ್ಲಿ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದುಕೊಂಡಿತು. ನವ್ನೀತ್ ಕೌರ್ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಚೆಂಡನ್ನು ಗೋಲಿನ ಮೂಲೆಗೆ ಅಚ್ಚುಕಟ್ಟಾಗಿ ಹೊಡೆದು ಭಾರತಕ್ಕೆ ಮುನ್ನಡೆ ತಂದುಕೊಟ್ಟರು.
13ನೇ ನಿಮಿಷದಲ್ಲಿ ಎಡಭಾಗದಿಂದ ಸಲಿಮಾ ಟೆಟೆ ನೀಡಿದ ಅದ್ಭುತ ಕ್ರಾಸ್ ಅನ್ನು ಚಿಲಿ ಗೋಲ್ಪೋಸ್ಟ್ ಎದುರು ಅನ್ಮಾರ್ಕ್ ಆಗಿದ್ದ ನವ್ನೀತ್ ಕೌರ್ ಗೋಲಾಗಿ ಪರಿವರ್ತಿಸಿ ತಮ್ಮ ಎರಡನೇ ಗೋಲು ದಾಖಲಿಸಿದರು.
ಅದಾದ ಬಳಿಕ ಡ್ರ್ಯಾಗ್ಫ್ಲಿಕ್ಕರ್ ದೀಪಿಕಾ 14ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿ ಮುನ್ನಡೆಯನ್ನು 3-0ಕ್ಕೆ ಏರಿಸಿದರು. ಕೇವಲ ನಾಲ್ಕು ನಿಮಿಷಗಳ ನಂತರ ಮತ್ತೊಂದು ಸೆಟ್-ಪೀಸ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿ ದೀಪಿಕಾ ಪಂದ್ಯದಲ್ಲಿ ತಮ್ಮ ಎರಡನೇ ಗೋಲು ದಾಖಲಿಸಿದರು.
ಈ ಎರಡು ಗೋಲುಗಳೊಂದಿಗೆ ದೀಪಿಕಾ ಟೂರ್ನಿಯಲ್ಲಿ ಒಟ್ಟು ಆರು ಗೋಲುಗಳನ್ನು ಗಳಿಸಿ ಅಗ್ರ ಗೋಲು ಸ್ಕೋರರ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ.
4-0 ಮುನ್ನಡೆಯೊಂದಿಗೆ ದ್ವಿತೀಯಾರ್ಧ ಆರಂಭಿಸಿದ ಭಾರತ ತಂಡವು ಚಿಲಿ ಮೇಲೆ ನಿರಂತರ ಒತ್ತಡ ಹೇರಿತು. 32ನೇ ನಿಮಿಷದಲ್ಲಿ ನೇಹಾ ಮತ್ತೊಂದು ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿ ಭಾರತದ ಮುನ್ನಡೆಯನ್ನು 5-0ಕ್ಕೆ ಹೆಚ್ಚಿಸಿದರು.
39ನೇ ನಿಮಿಷದಲ್ಲಿ ರುತುಜಾ ದಾದಾಸೋ ಪಿಸಾಲ್ ಓಪನ್ ಪ್ಲೇನಲ್ಲಿ ರಿವರ್ಸ್ ಹಿಟ್ ಮೂಲಕ ಚೆಂಡನ್ನು ಗೋಲಿನೊಳಗೆ ಸೇರಿಸಿ ಗೋಲುಗಳ ಹಬ್ಬಕ್ಕೆ ಸೇರ್ಪಡೆಯಾದರು. ಇದರೊಂದಿಗೆ ಭಾರತದ ಮುನ್ನಡೆ 6-0ಕ್ಕೆ ಏರಿತು.
ಕೊನೆಯ ಕ್ವಾರ್ಟರ್ನಲ್ಲಿ ಚಿಲಿ ಆಟಗಾರ್ತಿಯರು ದಾಳಿ ನಡೆಸಿದಾಗ ಗೋಲ್ಕೀಪರ್ ಸವಿತಾ ಕೆಲವು ಅದ್ಭುತ ಸೇವ್ಗಳನ್ನು ಮಾಡಿ ತಂಡವನ್ನು ರಕ್ಷಿಸಿದರು. ಆದರೆ ಚಿಲಿಗೆ ಯಾವುದೇ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ.
ಅಂತಿಮವಾಗಿ ಭಾರತ ತಂಡವು 6-0 ಅಂತರದ ಭರ್ಜರಿ ಜಯ ಸಾಧಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿತು.

