ರಾಷ್ಟ್ರೀಯ ಪ್ಯಾರಾ ಕಬಡ್ಡಿ: ಕರ್ನಾಟಕಕ್ಕೆ ಕಂಚಿನ ಪದಕ
ಬೆಂಗಳೂರು: ಚಂಡೀಗಢದಲ್ಲಿ ನಡೆದ ಮೊದಲ ರಾಷ್ಟ್ರೀಯ ಪ್ಯಾರಾ ಕಬಡ್ಡಿ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕ ತಂಡ ಕಂಚಿನ ಪದಕ ಗೆದ್ದಿದೆ. The Karnataka team won the bronze medal in the first National Para Kabaddi Championship held in Chandigarh.
ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಉತ್ತರಪ್ರದೇಶದ ವಿರುದ್ಧ ಸೋಲನುಭವಿಸಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತು. ಭಾರತ ಕಬಡ್ಡಿ ತಂಡದ ಮಾಜಿ ನಾಯಕ, ಅಂಚೆ ಇಲಾಖೆಯ ಕ್ರೀಡಾ ಅಭಿವೃದ್ಧಿ ಅಧಿಕಾರಿ ಎಂ.ಎಸ್. ಅರ್ಮುಗಂ ಅವರು ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಭಾರತೀಯ ಪ್ಯಾರಾ ಅಮೆಚೂರ್ ಕಬಡ್ಡಿ ಫೆಡರೇಷನ್ನ ಅಧ್ಯಕ್ಷ, ಅಂತಾರಾಷ್ಟ್ರೀಯ ಮಾಜಿ ಆಟಗಾರ, ಅರ್ಜುನ ಪ್ರಶಸ್ತಿ ವಿಜೇತ ಡಾ. ಹೊನ್ನಪ್ಪ ಅವರು ಕರ್ನಾಟಕ ತಂಡದ ಆಟಗಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

20 ರಾಜ್ಯಗಳಿಂದ ತಂಡಗಳು ಆಗಮಿಸಿದ್ದು ಕರ್ನಾಟಕದ ಉತ್ತಮ ಆಟಗಾರ ನಾಗೇಶ್ ಅವರು ತೀವ್ರವಾಗಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ತಂಡ ಸೋಲಿಗೆ ಶರಣಾಯಿತು.
ಭಾರತೀಯ ಪ್ಯಾರಾಲಿಂಪಿಕ್ ಸಮಿತಿಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ಯಾರಾ ಅಮೆಚೂರ್ ಕಬಡ್ಡಿ ಸಂಸ್ಥೆ ಈ ವರ್ಷ ಪ್ಯಾರಾ ಫೆಡರೇಷನ್ ಕಪ್ ಕಬಡ್ಡಿ ಚಾಂಪಿಯನ್ಷಿಪ್, ಪ್ಯಾರಾ ಏಷ್ಯನ್ ಕಬಡ್ಡಿ ಚಾಂಪಿಯನ್ಷಿಪ್ ಹಾಗೂ ಪ್ಯಾರಾ ಕಬಡ್ಡಿ ವಿಶ್ವಕಪ್ ಆಯೋಜಿಸುವ ಯೋಜನೆ ಹಾಕಿಕೊಂಡಿದೆ.

ಕಂಚಿನ ಪದಕ ವಿಜೇತ ಕರ್ನಾಟಕ ತಂಡದ ಆಟಗಾರರು: ನಾಗೇಶ್ ಎಚ್. ಕೆ (ಚಿಕ್ಕಮಗಳೂರು) ನಾಯಕ, ರಮೇಶ್ (ಕಲ್ಬುರ್ಗಿ) ಉಪನಾಯಕ, ರಾಹುಲ್ ಸುರೇಶ್ ಕಾಳೆ (ಬೆಳಗಾವಿ), ಚೇತನ ಪುಂಡಿಪಲ್ಲೆ (ಬೆಳಗಾವಿ), ಕುಮಾರ್ ರಾಥೋಡ್ (ಯಾದಗಿರಿ), ಸಚಿನ್ ಪವಾರ್ (ಯಾದಗಿರಿ), ಕುಮಾರ್ ಪವಾರ್ (ಯಾದಗಿರಿ), ಸನಿಲ್ ರಾಠೋಡ್ (ಬೆಂಗಳೂರು),. ಅಕ್ಷಯ್ ಕುಮಾರ್ ವಿ (ಬೆಂಗಳೂರು), ಘನಷ್ಯಾಮ್ ಭೀಮ್ ರಾಠೋಡ್ (ಬೆಂಗಳೂರು), ವಿನಾಯಕ ಸಿದ್ಧಪ್ಪ ಪೂಜೇರಿ (ಬಿಜಾಪುರ), ಪ್ರವೀನ್ ಕೆ (ಹಾಸನ), ಕಾರ್ತಿಕ್ ವಿ. (ರಾಮನಗರ), ಬಾಲರಾಜ್ (ರಾಮನಗರ).

ಕರ್ನಾಟಕದ ವಿವಿಧ ಜಿಲ್ಲೆಗಳಿಂದ 28 ಆಟಗಾರರನ್ನು ರಾಷ್ಟ್ರೀಯ ಚಾಂಪಿಯನ್ಷಿಪ್ಗೆ ಆಯ್ಕೆ ಮಾಡಲಾಗಿತ್ತು.

