ಹೆತ್ತವರ ಯಶಸ್ಸಿನ ಹಾದಿಯಲ್ಲಿ ಪಾವನಾ ನಾಗರಾಜ್ ಚಿನ್ನದ ಜಿಗಿತ
ಉಡುಪಿ: ತಂದೆ ವೇಗದ ಓಟಗಾರ, ತಾಯಿ ಒಲಿಂಪಿಯನ್, ಹೈಜಂಪ್ನಲ್ಲಿ ರಾಷ್ಟ್ರೀಯ ದಾಖಲೆ ಬರೆದವರು, ಅದೇ ಹಾದಿಯಲ್ಲಿ ಸಾಗಿದ ಮಗಳು ಲಾಂಗ್ ಜಂಪ್ನಲ್ಲಿ ರಾಷ್ಟ್ರೀಯ ದಾಖಲೆ. ಭಾರತದಲ್ಲಿ ಕ್ರೀಡಾಪಟುಗಳ ಕುಟುಂಬ ಎಂದೆನಿಸಿರುವ ಒಲಿಂಪಿಯನ್ ಸಹನಾ ಕುಮಾರಿ ಹಾಗೂ ವೇಗದ ಓಟಗಾರ ನಾಗರಾಜ್ ಅವರ ಮಗಳು ಪಾವನಾ ಅಮೆರಿಕದಲ್ಲಿ ನಡೆದ ನ್ಯಾಷನಲ್ ಕಾಲೆಜಿಯೆಟ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಒಳಾಗಂಣ ಕ್ರೀಡಾಕೂಟಲ್ಲಿ ಲಾಂಗ್ಜಂಪ್ನಲ್ಲಿ ನೂತನ ದಾಖಲೆ ಬರೆದಿದ್ದಾರೆ. ಭಾರತೀಯ ಅಥ್ಲೆಟಿಕ್ಸ್ ಸಂಸ್ಥೆ ಈ ದಾಖಲೆಯನ್ನು ಪರಿಗಣಿಸಿದರೆ ತಾಯಿ ಮತ್ತು ಮಗಳು ಇಬ್ಬರೂ ಜಿಗಿತದಲ್ಲಿ ರಾಷ್ಟ್ರೀಯ ದಾಖಲೆಯನ್ನು ಹೊಂದಿರುವುದು ಇದೇ ಮೊದಲು ಎನಿಸಲಿದೆ. Competing for Oklahoma State University Pavana Nagaraj had won the women’s long jump event at the Owen Hewett Invitational in Norman, Oklahoma.
ಪಾವನಾ ಅವರ ತಾಯಿ ಸಹನಾ ಕುಮಾರಿ 2012ರಲ್ಲಿ 1.92 ಮೀ ಎತ್ತರಕ್ಕೆ ಜಿಗಿದು ಹೈಜಂಪ್ನಲ್ಲಿ ರಾಷ್ಟ್ರೀಯ ದಾಖಲೆ ಬರೆದಿದ್ದರು. ಈಗ ಅವರ ಮಗಳು ಪಾವನಾ ನಾಗರಾಜ್ ಒಳಾಂಗಣ ಲಾಂಗ್ಜಂಪ್ನಲ್ಲಿ ದಾಖಲೆ ಬರೆದಿದ್ದಾರೆ. ವನಿತೆಯರ ಹೊರಾಂಗಣ ಲಾಂಗ್ಜಂಪ್ನಲ್ಲಿ ಅಂಜು ಬಾಬಿ ಜಾರ್ಜ್ 2004ರಲ್ಲಿ 6.83 ಮೀ ದೂರಕ್ಕೆ ಜಿಗಿದು ನೂತನ ದಾಖಲೆ ಬರೆದಿದ್ದರು.

ಸದ್ಯ ಅಮೆರಿಕದಲ್ಲಿ ಶಿಕ್ಷಣದ ಜೊತೆ ಅಥ್ಲೆಟಿಕ್ಸ್ ತರಬೇತಿ ಪಡೆಯುತ್ತಿರುವ ಪಾವನಾ ನಾಗರಾಜ್, ಒಕೊಹೊಮಾ ಸ್ಟೇಟ್ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸುತ್ತಿದ್ದು, ನಾರ್ಮನ್ನಲ್ಲಿ ನಡೆದ ಒವೆನ್ ಹೆವಿಟ್ ಆಹ್ವಾನಿತ ಕ್ರೀಡಾಕೂಟದಲ್ಲಿ 6.47 ಮೀ ದೂರಕ್ಕೆ ಜಿಗಿದು ದಾಖಲೆ ಬರೆದಿದ್ದಾರೆ. 2012ರಲ್ಲಿ ಭಾರತದ ಮಯೂಕ ಜಾನಿ 6.44 ಮೀ. ದೂರಕ್ಕೆ ಜಿಗಿದು ದಾಖಲೆ ಬರೆದಿದದ್ದರು.
ಮಂಗಳೂರಿನ ಸಾಧಕಿ ಸಹನಾ ಕುಮಾರಿ ಅಭ್ಯಾಸ ಮಾಡುವಾಗಲೆಲ್ಲ ಮಗಳನ್ನು ಕ್ರೀಡಾಂಗಣಕ್ಕೆ ಕರೆದೊಯ್ಯುತ್ತಿದ್ದರು, ನಾಗರಾಜ್ ಕೂಡ ತರಬೇತಿಯಲ್ಲಿ ತೊಡಗಿರುತ್ತಿದ್ದರು. ಚಿಕ್ಕಂದಿನಲ್ಲೇ ಕ್ರೀಡಾಂಗಣದ ನಂಟು ಬೆಳೆಸಿಕೊಂಡ ಪಾವನಾ ನಿರಂತರ ಅಭ್ಯಾಸ ಮಾಡಿ ಜೂನಿಯರ್ ವಿಭಾಗದಲ್ಲಿ ರಾಜ್ಯ, ರಾಷ್ಟ್ರ ಹಾಗೂ ಏಷ್ಯಾ ಮಟ್ಟದಲ್ಲಿ ಮಿಂಚಿ ಪದಕ ಗೆದ್ದರು.

ತಾಯಿಯಂತೆ ಹೈಜಂಪ್ನಲ್ಲಿ ಸ್ಪರ್ಧಿಸಲು ಆರಂಭಿಸಿದ್ದರು, 16 ವರ್ಷ ವಯೋಮಿತಿಯ ವಿಭಾಗದಲ್ಲಿ ರಾಷ್ಟ್ರೀಯ ದಾಖಲೆಯನ್ನೂ ಬರೆದಿದ್ದರು, ಆದರೆ ತಾಯಿಗಿಂತ ಭಿನ್ನವಾದ ಸಾಧನೆ ಮಾಡಬೇಕೆಂದು ಲಾಂಗ್ಜಂಪ್ನಲ್ಲಿ ಸ್ಪರ್ಧಿಸಲು ಆರಂಭಿಸಿದರು.
ಏಷ್ಯನ್ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಪಾವನಾ ಅವರಿಗೆ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವ ಹಂಬಲ ಪ್ರಭಲವಾಯಿತು. ತಾಯಿ ಸಹನಾ ಹಾಗೂ ತಂದೆ ನಾಗರಾಜ್ ಅವರ ಸಾಧನೆ ಆ ಆತ್ಮವಿಶ್ವಾಸವನ್ನು ಬಲಪಡಿಸಲು ನೆರವು ನೀಡಿತು. ಜೂನಿಯರ್ ವಿಶ್ವ ಚಾಂಪಿಯನ್ಷಿಪ್ನಲ್ಲಿ ಸ್ಪರ್ಧಿಸಿದರೂ ಪದಕ ಗೆಲ್ಲಲಾಗಿಲ್ಲ. ಆದರೆ ಮುಂದಿನ ದಿನಗಳಲ್ಲಿ ಗೆಲ್ಲುವ ಮನೋಬಲ ಹೆಚ್ಚಾಯಿತು.

ಪಾವನಾ ಈ ಬಾರಿಯ ಕಾಮನ್ವೆಲ್ತ್ ಹಾಗೂ ಏಷ್ಯನ್ ಗೇಮ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸುವ ಗುರಿ ಹೊಂದಿದ್ದರೂ ಕಾಲೇಜು ಸ್ಪರ್ಧೆ ಅದೇ ಸಂದರ್ಭದಲ್ಲಿ ನಡೆಯುತ್ತಿರುವುದರಿಂದ ಕಾಮನ್ವೆಲ್ತ್ ಕ್ರೀಡಾಕೂಟದಿಂದ ವಂಚಿತರಾಗಲಿದ್ದಾರೆ. ಆದರೆ ಏಷ್ಯನ್ ಗೇಮ್ಸ್ಗೆ ಅರ್ಹತೆ ಪಡೆದು ದೇಶವನ್ನು ಪ್ರತಿನಿಧಿಸುವ ಗುರಿ ಹೊಂದಿದ್ದಾರೆ. ಪಾವನಾ ಅಮೆರಿಕದಲ್ಲಿ ಓದುತ್ತಿರುವುದು ಕೇವಲ ಪದಕ ಗೆಲ್ಲುವ ಉದ್ದೇಶಕ್ಕಾಗಿ ಮಾತ್ರವಲ್ಲ, ಅವರು ಭಾರದಲ್ಲಿ ಉತ್ತಮ ಕ್ರೀಡಾ ವ್ಯವಸ್ಥೆಯನ್ನು ನಿರ್ಮಿಸುವ ಗುರಿಹೊಂದಿಗೆ ಅಧ್ಯಯನ ಮಾಡುತ್ತಿದ್ದಾರೆ. ಅಥ್ಲೆಟಿಕ್ಸ್ ಮ್ಯಾನೇಜ್ಮೆಂಟ್ನಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಭಾರತದಿಂದ ಅನೇಕ ಕ್ರೀಡಾಪಟುಗಳು NCAA ನಲ್ಲಿ ತರಬೇತಿ ಪಡೆಯುತ್ತಿದ್ದು, ವಿವಿಧ ಕ್ರೀಡೆಗಳಲ್ಲಿ ಯಶಸ್ಸಿನ ಹಾದಿ ತುಳಿಯುತ್ತಿದ್ದಾರೆ.

ಮಗಳ ಇತ್ತೀಚಿನ ಸಾಧನೆಯ ಬಗ್ಗೆ ಮಾತನಾಡಿದ ಅಂತಾರಾಷ್ಟ್ರೀಯ ಅಥ್ಲೀಟ್, ಭಾರತೀಯ ರೈಲ್ವೆಯ ಅಧಿಕಾರಿ ನಾಗರಾಜ್, “ಪಾವನಾ ನಮ್ಮಿಬ್ಬರ ಕ್ರೀಡಾ ಚಟುವಟಿಕೆಗಳನ್ನು ನೋಡಿ ಕಲಿತವಳು. ಆಕೆಗೆ ಕ್ರೀಡೆಯಲ್ಲಿನ ಮೌಲ್ಯಗಳ ಅರಿವಾಗಿದೆ. ಕ್ರೀಡೆಯಲ್ಲಿ ಸಾಧನೆ ಮಾಡಿದರೆ ಯಾವ ರೀತಿಯಲ್ಲಿ ಬದುಕನ್ನು ರೂಪಿಸಿಕೊಳ್ಳಬಹುದು ಎಂಬ ಅರಿವು ಇದೆ. ಸಾಗಬೇಕಾದ ದಾರಿ ಬಹಳ ದೂರ ಇದೆ. ಸಾಧನೆಯ ಹಾದಿಯಲ್ಲಿ ಇವೆಲ್ಲ ಚಿಕ್ಕ ನಿಲ್ದಾಣಗಳು, ಇಲ್ಲಿಯೇ ವಿರಮಿಸದೆ ಮುಂದೆ ಸಾಗಬೇಕು. ಮಗಳು ಶಿಸ್ತಿನ ಪ್ರಜೆಯಾಗಿ, ಇತರರಿಗೆ ಮಾದರಿಯಾಗಿ ಈ ದೇಶದ ಕ್ರೀಡೆಯಲ್ಲಿ ತನ್ನದೇ ಆದ ಛಾಪು ಮೂಡಿಸಲಿ ಎಂಬುದೇ ಹಾರೈಕೆ,” ಎಂದಿದ್ದಾರೆ.

