ವೈಭವ್ ಸೂರ್ಯವಂಶಿಗೆ ಸಿಟ್ಟಿಗಿಂತ ಆಟ ಮುಖ್ಯವಾಗಲಿ
ಉಡುಪಿ: ವೈಭವ್ ಸೂರ್ಯವಂಶಿ… ಕ್ರಿಕೆಟ್ ಜಗತ್ತಿಗೆ ಕಾಲಿಟ್ಟ ರೀತಿ ಚೆನ್ನಾಗಿದೆ. ಇಡೀ ಕ್ರಿಕೆಟ್ ಜಗತ್ತೇ ಈ ಯುವ ಪ್ರತಿಭೆಯನ್ನು ಕೊಂಡಾಡುತ್ತಿದೆ. ಆದರೆ ಪಾಕಿಸ್ತಾನ ವಿರುದ್ಧದ U19 ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಈ ಹುಡುಗ ಒಬ್ಬ ಕ್ರಿಕೆಟಿಗನಾಗಿ ಕಾಣಲಿಲ್ಲ. ಗಲ್ಲಿ ಆಟಗಾರನಾಗಿ ಕಂಡು ಬಂದ. ಪಾಕಿಸ್ತಾನ ನೀಡಿದ ಬೃಹತ್ ಮೊತ್ತವನ್ನು ತಲುಪಲು ತಾಳ್ಮೆಯ ಆಟವಾಡುವ ಬದಲು ಸೇಡಿನ ಆಟವಾಡಿದ. ಬೌಲರ್‌ಗೆ ಬ್ಯಾಟಿನ ಮೂಲಕ ಉತ್ತರ ನೀಡುವ ಬದಲು ಶೂ ಕಡೆಗೆ ಬೊಟ್ಟು ಮಾಡಿ ಬಳಿಕ ಪಾಕ್ ಬೌಲರ್‌ಗೆ ಬೊಟ್ಟು ಮಾಡಿದ್ದು ಕ್ರಿಕೆಟ್ ವಲಯದಲ್ಲಿ ಕಾಕಷ್ಟು ಚರ್ಚೆಗೆ ಗುರಿಯಾಗಿದೆ. Vaibhav Suryavanshi should learn from the mistake and concentrate on his game.
14ನೇ ವಯಸ್ಸಿನಲ್ಲಿ ಹಲವಾರು ದಾಖಲೆಗಳನ್ನು ಮುರಿದು, ಐಪಿಎಲ್‌ಗೆ ಅಬ್ಬದರ ಪ್ರವೇಶ ಕೊಟ್ಟ ಈ ಪೋರ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಆಟಗಾರನಾಗುವ ಲಕ್ಷಣ ತೋರಿದ್ದ. ಆದರೆ ಹೋಗುತ್ತಿರುವ ದಾರಿ ನೋಡಿದರೆ ಈಗ ಕೊಳ್ಳಿ ದೆವ್ವಗಳಂತೆ ಮಿಂಚಿ ಮರೆಯಾಗುವಂತಿದೆ. ಇದನ್ನು ತಪ್ಪಿಸಬೇಕಾದರೆ ಈ ಹುಡುಗನನ್ನು ಟೀಮ್ ಇಂಡಿಯಾದ ಥ್ರೋ ಡೌನ್ ಸ್ಪೆಷಲಿಸ್ಟ್ ಹಾಗೂ ಆಪ್ತ ಸಲಹೆಗಾರ ರಾಘವೇಂದ್ರ ದಿವಗಿ ಅವರಲ್ಲಿ ಒಂದು ತಿಂಗಳು ತರಬೇತಿಗೆ ಬಿಡಬೇಕು.
ಈತನ ವಯಸ್ಸಿನ ಬಗ್ಗೆ ಈಗಲೂ ಆನ್‌ಲೈನ್‌ನಲ್ಲಿ ಚರ್ಚೆ ನಡೆಯುತ್ತಿದೆ. ಅದನ್ನು ನೋಡಲು ಬಿಸಿಸಿಐ ಇದೆ. ಕ್ರಿಕೆಟ್‌ನ ಅನುಭವ ಇಲ್ಲದ ರಾಷ್ಟ್ರಗಳ ಮುಂದೆ ಅಬ್ಬದರ ಆಟ ಪ್ರದರ್ಶಿಸಿದ್ದ ವೈಭವ್, ಅನುಭವ ಇರುವ ರಾಷ್ಟ್ರಗಳೆದರು ವೈಫಲ್ಯ ಕಂಡಿರುವುದು ಗಮನಾರ್ಹ. 348 ರನ್ ಗುರಿ ಇರುವಾಗ ಒಬ್ಬ ಜವಾಬ್ದಾರಿಯುತ ಆಟಗಾರ ತಾಳ್ಮೆ ಕಳೆದುಕೊಂಡು ಗಲ್ಲಿ ಕ್ರಿಕೆಟ್‌ನಲ್ಲಿ ಮಂಗಚೇಷ್ಟೆ ಮಾಡಿದ ಹಾಗೆ ವರ್ತಿಸಿರುವುದು ಈತನ ಬಗ್ಗೆ ಇರುವ ಗೌರವ ಕಡಿಮೆಯಾಗುವಂತೆ ಮಾಡಿದೆ ಎಂದರೆ ತಪ್ಪಾಗಲಾರದು.
ಈ ಹುಡುಗರು ತಪ್ಪು ಮಾಡಲು ಹಿರಿಯರು ಹಾಕಿಕೊಟ್ಟ ಹಾದಿಯೇ ಕಾರಣ. ಕ್ರೀಡೆಯಲ್ಲಿ ರಾಜಕೀಯವನ್ನು ತರಬಾರದು. ತರುವುದಾದರೆ ಆಡಬಾರದು. ಎರಡು ರಾಷ್ಟ್ರಗಳ ನಡುವೆ ವೈಷಮ್ಯ ಇರುವುದು ನಿಜ, ಆದರೆ ಅದನ್ನು ರಾಜಕೀಯ ವಲಯದಲ್ಲಿ ನೋಡಿಕೊಳ್ಳುತ್ತಾರೆ. ಸೂರ್ಯಕುಮಾರ್ ಯಾದವ್ ಏಷ್ಯ ಕಪ್‌ನಲ್ಲಿ ಪಾಕ್ ಆಟಗಾರರ ಕೈ ಕುಲುಕದೆ ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿ ನಡೆದಕೊಂಡರು. ಈ ದೃಶ್ಯವನ್ನು ಯುವ ಆಟಗಾರರು ನೋಡಿರುವುದು ಸಹಜ. ಅವರು ಕೂಡ ತಮ್ಮ ನಾಯಕನ ನಡೆಯನ್ನು ಅನುಸರಿಸುತ್ತಿರಬಹುದು. ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಆರಂಭಿಕ ದಿನಗಳಲ್ಲಿ ಅತ್ಯಂತ ಅಸಭ್ಯವಾಗಿ ನಡೆದುಕೊಂಡಿದ್ದು, ಆದರೆ ಬದುಕಿನಲ್ಲಿ ಪಾಠ ಕಲಿತು ಇಂದು ಶ್ರೇಷ್ಠ ಆಟಗಾರರಾಗಿದ್ದಾರೆ. ಸೂರ್ಯವಂಶಿ ತನ್ನ ತಪ್ಪಿನಿಂದ ಪಾಠ ಕಲಿತರೆ ಮುಂದಿನ ದಿನಗಳಲ್ಲಿ ಉತ್ತಮ ಆಟಗಾರನಾಗಬಹುದು. ಇಲ್ಲವಾದಲ್ಲಿ ಸಿಟ್ಟಿನ ಕೈಗೆ ಬ್ಯಾಟ್ ಕೊಟ್ಟು ಬೇಗನೇ ಪೆವಿಲಿಯನ್ ಸೇರಬೇಕಾಗುತ್ತದೆ.
ಚಿಕ್ಕ ವಯಸ್ಸಿನಲ್ಲೇ ಕೋಟ್ಯಂತರ ಹಣ ಕೈ ಸೇರಿದರೆ ಇದು ಸಾಮಾನ್ಯ. ಜಿ ಆರ್. ವಿಶ್ವನಾಥ್, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್, ಅನಿಲ್ ಕುಂಬ್ಳೆ, ಮಹೇಂದ್ರ ಸಿಂಗ್ ಧೋನಿ ಭಾರತದ ಕ್ರಿಕೆಟ್‌ಗೆ ಉತ್ತಮ ವೇದಿಕೆ ಕಟ್ಟಿ ಹೋಗಿದ್ದಾರೆ. ಅದನ್ನು ಇನ್ನಷ್ಟು ಭದ್ರಪಡಿಸಬೇಕಿದೆ. ಈ ಸೂರ್ಯವಂಶಿಯನ್ನು ಐಪಿಎಲ್‌ಗೆ ಹರಾಜು ಸ್ಪರ್ಧೆಯಲ್ಲಿ ಆಯ್ಕೆ ಮಾಡಿದ ರಾಹುಲ್ ದ್ರಾವಿಡ್ ಅವರು ಈ ಹುಡುಗನ ವರ್ತನೆ ನೋಡಿದರೆ ಖಂಡಿತಾ ಬೇಸರಗೊಂಡಿರುತ್ತಾರೆ.
ಯಶಸ್ವಿ ಜೈಸ್ವಾಲ್ ಎಷ್ಟು ತಾಳ್ಮೆಯಿಂದ ಆಡುತ್ತಾರೆ. ಅವರ ಆಟ ಮತ್ತು ನಡತೆಯನ್ನು ನೋಡಿ ವೈಭವ್ ಸೂರ್ಯವಂಶಿ ಕಲಿಯಬೇಕಾಗಿದೆ. ಚಿಕ್ಕ ವಯಸ್ಸಾದ ಕಾರಣ ತಪ್ಪುಗಳನ್ನು ತಿದ್ದಿಕೊಂಡು ಮತ್ತೆ ಪುಟಿದೇಳಬಹುದು.

