ಕುಂದಾಪ್ರ ಗಾಂಧೀ ಮೈದಾನದಿಂದ ಮೋದಿ ಅಂಗಣಕ್ಕೆ ಶ್ರೀಶ ಆಚಾರ್
ಬೆಂಗಳೂರು: ಕುಂದಾಪುರ ಗಾಂಧೀ ಮೈದಾನದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದ ಯುವಕನಲ್ಲಿರುವ ಪ್ರತಿಭೆಯನ್ನು ಗುರುತಿಸಿ ಸೂಕ್ತ ವೇದಿಕೆ ಕಲ್ಪಿಸಿದರು. ಆ ಯುವಕ ನಿರಂತರ ಪರಿಶ್ರಮದಿಂದ ಯಶಸ್ಸಿನ ಹಾದಿ ತುಳಿಯುತ್ತ ಕರ್ನಾಟಕದಲ್ಲೇ ಉತ್ತಮ ಬೌಲರ್ ಎನಿಸಿ ಈಗ ಕರ್ನಾಟಕ ರಾಜ್ಯದ ಪರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ವಿಜಯ ಹಜಾರೆ ಟ್ರೋಫಿಯನ್ನಾಡಲು ಸಜ್ಜಾಗಿದ್ದಾನೆ. ಇದು ಹಳ್ಳಿಯ ಪ್ರತಿಭೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತೆಕ್ಕಟ್ಟೆಯ ಶ್ರೀಶ ಆಚಾರ್ ಅವರ ಕ್ರಿಕೆಟ್ ಬದುಕಿನ ಮುನ್ನುಡಿ. The life journey of village talent Shrisha Achar, from Kundapura’s Gandhi Maidan to Ahmedabad’s Narendra Modi Stadium.
ಡಿಸೆಂಬರ್ 24 ರಿಂದ ಜನವರಿ 8 ರವರೆಗೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕರ್ನಾಟಕ ತಂಡ ವಿಜಯ ಹಜಾರೆ ಟ್ರೋಫಿಯ ಪಂದ್ಯಗಳನ್ನಾಡಲಿದೆ. ಗ್ರಾಮೀಣ ಪ್ರತಿಭೆ ಶ್ರೀಶ ಆಚಾರ್ ಅವರ ಪಾಲಿಗೆ ಇದು ಮಹತ್ವದ ದಿನ.
ಸುಮಾರು 13 ವರ್ಷಗಳ ನಿತಂತರ ತಪಸ್ಸಿನ ಫಲ ಎಂಬಂತೆ ಶ್ರೀಶ ಆಚಾರ್ ಅವರು ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿರುವ ಈ ಋತುವಿನ ವಿಜಯ್ ಹಜಾರೆ ಟ್ರೋಫಿ ಏಕದಿನ ದೇಶೀಯ ಸರಣಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. ಎಡಗೈ ಸ್ಪಿನ್ ಬೌಲರ್ ಆಗಿರುವ ಶ್ರೀಶ ಈ ಬಾರಿ ರಣಜಿ, ಸಯ್ಯದ್ ಮುಷ್ತಾಕ್ ಅಲಿ ಹಾಗೂ ವಿಜಯ ಹಜಾರೆ ಟ್ರೋಫಿಯ ಸಂಭಾವ್ಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು, ಕೊನೆಯಲ್ಲಿ ವಿಜಯ ಹಜಾರೆಯಲ್ಲಿ ಅವಕಾಶ ಸಿಕ್ಕಿತು. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡ ಶ್ರೀಶ ಅವರು ತಾಯಿ ಶಾರದಾ ಹಾಗೂ ಅಕ್ಕಂದಿರಾದ ಶಿಲ್ಪ ಹಾಗೂ ಶ್ರುತಿ ಅವರ ಆರೈಕೆಯಲ್ಲಿ ಬೆಳೆದರು. ಶ್ರೀಶ ಅವರು ಟೆನಿಸ್ ಬಾಲ್ ಕ್ರಿಕೆಟ್‌ನಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದ್ದರು. ಒಂದು ದಿನ ಆಳ್ವಾಸ್ ಕಾಲೇಜಿನ ಕ್ರಿಕೆಟ್ ತಂಡಕ್ಕಾಗಿ ಕುಂದಾಪುರದ ಗಾಂಧೀ ಮೈದಾನದಲ್ಲಿ ಆಯ್ಕೆ ಟ್ರಯಲ್ಸ್ ಇದೆ ಎಂದು ಗೆಳೆಯ ವಿಘ್ನೇಶ್ ಭಟ್ ತಿಳಿಸಿದರು. ಶ್ರೀಶ ಅವರ ಸ್ಪಿನ್ ಮೋಡಿಗೆ ಆಯ್ಕೆ ಸಮಿತಿ ಮರುಳಾಯಿತು. ಆಳ್ವಾಸ್ ಕ್ರಿಕೆಟ್ ತಂಡ ಸೇರುವ ಅವಕಾಶ ಸಿಕ್ಕಿತು. ಅಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿದ್ದ ಡಾ. ಜಯಪ್ರಕಾಶ್ ಅಂಚನ್ ಅವರು ಶ್ರೀಶ ಅವರ ಕೈಗೆ ಲೆದರ್ ಬಾಲ್ ನೀಡಿದರು. ಅಂದಿನಿಂದ ಶ್ರೀಶ್ ರಾಜ್ಯದ ಯಶಸ್ವಿ ಸ್ಪಿನ್ ಬೌಲರ್ ಆಗುವತ್ತ ಹೆಜ್ಜೆ ಹಾಕಿದರು. “ಡಾ. ಜಯಪ್ರಕಾಶ್ ಅಂಚನ್ ಅವರು ಈಗ ಮಂಗಳೂರಿನ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಕಾರ್ಯನಿರ್ಹಹಿಸುತ್ತಿದಾರೆ, ಅವರ ತೋರಿಸಿಕೊಟ್ಟ ಹೆಜ್ಜೆಯಲ್ಲೇ ಸಾಗುತ್ತಿದ್ದೇನೆ, ಅವರಿಗೆ ನಾನು ಚಿರ ಋಣಿ,” ಎಂದು ಶ್ರೀಶ ಆಚಾರ್ ಸ್ಮರಿಸಿದ್ದಾರೆ.
ತಂದೆ ಬದುಕಿರುವಾಗ 1-4 ತರಗತಿಯವರೆಗೆ ಕೋಟೇಶ್ವರದಲ್ಲಿ ಓದಿದ್ದ ಶ್ರೀಶ, ನಂತರ ತೆಕ್ಕಟ್ಟೆಗೆ ಬಂದು ನೆಲೆಸಿ ಇಲ್ಲಿ ಕುವೆಂಪು ಶಾಲೆಯಲ್ಲಿ ಶಿಕ್ಷಣ ಮುಂದುವರಿಸುತ್ತಾರೆ. ಹೈಸ್ಕೂಲ್ ಹಾಗೂ ಪದವಿಪೂರ್ವ ಶಿಕ್ಷಣವನ್ನು ಸರಕಾರಿ ಪ್ರೌಢ ಶಾಲೆ ತೆಕ್ಕಟ್ಟೆ, ಪದವಿಯನ್ನು ಆಳ್ವಾಸ್ ಮೂಡಬಿದಿರೆ, ಬಿಪಿಎಡ್ ಹಾಗೂ ಎಂಪಿಎಡ್ ಶಿಕ್ಷಣವನ್ನು ಸಹ ಆಳ್ವಾಸ್‌ನಲ್ಲೇ ಸ್ಪೋರ್ಟ್ಸ್ ಕೋಟಾದಡಿ ಉಚಿತವಾಗಿ ಪಡೆಯುತ್ತಾರೆ. “ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಡಾ. ಮೋಹನ್ ಆಳ್ವಾ ಹಾಗೂ ಇತರ ಎಲ್ಲ ಶಿಕ್ಷಕರನ್ನು ನಾನು ಬದುಕಿನುದ್ದಕ್ಕೂ ಸ್ಮರಿಸುವೆ,” ಎಂದು ಶ್ರೀಶ ಹೇಳಿದ್ದಾರೆ.
ಬೌಲಿಂಗ್‌ನಲ್ಲಿ ಮಿಂಚಿನ ಸಾಧನೆ: ಶ್ರೀಶ ಅವರಿಗೆ ತಡವಾಗಿಯೇ ಅವಕಾಶ ಸಿಕ್ಕಿತು. ಕಳೆದ ನಾಲ್ಕು ವರ್ಷಗಳಿಂದ ರಾಜ್ಯದ ಲೀಗ್ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್‌ಗಳಲ್ಲಿ ಶ್ರೀಶ ಅವರು ಅಗ್ರ ನಾಲ್ಕು ಸ್ಥಾನಗಳಲ್ಲಿರುತ್ತಿದ್ದರು. ಬೆಂಗಳೂರು ಅಕೇಷನಲ್ಸ್ ಪರ ಲೀಗ್ ಆಡುತ್ತಿರುವ ಶ್ರೀಶ, ಈ ವರ್ಷ ಲೀಗ್‌ನಲ್ಲಿ 17 ವಿಕೆಟ್ ಗಳಿಸಿ ಅಗ್ರ ಸ್ಥಾನದಲ್ಲಿದ್ದಾರೆ. ಮಹಾರಾಜ ಟ್ರೋಫಿಯಲ್ಲಿ ಹುಬ್ಬಳ್ಳಿ ಟೈಗರ್ಸ್ ಪರ ಆಡುತ್ತಿರುವ ಶ್ರೀಶ, ಮೈಸೂರು ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಕೊನೆಯ ಓವರ್‌ನಲ್ಲಿ ಮೇಡನ್ ಓವರ್ 2 ವಿಕೆಟ್ ಗಳಿಕೆ ಹಾಗೂ ಮಂಗಳೂರು ವಿರುದ್ಧದ ಪಂದ್ಯದಲ್ಲಿ ಕೊನೆಯ ಓವರ್‌ನಲ್ಲಿ 1 ರನ್‌ಗೆ 2 ವಿಕೆಟ್ ಗಳಿಸಿದ್ದು ಕರ್ನಾಟಕ ಆಯ್ಕೆಗಾರರ ಗಮನ ಸೆಳೆದಿದ್ದು ಮಾತ್ರವಲ್ಲ ದೇಶದ ಅಭಿಮಾನಿಗಳ ಗಮನವನ್ನೂ ಸೆಳೆಯಿತು.
ಬೂಟ್ ಕ್ಯಾಂಪ್‌ನ ರಿತೇಶ್ ಭಟ್ಕಳ್: ಶ್ರೀಶ ಅವರ ಕ್ರಿಕೆಟ್ ಬದುಕಿಗೆ ನೆರವಾದವರಲ್ಲಿ ಕರ್ನಾಟಕದ ಮಾಜಿ ಕ್ರಿಕೆಟಿಗ ಹಾಗೂ ಬೆಂಗಳೂರಿನ ಉತ್ತಮ ಕ್ರಿಕೆಟ್ ಅಕಾಡೆಮಿಗಳಲ್ಲಿ ಒಂದಾಗಿರುವ ಬೂಟ್ ಕ್ಯಾಂಪ್‌ನ ಮಾಲೀಕರಲ್ಲಿ ಒಬ್ಬರಾಗಿರುವ ರಿತೇಶ್ ಭಟ್ಕಳ ಅವರು ಪ್ರಮುಖರು. ಲೀಗ್‌ಗಳನ್ನು ಆಡುತ್ತ ಶ್ರೀಶ ಅವರು ಬೂಟ್ ಕ್ಯಾಂಪ್‌ನಲ್ಲಿ ಮಕ್ಕಳಿಗೆ ಸ್ಪಿನ್ ಬೌಲಿಂಗ್ ತರಬೇತಿ ನೀಡುತ್ತಿದ್ದರು. ಇವರಲ್ಲಿ ತರಬೇತಿ ಪಡೆದ ಅನೇಕ ಯುವ ಬೌಲರ್‌ಗಳಲ್ಲಿ ವಿವಿಧ ಹಂತದ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ರುತೇಶ್ ಅವರಲ್ಲಿ ತರಬೇತಿ ಪಡೆಯುತ್ತಿರುವ ಗೌರವ್ ಎಂಬ ಸ್ಪಿನ್ ಬೌಲರ್ ರಾಜ್ಯ U14 ತಂಡಕ್ಕೆ ಆಯ್ಕೆಯಾಗಿರುವುದು ಖುಷಿಯ ವಿಷಯ. ಕಳೆದ ಐದು ವರ್ಷಗಳಿಂದ ಬೂಟ್ ಕ್ಯಾಂಪ್ (BootCamp) ನಲ್ಲಿ ಕಾರ್ಯನಿರ್ವಹಿಸುತ್ತಿದ್ದು ತಮ್ಮ ಯಶಸ್ಸಿಗೆ ರಿತೇಶ್ ಭಟ್ಕಳ್ ಅವರ ಕೊಡುಗೆ ಅಪಾರವಾಗಿದೆ ಎಂದಿದ್ದಾರೆ.

“ಬೆಂಗಳೂರಿನಲ್ಲಿ ನನ್ನಲ್ಲಿರುವ ಪ್ರತಿಭೆಯನ್ನು ನೋಡಿ ಪ್ರೋತ್ಸಾಹಿಸಿದವರು ರಿತೇಶ್ ಭಟ್ಕಳ್, ನಾನಿಂದು ಈ ಹಂತ ತಲುಪಲು ರಿತೇಶ್ ಭಟ್ಕಳ್ ಅವರ ಪಾತ್ರ ಪ್ರಮುಖವಾಗಿದೆ. ಬೌಲಿಂಗ್‌ನಲ್ಲಿ ಲಯ ಕಂಡುಕೊಳ್ಳಲು, ಸ್ಥಿರತೆಯನ್ನು ಕಾಪಾಡಿಕೊಳ್ಳಲು ಎಲ್ಲಕ್ಕಿಂತ ಮುಖ್ಯವಾಗಿ ಕ್ರಿಕೆಟ್ ಜೊತೆ ಬದುಕಲು ಬೂಟ್ ಕ್ಯಾಂಪ್ ಹಾಗೂ ರಿತೇಶ್ ಭಟ್ಕಳ್ ನೆರವು ಅಪಾರ,” ಎಂದು ಶ್ರೀಶ ಅವರು ರಿತೇಶ್ ಭಟ್ಕಳ್ ಅವರನ್ನು ಸ್ಮರಿಸಿದ್ದಾರೆ.

